ಮುಖ್ಯ ಸುದ್ದಿ
ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ | ಬಾಗಿಲು ಮುಚ್ಚಲಿದೆ ತಿಪ್ಪೇಶನ ದೇಗುಲ
CHITRADURGA NEWS | 7 JANUARY 2024
ನಾಯಕನಹಟ್ಟಿ (NAYAKANAHATTI): ಕಾಯಕಯೋಗಿ, ನಾಯಕನಹಟ್ಟಿಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಮಾತಿಗೆ ಗ್ರಾಮ ತೊರೆದು ಸಮೀಪದ ದೇವರಹಳ್ಳಿಯ ನೆಲೆಸಿರುವ ನಾಯಕನಹಟ್ಟಿ ಪಟ್ಟಣದ ಗ್ರಾಮ ದೇವತೆ ದಡ್ಲು ಮಾರಮ್ಮ ದೇವಿ ಐದು ವರ್ಷದ ಬಳಿಕ ಗ್ರಾಮಕ್ಕೆ ಆಗಮಿಸುತ್ತಿದೆ. 2020 ರ ಜನವರಿ 6 ರಂದು 13 ವರ್ಷದ ಬಳಿಕ ಬಂದಿದ್ದ ದೇವಿ ಇದೀಗ ಪುನಃ ಆಗಮಿಸುತ್ತಿರುವುದು ಭಕ್ತರಲ್ಲಿ ಹರ್ಷ ತಂದಿದೆ.
ಜ.30 ರಿಂದ ಫೆ.1 ರವರೆಗೆ ಮೂರು ದಿನ ಪಟ್ಟಣದಲ್ಲಿ ಬುಡಕಟ್ಟು ಸಂಸ್ಕೃತಿ ಹಾಗೂ ಸಂಪ್ರದಾಯಗಳು ಅನಾವರಣಗೊಳ್ಳಲಿವೆ. ದೇವಿಯ ಆಗಮನ ದಿನ ಸಂಪ್ರದಾಯದಂತೆ ಗುರು ತಿಪ್ಪೇರುದ್ರಸ್ವಾಮಿಯ ದೇವಸ್ಥಾನದ ಬಾಗಿಲು ಮುಚ್ಚಲಿದೆ.
ಇದನ್ನೂ ಓದಿ: ಮಾಡದಕೆರೆ-ಎಚ್.ಡಿ.ಪುರ ಭಾಗದಲ್ಲಿ ಹದ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ವರದಿ ನೋಡಿ
ಜ.30 ರಂದು ಸಂಜೆ 4 ಗಂಟೆಗೆ ದೇವರಹಳ್ಳಿಯಿಂದ ಸಕಲ ಬಿರುದಾವಳಿಯೊಂದಿಗೆ ನಾಯಕನಹಟ್ಟಿಗೆ ದೇವಿ ಆಗಮಿಸಲಿದೆ. ತಮಟೆ, ಉರಿಮೆ, ಜಾನಪದ ವಾದ್ಯಗಳೊಂದಿಗೆ ಕೆ.ಇ.ಬಿ ಬಳಿಯಲ್ಲಿ ನಿರ್ಮಿಸುವ ವಿಶ್ರಾಂತಿ ಕಟ್ಟೆ ಮೇಲೆ ಕರಿ ಕಂಬಳಿ ಹಾಕಿ ದೇವಿಯ ಪೆಟ್ಟಿಗೆಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ತೆಲುಗು ಭಾಷೆಯಲ್ಲಿ ದಡ್ಲು ಎಂದರೆ ಹಟ್ಟಿ ಎಂಬ ಅರ್ಥವಿದೆ. ಹಟ್ಟಿಯ ಗ್ರಾಮದೇವತೆಯನ್ನು ದಡ್ಲು ಮಾರಮ್ಮ ಎಂದು ಕರೆಯುವ ಪ್ರತೀತಿ ಇದೆ. ದಡ್ಲು ಮಾರಮ್ಮ ಮೂಲತಃ ನಾಯಕನಹಟ್ಟಿ ಗ್ರಾಮದ ಗ್ರಾಮ ದೇವತೆ. ಸುಮಾರು 400ರಿಂದ 500ವರ್ಷಗಳ ಹಿಂದೆ ಲೋಕಸಂಚಾರದ ನಿಮಿತ್ತ ಗುರು ತಿಪ್ಪೇರುದ್ರಸ್ವಾಮಿ ಅವರು ನಾಯಕನಹಟ್ಟಿಗೆ ಬರುತ್ತಾರೆ.
ಈ ವೇಳೆ ಗ್ರಾಮದ ಮೂರು ಜನ ಅಕ್ಕ ತಂಗಿ ದೇವತೆಗಳನ್ನು ಗೌರಸಮುದ್ರ, ಎನ್. ದೇವರಹಳ್ಳಿ ಮತ್ತು ವಡ್ಡನಹಳ್ಳಿ ಗ್ರಾಮಗಳಿಗೆ ತೆರಳಲು ಪ್ರೇರೇಪಿಸುತ್ತಾರೆ. ಹೀಗೆ ಗುರು ತಿಪ್ಪೇರುದ್ರಸ್ವಾಮಿ ಅವರು ತಿಳಿಸಿದ ಗ್ರಾಮಗಳಿಗೆ ಮೂರೂ ಹೆಣ್ಣು ದೈವಗಳು ತೆರಳಿ ಗೌರಸಮುದ್ರ ಮಾರಮ್ಮ, ದೇವರಹಳ್ಳಿ ದಡ್ಲು ಮಾರಮ್ಮ, ವಡ್ಡನಹಳ್ಳಿ ಮಾರಮ್ಮ ಎಂದು ಪ್ರಸಿದ್ಧರಾಗುತ್ತಾರೆ ಎಂಬ ಪ್ರತೀತಿ ಇದೆ. ದಡ್ಲು ಮಾರಮ್ಮ ಹಂಪಿಯ ಆನಗೊಂದಿ ಸಂಸ್ಥಾನದ ಮಹಾರಾಜರ ಆರಾಧ್ಯ ದೇವಿಯಾಗಿದ್ದಳು.
ಗ್ರಾಮದ ಎಲ್ಲ ಸಮುದಾಯದ ಜನರು ಭಾಗವಹಿಸಿ ತಮಗೆ ವಹಿಸಿದ ಸೇವೆಯನ್ನು ನಿರ್ವಹಿಸಿ ದೇವಿಗೆ ಭಕ್ತಿಯಿಂದ ನಮಿಸುತ್ತಾರೆ. ಹಾಗಾಗಿ ಈ ಜಾತ್ರೆಯು ಕೂಡುಕಟ್ಟು ಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.