CHITRADURGA NEWS | 29 OCTOBER 2026
ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಚಿತ್ರದುರ್ಗ ಘಟಕದ ವತಿಯಿಂದ ‘ಅರಳುವ ಪ್ರತಿಭೆ-2026’ ರಾಜ್ಯಮಟ್ಟದ ಬರಹಗಾರರ ಶಿಬಿರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.31 ಮತ್ತು ನ.1ರಂದು ನಗರದ ಶ್ರೀ ಮುರುಘಾ ಮಠದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ ಜಿಲ್ಲಾಮಟ್ಟದ ಆಯ್ಕೆ | 9ರಿಂದ 16 ವರ್ಷದ ಮಕ್ಕಳಿಗೆ ಅವಕಾಶ
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಪದಾಧಿಕಾರಿಗಳು ಈ ವಿಷಯ ತಿಳಿಸಿದರು. 1970ರ ದಶಕದಿಂದ ನಡೆಯುತ್ತಿರುವ ಈ ಶಿಬಿರವು ರಾಜ್ಯಕ್ಕೆ ಹಲವು ಹಿರಿಯ ಸಾಹಿತಿ ಹಾಗೂ ಬರಹಗಾರರನ್ನು ಕೊಡುಗೆಯಾಗಿ ನೀಡಿದೆ. ಈ ಬಾರಿಯ ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಬರಹಗಾರರು ಭಾಗವಹಿಸಲಿದ್ದಾರೆ. ಅ.31ರಂದು ಬೆಳಗ್ಗೆ 10.30ಕ್ಕೆ ಶಿಬಿರ ಉದ್ಘಾಟನೆಯಾಗಲಿದೆ.
ಎರಡು ದಿನಗಳ ಶಿಬಿರದಲ್ಲಿ ಬರಹಗಾರರ ತುಡಿತ, ಒತ್ತಡ ನಿರ್ವಹಣೆ, ಮಾನಸಿಕ ಸಾಮರ್ಥ್ಯ, ಭಾಷಾ ಶೈಲಿ, ಆಧುನಿಕ ತಂತ್ರಜ್ಞಾನ ಕೌಶಲ, ಸಾಹಿತ್ಯದ ಓದು ಹಾಗೂ ಬರವಣಿಗೆಯ ಅನುಭವಗಳ ಕುರಿತು ವಿವಿಧ ಗೋಷ್ಠಿಗಳು ನಡೆಯಲಿವೆ. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ, ಧಾರವಾಡದ ಸಹಾಯಕ ಪ್ರಾಧ್ಯಾಪಕ ಡಾ. ಪ್ರತೀಕ್ ಮಾಳಿ, ವಿಜಯ ಕರ್ನಾಟಕದ ಸಹ ಸಂಪಾದಕ ಬಿ.ಜೆ. ರಾಜೀವ್, ಸಾಹಿತಿ ನಟೇಶ್, ಕವಿ ಡಾ. ಗೋವಿಂದ ಹೆಗಡೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಸೇರಿದಂತೆ ಹಲವು ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಸರ್ಕಾರಿ ನರ್ಸಿಂಗ್ ಕಾಲೇಜು | ಅ.31ರಂದು ಕೌನ್ಸೆಲಿಂಗ್
ಶಿಬಿರದ ಅಂಗವಾಗಿ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಸಣ್ಣ ಕಥೆ ಮತ್ತು ಕವನ ಸ್ಪರ್ಧೆಗಳಿಗೆ 300ಕ್ಕೂ ಹೆಚ್ಚು ವಿದ್ಯಾರ್ಥಿ ಬರಹಗಾರರು ಕೃತಿಗಳನ್ನು ಕಳುಹಿಸಿದ್ದರು. ತಜ್ಞರ ಮೌಲ್ಯಮಾಪನದ ಬಳಿಕ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ಅ.31ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಥಮ ಬಹುಮಾನವಾಗಿ ₹10,000, ದ್ವಿತೀಯ ಬಹುಮಾನವಾಗಿ ₹7,000 ಹಾಗೂ ತೃತೀಯ ಬಹುಮಾನವಾಗಿ ₹5,000 ನಗದು ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಗುವುದು.
ಸಣ್ಣ ಕಥೆ ವಿಭಾಗ: ಬೆಂಗಳೂರಿನ ಆರ್.ವಿ. ಕಾಲೇಜಿನ ಶಿಲ್ಪಾ ಬಿ. ಪ್ರಥಮ ಬಹುಮಾನ ಪಡೆದಿದ್ದಾರೆ. ಮೈಸೂರಿನ ಮಲ್ಲಮ್ಮ ಮರಿಮಲ್ಲಪ್ಪ ಕಾಲೇಜಿನ ವಸಂತ ಹಾಗೂ ದಾವಣಗೆರೆಯ ಸರ್ಕಾರಿ ದೇವರಾಜ ಅರಸು ಪದವಿ ಕಾಲೇಜಿನ ಕೆ.ಎಸ್. ಮಂಜುನಾಥ್ ಜಂಟಿಯಾಗಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ದೀಪ್ತಿ ತೃತೀಯ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಕವನ ವಿಭಾಗ: ದಾವಣಗೆರೆ ವಿಶ್ವವಿದ್ಯಾಲಯದ ಕವಿತಾ ಎ.ವಿ. ಪ್ರಥಮ ಬಹುಮಾನ ಗಳಿಸಿದ್ದಾರೆ. ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ಯಾಮಣ್ಣ ಅರೇರ್ ಹಾಗೂ ಬೆಂಗಳೂರಿನ ಜಯನಗರದ ಎನ್ಎಂಕೆಆರ್ವಿ ಕಾಲೇಜಿನ ದೀಕ್ಷಾ ಚೌಹಾಣ್ ಜಂಟಿಯಾಗಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಅವನಿ ಕೆ. ತೃತೀಯ ಬಹುಮಾನ ಗಳಿಸಿದ್ದಾರೆ.
ಇದನ್ನೂ ಓದಿ: ಕ್ಷಯರೋಗ ಪತ್ತೆಗೆ ಜಿಲ್ಲೆಯಲ್ಲಿ ಸಕ್ರಿಯ ಆಂದೋಲನ | 3.69 ಲಕ್ಷ ಜನರ ತಪಾಸಣೆಗೆ ಗುರಿ
ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿಗಳಾದ ಗೋಪಿ ಮತ್ತು ರಂಗಸ್ವಾಮಿ, ಮುಖಂಡರಾದ ನಿಹಾರಿಕಾ, ಕನಕದಾಸ ಹಾಗೂ ಕುಬೇರ ಯಾದವ್ ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

