CHITRADURGA NEWS | 28 SEPTEMBER 2206
ಚಿತ್ರದುರ್ಗ: ಪ್ರವಾಸೋದ್ಯಮ ಬೆಳೆದಷ್ಟೂ ರಾಜ್ಯ ಹಾಗೂ ಜಿಲ್ಲೆಯ ಆರ್ಥಿಕ ಸಂಪನ್ಮೂಲ ವೃದ್ಧಿಸಲಿದ್ದು, ಚಿತ್ರದುರ್ಗದ ಪ್ರಾಗೈತಿಹಾಸಿಕ ಮಹತ್ವ ಜಗತ್ತಿಗೆ ಸಾರುವ ಮತ್ತು ಸಂರಕ್ಷಿಸುವ ಕೆಲಸ ಹೆಚ್ಚಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಾವು ಕಡಿತ | ಭಯಕ್ಕಿಂತ ಜಾಗೃತಿ, ಸಮಯಪ್ರಜ್ಞೆ ಮುಖ್ಯ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಎಂದರೆ ಕೇವಲ ಏಳುಸುತ್ತಿನ ಕೋಟೆ ಅಥವಾ ಇತಿಹಾಸ ಮಾತ್ರವಲ್ಲ. ಅದು ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿರುವ ಅಪರೂಪದ ತಾಣ. ಮಾನವನ ಬಾಳಿಕೆ, ಆದಿಮಾನವನ ಜೀವನ ಶೈಲಿ, ಬೆಂಕಿಯ ಶೋಧನೆ, ಗುಂಪು ಜೀವನ ಹಾಗೂ ಬಂಡೆಗಳ ಮೇಲಿನ ರೇಖಾಚಿತ್ರಗಳ ಹಂತದಿಂದಲೇ ದುರ್ಗದ ಇತಿಹಾಸ ಪ್ರಾರಂಭವಾಗಿದೆ ಎಂದು ಬಣ್ಣಿಸಿದರು.
ಚಂದ್ರವಳ್ಳಿಯ ಗುಹೆಗಳು ಹಾಗೂ ಹುಲಿಗುಂದಿಯ ಬಂಡೆಗಳ ಮೇಲೆ ಆದಿಮಾನವರು ಬಿಡಿಸಿರುವ ರೇಖಾಚಿತ್ರಗಳು ಇಲ್ಲಿನ ಪ್ರಾಚೀನತೆಗೆ ಸಾಕ್ಷಿಯಾಗಿವೆ. ಇಂತಹ ಅಪರೂಪದ ಪಾರಂಪರಿಕ ಕುರುಹುಗಳನ್ನು ಸಂರಕ್ಷಿಸಿ, ಇತಿಹಾಸವನ್ನು ಪುನರ್ ನಿರ್ಮಿಸುವ ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಬದ್ಧತೆ ನಮ್ಮದಾಗಬೇಕು ಎಂದರು.
ಇದನ್ನೂ ಓದಿ: ಆಯುರ್ವೇದ ಪದ್ಧತಿಗೆ ಮಹತ್ವ, ಗುಣಮಟ್ಟದ ಚಿಕಿತ್ಸೆ ನೀಡಿ | ಡಾ.ಎಂ.ಚಂದ್ರಪ್ಪ
ಪ್ರವಾಸೋದ್ಯಮ ದೇಶದ ಆದಾಯ ಹೆಚ್ಚಳಕ್ಕೆ ಪ್ರಮುಖ ಮೂಲ: ದೇಶಕ್ಕೆ ಹೆಚ್ಚಿನ ಆದಾಯ ಬರಬೇಕಾದರೆ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವುದು ಅತ್ಯಂತ ಮುಖ್ಯವಾಗಿದ್ದು, ಪ್ರವಾಸೋದ್ಯಮವು ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಉದ್ಯಮವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಯಾವ ದೇಶ, ರಾಜ್ಯ ತನ್ನಲ್ಲಿರುವ ನೈಸರ್ಗಿಕ ಹಾಗೂ ಐತಿಹಾಸಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆಯೋ, ಅಲ್ಲಿನ ಆರ್ಥಿಕತೆ ಅತ್ಯಂತ ಬಲಗೊಳ್ಳುತ್ತದೆ. ನೆರೆಯ ಕೇರಳ ರಾಜ್ಯವು ಪ್ರವಾಸೋದ್ಯಮದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದು, ಕರ್ನಾಟಕದಲ್ಲೂ ಪ್ರವಾಸೋದ್ಯಮ ನೀತಿ-ನಿಯಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಬೆಳೆಸಲು ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರಿಗೆ ಸರಿಯಾದ ಹಾಗೂ ಸೂಕ್ತ ಮಾಹಿತಿಯನ್ನು ನೀಡಬೇಕು. ಜೊತೆಗೆ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮತ್ತು ಸಿಬ್ಬಂದಿ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ ಎಂದರು.
ಇದನ್ನೂ ಓದಿ: ರಂಗಾಪುರ ಋಷಿ ಗುರುಕುಲದಲ್ಲಿ ಅ.9ರಿಂದ ಮಕ್ಕಳ ಚೈತನ್ಯ ಶಿಬಿರ
ವೀರ ಮದಕರಿ ನಾಯಕ, ವೀರವನಿತೆ ಓಬವ್ವನ ಸಾಹಸಗಾಥೆ ಹಾಗೂ ತರಾಸು ಅವರ ‘ದುರ್ಗಾಸ್ತಮಾನ’ ಕಾದಂಬರಿ, ‘ನಾಗರಹಾವು’ ಚಲನಚಿತ್ರಗಳು ಚಿತ್ರದುರ್ಗದ ಕೀರ್ತಿಯನ್ನು ಜಗದ್ವಿಖ್ಯಾತಗೊಳಿಸಿವೆ. ಜೊತೆಗೆ ‘ಕೋತಿ ರಾಜ’ ಎಂದೇ ಪ್ರಸಿದ್ಧರಾಗಿರುವ ಜ್ಯೋತಿರಾಜ್ ಅವರ ಸಾಹಸ ಹಾಗೂ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳ ಶ್ರಮ ದುರ್ಗದ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡಿದೆ ಎಂದು ಪ್ರಶಂಸಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಮಾತನಾಡಿ, ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ‘ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಪ್ರವಾಸೋದ್ಯಮ ಮರುಸೃಷ್ಟಿ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಆಚರಣೆಯ ಭಾಗವಾಗಿ ಈಗಾಗಲೇ ಪ್ರವಾಸಿ ಹಾಗೂ ಪಾರಂಪರಿಕ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 28 | ಸೂರ್ಯಕಾಂತಿ, ಶೇಂಗಾ ರೇಟ್….
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಡ್ಲೆಗುದ್ದು ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ರಂಜಿತ್, ಇಂಚರ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಭಿಜ್ಞಾ ಮತ್ತು ತೃಪ್ತಿ ಅವರಿಗೆ ನಗದು ಬಹುಮಾನ ವಿತರಿಸಲಾಯಿತು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಪ್ರವಾಸಿಗರಿಗೆ ನೆರವಾದ ಪ್ರವಾಸಿ ಮಿತ್ರರಾದ ಎಂ.ಮಲ್ಲಿಕಾರ್ಜುನ, ಕೆ.ಮಲ್ಲಿಕಾರ್ಜುನ, ಸಂತೋಷ್, ಅಭಿಲಾಷ್ ಹಾಗೂ ಬಿ. ಶ್ರೀನಿವಾಸ್ ಅವರನ್ನು ಪ್ರಶಂಸಿಸಿ ಅಭಿನಂದಿಸಲಾಯಿತು. ಇದೇ ವೇಳೆ ಚಿತ್ರದುರ್ಗ ಕೋಟೆಗೆ ಭೇಟಿ ನೀಡಿದ್ದ ಪ್ರವಾಸಿಗರಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: ಸುಟ್ಟ ಗಾಯದ ಮೇಲೆ ತಕ್ಷಣ ಐಸ್ ಇಟ್ಟರೆ ಏನಾಗುತ್ತದೆ ಗೊತ್ತಾ?
ಕಾರ್ಯಕ್ರಮದಲ್ಲಿ ಪ್ರವಾಸಿ ಮಿತ್ರರು, ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ಸಿಬ್ಬಂದಿ ಮನು ಸ್ವಾಗತಿಸಿದರು. ವಿ. ವಿಕಾಸ್ ಕುಮಾರ್ ನಿರೂಪಿಸಿದರು. ವಿಜಯಲಕ್ಷ್ಮಿ ವಂದಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

