Connect with us

    ಸ್ವಾಮಿಗಳೆಂದರೆ ಮಾರುದ್ದ ಇದ್ದಂಥವರು ‘ಸಿಜಿಕೆ’ | ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಮುಖ್ಯ ಸುದ್ದಿ

    ಸ್ವಾಮಿಗಳೆಂದರೆ ಮಾರುದ್ದ ಇದ್ದಂಥವರು ‘ಸಿಜಿಕೆ’ | ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 JANUARY 2024
    ಚಿತ್ರದುರ್ಗ (CHITRADURGA): ಸಿಜಿಕೆ ಎನ್ನುವ ಮೂರಕ್ಷರ ಚೈತನ್ಯ ತುಂಬುವಂಥದ್ದು. ಜಾತಿಯಿಂದ ನಾಯಕನಾಗಿದ್ದರೂ ಎಂದೂ ಜಾತಿಯ ಮನೋಭಾವ ಬೆಳೆಸಿಕೊಂಡವರಲ್ಲ. ಮಠೀಯ ಪರಂಪರೆಯಿಂದ ದೂರವಿದ್ದು, ಮಠ, ಸ್ವಾಮಿಗಳೆಂದರೆ ಮಾರುದ್ದ ಇದ್ದಂಥವರು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಸಿಜಿಕೆ ಅವರ 18ನೇ ವರ್ಷದ ನೆನಪು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ಸಾಣೇಹಳ್ಳಿಯಲ್ಲಿ ನಿರಂತರ ರಂಗ ಚಟುವಟಿಕೆಗಳು, ‘ಶಿವಸಂಚಾರ’ ನಾಟಕ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿವೆ. ಇವು ಇಷ್ಟು ಜನರ ಮನಸ್ಸು ಗೆಲ್ಲಲು ಸಿಜಿಕೆ ಅವರ ಪರಿಶ್ರಮ ಕಾರಣ’ ಎಂದರು.

    ಇದನ್ನೂ ಓದಿ: ತೋಟಕ್ಕೆ ಹೋಗಿದ್ದ ಮಹಿಳೆಯ ಕೊಲೆ

    ‘ಕಟ್ಟುವ ಮತ್ತು ಸಂಘಟಿಸುವ, ಪ್ರೀತಿಸುವ ಗುಣ ಸಿಜಿಕೆ ಅವರಲ್ಲಿತ್ತು. ಎಂದೂ ಹಣಕ್ಕಾಗಿ ಆಸೆ ಪಟ್ಟವರಲ್ಲ. ಸಂಗ್ರಹ ಪ್ರವೃತ್ತಿ ಅವರಲ್ಲಿರದೇ ದಾಸೋಹ ಪ್ರಜ್ಞೆ ಇತ್ತು’ ಎಂದು ಸ್ಮರಿಸಿದರು.

    ‘ಸಾಣೇಹಳ್ಳಿಗೆ ಬಂದ ಬಳಿಕ ಎಲ್ಲ ದುಶ್ಚಟಗಳಿಂದ ದೂರವಾಗಿ ರಂಗಭೂಮಿಯನ್ನು ಹುಲುಸಾಗಿ ಬೆಳೆಸುವ ಕ್ರಿಯೆಯಲ್ಲಿ ತೊಡಗಿಕೊಂಡರು. ಅವರು ಅಂಗವಿಕಲರಾಗಿದ್ದರೂ ಇಡೀ ನಾಡನ್ನು ಸಂಚರಿಸಿದರು’ ಎಂದರು.

    ‘ಶಿವಸಂಚಾರದ ಮೊದಲ ವರ್ಷದ ತಂಡದಲ್ಲಿ ‘ಶೋಕಚಕ್ರ’, ‘ಮಹಾಬೆಳಕು’, ‘ಉರಿಲಿಂಗಪೆದ್ದಿ’ ನಾಟಕಗಳು ಇಡೀ ಕರ್ನಾಟಕದಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡವು. ತುಂಬಾ ಮೆಚ್ಚುಗೆಗೆ ಪಾತ್ರವಾದವು. ಆಗ ಶಿವಸಂಚಾರದಲ್ಲಿದ್ದ ಕಲಾವಿದರು ತರಬೇತಿ ಪಡೆದವರಲ್ಲ. ಆದರೆ ಪ್ರತಿಭಾವಂತರಾಗಿದ್ದರು’ ಎಂದು ನೆನೆಪಿಸಿಕೊಂಡರು.

    ‘ಸಾಣೇಹಳ್ಳಿಯಲ್ಲಿ ನಡೆದ ಒಂದು ಶಿಬಿರಕ್ಕೆ ಕೆ.ಮರುಳಸಿದ್ದಪ್ಪನವರ ಜೊತೆ ಸಿಜಿಕೆ ಬಂದರು. ಆದರೆ ಆಗ ಇಷ್ಟೊಂದು ರಂಗಚಟುವಟಿಕೆಗಳು ಸಾಣೇಹಳ್ಳಿಯಲ್ಲಿ ನಡೆಯುತ್ತಿರಲಿಲ್ಲ. ಇಲ್ಲಿ ನಿರಂತರವಾಗಿ ರಂಗಚಟುವಟಿಕೆಗಳು ನಡೆಯಬೇಕು ಎಂದು ಸಿಜಿಕೆ ನಮಗೆ ಹೇಳಿದರು. ಇದರ ಜವಾಬ್ದಾರಿ ನೀವು ತೆಗೆದುಕೊಂಡರೆ ಆಗಬಹುದು ಎಂದೆವು. ಮಳೆ ಬಿಟ್ಟರೂ ಮರದ ಹನಿ ಬಿಡಲಿಲ್ಲ ಎನ್ನುವ ಹಾಗೆ ನಿರಂತರವಾಗಿ ನಮಗೆ ಫೋನ್ ಮುಖಾಂತರ ರಂಗರೆಪರ್ಟಿರಿಗೆ ಏನು ಹೆಸರು ಇಡಬೇಕೆಂದು ಕೇಳ್ತಾ ಇದ್ದರು. ಅದನ್ನೂ ನೀವೇ ತೀರ್ಮಾನ ಮಾಡಿ ಎಂದೆವು. ಅದಕ್ಕೆ ಅವರು ‘ಶಿವಸಂಚಾರ’ ಹೆಸರಿಡಬಹುದು ಎಂದು ಸೂಚಿಸಿದರು. ಆಗಬಹುದು ಎಂದೆವು’ ಎಂದು ನೆನಪುಗಳನ್ನು ಮೆಲಕು ಹಾಕಿದರು.

    ಐ.ಜಿ.ಚಂದ್ರಶೇಖರಯ್ಯ ಮಾತನಾಡಿ, ‘ಸಿಜಿಕೆ ಇವತ್ತಿನವರೆಗೂ ಇದ್ದಿದ್ದರೆ ರಂಗಭೂಮಿ ಇನ್ನಷ್ಟು ಬೆಳವಣಿಗೆ ಆಗುತ್ತಿತ್ತು. ದಾಸೋಹ ಪ್ರಜ್ಞೆ ಬಲವಾಗಿತ್ತು. ನೆರವಿನ ಅಗತ್ಯ ಇರುವವರಿಗೆ, ಅಸಹಾಯಕರಿಗೆ, ನಿರ್ಗತಿಕರಿಗೆ. ರಂಗಭೂಮಿಗೆ ತಮ್ಮ ಜೀವನವನ್ನು ಸವೆಸಿದರು. ಅವರೊಬ್ಬ ರಂಗಭೂಮಿಯ ಧೃವತಾರೆ’ ಎಂದರು.

    ‘ದೈಹಿಕವಾಗಿ ವಿಕಲಚೇತನರಾಗಿದ್ದರೂ ವಿಶೇಷ ಚೇತನರಾಗಿದ್ದರು. ನಾಟಕ ರಂಜನೆಯ ಮಾಧ್ಯಮವನ್ನಾಗಿಸದೇ ಪ್ರತಿಭಟನೆ ಮಾಧ್ಯಮವನ್ನಾಗಿ ಮಾಡಿಕೊಂಡರು. ಅವರಲ್ಲಿ ಸಮಾಜವಾದವಿತ್ತು. ಉದಾರವಾಗಿ ಕೊಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಅವರು ಕುಟುಂಬಕ್ಕೆ ಏನೂ ಬಿಟ್ಟು ಹೋಗಿಲ್ಲ. ರಂಗಭೂಮಿಗೆ ತಮ್ಮ ಹೆಸರನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ಅವರ ಸೃಜನಶೀಲ ಚಟುವಟಿಕೆಗಳಿಂದ ಇಂದಿಗೂ ನಾಡಿನಲ್ಲಿ ಅವರ ಹೆಸರು ಜೀವಂತವಾಗಿದೆ’ ಎಂದು ತಿಳಿಸಿದರು.

    ಇದನ್ನೂ ಓದಿ: ಕಾರು ಡಿಕ್ಕಿ | ರಸ್ತೆ ಬದಿ ನಿಂತಿದ್ದ ವೃದ್ಧೆ ಸಾವು

    ‘ಬದುಕು ಒಂದು ಕಲೆಯಾಗಿತ್ತು. ಪಾಳೆಗಾರರ ನಾಯಕನಾಗದೇ ರಂಗಭೂಮಿಯ ನಾಯಕನಾದರು. ರಂಗಭೂಮಿ ಇರುವವರೆಗೂ ಸಿಜಿಕೆ ಹೆಸರು ಅಮರವಾಗಿರುತ್ತದೆ. ರಂಗಭೂಮಿಯ ಕಾರ್ಯಕ್ಷೇತ್ರದ ಶಿಲ್ಪಿ ಸಿಜಿಕೆ ಎಂದರೆ ತಪ್ಪಾಗಲಾರದು. ಸಾಮಾನ್ಯ ವ್ಯಕ್ತಿಯಲ್ಲಿ ದೊಡ್ಡ ಕಲೆಯನ್ನು ಗುರುತಿಸುವ ಜಾಣ್ಮೆ ಅವರಲ್ಲಿತ್ತು. ಸಮಾಜದಲ್ಲಿರುವ ಅಪಸವ್ಯಗಳನ್ನು ಹೊಡೆದು ಹಾಕಲಿಕ್ಕೆ ರಂಗಭೂಮಿಯನ್ನು ಬಳಸಿಕೊಂಡವರು. ತ್ರಿಕರಣ ಪೂರ್ವಕವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಸಂತ ಸಿಜಿಕೆ. ತಮ್ಮ ಗುರುತ್ವಶಕ್ತಿಯಿಂದ ಎಲ್ಲರನ್ನು ಆಕರ್ಷಿಸುವ ಕೌಶಲ್ಯ ಅವರಲ್ಲಿತ್ತು’ ಎಂದರು.

    ರಂಗಶಾಲೆ ಪ್ರಾಂಶುಪಾಲ ನಟರಾಜ್‌ ಹೊನ್ನಾವಳ್ಳಿ ಮಾತನಾಡಿ, ‘ಸಿಜಿಕೆಯವರು ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವುದರ ಮೂಲಕ ಹೊಸ ಮನ್ವಂತರ ಸೃಷ್ಟಿಸಿದರು. ಗ್ರೀಕ್‌ ಮಾದರಿಯ ಬಯಲು ರಂಗಭೂಮಿಯ ನಿರ್ಮಾಣದಲ್ಲಿ, ಶಿವಸಂಚಾರದ ಪ್ರಾರಂಭದಲ್ಲಿ ಅವರದು ಪ್ರಧಾನ ಪಾತ್ರ. ಸಾಣೇಹಳ್ಳಿಯಲ್ಲಿ ರಂಗಶಾಲೆ ಪ್ರಾರಂಭ ಮಾಡಬೇಕೆಂಬ ಅದಮ್ಯ ಬಯಕೆ ಹೊಂದಿದ್ದರು. ಸಿಜಿಕೆ ಸಂಘಟನಾ ಚತುರರಾಗಿದ್ದರು. ರಂಗಭೂಮಿಯನ್ನು ತಾಯಂತೆ ಪ್ರೀತಿಸುತ್ತಿದ್ದರು’ ಎಂದು ಸ್ಮರಿಸಿದರು.

    ಮೈಸೂರಿನ ಚಂದ್ರಶೇಖರಾಚಾರ್ ರಂಗಗೀತೆ ಹಾಡಿದರು. ರಾಜು ಲಕ್ಕಮುತ್ತೇನಹಳ್ಳಿ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top