CHITRADURGA NEWS | 19 OCTOBER 2026
ಚಿತ್ರದುರ್ಗ: ಮಹಿಳೆಯರು ಶಿಕ್ಷಣದ ಜೊತೆಗೆ ಧೈರ್ಯ, ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆಯ ಗುಣಗಳನ್ನು ಬೆಳೆಸಿಕೊಂಡು ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಇದನ್ನೂ ಓದಿ: ಮದ್ಯಪಾನ ನಿಯಂತ್ರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ | ಮಠಾಧೀಶರ ಒತ್ತಾಯ
ನಗರದ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವ-2026ರ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಚೆನ್ನಭೈರಾದೇವಿ ಸೇರಿದಂತೆ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ವೀರ ಮಹಿಳೆಯರ ಇತಿಹಾಸವನ್ನು ಸ್ಮರಿಸಬೇಕು. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಅಭಿನಂದನೀಯ. ಸರ್ಕಾರ ಮಾಡದ ಅನೇಕ ಜನಪರ ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿವೆ. ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗುವ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಕೂಡಲಸಂಗಮದ ಬಸವಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ಮಹಿಳೆಯರಿಗೆ ಅವಕಾಶ ನೀಡಿದರೆ ಅವರು ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಲ್ಲರು. 12ನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರು ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಗೌರವದ ಸ್ಥಾನ ನೀಡಿದ್ದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಅನೇಕ ಶಿವಶರಣೆಯರು ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವಳ ಶೌರ್ಯ ಮಹಿಳೆಯರ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ರಾಜ್ಯದ ಬೊಕ್ಕಸಕ್ಕೆ ಬರಗಾಲ | ಕೆ.ಎಸ್.ನವೀನ್
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಡಿಫೆನ್ಸ್ ಎಸ್ಟೇಟ್ಸ್ ಅಧಿಕಾರಿ ದಿವ್ಯ ಹೊಸೂರು, ಚಿತ್ರದುರ್ಗಕ್ಕೆ ಬಂದಾಗಲೆಲ್ಲ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಸರ್ಕಾರಿ ಶಾಲೆಯಲ್ಲಿ ಓದಿ, ಮಠದ ಆವರಣದಲ್ಲಿ ಆಟವಾಡುತ್ತ ಬೆಳೆದವಳು ನಾನು. ತಂದೆ-ತಾಯಿ ಉತ್ತಮ ಸಂಸ್ಕಾರಗಳೊಂದಿಗೆ ಬೆಳೆಸಿದ್ದಾರೆ. ದುರ್ಗದ ಜನರ ಪ್ರೀತಿ ಮತ್ತು ಆಶೀರ್ವಾದ ನನಗೆ ಸದಾ ಪ್ರೇರಣೆಯಾಗಿದೆ. ಈ ಸನ್ಮಾನ ತವರು ಮನೆಯಿಂದ ದೊರೆತ ಬಾಗಿನದಂತಿದೆ. ಚಿತ್ರದುರ್ಗದ ಬಡವರು ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಲು ಇನ್ನಷ್ಟು ಕೆಲಸ ಮಾಡಬೇಕೆಂಬ ಹಂಬಲವಿದೆ ಎಂದರು.
ಹಳಿಯಾಳ ಬಸವಕೇಂದ್ರದ ಸುಮಂಗಲ ಎಸ್. ಅಂಗಡಿ ಮಾತನಾಡಿ, ಶ್ರೀ ಮುರುಘಾ ಮಠ ನಮಗೆ ತವರು ಮನೆಯಿದ್ದಂತೆ. ಬಸವಾದಿ ಶರಣರು ಸ್ತ್ರೀಯರಿಗೆ ವಾಕ್ಸ್ವಾತಂತ್ರ್ಯ ಮತ್ತು ಸಮಾನತೆಯ ಮಹತ್ವ ಸಾರಿದ್ದಾರೆ. ಮಹಿಳೆಯರು ಶತಮಾನಗಳಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕಿ ಪೂರ್ಣಿಮಾ ಆರ್. ಶ್ರೀನಿವಾಸ್ ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳಿಗೆ ಸೀಮಿತರಾಗದೆ ಪೈಲಟ್, ವೈದ್ಯೆ, ಕಲಾವಿದೆ, ಚಾಲಕಿ ಹಾಗೂ ಸೈನಿಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬದಲ್ಲಿ ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಮಹಿಳೆಯರು ಪ್ರಮುಖ ಪಾತ್ರ ವಹಿಸಬಹುದು ಎಂದರು.
ಇದನ್ನೂ ಓದಿ: ಜ್ವರ ಬಂದಾಗ ಚಿಕನ್ ತಿಂದರೆ ಏನಾಗುತ್ತದೆ?
ಜೆಡಿಎಸ್ ಮುಖಂಡೆ ಜಾನ್ಹವಿ ಮಾತನಾಡಿ, ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಧೈರ್ಯ ಮತ್ತು ಆತ್ಮವಿಶ್ವಾಸ ಮುಖ್ಯ. ಚಿತ್ರದುರ್ಗವು ಒನಕೆ ಓಬವ್ವ, ಬೆಳಗೆರೆ ಜಾನಕಮ್ಮ ಸೇರಿದಂತೆ ಅನೇಕ ಸಾಧಕಿಯರ ನೆಲವಾಗಿದೆ. ಶ್ರೀಮಠವು ಅಕ್ಷರದಾಸೋಹ, ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ಚಲನಚಿತ್ರ ನಟಿ ಅಶ್ವಿನಿ ಗೌಡ ಮಾತನಾಡಿ, ಮಹಿಳೆಯರು ಜೀವನದಲ್ಲಿ ಗುರಿ ಮತ್ತು ಗುರುವನ್ನು ಹೊಂದಿರಬೇಕು. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಪ್ರೋತ್ಸಾಹ ಅಗತ್ಯ ಎಂದರು.
ಸಂತೋಷ್ ಲಾಡ್ ಫೌಂಡೇಷನ್ನ ಕವಿತಾ ರೆಡ್ಡಿ ಮಾತನಾಡಿ, ಮಕ್ಕಳ ಸಾಧನೆಗೆ ತಂದೆ-ತಾಯಿಗಳು ಅನಗತ್ಯ ಕಟ್ಟುಪಾಡುಗಳನ್ನು ವಿಧಿಸದೆ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಬಾಲ್ಯವಿವಾಹದಂತಹ ಪದ್ಧತಿಗಳಿಂದ ಮಹಿಳೆಯರನ್ನು ಬಂಧಿಸದೆ ಅವರಿಗೆ ಸ್ವತಂತ್ರವಾಗಿ ಬೆಳೆಯುವ ಅವಕಾಶ ಕಲ್ಪಿಸಬೇಕು ಎಂದರು.
ಸಾಧಕಿಯರಿಗೆ ಸನ್ಮಾನ, ಸಂಗೀತ ಸಂಭ್ರಮ
ಕಾರ್ಯಕ್ರಮದಲ್ಲಿ ಡಾ. ಎಂ. ಅನಿತಾ ಮಹಂತೇಶ್ ಹಾಗೂ ಶಾರದಾ ಸ್ವಾದಿಷ್ಠ ಅವರನ್ನು ಸನ್ಮಾನಿಸಲಾಯಿತು. ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯ ಬಿ. ಕೋರಿಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿಂದರೆ ಏನಾಗುತ್ತದೆ ಗೊತ್ತಾ?
ಚಿತ್ರದುರ್ಗದ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಸಮಾವೇಶ ನಡೆಯಿತು. ಬಳಿಕ ನಡೆದ ಸಂಗೀತ ಸಂಭ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಗಾಯನ, ಸ್ಮಿತಾ ಮೈಸೂರು ಮಠ ಅವರ ನೃತ್ಯ ಪ್ರದರ್ಶನ ಹಾಗೂ ಕುಮಾರಿ ನಿಖಿತಾ ಬಿ.ಕೆ ಮತ್ತು ಕುಮಾರಿ ಜೆ.ಎಂ. ಶ್ರೇಷ್ಠ ರಾಜ್ ಅವರ ಕಲಾ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.
ಗಾನಯೋಗಿ ಸಂಗೀತ ಬಳಗದವರು ಪ್ರಾರ್ಥಿಸಿದರು. ವಿಮಲಾಕ್ಷಿ ಸ್ವಾಗತಿಸಿ, ಅನ್ನಪೂರ್ಣ ಲಿಂಗರಾಜ್ ಕಾರ್ಯಕ್ರಮ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

