ಕ್ರೈಂ ಸುದ್ದಿ
ನಿಧಿ ಆಸೆಗೆ ನರಬಲಿ | ಜಿಲ್ಲೆಯಲ್ಲಿ ನಡೆಯಿತು ಘೋರ ಕೃತ್ಯ
CHITRADURGA NEWS | 11 FEBRUARY 2025
ಚಿತ್ರದುರ್ಗ: ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎನ್ನುವ ಜ್ಯೋತಿಷಿ ಮಾತು ನಂಬಿ ಅಮಾಯಕನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಾವಗಡದ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ ಆನಂದರೆಡ್ಡಿ ಎಂಬ ವ್ಯಕ್ತಿ ಈ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಪತ್ನಿಯನ್ನೇ ಹತ್ಯೆ ಮಾಡಿದ ಪತಿ | ಮೆದೇಹಳ್ಳಿಯಲ್ಲಿ ಘಟನೆ
ಪರಶುರಾಂಪುರ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲಿಯುವ ಕಾಯಕ ಮಾಡಿಕೊಂಡಿದ್ದ ಅಂದಾಜು 52 ವರ್ಷದ ಪ್ರಭಾಕರ್ ಕೊಲೆಯಾದ ವ್ಯಕ್ತಿ.
ಇಲ್ಲಿನ ಜೆ.ಜೆ.ಕಾಲೋನಿಯಲ್ಲಿ ವಾಸವಾಗಿದ್ದ ಪ್ರಭಾಕರ್, ಫೆಬ್ರವರಿ 9 ಭಾನುವಾರ ಸಂಜೆ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ತಿರುಗಾಡುತ್ತಿದ್ದ ಆನಂದರೆಡ್ಡಿ ಬೈಕಿನಲ್ಲಿ ಬಿಡುವುದಾಗಿ ಹೇಳಿ ಹತ್ತಿಸಿಕೊಂಡು ತುಸು ದೂರ ಕರೆದೊಯಯ್ದು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಒಂದು ಲೋಡ್ ಯೂರಿಯಾ ವಶಕ್ಕೆ | 12.74 ಲಕ್ಷ ಮೊತ್ತದ ಗೊಬ್ಬರ ಅಕ್ರಮ ಸಾಗಾಣೆ
ಇನ್ನೂ ಕೊಲೆಗಾರ ಆನಂದರೆಡ್ಡಿಗೆ ಪಾವಗಡ ತಾಲೂಕು ಕೋಟೆಗುಡ್ಡದ ವಾಸಿ ರಾಮಕೃಷ್ಣ ಎಂಬ ಜ್ಯೋತಿಷಿ ಇಂತಹ ಸಲಹೆ ಕೊಟ್ಟಿದ್ದಾನೆ. ಈಗ ಪೊಲೀಸರು ಕೊಲೆ ಮಾಡಿದ ಆನಂದರೆಡ್ಡಿ ಹಾಗೂ ಜ್ಯೋತಿಷಿ ರಾಮಕೃಷ್ಣ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಲದ ಕಾರಣಕ್ಕೆ ಜ್ಯೋತಿಷಿ ಮಾತು ನಂಬುತ್ತಿದ್ದ ಕೊಲೆಗಾರ:
ಹೋಟೆಲ್‍ನಲ್ಲಿ ಅಡುಗೆ ಭಟ್ಟನಾಗಿದ್ದ ಆನಂದರೆಡ್ಡಿ, ಆಂಧ್ರಪ್ರದೇಶದ ಕುಂದಾರ್ಪಿ ಮಂಡಲದ ಕದರಾಂಪಲ್ಲಿ ಗ್ರಾಮದವನು.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಹಣಕಾಸಿನ ಸಮಸ್ಯೆಯ ಸುಳಿಗೆ ಸಿಲುಕಿದ್ದ ಈತ ಪದೇ ಪದೇ ಜ್ಯೋತಿಷಿ ಬಳಿಗೆ ಹೋಗುತ್ತಿದ್ದ. ಪಶ್ಚಿಮಕ್ಕೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂಬ ಮಾತು ನಂಬಿ, ಪಾವಗಡ ಕಡೆಯಿಂದ ಪರಶುರಾಂಪರ ಕಡೆಗೆ ಬಂದು ಮಧ್ಯಾಹ್ನದಿಂದಲೇ ಅನುಮಾನಾಸ್ಪದವಾಗಿ ತಿರುಗಾಡಿದ್ದಾನೆ.
ಸಂಜೆ ಹೊತ್ತಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಪ್ರಭಾಕರ್ ಸಿಕ್ಕಿದ್ದು, ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ತಿಳಿಸಿದ್ದಾರೆ.