CHITRADURGA NEWS | 24 MARCH 2026
ಚಿತ್ರದುರ್ಗ: ಬುಡಕಟ್ಟು ತವರು ಎಂದೇ ಹೆಸರಾಗಿರು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಪ್ರಮುಖ ದೇವತೆಗಳ ಜಾತ್ರೆಗೆ ಭರದ ತಯಾರಿ ನಡೆದಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 23 ಮಾರ್ಚ್ | ಇಂದಿನ ಅಡಿಕೆ ಮಾರುಕಟ್ಟೆ ರೇಟ್
ಕೋಟೆನಾಡಿನ ಅಧಿದೇವತೆ ಶ್ರೀ ಏಕನಾಥೇಶ್ವರಿ ದೇವಿ ಜಾತ್ರೆ ಮೂಲಕ ಜಿಲ್ಲೆಯ 63 ದೇವಿಯರ ಜಾತ್ರೆಗಳು ಆರಂಭವಾಗಲಿವೆ.

ಏಕನಾಥೇಶ್ವರಿ ದೇವಿ ಜಾತ್ರೆಯೊಂದಿಗೆ ಶ್ರೀ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೇವಿಯರ ಜಾತ್ರೆಗಳು ಪ್ರಾರಂಭವಾಗಲಿದ್ದು, ಭೇಟಿ ಉತ್ಸವದ ಮೂಲಕ ಸಂಪನ್ನವಾಗಲಿವೆ.
ಇಂದು ಜಾತ್ರೆಗೆ ಸಾರು ಹಾಕುವ ಶಾಸ್ತ್ರ:
ಇಂದು ಮಾರ್ಚ್ 24 ರಂದು ಕೋಟೆನಾಡಿನ ಅಧಿದೇವತೆ ಶ್ರೀ ಏಕನಾಥೇಶ್ವರಿ ದೇವಿ ಜಾತ್ರೆಗೆ ಸಾರು ಹಾಕಲಾಗುತ್ತದೆ.

ಕೋಟೆಯಲ್ಲಿರುವ ಶ್ರೀ ಏಕನಾಥೇಶ್ವರಿ ದೇವಿಯನ್ನು ನಗರಕ್ಕೆ ಕರೆತಂದು ಜಾತ್ರೆ ಮಾಡುವುದು ದುರ್ಗದ ಪರಂಪರೆ. ಇದೇ ವೇಳೆ ಮುನಿಸಿಕೊಂಡಿರುವ ಅಕ್ಕ ತಂಗಿಯರು ಎಂದೇ ಹೆಸರಾಗಿರುವ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೇವಿಯರ ಭೇಟಿ ಉತ್ಸವ ಕೂಡಾ ನೆರವೇರುತ್ತದೆ.
ಮಾರ್ಚ್ 27 ರಂದು ಜಾತ್ರೆಗೆ ಕಂಕಣಧಾರಣೆ:
ಹೊಳಲ್ಕೆರೆ ರಸ್ತೆಯಲ್ಲಿ ನೆಲೆನಿಂತಿರುವ ಶ್ರೀ ಬರಗೇರಮ್ಮ ದೇವಿ ಹಾಗೂ ಶ್ರೀ ತಿಪ್ಪಿನಘಟ್ಟಮ್ಮ ದೇವಿಯರ ಜಾತ್ರೆಗೆ ಮಾ.27ರಂದು ರಾತ್ರಿ 8ಕ್ಕೆ ಕಂಕಣಧಾರಣೆ, ಮಧುವಣಗಿತ್ತಿ ಪೂಜಾ ಕೈಂಕರ್ಯ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ಕಛೇರಿಯ AEE ಯಾಗಿ ಕಿರಣ್ ಕುಮಾರ್
ಬರೋಬ್ಬರಿ 15ಗಳ ಕಾಲ ನಡೆಯುವ ಜಾತ್ರೆಗೆ ಮಾ.31 ರಂದು ರಾತ್ರಿ 8ಕ್ಕೆ ಬರಗೇರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಬುರುಜನಹಟ್ಟಿಯ ದೇಗುಲದಿಂದ ಊರ ಹೊರಗಿನ ದೇಗುಲಕ್ಕೆ ಕರೆ ತರುವುದು. ನಂತರ ಕರಿಯಟ್ಟಿಯಲ್ಲಿನ ಭಕ್ತರಿಂದ ಪೂಜೆ ಸ್ವೀಕಾರ ನಡೆಯಲಿದೆ.

ಏ. 1ರಂದು ಬೆಳಗ್ಗೆ 9ಕ್ಕೆ ಚಂದ್ರವಳ್ಳಿಯಲ್ಲಿ ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ ನಂತರ ದೇಗುಲಕ್ಕೆ ಆಗಮನ. ಅನ್ನಸಂತರ್ಪಣೆ ನಂತರ ರಾತ್ರಿ ಈರಜ್ಜನಹಟ್ಟಿ ಹಾಗೂ ನಾಯಕರ ಸೊಲ್ಲಾಪುರ, ಐಯುಡಿಪಿ ಲೇಔಟ್, ಸರಸ್ವತಿಪುರದಲ್ಲಿ ಭಕ್ತರಿಂದ ಪೂಜೆ ನಡೆಯಲಿದೆ.
ನಗರ ಸಂಚಾರ ಮಾಡುವ ದೇವತೆಯರು:
ಏ.2 ರಂದು ದೇವಿಯು ಕೆಳಗಿನ ಸೊಲ್ಲಾಪುರ, ಗೊಲ್ಲರಹಟ್ಟಿ, ಟಗರನಹಟ್ಟಿ, ದೇವರಹಟ್ಟಿ, ಜಾಲಿಕಟ್ಟೆ ಮತ್ತು ಮಾಳಪ್ಪನಹಟ್ಟಿ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ದೇಗುಲಕ್ಕೆ ಮರಳುವುದು. ಅಂದು ಬೆಳಗ್ಗೆ 7ಕ್ಕೆ ಪಿಳ್ಳೇಕೆರನಹಳ್ಳಿ, ಬಸವೇಶ್ವರ, ವಿದ್ಯಾ, ಮಾರುತಿ, ನೆಹರು, ಚೌಡೇಶ್ವರಿ ನಗರ, ಮೆದೇಹಳ್ಳಿ ರಸ್ತೆ, ಬಿವಿಕೆಎಸ್ ಲೇ ಔಟ್, ಲಕ್ಷ್ಮೀಬಜಾರ್, ಚೇಳುಗುಡ್ಡ, ಧವಳಗಿರಿ ಬಡಾವಣೆ ಭಕ್ತರ ಮನೆಗಳಲ್ಲಿ ಪೂಜೆ ನಡೆಯಲಿದೆ.
ಇದನ್ನೂ ಓದಿ: ನಿವೃತ್ತ ನೌಕರರಿಂದ ಮಾ.25ರಂದು ಚಿತ್ರದುರ್ಗದಲ್ಲಿ ಪ್ರತಿಭಟನೆ | ಹೊಸ ಪಿಂಚಣಿ ನೀತಿ ವಿರೋಧಕ್ಕೆ ಆಗ್ರಹ
ಏ.3 ರಂದು ದೇಸಕಲ ವಾದ್ಯಗಳೊಂದಿಗೆ ನಗರದ ರಾಜ ಬೀದಿಗಳಲ್ಲಿ ರಥೋತ್ಸವ ಮೆರವಣಿಗೆ, ಭಕ್ತರಿಂದ ಮೀಸಲು ಸಮರ್ಪಣೆ, ಹರಕೆ ಕಾರ್ಯಕ್ರಮಗಳು ಜರುಗಲಿವೆ.
ಏ.10 ರಂದು ಕಂಕಣ ವಿಸರ್ಜನೆ, ಜೋಗೂಟದೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಕಸ್ತೂರಪ್ಪ ತಿಳಿಸಿದ್ದಾರೆ.
ಏ.7 ರಂದು ಐತಿಹಾಸಿಕ ಅಕ್ಕತಂಗಿ ಭೇಟಿ
ಏ.7 ರಂದು ಚಿಕ್ಕಪೇಟೆ, ಐಯ್ಯಣ್ಣನಪೇಟೆ, ದೊಡ್ಡಪೇಟೆ, ಉತ್ಸವಾಂಬ ದೇಗುಲದ ಅಕ್ಕಪಕ್ಕ, ಕರುವಿನಕಟ್ಟೆ ವೃತ್ತ, ಧರ್ಮಶಾಲಾ ರಸ್ತೆಯಲ್ಲಿನ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ಊರ ಒಳಗಿನ ದೇಗುಲಕ್ಕೆ ಆಗಮನ. ನಂತರ ರಾತ್ರಿ 8ಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಜಬೀದಿ ದೊಡ್ಡಪೇಟೆಯಲ್ಲಿ ‘ಐತಿಹಾಸಿಕ ಅಕ್ಕತಂಗಿ ಭೇಟಿ’ ಉತ್ಸವ ಜರುಗಲಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

