CHITRADURGA NEWS | 21 OCTOBER 2026
ಚಿತ್ರದುರ್ಗ: ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕರ್ತವ್ಯದ ಹಾದಿಯಲ್ಲಿ ಪ್ರಾಣತೆತ್ತ ಎಲ್ಲ ಪೊಲೀಸ್ ಹುತಾತ್ಮರ ತ್ಯಾಗವನ್ನು ಸ್ಮರಿಸಿ, ಅವರ ಕುಟುಂಬಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ ಎಂದು ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ್ ಹೇಳಿದರು.
ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಾಲ್ಮೀಕಿ ಜಯಂತಿ ಸರಳ ಆಚರಣೆಗೆ ಸೂಚನೆ
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ, ಗೌರವ ನಮನ ಸಲ್ಲಿಸಿ, ಅವರು ಮಾತನಾಡಿದರು.
ಭಾರತ ಮತ್ತು ಚೀನಾ ಗಡಿಯಲ್ಲಿ 1959ರ ಅಕ್ಟೋಬರ್ 21ರಂದು ಚೀನಾ ಸೈನಿಕರು ನಡೆಸಿದ ಅಕ್ರಮಣವನ್ನು ತಡೆಗಟ್ಟುವ ಹೋರಾಟದಲ್ಲಿ 10 ಜನ ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿದ್ದರು. ಅವರ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಸಾರ್ವಜನಿಕರು ಹಬ್ಬ-ಹರಿದಿನಗಳಲ್ಲಿ ತಮ್ಮ ಕುಟುಂಬದವರೊಂದಿಗೆ ಸಂತೋಷದಿಂದ ತೊಡಗಿಕೊಂಡರೆ, ಪೊಲೀಸ್ ಸಿಬ್ಬಂದಿ ಮಾತ್ರ ತಮ್ಮ ಕುಟುಂಬ, ಜೀವವನ್ನೇ ಪಣಕ್ಕಿಟ್ಟು ಸಾರ್ವಜನಿಕರ ರಕ್ಷಣೆಗಾಗಿ ಸದಾ ಶ್ರಮಿಸುತ್ತಾರೆ.
ಸೈನಿಕರಿಗೆ ನಿರ್ದಿಷ್ಟ ಗಡಿಯಲ್ಲಿ ಎದುರಾಳಿಗಳು ಯಾರೆಂದು ಸ್ಪಷ್ಟವಿರುತ್ತದೆ. ಆದರೆ, ಪೊಲೀಸರಿಗೆ ಸದಾ ಸಮಾಜದ ನಡುವೆಯೇ ಅಪರಾಧಿಗಳನ್ನು ಎದುರಿಸಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹಾಗೂ ನಾನಾ ರೀತಿಯ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಗಟ್ಟುವಲ್ಲಿ ಪೆÇಲೀಸ್ ಇಲಾಖೆಯ ಪಾತ್ರ ಹಾಗೂ ತಾಂತ್ರಿಕ ನೈಪುಣ್ಯತೆ ಅತ್ಯಂತ ಹಿರಿದಾಗಿದೆ ಎಂದು ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ್ ಹೇಳಿದರು.
ಇದನ್ನೂ ಓದಿ: ವಿಕಲಚೇತನರ ಮಾಸಾಶನ ₹6 ಸಾವಿರಕ್ಕೆ ಹೆಚ್ಚಿಸಲು ಆಗ್ರಹ
ಕರ್ತವ್ಯ ನಿಷ್ಠೆಯೇ ಪೊಲೀಸರಿಗೆ ದೊಡ್ಡ ಗೌರವ
ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ.ಆಕಾಶ್.ಎಸ್., ಪೊಲೀಸ್ ಇಲಾಖೆಯ ಸಿಬ್ಬಂದಿಯ ಕರ್ತವ್ಯದಕ್ಷತೆಯಿಂದಲೇ ಇತ್ತೀಚಿಗೆ ಜಿಲ್ಲೆಯಲ್ಲಿ ಗಣೇಶೋತ್ಸವ ಮತ್ತು ವಿಸರ್ಜನೆ ಸೇರಿದಂತೆ ಜಿಲ್ಲೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ ಎಂದು ಪ್ರಶಂಸಿಸಿದರು.
ಪೊಲೀಸ್ ಸೇವೆ ಎನ್ನುವುದು ಕೃತಜ್ಞತಾ ರಹಿತ ಸೇವೆ (ಥ್ಯಾಂಕ್ಲೆಸ್ ಜಾಬ್) ಇದ್ದಂತೆ. ಇಲ್ಲಿ ಯಾವುದೇ ರೀತಿಯ ದೈನಂದಿನ ಕರ್ತವ್ಯಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದರೂ ಸಾರ್ವಜನಿಕವಾಗಿ ಕೃತಜ್ಞತೆ ಬಯಸಲು ಸಾಧ್ಯವಿಲ್ಲ. ಹೀಗಾಗಿ, ಪೊಲೀಸ್ ಸಿಬ್ಬಂದಿ ದೇವರು ಮತ್ತು ತಮ್ಮ ಆತ್ಮಸಾಕ್ಷಿಯ ಮೆಚ್ಚಿಕೆಗಾಗಿ ಮಾತ್ರ ಕೆಲಸ ಮಾಡಬೇಕೆ ಹೊರತು ಬೇರೆ ಯಾರಿಂದಲೂ ಕೃತಜ್ಞತೆಗಳನ್ನು ನಿರೀಕ್ಷಿಸಬಾರದು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಸೇವೆಯಲ್ಲಿ, ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಕೆಲಸದೊತ್ತಡ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಂದ ಕೆಲವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಿಇಒ ಡಾ.ಆಕಾಶ್ ಸಲಹೆ ನೀಡಿದರು.
ಇದನ್ನೂ ಓದಿ: ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಚಿತ್ರದುರ್ಗದ ಕೋಲಾಟ ಕಲಾವಿದ ನರಸಪ್ಪ ಆಯ್ಕೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಮಾತನಾಡಿ, ದೇಶದಾದ್ಯಂತ 154 ಪೊಲೀಸರು ಹುತಾತ್ಮರಾಗಿದ್ದು, ಇದರಲ್ಲಿ ರಾಜ್ಯದ ಐವರು ಪೊಲೀಸರು ಸಹ ಮಡಿದಿರುವುದು ದುಃಖದ ಸಂಗತಿ ಎಂದು ತಿಳಿಸಿ, ಹುತಾತ್ಮರಾದ ಎಲ್ಲಾ ಪೊಲೀಸರ ಹೆಸರುಗಳನ್ನು ವಾಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಐಮಂಗಲ ಪೊಲೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಪೊಲೀಸ್ ಅಧೀಕ್ಷಕ ಪಾಪಣ್ಣ.ಪಿ, ಗೃಹರಕ್ಷಕ ದಳದ ಜಿಲ್ಲಾ ಕಾಮಾಂಡೆಂಡ್ ಸಿ.ಕೆ.ಸಂಧ್ಯಾ, ಪೊಲೀಸ್ ಉಪಾಧೀಕ್ಷರಾದ ಗೋಪಾಲಕೃಷ್ಣ ಸತ್ಯನಾರಾಯಣ ರಾವ್, ಪೊಲೀಸ್ ಅಧೀಕ್ಷಕ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮೂರ್ತಿ,ಟಿ.ನ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಪರ್ತಕರ್ತರಾದ ಬಿ.ಎಸ್.ವಿನಾಯಕ, ನಾಗರಾಜ ಶ್ರೇಷ್ಠಿ ಸೇರಿದಂತೆ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ಸಮರ್ಪಿಸಿದರು.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಸಮಾವೇಶ | ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮರಣಾರ್ಥ ವಾಲಿ ಪೈರಿಂಗ್ ನಡೆಸಲಾಯಿತು. ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸುವುದರೊಂದಿಗೆ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ, 2 ನಿಮಿಷಗಳ ಮೌನಾಚರಣೆ ಆಚರಿಸಲಾಯಿತು. ಬಳಿಕ ಪೊಲೀಸ್ ಧ್ವಜವನ್ನು ಪುನಃ ಪೂರ್ಣಕ್ಕೆ ಏರಿಸಲಾಯಿತು. ಕೊನೆಯಲ್ಲಿ ಪೊಲೀಸ್ ಬ್ಯಾಂಡ್ ‘ಅಬೈಡ್ ವಿಥ್ ಮೀ’ ಗೀತೆಯನ್ನು ನುಡಿಸಿತು. ಈ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರು ಉಪಸ್ಥಿರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

