CHITRADURGA NEWS | 04 FEBRUARY 2026
ಚಿತ್ರದುರ್ಗ: ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಆಡಳಿತಾತ್ಮಕ ಅನುಮೋದನೆ ಪಡೆದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳಿಗೆ ಆಯಾ ಸ್ಥಳೀಯ ಶಾಸಕರಿಂದ ಭೂಮಿ ಪೂಜೆ ನೆರವೇರಿಸಿ, ಫೆಬ್ರವರಿ ಅಂತ್ಯದೊಳಗೆ ಕೆಲಸ ಆರಂಭಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 3 ಫೆಬ್ರವರಿ | ಯಾವ ಅಡಿಕೆಗೆ ಎಷ್ಟು ರೇಟ್ ?
ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖಾವಾರು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಯೋಜನೆಯಡಿ ಜಿಲ್ಲೆಗೆ ರೂ.275 ಕೋಟಿ ಅನುದಾನ ಬಿಡುಗಡೆ ಮಾಡಿ ನಾಲ್ಕು ತಿಂಗಳು ಸಂದಿವೆ. ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು ಹಾಗೂ ಹೊಸದುರ್ಗ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ರೂ.50 ಕೋಟಿ ಹಾಗೂ ಹೊಳಲ್ಕೆರೆ ಮತಕ್ಷೇತ್ರಕ್ಕೆ ರೂ.25 ಕೋಟಿ ನೀಡಲಾಗಿದೆ.
ಒಟ್ಟು 304 ಕಾಮಗಾರಿಗಳನ್ನು ಕೈಗೊಳ್ಳುವಂತೆ ಶಾಸಕರುಗಳು ಪ್ರಸ್ತಾಪಿಸಿದ್ದಾರೆ. ಇದರಲ್ಲಿ ರೂ.210 ಕೋಟಿ ವೆಚ್ಚದ 178 ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ರೂ.65 ಕೋಟಿ ವೆಚ್ಚದ 126 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ಜಿಲ್ಲೆಯ ರೈತರಿಗೆ 12.40 ಕೋಟಿ ಬೆಳೆ ಪರಿಹಾರ
ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ಪಡೆದು ಲೋಕೋಪಯೋಗಿ ಇಲಾಖೆ, ಕೆ.ಆರ್.ಐ.ಡಿ.ಎಲ್., ನಗರ ಸ್ಥಳೀಯ ಸಂಸ್ಥೆ ಹಾಗೂ ಪುರಸಭೆಗಳು, ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ವಿಭಾಗ ವತಿಯಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳ ವೇಗ ಹೆಚ್ಚಿಸಬೇಕು. ಭೌತಿಕ ಪ್ರಗತಿಯ ಜೊತೆಗೆ ಆರ್ಥಿಕ ಪ್ರಗತಿಯನ್ನು ಸಹ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅನುದಾನದ ಬಳಕೆ ಹಾಗೂ ಕಾಮಗಾರಿ ಯೋಜನೆ ತಯಾರಿಸುವಾಗ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಜಿಲ್ಲೆಯಲ್ಲಿ ಡಿ.ಎಂ.ಎಫ್, ಕೆ.ಎಂ.ಇ.ಆರ್.ಸಿ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಯೋಜನೆಗಳು, ಸ್ಥಳೀಯ ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಇತರೆ ಯೋಜನೆಗಳ ಅನುದಾನದಡಿ ಸಾಕಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಕಾಮಗಾರಿಗಳನ್ನು ಹೊರತುಪಡಿಸಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನಯಡಿ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಈ ಕುರಿತು ಆಯಾ ಶಾಸಕರೊಂದಿಗೆ ಚರ್ಚಿಸಿಬೇಕು. ಒಂದು ವೇಳೆ ಎರಡೆರಡು ಅನುದಾನಗಳಲ್ಲಿ ಒಂದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ App ಜಾರಿ | ಗೃಹಿಣಿಯರು ಉದ್ಯಮಿಗಳಾಗಲು ಅವಕಾಶ ! ನೋಂದಣಿ ಹೇಗೆ?
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

