CHITRADURGA NEWS | 22 SEPTEMBER 2026
ಚಿತ್ರದುರ್ಗ: ಗ್ಯಾರಂಟಿ ಪ್ರಾಧಿಕಾರಗಳ ಸಹಕಾರದೊಂದಿಗೆ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲು ಸರ್ಕಾರ ನಿರ್ದೇಶಿಸಿದೆ. ಪ್ರತಿ ಗ್ರಾಮ ಹಾಗೂ ನಗರ ಪ್ರದೇಶ ವಾರ್ಡ್ಗಳಲ್ಲಿ ಯುವಕರು ಸಂಘಗಳನ್ನು ಸೇರಲು ಗ್ಯಾರಂಟಿ ಸಮಿತಿ ಸದಸ್ಯರು ಪ್ರೇರೇಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಅಥ್ಲೆಟಿಕ್ಸ್ನಲ್ಲಿ ಬಿಂಧು ಟಿ. ಸಾಧನೆ | ಜಿಲ್ಲಾ ಮಟ್ಟಕ್ಕೆ ಆಯ್ಕೆ
ನಗರದ ಜಿ.ಪಂ.ಸಭಾಂಗಣದಲ್ಲಿ ಸೋಮವಾರ ಜರುಗಿದ ಭಾರತ್ ಜೋಡೋ ಯುವ ಸಂಘಗಳ ರಚನೆ ಹಾಗೂ ಗೃಹಲಕ್ಷೀ ಯೋಜನೆ ಅರ್ಜಿ ಮರು ಪರಿಶೀಲನೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಯುವಜನರಲ್ಲಿ ಸಾಮಾಜಿಕ ಸೌಹಾರ್ದತೆ, ಸಂವಿಧಾನದ ಮೌಲ್ಯಗಳ ಜಾಗೃತಿ ಹಾಗೂ ಸ್ಥಳೀಯ ಅಭಿವೃದ್ಧಿಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ರಚನೆ ಮಾಡಲಾಗುತ್ತಿದೆ. ಸಂಘಗಳ ರಚನೆಗೆ ಈಗಾಗಲೇ ಆನ್ಲೈನ್ನಲ್ಲಿ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಆದರೆ ಪ್ರತಿ ಸಂಘ ರಚನೆ ಬೇಕಾಗಿರುವ 100 ಯುವಜನತೆ ಪ್ರತಿ ಗ್ರಾಮ ಹಾಗೂ ವಾರ್ಡ್ಗಳಲ್ಲಿ ನೊಂದಾಯಿಸಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಆಫ್ಲೈನ್ ಮೂಲಕವು ಅರ್ಜಿಗಳ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆನ್ಲೈನ್ನಲ್ಲಿ ಬಾಕಿ ಇರುವ ಹಾಗೂ ಅರ್ಹರಾಗಿರುವ ಯುವಕರನ್ನು ಗುರುತಿಸಿ, ಮಾಹಿತಿ ಪಡೆದು ನೀಡಿದರೆ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಡೇಟಾ ಎಂಟ್ರಿ ಮಾಡಿಸಿ, ಜಿಲ್ಲಾ ನೋಂದಣಾಧಿಕಾರಿಗಳ ಮೂಲಕ ಸಂಘಗಳನ್ನು ನೋಂದಣಿ ಮಾಡಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ವಯೋಮಿತಿ ಮತ್ತು ಅರ್ಹತೆ:
ಸಂಘದ ಸದಸ್ಯರಾಗಲು 18 ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಅರ್ಹರಾಗಿದ್ದು, ಅವರು ಅದೇ ಗ್ರಾಮ ಪಂಚಾಯಿತಿ ಅಥವಾ ವಾರ್ಡ್ನ ಸ್ಥಳೀಯ ನಿವಾಸಿಯಾಗಿರಬೇಕು.
ಇದನ್ನೂ ಓದಿ: ಬಗರ್ಹುಕುಂ ಸಾಗುವಳಿದಾರರಿಗೆ ಒನ್ಟೈಮ್ ಸೆಟ್ಲ್ಮೆಂಟ್ಗೆ ಆಗ್ರಹ | ಹೋರಾಟ ಸಮಿತಿಯಿಂದ ಪ್ರತಿಭಟನೆ
ಕಾರ್ಯಕಾರಿಣಿ ಸಮಿತಿ: ಪ್ರತಿ ಸಂಘಕ್ಕೆ 15 ಸದಸ್ಯರ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಗುತ್ತದೆ. ಇದರಲ್ಲಿ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಗೆ ಆದ್ಯತೆ ನೀಡಲಾಗಿದ್ದು, ಎಸ್ಸಿ/ಎಸ್ಟಿ ವರ್ಗದಿಂದ 3, ಒಬಿಸಿ ಹಾಗೂ ಅಲ್ಪಸಂಖ್ಯಾತ ವರ್ಗದಿಂದ 4 ಮತ್ತು ಸಾಮಾನ್ಯ ವರ್ಗದಿಂದ 8 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ, ಸಮಿತಿಯಲ್ಲಿ ಮಹಿಳೆಯರಿಗೆ ಆಂತರಿಕ ಮೀಸಲಾತಿ ನೀಡಲಾಗುವುದು. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಯೊಂದಿಗೆ ಈ ಸಮಿತಿಗಳನ್ನು ಅಂತಿಮಗೊಳಿಸಲಾಗುವುದು ಎಂದರು.
ಸಂಘದ ಕಾರ್ಯಗಳು ಹಾಗೂ ಅನುದಾನ: ಯುವಜನರ ದೈಹಿಕ ಶಕ್ತಿ, ಕ್ರೀಡೆ, ಸಂವಿಧಾನ ಮೌಲ್ಯಗಳ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೌಹಾರ್ದತೆ ಬೆಳೆಸುವ ಕಾರ್ಯಕ್ರಮಗಳನ್ನು ಸಂಘಗಳು ಆಯೋಜಿಸಲಿವೆ. ಸರ್ಕಾರದಿಂದ ಪ್ರತಿ ಸಂಘಕ್ಕೆ ವಾರ್ಷಿಕ ರೂ. 10 ಲಕ್ಷ ಅನುದಾನ ದೊರೆಯಲಿದ್ದು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಉತ್ತೇಜನ ನೀಡಲಾಗುತ್ತದೆ ಎಂದು ಬಿ.ಟಿ.ಕುಮಾರಸ್ವಾಮಿ ಮಾಹಿತಿ ನೀಡಿದರು.
ಈಗಾಗಲೇ ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ವಾರು ತಾಲೂಕು ಗ್ಯಾರಂಟಿ ಅಧ್ಯಕ್ಷರೊಂದಿಗೆ ಹಂಚಿಕೊಳ್ಳಲಾಗುತ್ತದೆ. ನಗರ ಪ್ರದೇಶದಲ್ಲಿ ಎರಡು ಅಥವಾ ಮೂರು ವಾರ್ಡ್ಗಳನ್ನು ಒಟ್ಟು ಮಾಡಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲಾಗುವುದು. ಮುಂಬರುವ ಶನಿವಾರದ ವೇಳೆ ಅರ್ಹ ಯುವಕರ ಮಾಹಿತಿಯನ್ನು ನೀಡಿದರೆ, ಕೂಡಲೇ ಸಂಘ ನೊಂದಣಿಗೆ ಕ್ರಮ ಕೈಗೊಳ್ಳುವುದಾಗಿ ಜಿ.ಪಂ.ಸಿಪಿಓ ಗಾಯಿತ್ರಿ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ : ಮರುಪರಿಶೀಲನೆ ಅರ್ಜಿ ಕುರಿತು ಕಾರ್ಯಗಾರ
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಅರ್ಜಿಯ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ನಡೆಸಿದರು.
ಇದನ್ನೂ ಓದಿ: ಕೊತ್ತಂಬರಿ ನೀರು ಕೂದಲಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ?
ಸರ್ಕಾರ ಆದೇಶದಂತೆ ಮರುಪರಿಶೀಲನಾ ಗಣತಿದಾರರು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರೊಂದಿಗೆ ಫಲಾನುಭವಿಗಳ ಮನೆ-ಮನೆಗೆ ಭೇಟಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ನಂತರ 8 ಹಂತಗಳಲ್ಲಿ ಮರುಪರಿಶೀಲನೆ ಕಾರ್ಯ ನಡೆಯಲಿದೆ. ಫಲಾನುಭವಿಗಳ ಗುರುತಿಸುವಿಕೆ, ಮನೆ ಭೇಟಿ, ಗಣತಿ ನಮೂನೆ ಸ್ವೀಕಾರ, ಮಾಹಿತಿಗಳ ಮರು ಪರಿಶೀಲನೆ, ಜಿ.ಪಿ.ಎಸ್ ಆಧಾರಿತ ಛಾಯಾಚಿತ್ರ ಸೆರೆಹಿಡಿಯುವುದು, ಡಿಜಿಟಲ್ ದತ್ತಾಂಶಗಳನ್ನು ನಮೂದು ಮಾಡಿ ದೃಢೀಕರಿಸಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ 4 ಲಕ್ಷ ಫಲಾನುಭವಿಗಳು ಇದ್ದು, ನ್ಯಾಯಬೆಲೆ ಅಂಗಡಿವಾರು ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ನೇಮಿಸಲಾಗುವುದು. ಒಬ್ಬ ಗಣತಿದಾರರು 250 ರಿಂದ 300 ಫಲಾನುಭವಿಗಳ ಪರಿಶೀಲನೆ ಕಾರ್ಯನಡೆಸಲಿದ್ದಾರೆ ಎಂದರು.
ಫಲಾನುಭವಿಗಳು ಅರ್ಜಿಯೊಂದಿಗೆ ಫಾಸ್ ಪೋರ್ಟ್ ಭಾವಚಿತ್ರ, ರೇಷನ್ ಕಾರ್ಡ್, ವೋಟರ್ ಐಡಿ, ಆಧಾರ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ, ಫಲಾನುಭವಿಗಳ ಹೆಸರಿನಲ್ಲಿಯೇ ಇರುವ ಮೊಬೈಲ್ ಸಂಖ್ಯೆಯ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕು. ಮರುಪರಿಶೀಲನೆಗೆ ವೋಟರ್ ಐಡಿ ದಾಖಲೆ ಹಾಗೂ ಸ್ವಂತ ಹೆಸರಿನಲ್ಲಿಯೇ ಮೊಬೈಲ್ ಸಿಮ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಮಾಹಿತಿ ನೀಡಿದರು.
ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ರೂ.2.89 ಕೋಟಿ:
ಗೃಹಲಕ್ಷ್ಮಿ ಯೋಜನೆ ಹಲವು ರೀತಿಯಲ್ಲಿ ದುರ್ಬಳಕೆಯಾಗುವದನ್ನು ತೆಡಯಲು ಸರ್ಕಾರ ಮರುಪರಿಶೀಲನೆ ಮುಂದಾಗಿದೆ. ಬೇರೆ ರಾಜ್ಯದ ಮತದಾರರು ಸಹ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದಾರೆ. ಈ ಹಿನ್ನೆಯಲ್ಲಿಯೇ ಸ್ಥಳೀಯ ಓಡರ್ ಐಡಿ ಕಡ್ಡಾಯಗೊಳಿಸಲಾಗಿದೆ. ಮರಣ ಹೊಂದಿದ ಪಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿದೆ.
ಇದನ್ನೂ ಓದಿ: ಚಂದ್ರವಳ್ಳಿ, ತಿಮ್ಮಣ್ಣನಾಯಕನ ಕೆರೆಗೆ ಭದ್ರಾ ನೀರು ಹರಿಸಲು ಆಗ್ರಹ
ಜಿಲ್ಲೆಯಲ್ಲಿ ಇದುವರೆಗೂ 9,946 ಮೃತ ಫಲಾನುಭವಿಗಳ ಖಾತೆಗೆ ರೂ.2.89 ಕೋಟಿ ಜಮೆಯಾಗಿದೆ. ಇದುವರೆಗೂ 8,231 ಮೃತ ಪ್ರಕರಣಗಳನ್ನು ಪರಿಶೀಲನೆ ನಡೆಸಲಾಗಿದೆ. ರೂ.87 ಲಕ್ಷ ಸರ್ಕಾರಕ್ಕೆ ಜಮೆಯಾಗಿದ್ದರೆ, ಬ್ಯಾಂಕ್ ಖಾತೆಗಳಲ್ಲಿ ರೂ.86.48 ಲಕ್ಷ ಹಣವನ್ನು ಪ್ರೀಜ್ ಮಾಡಿಸಲಾಗಿದೆ. ಸುಮಾರು ರೂ.58 ಲಕ್ಷದಷ್ಟು ಹಣವನ್ನು ಮೃತರ ಕುಟುಂಬಸ್ಥರು ಫೋನ್ ಪೇ ಅಥವಾ ಬೇರೆ ಮಾರ್ಗಗಳಿಂದ ಹಣ ಬಿಡಿಸಿಕೊಂಡಿದ್ದಾರೆ ಎಂದು ವಿಜಯಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

