CHITRADURGA NEWS | 21 NOVEMBER 2026
ಚಿತ್ರದುರ್ಗ: ಐತಿಹಾಸಿಕ ಕೋಟೆ, ಸ್ಮಾರಕ ಹಾಗೂ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಚಿತ್ರದುರ್ಗ ಎಂದಾಕ್ಷಣ ಕೋಟೆ ಹಾಗೂ ವೀರ ಮದಕರಿನಾಯಕರ ಇತಿಹಾಸ ನೆನಪಾಗುತ್ತದೆ. ಇಂತಹ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಕೆಲಸವಾಗಬೇಕು ಎಂದು ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಸಂದೀಪ್ ಹೇಳಿದರು.
ಇದನ್ನೂ ಓದಿ: ಆರ್ಟಿಇ ಆದಾಯ ಮಿತಿ ಹೆಚ್ಚಳದಿಂದ ಬಡ ಮಕ್ಕಳಿಗೆ ಪ್ರಯೋಜನವಿಲ್ಲ
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ ಚಿತ್ರದುರ್ಗ, ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಹಾಗೂ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ನಗರದ ಲಾಲ್ ಕೋಟೆ ಬಾಗಿಲು ಬಳಿ ಶುಕ್ರವಾರ ಆಯೋಜಿಸಿದ್ದ ಸ್ಮಾರಕ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಂಪರೆ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಹಿರಿಯರು ಅಪಾರ ಶ್ರಮದಿಂದ ನಿರ್ಮಿಸಿರುವ ಕೋಟೆ, ಕೊತ್ತಲಗಳು ಹಾಗೂ ಸ್ಮಾರಕಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಸ್ಮಾರಕಗಳ ರಕ್ಷಣೆ ನಮ್ಮ ಕೆಲಸವಲ್ಲ ಎಂದು ನಿರ್ಲಕ್ಷಿಸುವುದು ಸರಿಯಲ್ಲ. ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ ಮಾತನಾಡಿ, ಹಿರಿಯರು ನಿರ್ಮಿಸಿರುವ ಕೋಟೆ, ಕೊತ್ತಲ ಹಾಗೂ ದೇವಾಲಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಲಾಲ್ ಕೋಟೆ ಬಾಗಿಲು ಐತಿಹಾಸಿಕವಾಗಿ ಮಹತ್ವದ ರಕ್ಷಣಾ ವ್ಯವಸ್ಥೆಯನ್ನು ಹೊಂದಿತ್ತು. ಇಂತಹ ಸ್ಮಾರಕಗಳು ನಾಶವಾಗದಂತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಬೃಹತ್ ಬಂಡೆಗಳ ನಡುವೆ ಗಿಡಮರಗಳು ಬೆಳೆಯುತ್ತಿರುವುದರಿಂದ ಬಂಡೆಗಳು ಕ್ರಮೇಣ ಸಡಿಲಗೊಳ್ಳುವ ಅಪಾಯವಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದರು.
ಇದನ್ನೂ ಓದಿ: ವಿಬಿ ರಾಮ್ ಜಿ ಅಡಿ ವೈಯಕ್ತಿಕ ಕಾಮಗಾರಿ ಸದುಪಯೋಗ ಮಾಡಿಕೊಳ್ಳಿ | ಡಾ.ಆಕಾಶ್
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್ ಮಾತನಾಡಿ, ವಿದ್ಯಾರ್ಥಿಗಳು, ಪ್ರವಾಸಿಗರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮನಸ್ಸು ಮಾಡಿದರೆ ಕೋಟೆ, ಕೊತ್ತಲ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಉಳಿಸಲು ಸಾಧ್ಯವಿದೆ. ಮದಕರಿನಾಯಕರ ಕಾಲದಲ್ಲಿ ನಿರ್ಮಾಣಗೊಂಡಿರುವ ಅನೇಕ ಪಾರಂಪರಿಕ ತಾಣಗಳನ್ನು ಜೋಪಾನವಾಗಿ ಕಾಪಾಡುವ ಮೂಲಕ ಇತಿಹಾಸದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಾಗರ್, ಮಹಾರಾಣಿ ಕಾಲೇಜಿನ ಪ್ರಾಚಾರ್ಯ ಟಿ. ಜಯಣ್ಣ, ಸಿಬ್ಬಂದಿಗಳಾದ ಪರಮೇಶ್ವರಪ್ಪ, ಪ್ರಸನ್ನ ಬಾಬು, ನಾಗರಾಜು, ಉಮೇಶ್, ಕಾಂತರಾಜ್, ದೇವರಾಜ್, ಉಮೇಶ್, ಉಮಾಶಂಕರ್, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

