Connect with us

    Kannada Novel: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ | ಹಬ್ಬಿದಾ ಮಲೆಮಧ್ಯದೊಳಗೆ

    Habbida Malemadhyadolage

    ಸಂಡೆ ಸ್ಪಷಲ್

    Kannada Novel: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ | ಹಬ್ಬಿದಾ ಮಲೆಮಧ್ಯದೊಳಗೆ

    CHITRADURGA NEWS | 11 NOVEMBER 2024

    ಒಬ್ಬ ಆಜಾನುಬಾಹು ಗಡ್ಡಧಾರಿ ಯುವಕ, ಜತೆಯಲ್ಲಿದ್ದ ಚಲುವೆ ಯುವತಿ ತಲೆ ಮೇಲೆ ಗಂಟುಗಳು, ಹೆಗಲಿಗೆ ನೇತು ಹಾಕಿಕೊಂಡಿದ್ದ ಬಗಲ ಚೀಲಗಳ ಸಮೇತ ಒಂದು ಸಂಜೆ ಗೌನಳ್ಳಿ ತಲುಪಿದ್ದರು.

    ಆ ಯುವಕ ತನ್ನ ಗಾಂಭೀರ ಹಾಗೂ ವರ್ಚಸ್ಸಿನಿಂದ ಯಾರೋ ಉತ್ತಮ ಜಾತಿಯವನೆಂದು ಯಾರಾದರೂ ಭಾವಿಸಬಹುದಿತ್ತು. ಓಣಿಬಾಯಿಯಿಂದ ಊರು ತಲುಪಿದವರು ಸಮೀಪದ ಕಮ್ಮಾರಹಟ್ಟಿ ಬಳಿಯ ಕಲ್ಲು ಬಂಡೆಗಳ ಮೇಲೆ ಕುಳಿತು ದಣಿವಾರಿಸಿಕೊಂಡು ಜತೆಯಲ್ಲಿ ತಂದಿದ್ದ ತಿರುಪಿನ ಚೊಂಬಿನಲ್ಲಿದ್ದ ನೀರು ಕುಡಿದು ಸುಧಾರಿಸಿಕೊಳ್ಳುತ್ತಿದ್ದರು.

    ಮೊಂಡಕುಳಗಳನ್ನು ಮೊನೆಗುಳ ಮಾಡಿಸಿಕೊಳ್ಳುವ ರೈತರು ಮತ್ತು ಕುಲುಮೆಗೆ ಬೆಂಕಿ ಕಾಣಿಸಲು ಕಮ್ಮಾರರೂ ಅಲ್ಲಿಗೆ ಆಗಮಿಸಿ ಆ ಆಗಂತುಕರನ್ನು ‘ಎಲ್ಲಿಯವರು ಮತ್ತೆಲ್ಲಿಗೆ ಹೋಗಬೇಕು ಉದ್ಯೋಗ’ ಇತ್ಯಾದಿ ವಿಚಾರಿಸಿಕೊಂಡರು.

    ಹಿಂದಿನ ಸಂಚಿಕೆ ಓದಿ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

    ಯುವಕ ತಾನು ‘ಚಿನ್ನ, ಬೆಳ್ಳಿ ಒಡವೆ, ದೇವರ ಮುಖಪದ್ಮ ಇತ್ಯಾದಿ ಮತ್ತು ಕುಡುಗೋಲು ಮುಂತಾದುವುಗಳ ‘ಹಿಡಿಮಾಡುವವರು’ ಎಂದು ತಿಳಿಸಿದ. ‘ಮುಂದೆಲ್ಲಿಗಾದ್ರೂ ಹೋಗಬೇಕಾ ಈಗ ಎಲ್ಲಿಂದ ಬಂದ್ರಿ’ ಎಂದು ವಿಚಾರಿಸಿದಾಗ “ತೆಂಕಲ ಸೀಮೆಯಿಂದ ಮುವ್ವತ್ತು ಮೈಲಿ ನಡೆದು ಬಂದಿದ್ದೀವಿ.

    ಅದ್ಯಾವುದೋ ಊರಾಗೇ ಇಂಥಾ ಕಡೆ ಗುಡ್ಡದ ನಡುವೆ ಗೌನಳ್ಳಿ ಅಂಬೋ ಊರಿದೆ. ಜನ ಬಾಳ ಒಳ್ಳೆಯವು, ಆ ಊರಾಗೆ ಆಚಾರು, ಅಕ್ಕಸಾಲಿಗರು ಇಲ್ಲ. ಅಲ್ಲಿಗೆ ಹೋದರೆ ಸುಖವಾಗಿ ಬದುಕಬೌದು ಅಂತ ಹೇಳಿದ್ರು. ಅವರ ಮಾತ ನಂಬಿ ಇಲ್ಲಿಗೆ ಬಂದ್ವಿ”. ಯುವಕ ನಿಧಾನವಾಗಿ ದೃಢವಾದ ಸ್ವರದಿಂದ ತಿಳಿಸಿದ.

    ಅಲ್ಲಿ ಸೇರಿದ್ದವರು ಮತ್ತು ಕಮ್ಮಾರರು ಪರಸ್ಪರ ಮುಖ ನೋಡಿಕೊಂಡರು. ಅವರಿಗೆ ಗೌನಳ್ಳಿಯ ಹೆಸರು ದೂರ ದೂರಕ್ಕೆ ಹರಡಿರುವುದು ಆಶ್ಚಯ್ಯ ತಂದಿತ್ತು. ಮತ್ತು ‘ಊರಿನ ಜನ ಒಳ್ಳೇಯವು’ ಎಂಬ ಮಾತನ್ನು ಕೇಳಿ ಹೆಮ್ಮೆ ಪಟ್ಟು- ಕೊಂಡ್ರು. “ಅಕ್ಕಸಾಲಿಗರು, ಆಚಾರೂ ಇಲ್ಲ ಅಂಬದೇನೋ ನಿಜ.

    ಇನ್ನು ನಿಮಿಗೆ ಉದ್ಯೋಗ ಸಿಗೋ ಮಾತ ಹೇಳಾಕ್ ಬರಲ್ಲ’ ಎಂದು ಒಬ್ಬಾತ ಮಾತಾಡಿದರೆ, ಇನ್ನೊಬ್ಬಾತ “ತಡಕಳೊ ಮಾರಾಯ ಲಗ್ನಕ್ಕೆ ಬಂದಿರೋ ಮಕ್ಕಳಿಗೆ ಬರೇ ಮೂಗಿನಾಗೆ, ಬರೇ ಕಿವಿಯಾಗೆ ಕಳುಸ್ತೀಯ? ಕನಿಷ್ಟ ಒಂದ್ ತಾಳಿನಾದ್ರೂ ಮಾಡಿಸ್‍ಬೇಕಲ್ಲ. ಇನ್ನು ಏನೇನೋ ಬೇಕಾಗ್ತವೆ.

    ಹಿಂದಿನ ಸಂಚಿಕೆ ಓದಿ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

    ಊರಾಗೆ ಅಕ್ಕಸಾಲಿಗರು ಐದಾರೇಂದ್ರೆ ಯಾತ್ಯಾತ್ತೋ ಮಾಡಿಸ್‍ಗೆತ್ತಾರೆ ಜನ” ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದ. “ಹೌದು ಬಿಡಪ್ಪ. ಇಂಗೇ ಅಮ್ಮ ಹೇಳಾಕ್ ಬರಲ್ಲ” ಇನ್ನೊಬ್ಬಾತ ಮಾತಾಡಿದ್ದ.

    ‘ಸ್ವಾಮಿ ನಿಮ್ಮೆಸರೇನು? ಊರ ಬಡಗ್ಗಡೀಕೆ ಒಂದ್ ಮಾರೀ ಗುಡಿ ಐತೆ. ಅಲ್ಲೇ ಹತ್ರದಾಗೆ ಹಳ್ಳ ಐತೆ, ನೀವು ಇವೊತ್ತು ರಾತ್ರಿ ಅಲ್ಲಿರಬೌದು” ಅಂತ ಇನ್ನೊಬ್ಬಾತ ಕೈ ತೋರಿಸಿ ಹೇಳಿದ್ದ “ನನ್ನ ಹೆಸರು ಗುಂಡಾಚಾರಿ ಅು. ಹತ್ತಿರದಾಗೆ ನೀರ ಆದ್ರೆ ಐತೆ ಅಂದರೆ ಇವೊತ್ ರಾತ್ರಿ ಅಲ್ಲೇ ಇದ್ದೀವಿ.

    ಬೆಳಿಗ್ಗೆ ನೋಡಾನ” ಎಂದು ತಿಳಿಸಿ ತಮ್ಮ ಗಂಟು, ಬಗಲ ಚೀಲಗಳನ್ನು ಹೊತ್ತು ಊರಿನ ಬಡಗಲ ದಿಕ್ಕಿಗೆ ನಡೆದರು. ಹೊರಿಚ್ಚಿಗೆ ಅಲ್ಲೊಂದು ಮಾಳಿಗೆ ಮನೆ ಕಾಣಿಸಿತ್ತು. ಅಲ್ಲಿಗೆ ನಡೆದ ಇಬ್ಬರೂ ತಮ್ಮ ಗಂಟುಗಳನ್ನು ಇಳಿಸಿ ಮೂಲೆಯಲ್ಲಿದ್ದ ಕಸಬರಿಕೆಯಿಂದ ಗುಡಿಯಲ್ಲಿನ ಧೂಳು ಗುಡಿಸಿದರು.

    ಯುವಕ ತಮ್ಮಲ್ಲಿದ್ದ ಬಿಂದಿಗೆಯಂಥಾ ಪಾತ್ರೆ ಹಿಡಿದುಕೊಂಡು ಹಳ್ಳದ ಕಡೆಗೆ ಹೋಗುತ್ತಿದ್ದವರನ್ನು ಹಿಂಬಾಲಿಸಿದ. ಹತ್ತಿರದಲ್ಲೇ ಹಳ್ಳ ಇದ್ದು ಅವನಲ್ಲಿ ತೆಳುವಾಗಿ ನೀರು ಹರಿದಿತ್ತು. ಮುಖ ಕೈಕಾಲು ತೊಳೆದುಕೊಂಡು ಒಂದು ಬೊಗಸೆ ನೀರು ಕುಡಿದು ಅದರ ರುಚಿಗೆ ತೃಪ್ತಿಪಟ್ಟುಕೊಂಡ.

    ಅನಂದಿ ಕೈಲಿಡಿದು ತಂದಿದ್ದ ಪಾತ್ರೆ ತುಂಬಾ ನೀರು ತುಂಬಿಸಿಕೊಂಡು ಗುಡಿಗೆ ಹಿಂದಿರುಗಿ ನೀರಿನ ಬಗ್ಗೆ ಪ್ರಶಂಸೆಯ ಮಾತಾಡಿದ. ಅμÉ್ಟೂತ್ತಿಗೆ ಆಕೆ ಗರ್ಭಗುಡಿಯ ಬಾಗಿಲ ಸಂದಿಯಲ್ಲಿ ಇಣುಕಿ ನೋಡಿ ಕತ್ತಲಲ್ಲಿ ಕಾಯಿಸಿದ ಒಂದು ಕಲ್ಲನ್ನು ನೋಡಿ ಯಾವುದೋ ಮಾರಿ ದೈವವೆಂದು ಭಕ್ತಿಯಿಂದ ಕೈ ಮುಗಿದಿದ್ದಳು.

    ಗುಡಿಯ ಹೊರಗಡೆ ಮೂರು ಕಲ್ಲುಗಳನ್ನು ತಂದು ಜೋಡಿಸಿ ಒಂದು ಒಲೆಯನ್ನು ಹೂಡಿ, ಎರಡು ಮುದ್ದೆ ಬೇಯಿಸಲು ಎಸರಿಟ್ಟು ಜತೆಯಲ್ಲಿ ತಂದಿದ್ದ ರಾಗಿ ಹಿಟ್ಟು ಇತ್ತು. ಒಂದು ಸೆರೆ ಬೇಳೆಕಾಳನ್ನು ಕರಗುವಂತೆ ಬೇಯಿಸಿ ಒಣ ಮೆಣಸಿನಕಾಯಿ ಬೆಳ್ಳುಳ್ಳಿ ಉಪ್ಪು ಇತ್ಯಾದಿ ಸೇರಿಸಿ ಸಾರು ಮಾಡಿ ಇಬ್ಬರೂ ತಲಾ ಒಂದೊಂದು ಮುದ್ದೆ ಉಂಡು ತಮ್ಮೊಡನೆ ತಂದಿದ್ದ ಜಮಖಾನೆ ಹಾಸಿ ದುಪ್ಪಟಿ ಹೊದ್ದು ಮಲಗಿದ್ದರು. ದೂರ ನಡೆದು ದಣಿವಾಗಿದ್ದರಿಂದ ಬೇಗ ನಿದ್ದೆಗೆ ಜಾರಿದರು.

    ಹಿಂದಿನ ಸಂಚಿಕೆ ಓದಿ: 3. ಎಲ್ಲರೂ ಲಿಂಗವಂತರಾದರು

    ನಸಿಗ್ಗೆಲೆ ಇಬ್ಬರೂ ಎದ್ದು ಹಳ್ಳದ ಕಡೆ ಹೋಗಿ ಬೆಳಗಿನ ಕರಗಳನ್ನು ಮುಗಿಸಿ ತಲಾ ಒಂದೊಂದು ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು ತಂದರು. ಗುಂಡಾಚಾರಿ “ನಾನು ಊರೊಳಗೆ ಹೋಗಿ ಬರ್ತಿನಿ, ಬರೋ ಹೊತ್ತೆ ಮುದ್ದೆ ಸಾರು ಮಾಡಿರು” ಎಂದು ತನ್ನ ಮಡದಿಗೆ ತಿಳಿಸಿ ಊರೊಳಗೆ ನಡೆದಿದ್ದ.

    ಇವರು ಆಗಮಿಸಿರುವ ವಿಚಾರ ಊರಲ್ಲಿ ಪ್ರಚಾರವಾಗಿತ್ತು. ಇದಿರಿಗೆ ಸಿಕ್ಕವರಿಗೆ ಈತ ಕೈಎತ್ತಿ ನಮಿಸಿ “ಒಂದು ಗುಡಿಸಲು ಕಟ್ಟಿಕೊಳ್ಳಲು ಜಾಗ ತೋರಿಸಿ ಯಜಮಾನೆ” ಎಂಬ ಈತನ ಬೇಡಿಕೆಗೆ “ಅಯ್ಯೋ ಮಾರಾಯ ನನ್ನನ್ಯಾಕೆ ಯಜಮಾನೆ ಅಂತೀಯ, ಇಂಗೆ ಊರಾಗೆ ಅಡ್ಡಾಡು ಜಾಗಕ್ಕೇನು ಮಸ್ತಐತೆ.

    ನಿನಿಗೆ ಎಲ್ಲಿ ಸರಿ ಕಾಣುತ್ತೋ ಅಲ್ಲಿ ಕಟ್ಟು” ಅಂತ ಹಳ್ಳಿಯಾತ ತಿಳಿಸಿ ಮುಂದಕ್ಕೋಗಿದ್ದ. ಇನ್ನೊಬ್ಬಾತ “ಬರಿ ಸ್ವಾಮಿ ಇಲ್ಲೊಂದು ಒಳ್ಳೆ ಜಾಗ ಐತೆ. ಅದು ನಿಮಿಗೆ ಹೊಂದ್ಕೆ ಆಗಬೌದು” ಎಂದು ಎರಡು ಮಾಳಿಗೆ ಮನೆಗಳ ನಡುವೆ ಇದ್ದ ಒಂದು ಸ್ಥಳವನ್ನು ತೋರಿಸಿದ್ದ.

    ಇಬ್ಬರೂ ಅಲ್ಲಿ ನಿಂತು ಜಾಗದ ಅಜಮಾಯಿಷಿ ಮಾಡುತ್ತಿರುವಾಗ ಅಲ್ಲಿಗೆ ಸೇರಿಕೊಂಡ ಇನ್ನೊಂದಿಬ್ಬರು ‘ಇದು ಊರ ನಡುವೆ ಆಗುತ್ತೆ. ಒಳ್ಳೆ ಪಸಂದಾಗೈತೆ, ಆಕಡೆ ಈಕಡೆ ಎರಡು ಮನೆ ಗ್ವಾಡೆ ಬ್ಯಾರೆ ಐದಾವೆ’ ಎಂದು ಶಿಫಾರಸ್ ಮಾಡಿದ್ದರು. ಗುಂಡಾಚಾರಿಗೂ ಇದು ಮನಸ್ಸಿಗೆ ಬಂದಿತ್ತು.

    ಹೆಂಡತಿಗೆ ತೋರಿಸೋಣವೆಂದು ಮಾರಿಗುಡಿಗೆ ಹಿಂದಿರುಗಿ ಮಡದಿ ಮಾಡಿದ್ದ ರಾಗಿ ಮುದ್ದೆ ಬಿಸಿಬಿಸಿ ಎಸರು ಉಂಡು, ಗಂಟುಗಳನ್ನು ಗುಡಿಯಲ್ಲೇ ತಾಬಂದು ಮಾಡಿ ಹೆಂಡತಿಯೊಡನೆ ಬೆಳಿಗ್ಗೆ ನೋಡಿದ್ದ ಸ್ಥಳಕ್ಕೆ ಕರೆದೊಯ್ದ. ರೈತರು ಹೊಲದ ಕೆಲಸಗಳಿಗೆ ಹೊರಡುವ ತಯಾರಿಯಲ್ಲಿದ್ದರು.

    ಒಂದಿಬ್ಬರು ಹೆಂಗಸರು ಅಲ್ಲಿಗೆ ಆಗಮಿಸಿ “ಇಲ್ಲಿ ಗುಡ್ಡು ಕಟ್ಟಾಕೆ ಪಸಂದಾಗೈತೆ. ಆಕಡೆ, ಈಕಡೆ ಎಳ್ ಗ್ವಾಡೆ ಬ್ಯಾರೆ ಐದಾವೆ ನಡಂತ್ರ ಕಟ್ಗಳಿ” ಎಂದು ಪ್ರೋತ್ಸಾಹದ ಮಾತಾಡಿದ್ದರು. ಗುಂಡಾಚಾರಿಯ ಹೆಂಡತಿಗೆ ಇದು ಸರಿಯೆನಿಸಿತ್ತು. “ನಾನೇಸು ದೇಶ ತಿರಿಗ್ಯದೀನಿ, ಆಯಮ್ಮಾರು ಹೇಳಿದಂಗೆ ಇಲ್ಲೆ ಗುಡ್ಡು ಕಟ್ಟಂಬಾನಾ” ಎಂದು ತನ್ನ ಸಮ್ಮತಿ ಸೂಚಿಸಿದ್ದಳು.

    ಹಿಂದಿನ ಸಂಚಿಕೆ ಓದಿ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

    ಗುಂಡಾಚಾರಿಗೂ ಇದು ಸರಿಯೆನಿಸಿತ್ತು. “ಸರಿ ಹೋಗಿ ಗಂಟುಗಳ ತರಾನಾ ಬಾ” ಎಂದು ಮಾರಿಗುಡಿಗೆ ಹಿಂದಿರುಗಿ ಗಂಟುಗಳನ್ನು ಮತ್ತು ಬೆಳಿಗ್ಗೆ ಉಂಡು ಮಿಕ್ಕಿದ್ದ ಸಾರಿನ ಪಾತ್ರೆಯನ್ನೂ ಹಿಡಿದು ಹೊಸಾ ಜಾಗ- ಕ್ಕೆ ತಲುಪಿದರು. ಪಕ್ಕದ ಮನೆಯವರಿಂದ ಕುಡುಗೋಲು ಸಲಿಕೆ ಪಡೆದು ಜಾಗದಲ್ಲಿ ಬೆಳೆದಿದ್ದ ಸಣ್ಣಪುಟ್ಟ ಗಿಡಗಳನ್ನು ಕತ್ತರಿಸಿ ದೂರ ಹಾಕಿದರು..

    ನೆಲ ಕೆತ್ತಲಿಕ್ಕೆ ಇಬ್ಬರಿಗೂ ಬರದು. ಅದನ್ನು ನೋಡಿದ್ದ ಹೆಂಗಸರು ಮೂರನೆ ಮನೆಯಲ್ಲಿದ್ದ ಒಬ್ಬ ಹುಡುಗನನ್ನು ಕರೆದು “ಸಲಿಕ್ಯಾಗೆ ನೆಲ ಕೆತ್ತಿ ಕೊಡಪಾ ಅವರಿಗೆ ರೂಡಿ ಇಲ್ಲ” ಎಂದು ಅವನನ್ನು ಕೆತ್ತಲು ಹಚ್ಚಿದರು. “ಅರ- ರೇ ಬ್ಯಾಡಪ್ಪಾ ನಾವೇ ಕೆತ್ತಿಗಯ್ತಿವಿ” ಎಂದು ಹುಡುಗನನ್ನು ತಡೆಯಲು ಹೋದ ಆಚಾರಿಗೆ “ತಡಕಳ್ಳಿ ಸ್ವಾಮಿ ಅದೇಟತ್ತೂ ಆಗಲ್ಲ” ಅನ್ನುತ್ತ ಆ ಹುಡುಗ ಕೆತ್ತಲು ಸುರುಮಾಡಿದ ಕೆತ್ತಿದ ಹುಲ್ಲನ್ನು ಇಬ್ಬರೂ ತೆಗೆದುಹಾ ಸ್ವಚ್ಚವಾದ ಜಾಗವನ್ನು ನೋಡಿ ಚಕಿತರಾದರು. ಹುಲ್ಲು ಕೆತ್ತಿದ್ದ ಹುಡುಗ ಕದ ಪೊರಕೆಯಿದ ನೆಲ ಗುಡಿಸಿಕೊಟ್ಟ.

    ಇಬ್ಬರೂ ತಮ್ಮ ಗಂಟುಗಳನ್ನು ಪಡುವಲಕ್ಕಿದ್ದ ಗೋಡೆಗಾನಿಸಿ ಇಟ್ಟದ ಈಗ ಗುಡಿಸಲು ಕಟ್ಟಲು ಗಳ, ಗೂಟಗಳಿಗೆ ಹುಡುಕ್ಯಾಡುತ್ತಿದ್ದ ಇವರನ್ನು ಕಂಡ ಇಬ್ಬರು ಬೋವಿಗಳು “ಸಾಮೇರ ಇಲ್ಲಿ ಬನ್ನಿ” ಎಂದು ಊರ ಮುಂದಲ ಹಳ್ಳದ ದಂಡೆಗೆ ಕರೆದೊಯ್ದು, ಮಳೆಗಾಲದಲ್ಲಿ ಹಳ್ಳದ ಪ್ರವಾಹದಲ್ಲಿ ಬಂದಿದೆ ನಾಕ್ಯಮ ಗಳ ಗೂಟಗಳನ್ನು ಹಿರಿದು ಕೊಟ್ಟರು. ಒಣಗಿ ಹಗೂರವಾಗಿದ್ದ ಅವುಗಳನ್ನು ಗುಡಿಸಲು ಜಾಗಕ್ಕೆ ಬೋವಿಗಳ ಜತೆ ತಂದು ಹಾಕಿದರು,

    “ಸ್ವಾಮಿ ಊಟಕ್ಕೆ ಅಡಿಗೆಪಡಿಗೆ ಮಾಡಿಕೆ, ನಾವು ಗುಂಡಿ ತೋಡಿಕೊಡ್ತೀವಿ” ಎಂದು ಅವರ ಮನೆಗಳಿಂದ ಹಾರೆ, ಸಲಿಕೆ ತಂದರು. ಆಚಾರರ ಮಡದಿ ಮೂರು ಗುಂಡು ತಂದು ಹೂಡಿ ಒಲೆ ಮಾಡಿ ಬೆಂಕಿ ಕಾಣಿಸಿ ಮುದ್ದೆಗೆ ಎಸರಿಟ್ಟಳು. ಗುಂಡಾಚಾರಿ ಗಳ ಗೂಟಗಳನ್ನು ಕೆತ್ತಿ ನೇರ್ಪು ಮಾಡಿದರೆ ಬೋವಿಗಳಿಬ್ಬರು ಮೊಳಕಾಲುದ್ದದ ಏಳೆಂಟು ಗುಂಡಿಗಳನ್ನು ತೋಡಿದರು.

    “ಅಯ್ಯಾ ನೀವು ಊಟ ಮಾಡ್ಕೊಂಡ್ ಬನ್ನಿ. ಹಗಲೂಟದ ಹೊತ್ತಾಗೈತೆ” ಎಂದು ತಿಳಿಸಿದ ಆಚಾರಿಗೆ “ಸ್ವಾಮಿ ನಾವು ದೊಡ್ಡುಂಬೊತ್ತಿನಾಗ ಉಂಡಿದ್ವಿ, ಈಟ ಗಡಾ ನಮಿಗೆ ಊಟ ಬ್ಯಾಡಾ. ಗೂಟ ಎಲ್ಲಾ ನಿಲ್ಲಿಸಿ ಬಿಡಾನ. ಆಮೇಲೆ ಗಳ ಅಳ್ಳಬೇಕು”. ಗುಂಡಿ ತೋಡುವ ಕೆಲಸವನ್ನು ಮುಂದುವರಿಸುತ್ತಲೇ ತಿಳಿಸಿದರು.

    ಗುಂಡಾಚಾರಿ ಮತ್ತು ಅವನ ಪತ್ನಿ ತಲಾ ಒಂದೊಂದು ರಾಗಿ ಮುದ್ದೆ ಉಂಡು ತೇಗಿದರು. ಯಾವುದೋ ಊರಲ್ಲಿ ತಿಳಿಸಿದಂತೆ ಗೌನಳ್ಳಿ ಜನ ಒಳ್ಳೆಯವರಾಗಿ ಕಂಡಿದ್ದರು. ನಿನ್ನೆ ಸಂಜೆಯಿಂದ ಈ ತನಕ ಈ ಊರವರ ಸಹಕಾರ ಮನೋಭಾವ ಮೆಚ್ಚುಗೆಯಾಗಿತ್ತು.

    ಹಿಂದಿನ ಸಂಚಿಕೆ ಓದಿ: 5. ಕೆನ್ನಳ್ಳಿಯ ದುರಂತ

    “ಹೂಂ ಬರ್ರಿ ಸ್ವಾಮಿ ಗೂಟ ನೆಕ್ಸಾನ”, ಬೋವಿಗಳು ಕರೆದ ಕೂಡಲೇ ಎರಡು ದಪ್ಪನೆಯ ಗೂಟಗಳನ್ನು ಆರಿಸಿ ಗುಂಡಿಯಲ್ಲಿ ಇಳಿ ಬಿಟ್ಟು ಮಣ್ಣು ತುಂಬಿ ಬಿಗಿಯಾಗಿ ಕೂರಿದರು. ಬಲವಾದ ನಾಲ್ಕು ಗೂಟಗಳನ್ನು ನಾಲ್ಕು ಮೂಲೆಗೆ ಎತ್ತಿ ನಿಲ್ಲಿಸಿದ ಬಳಿಕ ತುಸು ಸಣ್ಣ ಗೂಟಗಳನ್ನು ಅವುಗಳ ಮಧ್ಯೆ ನಿಲ್ಲಿಸಿದರು.

    ನಾಲ್ಕು ಅಡ್ಡಪಟ್ಟಿಗಳನ್ನು ಕೂಡಿಸುವಾಗ “ಬಾಗಿಲು ಸ್ವಲ್ಪ ಎತ್ತರವಾಗಿರಲಿ ಬಾಗಿ ಒಳಗೆ ಬಗ್ಗೆ ಹೋಗುವಂತಿರಬಾರದು” ಎಂದು ಆಚಾರರು ಸಲಹೆ ನೀಡಿ ಅದರಂತೆ ಬಾಗಿಲ ಅಡ್ಡಪಟ್ಟಿಯನ್ನು ಆರು ಅಡಿ ಎತ್ತರದಲ್ಲಿ ಕಟ್ಟಿದರು. ಇವರ ಪುಣ್ಯಕ್ಕೆ ಕವೆಗೂಟಗಳೇ ಸಿಕ್ಕಿದ್ದವು. ಆಚಾರರ ಪತ್ನಿ ವಿಸ್ಮಯದಿಂದ ನೋಡು ನೋಡುತ್ತಿದ್ದಂತೆ ಗುಡಿಸಲು ಆಕಾರ ಮೈದಳೆಯಿತು.

    ಉದ್ದನಾಗಿದ್ದ ಸಣ್ಣ ಗಳಗಳನ್ನು ಅಡ್ಡಲಾಗಿ ಕಟ್ಟಿದರು. ಹಸಿ ಈಚಲ ಕಡ್ಡಿಗಳನ್ನು ಜಜ್ಜಿ ಕಟ್ಟುಗಳಾಗಿ ಮಾಡಿದ್ದರು. ಬಾಗಿಲು ಬಿಟ್ಟು ಸುತ್ತಲೂ ಗಳಗಳನ್ನು ಕಟ್ಟಿದ ಬಳಿಕ ಮಾಡಿನ ಗಳಗಳನ್ನು ಜೋಡಿಸಲು ಮತ್ತೊಂದು ಉದ್ದನೆಯ ಗಳ ಬೇಕಾಯ್ತು.

    “ಬರಿ ಸ್ವಾಮಿ ಹಳ್ಳದ ಕಡಿಗೆ ನೋಡಾನ” ಎಂದು ಗುಂಡಾಚಾರಿಯನ್ನು ಜತೆಯಲ್ಲಿ ಕರೆದೊಯ್ದ ಬೋವಿಗಳು ಹಳ್ಳದ ತೆಂಕಲಿಗೆ ಇಬ್ಬರು. ಮಗುದೊಬ್ಬರು ಬಡಗಣ ದಿಕ್ಕಿಗೆ ನಡೆದು ಹಳ್ಳದ ದಡಗಳನ್ನು ಸೋವಿದರು. ಕೊನೆಗೊಂದು ಉದ್ದನೆಯ ಗಳು ಮಾರಿಗುಡಿ ಹಳ್ಳದ ಸನಿಹದಲ್ಲಿ ಸಿಕ್ಕಿತ್ತು.

    ಅದನ್ನೆತ್ತಿಕೊಂಡು ಬೋವಿ ಊರೊಳಗೆ ಹಾಯ್ದು ಗುಡಿಸಲ ಜಾಗ ತಲುಪುವ ವೇಳೆಗೆ ಹಳ್ಳದ ತೆಂಕಲಿಗೆ ಹೋಗಿದ್ದವರು ನೆರಿಕೆ ಕಟ್ಟಲು ಬರುವಂತಹ ಸಣ್ಣಸಣ್ಣ ಗಳುಗಳ ಹೊರೆಗಳನ್ನು ಹೊತ್ತು ತಂದಿದ್ದರು.

    ಉದ್ದನೆಯ ಗಳುವನ್ನು ನೋಡಿ ಖುಷಿಗೊಂಡ ಇನ್ನೊಬ್ಬ ಬೋವಿ “ಶಾನಾ ಬಾಗುಂದಿ” ಎಂದು ತೆಲುಗಿನಲ್ಲಿ ತಾರೀಪ್ ಮಾಡಿ ಅದನ್ನು ಅಳೆದು ಕೊನೆಗಳನ್ನು ಕತ್ತರಿಸಿ ಮೇಲೆತ್ತಿ ಗೂಟಗಳ ಮೇಲೆ ಕಟ್ಟಿದರು.

    ಹಿಂದಿನ ಸಂಚಿಕೆ ಓದಿ: 6. ಎಲ್ಲೆಲ್ಲಿಂದಲೋ ಬಂದರು

    ಅನಂತರ ಮಾಡಿನ ಗಳುಗಳಿಗೆ ಕೊನೆಯಲ್ಲಿ ತೂತು ಮಾಡಿ ತಡೆಗೂಟಗಳನ್ನು ತೂರಿಸಿ ಒಂದೊಂದೇ ಗಳುವನ್ನು ಮೇಲೇರಿಸಿದರು. “ಅಯ್ಯಾ ಈಗಲಾದ್ರೂ ಊಟ ಮಾಡ್ಕಂಡ್ ಬರಿ. ಇಲ್ಲ ಇಲ್ಲೇ ರಾಗಿ ಮುದ್ದೆ ಬ್ಯಾಳೆ ಸಾರು ಮಾಡಿಸ್ತೀನಿ” ಅಂತ ಗುಂಡಾಚಾರಿ ಕಳಕಳಿಯಿಂದ ಬೋವಿಗಳಿಗೆ ಬಿನ್ನವಿಸಿದರು.

    ಬೋವಿಗಳಿಬ್ಬರೂ ತಲೆಎತ್ತಿ ನೋಡಿ “ಹಗಲೂಟದೊತ್ತು ಮೀರೈತೆ ನಮ್ಮನೆಗಳಾಗೆ ಎಲ್ಲಾ ಉಂಡಿದ್ದಾರೆ. ಅಲ್ಲಾ ನೀವು ಹೊಸದಾಗಿ ಬಂದಿರೋರು. ನಿಮಾಗೆ ರಾಗಿ ಹಿಟ್ಟು ಬ್ಯಾಳೆ ಐದಾವ ಇದ್ರೆ ಮಾಡಿಸಿರಿ. ಒಂದೊಂದೇ ಮುದ್ದೆ ಸಾಕು. ಸಾರು ಒಂದೀಟು ಕಾರ ಇಲ್ಲಮ್ಮೊ” ಎಂದು ಗುಂಡಾಚಾರಿ ಮಡದಿಗೆ ಸೂಚಿಸಿದರು. ಆಕೆ ಕೂಡಲೇ ಒಲೆಗೆ ಬೆಂಕಿ ಕಾಣಿಸಿ ಮುದ್ದೆಗೆ ಎಸರಿಟ್ಟಳು.

    “ನೋಡ್ರಪ್ಪಾ ಈಗ ನನಿಗೆ ಸಮಾಧಾನ ಆಯ್ತು. ನೀವಿಬ್ರೂ ನಾನು ಕರೀದಲೇ ಬಂದು ಇμÉ್ಟಲ್ಲಾ ಕೆಲಸ ಮಾಡಿದಿರಿ.” ಗುಂಡಾಚಾರಿ ಬೋವಿಗಳಿಬ್ಬರನ್ನೂ ತಾರೀಪ್ ಮಾಡಿದರು. ಮಾಡಿಗೆ ಗಳುಗಳನ್ನು ಜೋಡಿಸಿ ಈಚಲ ಕಟ್ಟಿನಿಂದ ಕಟ್ಟಿ ನಡುವಿನಲ್ಲಿ ಅಡ್ಡ ಗಳುವನ್ನು ಕಟ್ಟಿ ಕೆಳಗಿಳಿದ ಬೋವಿಗಳಿಗೆ ಆಚಾರರ ಪತ್ನಿಯ ಸಾರಿನ ವಾಸನೆ ಮೂಗಿಗೆ ಬಡಿದಿತ್ತು.

    ಇಬ್ಬರಿಗೂ ಕೈ ತೊಳೆದುಕೊಳ್ಳಲು ನೀರು ಕೊಟ್ಟು ಗುಂಡಾಚಾರಿ ಮಾಡಿಕೊಟ್ಟ ಮಾಡಿದೀಯಮ್ಮ ಎರಡು ಇಸ್ತಗಳಲ್ಲಿ ಮುದ್ದೆ ಸಾರು ಬಡಿಸಿದಳು ಆಚಾರರ ಪತ್ನಿ. ಒಂದು ತುತ್ತು ಬಾಯೊಳಗಿಡುತ್ತಲೇ “ಅಬ್ಬ ಏಟು ರುಸಿಯಾಗಿ ಸಾರು ಕಾರ ಅರೀಲಿಲ್ಲ ಸಾಂಬಾರ್ ಹುರೀಲಿಲ್ಲ. ಎಂಗ್ ರುಸಿಯಾಗೆ ಮಾಡಿದೀಯಮ್ಮಾ” ಎಂದು ಬೋವಿಗಳಿಬ್ಬರೂ ಸಂತೋಷ ಪಟ್ಟಿದ್ದರು. ಬಿಸಿಯಾದ ರಾಗಿ ಮುದ್ದೆಗಳನ್ನು ಗಳಕ್ ಗುಳಕ್ ಎಂದು ನುಂಗಿ ಇಬ್ಬರೂ ತೃಪ್ತಿಯ ಡೇಗು ಹೊರಡಿಸಿದ್ದರು. ಗುಂಡಾಚಾರಿಯು ಸಾರಿನ ರುಚಿಯನ್ನು ಸವಿದು ಹೆಂಡತಿಯ ಬಗ್ಗೆ ಅಭಿಮಾನ ತಾಳಿದ್ದನು.

    ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಮಾಡು ಹತ್ತಿ ಉದ್ದುದ್ದದ ಗಳಗಳನ್ನೂ ಮತ್ತು ಅಡ್ಡಡ್ಡದ ಗಳುಗಳನ್ನು ಜೋಡಿಸಿ ಕಟ್ಟತೊಡಗಿದರು. ಗುಂಡಾಚಾರಿಗೆ ಗುಡಿಸಲು ಕಟ್ಟಿದ ಅನುಭವ ಇರಲಿಲ್ಲ. ಅವನ ಪತ್ನಿಗೆ ಇವೆಲ್ಲಾ ಹೊಸದು. ತಮ್ಮೂರಿನ ಕಡೆಯ ಗುಡಿಸಲುಗಳನ್ನು ಅವಳು ಎಂದೂ ನೋಡಿರಲಿಲ್ಲ.

    ಇಬ್ಬರೂ ವಿಸ್ಮಿತರಾಗಿ ನೋಡುತ್ತಿರುವಂತೆ ಇಬ್ಬರು ಬೋವಿಗಳು ಪರಿಣತರಂತೆ ಒಂದೊಂದೇ ಕೆಲಸ ಮಾಡಿ ತೃಪ್ತಿ ಪಟ್ಟುಕೊಳ್ಳುತ್ತಿದ್ದರು. “ಬಾಗಿಲಿಗೊಂದು ಕದ ಮಾಡಬೇಕು ಅದಕ್ಕೆ ಅಳತೆ ನೋಡಿ ಎರಡು ಉದ್ದನೆ ಗಳು ಮೂರು ಅಡ್ಡಪಟ್ಟಿ ಬೇಕಾಗ್ತವೆ. ಅವಕ್ಕೆ ಉಗಲು ಹಾಕಬೇಕಾ ಉಳಿ ಕೊಡತಿ ಐದಾವಾ” ಅಂತ ಬೋವಿಗಳು ಆಚಾರನ್ನು ವಿಚಾರಿಸಿ, ಇರಲಿಕ್ಕಿಲ್ಲವೆಂದು ಕೇರಿಯಲ್ಲಿ ತಿರುಗಾಡಿ ಯಾರ ಬಳಿಯೋ ಕೇಳಿ ತಂದುಕೊಟ್ಟರು.

    ಗುಂಡಾಚಾರಿ ಬಾಗಿಲ ಅಳತೆ ನೋಡಿ ಗಳುಗಳನ್ನು ತುಂಡರಿಸಿ ಅವಕ್ಕೆ ನಾಲ್ಕು ಅಡ್ಡಪಟ್ಟಿಗಳನ್ನು ತೊಡಿಸಲು ರಂದ್ರಗಳನ್ನು ಮಾಡಲುದ್ಯುಕ್ತನಾದನು. ಆಚಾರಿಯ ಕಾಠ್ಯ ನಿಪುಣತೆಯನ್ನು ನೋಡಿದ ಬೋವಿಗಳು “ಸ್ವಾಮಿ ನಿಮಿಗೆ ಬಡಗಿತನದ ಅನುಬೋಗ ಇದ್ದಂಗಿದೆ. ನೀವು ಉಳಿ ಕೊಡತಿ ಇಡಕಂಡಿರದೇ ಗೊತ್ತಾಗುತ್ತೆ” ಅಂತ ತಾರೀಪ್ ಮಾಡಿದರು. ಅμÉ್ಟೂತ್ತಿಗೆ ಪಕ್ಕದ ಮನೆಯಾತ ಬ್ಯಾಸಾಯದಿಂದ ಹಿಂದಿರುಗಿದ.

    ಮನೆಯ ಮಗ್ಗುಲಲ್ಲಿ ನಡೆದಿರುವ ಕಾಮಗಾರಿಯನ್ನು ನೋಡಿ ಆಶ್ಚಯ್ಯ ಚಕಿತನಾಗಿ “ಅಲ್ಲಯ್ಯಾ ಬೆಳಿಗ್ಗೆ ಬ್ಯಾಸಾಯಕ್ಕೋಗುವಾಗ ಯಾತ್ತೂ ಇರಲಿಲ್ಲ. ಬ್ಯಾಸಾಯ ವಡಕಂಡು ಬರೋವತ್ಯೆ ಗುಡ್ಲನ್ನೇಬ್ಬಿರಿಸಿದೀರಾ” ಅಂತ ತಾರೀಪ್ ಮಾಡಿದ.

    ಹಿಂದಿನ ಸಂಚಿಕೆ ಓದಿ: 7. ಊರು ತೊರೆದು ಬಂದವರು

    ಗುಂಡಾಚಾರಿ ಆತನಿಗೆ ಸಮಸ್ಕರಿಸಿ ನಿಮ್ಮನ್ನ ಒಂದ್ ಮಾತ ಕೇಳಿ ಇಲ್ಲಿ ಗುಡಿಸಲು. ಇ. ಕುಬೇಕಿತ್ತು. ಕೇಳಿದಲೇ ಕಟ್ಟಾ ಇದೀವಿ. ಇದರಿಂದ ನಿಮಗೇನನ ತೊಂದರೆ ಆದ್ರೆ ಬೇರೆ ಕಡೆ ಕಟ್ತೀವಿ” ವಿನೀತನಾಗಿ ಕೇಳಿದ, “ಅಯ್ಯೋ ಮಾರಾಯಿ ಇದರಾಗೇನ್ ತಪ್ಪೆತೆ. ಮನೆ ಮಗ್ಗುಲಾಗೆ ಶಾದ್ರೆ ಆಗಿತ್ತು. ಈಗ ನೀವು ಗುತ್ತು ಕಟ್ಟಿ ವೈನಾತು. ಇನ್ ಮ್ಯಾಲೆ ಇಲ್ಲಿ ಯಾವೂ ಹಳಹುಪ್ಪೆ ಸುಳಿದಾಡಲ್ಲ” ಅಂದು “ನಿಮ್ಮುದು ಯಾವ ಊರು ನೀವು ಆಚಾರಂತೆ, ಈ ಊರು ಮೊನ್ನೆ ಗುಡ್ಡದೊಳಗೈತೆ ಇಲ್ಲಿಗೆ ಹೆಂಗ್ ಬಂದ್ರಿ” ಅಂತ ನಗುತ್ತಾ ವಿಚಾರಿಸಿದ್ದ.

    “ನಮ್ಮದು ತೆಂಕಲ ಸೀಮೆ ಸಿಗನಾಯಕನಹಳ್ಳಿ ಕಡಿಗೆ, ನಮ್ಮೂರಾಗೆ ಒಂದೀಟು ಎಡಸಾಗಿತ್ತು. ಊರೈ ಬಿಟ್ಟು ನಡಕಮ್ಮಾ ಬಂದೇ ಬಂದ್ವಿ. ಅಲ್ಯಾವುದೋ ಊರಾಗೆ ರಾತ್ರಿ ಉಳಕಂಡಿದ್ವಿ, ಬೆಳಿಗ್ಗೆ ಎದ್ದು ಹೊರಡುವಾಗ ಇದಿರಿಗೆ ಸಿಕ್ಕ ಒಬ್ಬ ಯಜಮಾನು ನಮ್ಮನ್ನ ನೋಡಿ ‘ನೋಡಪ್ಪಾ ಇಬ್ರೂ ಹರೇವದಾಗೆ ಇದೀರಿ. ನಿಮ್ಮನ್ನ ನೋಡಿದರೆ ಊರು ಬಿಟ್ಟು ಹೊಳ್ಳಂಗೆ ಕಾಣಿಸ್ತೀರ.

    ಒಂದೊಳ್ಳೆ ಊರೈತೆ. ಆದರೆಸರು ಗೌನಳ್ಳಿ ಅಮ್ಮ. ಶಾನೆ ದೂರ ನಡೀಬೇಕು. ಆ ಊರ ಜನ ಒಳ್ಳೆಯವು. ದೊಡ್ಡಘಟ್ಟ, ಕೂನಿಕೆರೆ ತಡಾದು ಮುಂದೆ ಹೋಗಬೇಕು. ಸಿಕ್ಕಿದೋರ ಕೇಳಿಕ ಹೋಗ್ರಿ, ಒಳ್ಳೇದಾಗುತ್ತೆ ಅಂದಿದ್ರು. ಅವರನ್ನ ನೋಡಿದ್ರೆ ಒಳ್ಳೆ ದೊಡ್ಡಜಮಾನಂಗಿದ್ರು. ಅವರ ಮಾತ ನಂಬಿ ಇಲ್ಲಿಗೆ ಬಂದ್ವಿ”. ಗುಂಡಾಚಾರಿ ಸಮಾಧಾನವಾಗಿ ತಿಳಿಸಿದ್ದ.

    “ಸರಿ ಬಿಡ್ರಿ ಈ ಊರಿನ ರಿಣ ನಿಮಿಗೈತೆ. ಯಾವುರಾದ್ರೇನು ನಡತೆ ಒಂದು ಸರಿಯಾಗಿದೆ. ಎಲ್ಲಾ ಕಡೆ ಬಾಳಬೌದು” ಅಂದು “ಸದ್ಯಕ್ಕೆ ಮಗ್ಗುಲಿಗೆ ನೆರಿಕೆ ಕಟ್ಟಿಗಳಿ ದಿನಪರ್ತಿ ಮ್ಯಾಲೆ ಸುತ್ತ ಎದೆ ಮಟ್ಟ ಕಲ್ಲು ಗ್ವಾಡೆ ಕಟ್ಟಂಡ್ರಾತು” ಅಂತ ಸಲಹೆ ನೀಡಿದ್ದ. ಅμÉ್ಟೂತ್ತಿಗೆ ಇನ್ನೂ ನಾಕೈದು ಜನ ಆಗಮಿಸಿದರು.

    “ನಮ್ಮೂರಿಗೆ ಬಂದೋರು ಇಷ್ಟು ಗಕ್ಕನ ಮತ್ತೆ ವೈನಾಗಿ ಗುಡ್ಡು ಕಟ್ಟಿದೋರ ನೋಡಲಿಲ್ಲ” ಮುಂತಾಗಿ ಅವರವರಲ್ಲೇ ಮಾತಾಡಿಕೊಂಡಿದ್ದರು. ಸಂಜೆ ಕಮ್ಮಾರಟ್ಟಿ ಬಳಿ ಮೊನೆಗುಳ ಕಟ್ಟಿಸಿಕೊಳ್ಳಲು ಸೇರಿದ್ದ ಮಂದಿ ಊರಿಗೆ -ಹೊಸದಾಗಿ ಬಂದಿದ್ದ ಅಕ್ಕಸಾಲಿ ಜೋಡಿ ಬಗ್ಗೆ ಮಾತಾಡುತ್ತಿದ್ದರು. “ಹುಡುಗ ಮಾತ್ರ ಬಾಳ ಸಂಭಾವಸ್ತ ಇರೋ ಹಂಗೆ ಕಾಣುಸ್ತಾನೆ. ಒಳ್ಳೆ ಚಲುವೆ ಹುಡುಗಿ ಕರಕಂಡ್ ಬಂದೌನೆ, ತೆಂಕಲ ಸೀಮೆ ಅಂತೆ. ಮದುವಾಗಿ ಬಂದದಾರೊ ಇಲ್ಲ ಜತೆಯಾಗಿ ಓಡಿಬಂದದರೋ” ಇತ್ಯಾದಿ ಮಾತಾಡಿಕೊಂಡಿದ್ದರು.

    “ಏನಿದ್ರೂ ಸತ್ಯ ಬಯಲಾಗುತ್ತೆ. ನಮಿಗ್ಯಾಕೆ ಉಸಾಬರಿ” ಅಂದುಕೊಂಡವರೇ ಎಲ್ಲಾ ಸಂಜೆ ಹೊತ್ತಿಗೆ ಅಧರ್ಂಬರ್ಧಾ ಗುಡಿಸಲು ಸಿದ್ಧವಾಗಿತ್ತು. ಗುಡಿಸಲ ಸುತ್ತಾ ಈಚಲಕಡ್ಡಿ ಬಂದ್ರೆಸೊಪ್ಪಿನ ನೆರಿಕೆಯನ್ನು ಬೋವಿಗಳಿಬ್ಬರೂ ಹುತ್ತ ಕೊಟ್ಟಿದ್ದರು. ಗುಂಡಾಚಾರಿಯ ಬಳಿ ದೀಪ ಇರಲಿಲ್ಲ.

    ಪಕ್ಕದ ಮನೆಯಾಕೆ ಒಂದು ಎಣ್ಣೆ ತುಂಬಿದ ದೀಪವನ್ನು ಎರವಲಾಗಿ ನೀಡಿದ್ದರು. ಗುಂಡಾಚಾರಿ ಬೆಳಿಗ್ಗೆಯಿಂದ ಆಪತ್ ಬಾಂಧವರಂತೆ ದುಡಿದಿದ್ದ ಬೋವಿಗಳಿಗೆ ಪ್ರಾಂಜಲನಾಗಿ “ನಿಮ್ಮಿಬ್ಬರಿಗೆ ನ್ಯಾಯವಾಗಿ ದಿನದ ಕೂಲಿ ಕೊಡಬೇಕು.

    ಮುಂದಿನ ವಾರ ಕೊಡುತೀನಿ. ಅಲ್ಲೀವರೆಗೆ ದಯವಿಟ್ಟು ಸುಧಾರಿಸಿಗೊಳ್ ಅಂತ ಬೇಡಿಕೊಂಡಿದ್ದ. ಬೋವಿಗಳಿಬ್ಬರೂ ನಕ್ಕು “ಸ್ವಾಮಿ ಮಾಡಿಗೆ ಬಾದೆ ಹುಲ್ಲು ಹೊದಿಸ್ ಬೇಕು. ನಾಳಿಕೆ ಹೊದಿಸ್ ಕೊಡ್ತೀವಿ. ಆಯ್ತು ಆಮೇಲೆ ಕೂಲಿ ಕೊಡೀರಂತೆ” ಎಂದು ತಿಳಿಸಿ ಕೈ ತೊಳೆದುಕೊಂಡು ಹೋಗಿದ್ದರು.

    ಅವರಿಬ್ಬರೂ ಅತ್ತ ತೆರಳುತ್ತಲೇ ಗುಂಡಾಚಾರಿ ಮತ್ತು ಅವನ ಪತ್ನಿ ಅಭಿಮಾನದಿಂದ ಅವರತ್ತ ನೋಡಿ, ದೀಪದ ಬೆಳಕಲ್ಲಿ ತಮ್ಮ ಹೊಸಮನೆಯನ್ನು ನೋಡಿದ್ದರು. ರಾತ್ರಿ ರಾಗಿ ಮುದ್ದೆ ಬೇಳೆ ಸಾರು ಉಂಡು ಹೊಸಮನೆಯಲ್ಲಿ ತಬ್ಬಿಕೊಂಡು ಮಲಗಿದ್ದರು. ಬೆಳಗಿನಲ್ಲಿ ಊರಜನ ಮುಂಚೆಯೇ ಎದ್ದು ತಮ್ಮ ಮನೆಗೆಲಸಗಳನ್ನು ಮಾಡಿಕೊಳ್ಳುತ್ತಿದ್ದರು.

    ಇಬ್ಬರೂ ಎದ್ದು ಊರ ಮುಂದಲ ಹಳ್ಳದ ಕಡೆ ಹೋಗಿ ಬೆಳಗಿನ ಕರಗಳನ್ನು ಮುಗಿಸಿ ತಣ್ಣೀರಲ್ಲಿ ಮಿಂದು ಗುಡಿಸಲಿಗೆ ಹಿಂದಿರುಗಿ ಅಲ್ಲಿ ಬಿದ್ದಿದ್ದ ಬಂದ್ರೆ ಸೊಪ್ಪಿನಿಂದ ನೆಲ ಗುಡಿಸಿ ತಾವು ತಂದಿದ್ದ ಕಾಳಿಕಾ ಮಾತೆಯ ಸಾಲಿಗ್ರಾಮಕ್ಕೆ ಪೂಜೆ ಮಾಡಿದರು. ಗುಂಡಾಚಾರಿ ಹಳ್ಳದಿಂದ ನೀರು ತಂದ ಕೂಡಲೇ ಆತನ ಮಡದಿ ಗುಡಿಸಲ ಹೊರಗೆ ಹೂಡಿದ್ದ ಒಲೆಗೆ ಬೆಂಕಿ ಕಾಣಿಸಿ ಬೇಳೆ ಬೇಯಿಸಲು ಎಸರಿಟ್ಟಿದ್ದಳು.

    ತನ್ನ ಉದ್ಯೋಗಕ್ಕೆ ಜಾಗ ಮಾಡಿಕೊಳ್ಳಲು ಗುಡಿಸಲು ಮುಂದೆ ಮೂಡಲ ಗೋಡೆಗೆ ಆತುಕೊಂಡಂತೆ ಒಂದು ಚಪ್ಪರ ಕಟ್ಟಿಕೊಳ್ಳಲು “ಗೂಟಗಳನ್ನು ಹುಡುಕಿ ತರಲು ಹಳ್ಳದ ಕಡೆ ಹೋಗಿ ಬರುತ್ತೇನೆ” ಅಂತ ಹೆಂಡತಿಗೆ ತಿಳಿಸಿ ಊರ ಮುಂದಲ ಹಳ್ಳದ ಕಡೆ ನಡೆದ. ಅವನ ಪತ್ನಿ ಇದ್ದುದರಲ್ಲೇ ಸಾರು ಮಾಡಲು ಜತೆಯಲ್ಲಿ ತಂದಿದ್ದ ಒಣ ಮೆಣಸಿನ ಕಾಯಿ ಬೆಳ್ಳುಳ್ಳಿ ಉಪ್ಪುಗಳನ್ನು ಜೋಡಿಸಿಕೊಂಡು ಬೇಳೆ ಕರಗುತ್ತಲೂ ಅದರ ಕಟ್ಟಿಗೆ ಇವುಗಳನ್ನು ಹಾಕಿ ಚಿಟಿಕೆ ಎಣ್ಣೆಯನ್ನು ವಗ್ಗರಣೆಯಲ್ಲಿ ಹಾಕಿ ಮಳ್ಳಿಸಿದಳು.

    ಪಕ್ಕದ ಮನೆಯಾಕೆಗೆ ವಗ್ಗರಣೆಯ ವಾಸನೆ ಬಡಿದು ” ಈ ಹುಡುಗಿ ಏನು ಸಾರು ಮಾಡಿರಬೌದು, ವಗ್ಗರಣೆ ವಾಸ್ತೆ ಮೂಗ್ಗೆ ಬಡಿತೈತೆ” ಅಂದುಕೊಂಡು ಹೊರಗೆ ಬಂದು ಗುಡಿಸಲ ಕಡೆ ನೋಡಿದಳು. ಹುಡುಗಿ ಗುಡಿಸಲೊಳಗಿದ್ದಳು. ಆಮೇಲೆ ಮಾತಾಡ್ತಾನ ಅಂದುಕೊಂಡು ಮನೆಯೊಳಗೆ ಹೋದಳು.

    ಆಚಾರಿಯ ಪತ್ನಿ ಸಾರು ಮುದ್ದೆ ಮಾಡಿದ ಬಳಿಕ ತನ್ನ ಗಂಡನ ಆಗಮನವನ್ನು ನಿರೀಕ್ಷಿಸುತ್ತಾ ಮೂಡಲ ದಿಕ್ಕಿನ ಕಡೆ ನೋಡುತ್ತಿದ್ದಳು. ಆದರೆ ಆತನ ಸುಳಿವೇ ಇಲ್ಲ. ತನ್ನ ಗುಡಿಸಲಿಗೂ ನೀರೊಳೆ ಹಾದೀಲಿದ್ದ ಹುಣಿಸೆಮರದ ಬಳಿಗೂ ನಾಲ್ಕಾರು ಬಾರಿ ಆತಂಕದಿಂದ ಓಡಾಡಿದ್ದಳು.

    ಗಂಡನ ಸುಳಿವೇ ಇಲ್ಲ. ಭಯವಾಯಿತು. ದೇವರನ್ನು ನೆನೆಯುತ್ತಾ ಮತ್ತೊಂದು ಬಾರಿ ಹುಣಿಸೆ ಮರದ ಬಳಿಗೆ ನಡೆದಳು. ಇದಿರಿಗೆ ಒಣಗಿದ ಬಂದ್ರೆ ಸೊಪ್ಪಿನ ಹೊರೆಯನ್ನು ಹೊತ್ತು ಒಬ್ಬರು ಊರ ಕಡೆ ಬರುತ್ತಿರುವುದು ಕಾಣಿಸಿತು. ಅವರು ಹತ್ತಿರ ಬರುವ ತನಕ ಹಲ್ಲುಕಚ್ಚಿಕೊಂಡು ನಿರೀಕ್ಷಿಸಿದಳು.

    ಹತ್ತಿರಕ್ಕೆ ಬಂದ ಆಚಾರಿ “ನಾನು ಬರೋದು ತಡಾ ಆತು ಅಂತ ಇಲ್ಲಿಗೆ ಬಂದ್ಯಾ”. ಕಕ್ಕುಲತೆಯಿಂದ ವಿಚಾರಿಸಿದ ಗಂಡನ ದನಿ ಕೇಳಿ ಅವನ ಮಡದಿಗೆ ಹೋದ ಜೀವ ಮರಳಿ ಬಂದಂತಾಗಿತ್ತು. ಮಾತು ಹೊರಡಲಿಲ್ಲ. ಕಣ್ಣೀರೊರಸಿಕೊಂಡಿದ್ದಳು.

    “ಗೂಟಕ್ಕೆ ಅಂತ ಹಳ್ಳದ ಬದ್ದು ಮೂಡಲ ಗುಡ್ಡದ ಕಡೆಗೆ ನಡೆದೆ. ಸ್ವಲ್ಪ ದೂರದಲ್ಲಿ ಯಾರೋ ಬಂದ್ರೆ ಸೊಪ್ಪು ಕಡಿದು ಬಿಸಾಡಿದ್ರು. ‘ನೆರಿಕೆಗೆ ಬರುತ್ತೆ’ ಅಂತ ಎಲ್ಲಾ ಕೂಡಿಸಿ ಹೊರೆ ಕಟ್ಟಿ ಎತ್ತಿ ಹೊತ್ಕಂಡು ಬಂದೆ. ಅದ್ರೆ ಸ್ವಲ್ಪ ತಡವಾಯ್ತು” ಅಂದ. “ಕಾಣದೂರು ನೀವೆಲ್ಲಿ ಹೋದಿರೋ ಅಂತ ಭಯವಾಗಿತ್ತು”. ನಡುಗುವ ದನಿಯಲ್ಲಿ ಹೆಂಡತಿ ಮಾತಾಡಿದ್ದಳು. ಆಚಾರಿಗೆ ಅವಳ ಆತಂಕದ ಕಾರಣ ತಿಳಿದಿತ್ತು. “ಕೈಗೆ ನೀರು ಹಾಕು ಊಟ ಮಾಡಾನ” ಎಂದು ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತ.

    “ಈ ಹೊತ್ತು ಬೋವಿಗಳು ಮಾಡಿಗೆ ಬಾದೆ ಹುಲ್ಲು ಹೊದಿಸಲು ಬರಬೇಕಿತ್ತು ಬಂದಿರಲಿಲ್ಲ. ಅವರ ಮನೆ ಯಾವ ಕಡೆಗಿದೆಯೋ ರಾಗಿ ಹಿಟ್ಟು ಮುಗಿಯುತ್ತಾ ಬಂದಿರಬೇಕಲ್ವೆ” ಗುಂಡಾಚಾರಿ ಊಟ ಮಾಡುತ್ತಲೇ ಮಾತಾಡಿದ. “ಹೌದು ರಾಗಿ ಹಿಟ್ಟು ಮುಗಿಯುತ್ತೆ. ಯಾರನ್ನಾದ್ರೂ ಕೇಳಿ ರಾಗಿ ಕೊಂಡೋ ಬೇಕು”. ಆಚಾರಿ ಪತ್ನಿ ಹೇಳಿದಳು.

    ಆಚಾರಿ ಊಟ ಮುಗಿಸಿ ಕೈ ಕೊಂಡುಕೊಂಡು ಹೊತ್ತು ತಂದಿದ್ದ ಬಂದ್ರೆ ಸೊಪ್ಪಿನ ಹೊರೆಯನ್ನು ಬಿಚ್ಚಿ ಮಾಡಿಗೆ ಹೊದಿಕೆಯಾಗಿ ಹರಡಿ ಬಾದೆ ಹುಲ್ಲು ಮುಚ್ಚಿದರೆ ಸರಿಯಾಗುತ್ತೆ ಅಂದುಕೊಂಡು ಅದನ್ನು ಬಿಚ್ಚಿದ. ಅμÉ್ಟೂತ್ತಿಗೆ ಎರಡು ಹೊರಲಾರದಂತ ಬಾರೆ ಹುಲ್ಲಿನ ಹೊರೆಗಳನ್ನು ಹೊತ್ತಿದ್ದ ಬೋವಿಗಳ ಆಗಮನವಾಯ್ತು.

    “ನೀವಿಬ್ರೂ ಬೆಳಿಗ್ಗೆ ಇತ್ತಾಗಿ ಸುಳಿಯದ್ದ ನೋಡಿ ನಿಮಿಗೆ ಬ್ಯಾರೆ ಕೆಲಸ ಇರಬೇದು ಆಂಗ್ಲಂಡೆ. ನೀವು ಬೆಳಿಗ್ಗೇನೆ ಗುಡ್ಡಕ್ಕೋಗಿ ಬಾದೆ ಹುಲ್ಲು ಕೊಯ್ಕಂಡು ತಂದಿದೀರಾ, ಉಂಡಿದೀರೋ ಹೆಂಗೆ”. ಗುಂಡಾಚಾರಿ ಆಶ್ಚರದಿಂದ ಮಾತಾಡಿದ. “ಈಗ ಮನೀಗೆ ಹೋಗಿ ಉಂಡ್ ಬರೀವಿ, ಇದ್ಯಾರು ತಂದು ಒಣಗಿರೋ ಬಂದ್ರೆ ಸೊಪ್ಪು’ ಅಂತ ಆಚಾರಿಯನ್ನು ಕೇಳಿದ್ದರು. ಆಚಾರಿ ಬೆಳಿಗ್ಗೆ ಮೂಡಲ ಗುಡ್ಡಕ್ಕೆ ಹೋಗಿ ಯಾರೋ ಕೊಯ್ದು ಬಿಸಾಡಿದ್ದ ಬಂದ್ರೆ ಸೊಪ್ಪು ತಂದಿರುವುದನ್ನು ಹೇಳಿಕೊಂಡ.

    “ಸರಿಯಾತು ಬಿಡ್ರಿ ಗಳಗಳ ಮ್ಯಾಲೆ ತೆಳ್ಳಗೆ ಬಂದ್ರ ಸೊಪ್ಪಳ್ಳಿ ಮ್ಯಾಲೆ ಬಾದೆ ಹುಲ್ ಹೊದ್ದೊನಾ”. ಹೀಗೆ ಮಾತಾಡುತ್ತಲೇ ತಮ್ಮ ಮನೆಗಳ ಕಡೆ ನಡೆದಿದ್ದರು. ಬೋವಿಗಳು ಉಂಡು ಬರುವತನಕ ಯಾಕೆ ಸುಮ್ಮನಿರಬೇಕು ಅಂದುಕೊಂಡು ಗುಂಡಾಚಾರಿ ಉದ್ಯೋಗ ಮಾಡಲು ಸ್ವಲ್ಪ ನೆರಳು ಮಾಡ್ಕೊಬೇಕು ಎಂದು ಗೂಟ ನೆಡಿಸಲು ನಾಲ್ಕು ಗುಂಡಿ ಬೇಕಾಗ್ತವೆ ಅಂತ ಗುಂಡಿ ತೋಡಲು ನಿರತನಾದ. ಇನ್ನೂ ಒಂದು ಗುಂಡಿ ತೋಡಿರಲಿಲ್ಲ ಬೋವಿಗಳು ಆಗಮಿಸಿ ತಾವು ಬಾದೆಹುಲ್ಲು ಜತೆಗೆ ಕೊಯ್ದು ತಂದಿದ್ದ ಐದಾರು ಕತ್ತಾಳೆ ಪಟ್ಟೆಗಳನ್ನು ಕೊಡತಿಯಿಂದ ಒಡೆದು ಎಳೆ ಎಳೆಯಾಗಿ ಮಾಡಿ ಬಿಸಿಲಲ್ಲಿ ಹರಡಿದರು.

    “ಯಾಕ್ ಸ್ವಾಮಿ ತಿರುಗಾ ಗುಂಡಿ ತೆ- ತೋಡ್‍ರಾ” ಅವರಲ್ಲೊಬ್ಬ ವಿಚಾರಿಸಿದ. “ನನ್ನ ಉದ್ಯೋಗಕ್ಕೆ ಒಂದೀಟು ನೆಳ್ಳು ಮಾಡಿಕೋಬೇಕು. ಅದಕ್ಕೆ ಗೂಟ ನೆಡಿಸಲು ಗುಂಡಿ ತೋಡತೀನಿ” ಗುಂಡಾಚಾರಿ ಉತ್ತರಿಸಿದ. “ಸರಿಸರಿ ಈಗ ಮೊದ್ಲು ಬಾದೆಹುಲ್ಲು ಹೊದ್ಸನಾ ಆಮೇಲೆ ಗುಂಡಿ ತೋಡ್ಕಂಡ್ರಾತು” ಎಂದು ಒಬ್ಬಾತ ಗುಡಿಸಲು ಮೇಲೆ ಹತ್ತಿದೆ. ಇನ್ನೊಬ್ಬಾತ ಬಂದ್ರೆ ಸೊಪ್ಪು ಕೊಡುತ್ತಿದ್ದ. ತುಂಬಾ ಬಂದ್ರೆ ಸೊಪ್ಪು ಹರಡಿ ಅದು ಜರುಗದಂತೆ ಅಲ್ಲಲ್ಲಿ ಗಳಗಳಗೆ ಕಟ್ಟಿದರು.

    ಈಗ ಬಾದೆ ಹುಲ್ಲು ಹೊದೆಸುವ ಸರದಿ. ಒಬ್ಬರು ಹುಲ್ಲನ್ನು ತೆಕ್ಕೆ ಮಾಡಿ ಮೇಲಕ್ಕೆ ಕೊಟ್ಟರೆ ಮೇಲಿರುವಾತ ಅದನ್ನು ಬಂದ್ರೆ ಸೊಪ್ಪಿನ ಮೇಲೆ ಹರಡುತ್ತಿದ್ದ. ಅಗಾ ಇಗಾ ಅನ್ನುವುದರೊಳಗೆ ಗುಡಿಸಲೊಳಗೆ ನೆರಳು ಮತ್ತು ಕತ್ತಲಾಯಿತು.

    ಗುಂಡಾಚಾರಿಯ ಹೆಂಡತಿ ಸೋಜಿಗ ಪಡುತ್ತಾ ತಾನೂ ಕೈಲಾದ ಕೆಲಸ ಮಾಡಿದಳು. ಹೊತ್ತು ನೆತ್ತಿಗೆ ಬರುವ ಸಮಯಕ್ಕೆ ಬಾದೆ ಹುಲ್ಲು ಹೊದೆಸುವ ಕೆಲಸ ಮುಗಿಯಿತು. ಗುಡಿಸಲು ಮೇಲಿದ್ದ ಬೋವಿ ಒಂದು ಗಳದಿಂದ ಬಾದೆಹುಲ್ಲನ್ನು ತಟ್ಟಿದ. “ಇದು ಅದ್ಯಾಬೇಕು, ಗಾಳಿಗೆ ಮೇಲಕ್ಕೆ ಏಳಬಾರು, ನಾಕೈದು ಸಣ್ಣ ಗಳ ಕೊಡ್ರಿ” ಎಂದು ಐದಾರು ಗಳುಗಳನ್ನು ಪಡೆದು ಬಾದೆಹುಲ್ಲಿನ ಮೇಲೆ ಅಡ್ಡಲಾಗಿ ಹಾಕಿ ಕತ್ತಾಳೆ ಪೇಡುಗಳಿಂದ ಗುಡಿಸಲೊಳಗಿನ ಗಳುಗಳಿಗೆ ತೂರಿಸಿ ಬಂಧಿಸಿ ಕಟ್ಟಿದ. ಕೆಳಗೆ ನಿಂತಿದ್ದ ಗುಂಡಾಚಾರಿಗೆ ತನ್ನ ಗುಡಿಸಲು ನೋಡಿ ಸಂತೋಷ ಮತ್ತು ತೃಪ್ತಿಯಾಯಿತು.

    “ನಿನ್ನೆ ದಿನ ಇಲ್ಲಿಗೆ ಬಂದಿದ್ದ ಊರಿನ ಜನ, ಇವೊತ್ತು ಒಬೂ ಇತ್ತ ಸುಳೀಲಿಲ್ಲ”. ಗುಂಡಾಚಾರಿ ಆಶ್ಚರ್ ಪಡುತ್ತಾ ಮಾತಾಡಿದ. ಬೋವಿಗಳು “ಸ್ವಾಮಿ ಈ ಊರಿನ ಜಮೀನುಗಳು ಶಾನೆ ಮಣ್ಣಿನವು. ಅವಕ್ಕೆ ಗೆಯ್ಯಬೇಕು, ಹದ ಆರಕೆ ಮುಂಚೆ ಯಾಳ್ಳು ಹೊಡೀಬೇಕು, ಹಿಂದೇಗಡೆ ಎಂಡೆಮರ ಹೊಡ್ಡು ಆಮೇಲೆ ಹದ ಬೆದೆ ನೋಡ್ಕಂಡು ಬೀಜ ಬಿತ್ತಬೇಕು. ಹಿಂಗಾಗಿ ಯಾರೂ ಪುರಸೊತ್ತು ಸಿಗಲ್ಲ.

    ಹಿಂದಿನ ಸಂಚಿಕೆ ಓದಿ: 8. ಮೋಜಣಿಕೆ ಮಾಡಿದರು

    ಸಂಜೆ ಹೊತ್ತೆ ಕಮ್ಮಾರಟ್ಟಿ ಹತ್ರ ಎಲ್ಲಾ ಬಾರೆ ಮೊನೆಗುಳ ಮಾಡಿಸಮಾಕೆ”. ಒಬ್ಬ ಬೋವಿ ಮಾತಾಡಿದ್ದ. ಇನ್ನೊಬ್ಬಾತ “ಯಾವಾವ್ಯದೋ ಊರಿಂದ ಬಂದು ಇಲ್ಲಿ ಊರ್ ಕಟ್ಟಿದಾರೆ. ಗೌಡ್ರ ಗೊಂಚಿಕಾರು ಎಲ್ಲರೂ ಬ್ಯಾಸಾಯಗಾರೆ, ಉಂಬೊತ್ತಿಗೆ ಉಂಡು ಹೊಲಕ್ಕೆ ಹೋದ್ರೂ ಅಂದ್ರೆ ಸಂಜೆ ತನಕ ದುಡಿದು ಧೂಳು ಹೊಯ್ಕಂತಾರೆ. ಪುರಸತ್ತು ಸಿಗಬೇಕಲ್ಲಾ ಪಾಪ ಮೈಮುರೆ ದುಡೀತಾರೆ ನೋಡ್ರಿ ಅದಕ್ಕೆ” ಅಂತ ದನಿಗೂಡಿಸಿದ್ದ.

    ಹಗಲೂಟದ ಹೊತ್ತಿಗೆ ಮಾಡಿಗೆ ಬಾದೆ ಹುಲ್ಲು ಹೊದೆಸುವ ಕೆಲಸ ಮುಗಿಯಿತು. ಕೆಳಕ್ಕಿಳಿದಾತ “ನಾವು ಮನಿಗೆ ಹೋಗಿ ಉಂಡ್ ಬತ್ತೀವಿ: ನಾವು ತಿರಗಿ ಬರೋಶಂಕ ಒಂದೀಟು ಸುಧಾರಿಸ್‍ಗಳಿ” ಎಂದು ಇಬ್ಬರೂ ತಮ್ಮ ಮನೆಕಡೆ ನಡೆದರು. ಗುಂಡಾಚಾರಿ ಹೆಂಡತಿ “ನನಿಗೆ ಹಸಿವಾಗಿಲ್ಲ ನಿಮಿಗೆ ಒಂದ್ ಮುದ್ದೆ ಮಾಡ್ತೀನಿ” ಎಂದು ಒಲೆಗೆ ಬೆಂಕಿ ಕಾಣಿದಳು. ಗುಂಡಾಚಾರಿ ಗುಂಡಿ ತೋಡಲುದ್ಯುಕ್ತನಾದ.

    ಎರಡು ಮೊಳಕಾಲುದ್ದದ ಗುಂಡಿ ತೋಡಿ ಮೂರನೇದಕ್ಕೆ ಅಣಿಯಾಗುತ್ತಿದ್ದಾಗ ಹೆಂಡತಿ ಊಟಕ್ಕೆ ಕರೆದಳು, ಕೈ ತೊಳೆದುಕೊಂಡು ಊಟಕ್ಕೆ ಕುಳಿತ ಸ್ವಲ್ಪ ಹೊತ್ತಿಗೆಲ್ಲಾ ಬೋವಿಗಳು ಹಿಂತಿರುಗಿದರು. ಅವರು ಗುಡಿಸಲನ್ನು ನೋಡುತ್ತಾ “ಈಗ ಹೊದಿಸಿರೋ ಹುಲ್ಲು ಹಟ್ಕಂಡ್ ಮ್ಯಾಲೆ ತಿರುಗಾ ಇನ್ನೊಂದ್ ಸರ್ತಿ ಮ್ಯಾಲೆ ತೆಳ್ಳಗೆ ಬಾದೆಹುಲ್ ಹೊದ್ದನಾ.

    ಎಂಥಾ ಮಳೆಗಾಲ ಬಂದ್ರೂ ಸೋರಲ್ಲ” ಅನ್ನುತ್ತಾ ಗುಂಡಾಚಾರಿ ಗುರುತು ಹಾಕಿದ್ದ ಗುಂಡಿಗಳನ್ನು ತೋಡಲು ಮುಂದಾದರು. ಸ್ವಲ್ಪ ಹೊತ್ತಿನಲ್ಲೇ ಎರಡು ಗುಂಡಿಗಳನ್ನು ತೋಡಿದ ಬೋವಿಗಳು “ಸ್ವಾಮಿ ನಾಕೈದು ಗಳ ಹುಡಿಕೆಂಡ್ ಬತ್ತೀವಿ ನಿಮ್ಮ ಕೆಲಸ ಮಾಡ್ಕಳಿ” ಎಂದು ತಿಳಿಸಿ ಊರ ಮುಂದಲ ಹಳ್ಳದ ಕಡೆ ನಡೆದರು.

    ಗುಂಡಾಚಾರಿ ಹೆಂಡತಿ ಜತೆಗೂಡಿ ಗುಡಿಸಲೊಳಗೆ ಆಗ್ನೆಯ ದಿಕ್ಕಿಗೆ ಅಡಿಗೆ ಒಲೆ ಈಶಾನ್ಯ ದಿಕ್ಕಿನಲ್ಲಿ ದೇವರ ಗೂಡು ಇತ್ಯಾದಿ ಮಾಡಿಕೊಂಡರು. ಕೆಲಸದ ಜಾಗದ ಬಳಿಗೆ ಯಾರಾದರೂ ಬಂದರೆ ಕುಳಿತುಕೊಳ್ಳಲು ಎರಡು ಬಂಡೆಗಳನ್ನು ಹುಡುಕಲೂ ತಾನೂ ಹಳ್ಳದ ದಿಕ್ಕಿನಲ್ಲಿ ನಡೆದ. ಗುಂಡಾಚಾರಿಯ ಪತ್ನಿ ನೆಲಕ್ಕೆ ನೀರು ಚಿಮುಕಿಸಿ ಕೊಡತಿಯಿಂದ ನೆಲ ಘಟ್ಟಿಸಲು ಸುರುಮಾಡಿದಳು. ಹೊರಗೆ ತೆರಳಿದ ಇಬ್ಬರು ಬೋವಿಗಳು ಮತ್ತು ತನ್ನ ಗಂಡ ಸುಮಾರು ಹೊತ್ತಾದರೂ ಹಿಂತಿರುಗಿರಲಿಲ್ಲ.

    ಪಕ್ಕದ ಮಾಳಿಗೆ ಮನೆಯ ಗೃಹಿಣಿ ಹೊಸ ಗುಡಿಸಲನ್ನು ನೋಡುತ್ತಾ ಗುಡಿಸಲೊಳಗೆ ಬಂದು “ಎಲ್ಲೇ ದಿನಕ್ಕೆ ಗುಡ್ಡು ಕಟ್ಟಿ ಬಿಟ್ರಿ. ಈ ಊರಾಗೆ ನಿಮ್ಮ ಅನ್ನ, ನೀರಿನ ಋಣ ಐತೆ ಅಂತ ಕಾಣುತ್ತೆ”. ಅಂತ ಗುಂಡಾಚಾರಿಯ ಪತ್ನಿ ಜತೆ ಮಾತಿಗಿಳಿದಿದ್ದರು. “ಹೌದಕ್ಕಾ ಇರಬೇಕು. ಇಲ್‍ದಿದ್ರೆ ಮುವ್ವತ್ತು ನಲವತ್ತು ಮೈಲಿ ನಡದು ಈ ಊರಿಗೆ ತಲುಪುತಿದ್ದೆ.

    ಅದ್ಯಾವುದೋ ಒಂದು ಊರಾಗೆ ಒಬ್ಬರು ಯಜಮಾನು ‘ಇಂಥ ಕಡೆ ಗುಡ್ಡದೊಳಗೆ ಗೌನಳ್ಳಿ ಅಂಬೋ ಊರಿದೆ. ಊರಿನ ಜನ ಬಾಳ ಒಳ್ಳೇರು ಅಲ್ಲಿಗೆ ಹೋಗಿ ಸುಖವಾಗಿದ್ದೀರ ಅಂತ ದೇವರಂಗೆ ಹೇಳಿದ್ರು, ಅವರ ಮಾತ ನಂಬಿ ಇಲ್ಲಿಗೆ ಬಂದ್ವಿ, ಊರಿನ ಜನ ಒಳ್ಳೆಯವು, ಗುಡ್ಡು ಕಟ್ಟಂಬಾಕೆ ಜಾಗ ತೋರಿದ್ದಲ್ವೆ ಸಹಾಯ ಮಾಡಿದಾರೆ” ಎಂದು ನಿಸ್ಸಂಕೋಚವಾಗಿ ತಿಳಿಸಿದ್ದಳು.

    ಇಬ್ಬರು ಅದೂ ಇದು ಮಾತಾಡ್ತಿರಬೇಕಾದರೆ ಹೊರಗೆ ದೊಪ್ಪೆಂದು ಸದ್ದಾಯಿತು. ಬೋವಿಗಳಿಬ್ಬರು ತಲಾ ಎರಡೆರಡು ಉದ್ದನೆಯ ಗೂಟಗಳನ್ನು ಹೊತ್ತು ತಂದಿದ್ದರು. “ಇವು ಮತ್ತೆ ಸಿಕ್ಕಿದ್ರೆ ಗುಡ್ಲಿಗೇ ಆಕಬೌದಿತ್ತು” ಎಂದು ಮಾತಾಡುತ್ತಾ ಗುಂಡಿಯೊಳಗೆ ಇಳಿಸಲು ಗೂಟದ ಬೊಡ್ಡೆಯನ್ನು ಸ್ವಲ್ಪ ಕೆತ್ತಿ ಗುಂಡಿಯೊಳಗೆ ಇಳಿಬಿಟ್ಟು ಮಣ್ಣು ತುಂಬಿ ಹಾರೆಯಿಂದ ಗಟ್ಟಿಯಾಗಿ ಕೂರಿದರು.

    ತೆಂಕಲ ಮಳೆ ಜಾಸ್ತಿ ಆದ್ದರಿಂದ ಅತ್ತ ಕಡೆಗೆ ಚಪ್ಪರ ಇಳಿಜಾರಿರಬೇಕು ಅಂದುಕೊಂಡು ಉದ್ದ ಕಮ್ಮಿ ಇದ್ದ ಗೂಟಗಳನ್ನು ತೆಂಕಲ ದಿಕ್ಕಿನ ಗುಂಡಿಗಳಲ್ಲಿಟ್ಟು ಕೂರಿದರು. ಒಬ್ಬರು ಓಡಾಡುವಷ್ಟು ಎತ್ತರ ಸಾಕೆ- ಂದು ಬಡಗಲ ಗೂಟಗಳಿಗೆ ಅಡ್ಡಗಳವೊಂದನ್ನು ಎತ್ತಿ ಕಟ್ಟಿದರು. ಅμÉ್ಟೂತ್ತಿಗೆ ಗುಂಡಾಚಾರಿ ತೆಳ್ಳನೆಯ ಮತ್ತು ಉದ್ದನಾಗಿದ್ದ ಒಂದು ಬಂಡೆಯನ್ನು ಏದುಸಿರು ಬಿಡುತ್ತಾ ತಂದು ಗೋಡೆಯ ಬಳಿ ಆನಿಸಿದರು.

    “ಅಯ್ಯಯ್ಯಪ್ಪಾ ಏನು ಸ್ವಾಮಿ ಈ ಬಂಡೆ ಎಲ್ಲಿಂದ ಹೊತ್‍ಗಂಡ್ ಬಂದ್ರಿ.. ಎದೆ ನೋವು ಬಂದ್ ಬಿಡುತ್ತೆ ಒಂದೀಟ್ ಸುಧಾರಿಸಿಕೊಳ್ಳಿ” ಎಂದು ಬೋವಿಗಳಿಬ್ಬರೂ ಆತಂಕ ವ್ಯಕ್ತಪಡಿಸಿದರು. “ಹರೇವೈತೇ ಅತ್ತ ಇಂಗೆಲ್ಲಾ ಮಾಡಬ್ಯಾಡಪ್ಪಾ” ಅಂತ ಪಕ್ಕದ ಮನೆಯ ಗೃಹಿಣಿ ಕೂಡಾ ಎಚ್ಚರಿಸಿದರು.

    ಸಂಜೆಯ ಹೊತ್ತಿಗೆ ಗುಂಡಾಚಾರಿಯ ಉದ್ಯೋಗದ ಜಾಗವೂ ಸಿದ್ದವಾಯಿತು. “ನಾಳೆ ಬೆಳಿಗ್ಗೆ ಉಂಬೊತ್ತಿಗೆ ಕುಲುಮೆ ಪೂಜೆ ಮಾಡ್ತೀನಿ ಇಬ್ರು ಬರ್ರಿ” ಗುಂಡಾಚಾರಿ ಇಬ್ಬರೂ ಬೋವಿಗಳನ್ನು ಆಮಂತ್ರಿಸಿದ. ಅವರು “ಅಕ್ಕಪಕ್ಕದೋರೂ ಗೌಡ್ರು ಗೊಂಚಿಗಾರನೂ ಕರೀರಿ” ಸಲಹೆ ನೀಡಿದರು. “ಗೌಡ್ರು ಗೊಂಚಿಕಾರ ಮನೆಗಳ ನೋಡಿಲ್ಲ. ತೋರೀಸ್ ಬರಿ” ಎಂದು ಕರೆದು ಅವರ ಸಂಗಡ ಹೋಗಿ ಪರಿಚಯ ಹೇಳಿಕೊಂಡು ಪೂಜೆಗೆ ಕರೆದರು.

    “ನಾಳೆ ಸೋಮಾರ ಬ್ಯಾಸಾಯ ಹೂಡಲ್ಲ ಬರ್ರೀವಿ” ಎಂದು ಹೇಳಿ ಕಳಿಸಿದ್ದರು, ಅವರೆಲ್ಲಾ. ಗುಂಡಾಚಾರಿಗೆ ಎಂಥದೋ ಸಮಾಧಾನ. ಮಾತಾಯಿ ಕಾಳಿಕಾಂಬೆ ಕಾಪಾಡವ್ವ ಎಂದು ಪ್ರಾರ್ಥಿಸಿ ರಾತ್ರಿ ಮಲಗಿದ್ದರು. ಬೆಳಿಗ್ಗೆ ಮುಂಚೆಯೇ ಎದ್ದು ಹಳ್ಳ ಮುಟ್ಟಿ ಬಂದು ಕುಲುಮೆ ಪೂಜೆಗೆ ಸಿದ್ದರಾದರು.

    ‘ಏನನಾ ಪ್ರಸಾದ ಕೊಡಾನಾ ಅಂದ್ರೆ ಈ ಊದಾಗೆ ಅಂಗಡೀನೇ ಇಲ್ಲ ಹೆಂಗ್ ಮಾಡಾದೂ ಅಂತ ಸಂಕಟ ಪಟ್ಟುಕೊಂಡರು. ಪಕ್ಕದ ಮನೆಯಲ್ಲಿ ಒಂದು ತೆಂಗಿನಕಾಯಿ ಕೇಳಿ ಪಡೆದು ತಂದ ಖುಷಿಯಾಗಿದ್ದ ಗುಂಡಾಚಾರಿ ಅವನ ಪತ್ನಿ ಗಂಟುಗಳನ್ನು ಬಿಚ್ಚಿ ಅದ್ದುಗಲ್ಲು, ಊದೋಗೊಳವೆ ವಿವಿಧಾಕಾರದ ಸುತ್ತಿಗೆಗಳು, ಚಿಮುಟ, ವಿವಿಧಾಕಾರದ ಮೂಸೆಗಳು ತಕ್ಕಡಿ ಮುಂತಾದುವನ್ನು ತೊಳೆದು ಒರೆಸಿ ಕುಲುಮೆ ಬಳಿ ಜೋಡಿಸಿಟ್ಟರು.

    ಕಾಳಿಕಾಂಬೆಯ ಸಾಲಿಗ್ರಾಮವನ್ನು ಮೂಡಲ ಮುಖನಾಗಿ ಪ್ರತಿμÁ್ಠಪಿಸಿ, ತುಂಬಿದ ಗಡಿಗೆ ನೀರು ಹೂವು ಪತ್ರೆ ಕುಂಕುಮ, ಅರಿಸಿನಪುಡಿ ಎಲ್ಲವನ್ನೂ ಜೋಡಿಸಿಟ್ಟು ಪೂಜೆಗೆ ಸಿದ್ಧರಾದರು. ಪಕ್ಕದ ಮನೆಯವರು ಕೊಟ್ಟಿದ್ದ ದೀಪವನ್ನು ಹೊತ್ತಿಸಿ ಕಾಳಿಕಾಂಬೆಯ ಮಗ್ಗುಲಲ್ಲಿಟ್ಟು ಊರಿನ ಜನರ ನಿರೀಕ್ಷಣೆಯಲ್ಲಿ ನಿಂತಿರುವಾಗ ಬೋವಿಗಳು ಹಿಂದೆಯೇ ಗೌಡರು, ಗೊಂಚಿಕಾರರು, ಕೆಲವು ಹೆಣ್ಣು ಮಕ್ಕಳು ಆಗಮಿಸಿದರು.

    ಎಲ್ಲರಿಗೂ ಅಕ್ಷತೆ ಕಾಳು ನೀಡಿ ಹೆಣ್ಣು ಮಕ್ಕಳಿಗೆ ಕಂಕಣ ಕಟ್ಟಿದರು. ಗುಂಡಾಚಾರಿ ಮಂತ್ರಗಳನ್ನು ಜಪಿಸುತ್ತಾ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಪೂಜೆ ಆರಂಭಿಸಿದರು. ಎಲ್ಲರೂ ನೋಡುತ್ತಿರುವಂತೆ ಕುಲುಮೆಯೊಳಗೆ ಎಲ್ಲಿಂದಲೋ ತಂದಿದ್ದ ಇದ್ದಿಲು, ಚಕ್ಕೆ ಮುಂತಾದುವನ್ನು ಹಾಕಿ ನೀರು ಚಿಮುಕಿಸಿ ಅರಿಶಿನ, ಕುಂಕುಮ ಇತ್ಯಾದಿಗಳನ್ನು ಧರಿಸಿ ತೆಂಗಿನಕಾಯಿಗೆ ಪೂಜೆ ಮಾಡಿ ಒಡೆದು ಹೋಳುಗಳನ್ನು ದೇವಿ ಮುಂದೆ ಮತ್ತು ಕುಲುಮೆ ಬಳಿ ಇಟ್ಟು ಊದು ಬತ್ತಿ ಬೆಳಗಿದರು.

    ಗೌಡ್ರು, ಗೊಂಚಿಕಾರು ಹೆಣ್ಣು ಮಕ್ಕಳು ಮತ್ತು ಬೋವಿಗಳು ಎಲ್ಲರೂ ಬೆಳಗಿದರು. ಗುಂಡಾಚಾರಿ ಉದ್ದಂಡ ನಮಸ್ಕಾರ ಮಾಡಿ, ಒಳಗೆ ಹೋಗಿ ಚಿಮುಟದಲ್ಲಿ ಒಂದು ಕೆಂಡವನ್ನು ತಂದು ಕುಲುಮೆಯಲ್ಲಿರಿಸಿ ಊದೋಗೊಳವೆಯಿಂದ ಊದಿದ. ಸ್ವಲ್ಪ ಹೊತ್ತಿನಲ್ಲೇ ಉರಿ ಕಾಣಿಸಿಕೊಂಡಿತು. ತೆಂಗಿನ ಕಾಯಿ ತುಂಡುಗಳು ಮತ್ತು ಬೆಲ್ಲದ ಪುಡಿಯನ್ನು ಎಲ್ಲರಿಗೂ ಹಂಚಿದ ಬಳಿಕ ಪೂಜೆಗೆ ಬಂದಿದ್ದವರೆಲ್ಲಾ ಶುಭ ಹಾರೈಸಿದರು. ಒಬ್ಬ ಹೆಣ್ಣು ಮಗಳು ಸೆರಗಿನಲ್ಲಿ ಕಟ್ಟಿ ತಂದಿದ್ದ ಓಲೆಯ ತುಂಡುಗಳನ್ನು ಆಚಾರಿಯ ಕೈಗಿತ್ತು “ನೋಡಪ್ಪಾ ಇವನ್ನ ಕರಗಿಸಿ ವಾಲೆ ಮಾಡಿಕೊಡು” ಎಂದು ಕೇಳಿದಳು.

    ಗುಂಡಾಚಾರಿ ತನ್ನ ಅತಿ ಸಣ್ಣ ತಕ್ಕಡಿಯಲ್ಲಿಟ್ಟು ತೂಕ ನೋಡಿ “ಇವು ಹಿಂದಲ ಕಾಲದವು ಮತ್ತೆ ಓಲೆ ಮಾಡಿದರೆ ತೂಕ ಜಾಸ್ತಿಯಾಗಿ ಕಿವಿ ತೂತು ಆಗಲ ಆಗ್ತಾವೆ. ಇದಕ್ಕೆ ಇನ್ನೊಂದು ಚೂರು ಚಿನ್ನ ಹಾಕಿದ್ರೆ ಎರಡು ಜೊತೆ ಓಲೆ ಮಾಡಿಸ್ ಬೌದು” ಅಂತ ಸಲಹೆ ನೀಡಿದ.

    ಆಚಾರಿಯ ಪತ್ನಿ ತೆಂಗಿನಕಾಯಿ ಹೋಳು ಮತ್ತು ಬೆಲ್ಲವನ್ನು ತಡವಾಗಿ ಬಂದವರಿಗೂ ಹಂಚಿದಳು. ಓಲೆ ತಂದಿದ್ದಾಕೆ “ಈಗ ಮನಿಗೆ ಹೋಗಿ ಇನ್ನೊಂದು ತುಂಡು ಬಂಗಾರ ಐತೆ ತತೀನಿ” ಎನ್ನುತ್ತಾ ತನ್ನ ಮನೆಕಡೆ ನಡೆದಳು. ಪೂಜೆಗೆ ಬಂದಿದ್ದವರಿಗೆ “ಸ್ವಲ್ಪ ಹೊತ್ತು ಕೂಡ್ರಿ ಕುಲುಮೆಗೆ ಬೆಂಕಿ ಕಾಣಿಸಿರೋದು ಒಳ್ಳೆ ಗಳಿಗೆ. ಅವಕ್ಕೆ ಇನ್ನೊಂದು ಚೂರು ಚಿನ್ನ ತಂದೆ ಎರಡೂ ಕರಗಿಸಿ ತೋರಿಸ್ತೀನಿ” ಎಂದು ಆಗ್ರಹಿಸಿದ.

    ಎಲ್ಲರೂ ಅಲ್ಲಿ ಹಾಕಿದ್ದ ಕಲ್ಲು ಚಪ್ಪಡಿ ಮೇಲೆ ಅಕ್ಕಪಕ್ಕ ಕುಳಿತರು. ಮನೆಗೆ ಹೋಗಿದ್ದ ಮಹಿಳೆ ಇನ್ನೊಂದು ಬಂಗಾರದ ತುಂಡಿನ ಜತೆ ಹಿಂತಿರುಗಿದಳು. ಗುಂಡಾಚಾರಿ ಎರಡನ್ನೂ ತೂಗಿ “ಹತ್ತಾಣೆ ತೂಕದ ಎರಡು ಜೊತೆ ಓಲೆ ಮಾಡಬೌದು. ಈಗ ನಿಮ್ಮೆದುರಿಗೆ ಕರಗಿಸಿ ತೋರುಸ್ತೀನಿ” ಅಂದು ಒಂದು ಸಣ್ಣ ಮೂಸೆಯೊಳಗೆ ಹಾಕಿ ಕುಲುಮೆಯನ್ನು ರಜೋ ಮಾಡಿ ಮೂಸೆಯನ್ನು ಬೆಂಕಿಯಲ್ಲಿಟ್ಟು ಊದುಗೊಳವೆಯಿಂದ ಊದಿದ.

    ಮೂಸೆ ಕೆಂಪಗೆ ಕಾದು ಅದರೊಳಗಿನ ಬಂಗಾರದ ತುಂಡುಗಳು ಕರಗಿ ಹೊಗೆ ಬಂತು. ಅನಂತರ ಕೆಂಡದಂತೆ ಕಾದಿದ್ದ ಮೂಸೆಯನ್ನು ಒಂದು ಕುಂಬಾರರ ಮಡಕೆ ಚೂರಿನ ಗುಂಡಿಯಲ್ಲಿ ಸುರುವಿದ. ಸ್ವಲ್ಪ ಸಮಯದ ಬಳಿಕ ಮಡಕೆ ತುಂಡಿಗೆ ನೀರು ಹಾಕಿ ತಣ್ಣಗೆ ಮಾಡಿದ ಮತ್ತು ಅದರೊಳಗಿಂದ ನಿಗಿನಿಗಿ ಮಿಂಚುತ್ತಿದ್ದ ಕರಗಿದ ಚಿನ್ನದ ತುಂಡನ್ನು ಹೊರತೆಗೆದು ಎಲ್ಲರಿಗೆ ತೋರಿಸಿ ಮತ್ತೆ ತಕ್ಕಡಿಯಲ್ಲಿ ತೂಗಿದ, ಅರ್ಧ ಗುಂಜಿ ಕಡಿಮೆಯಾಗಿತ್ತು.

    “ಇದಕ್ಕಂಟಿದ ಕಸ ಹೋಗಿ ಒಂದು ತೊಲ ನಾಕಾಣೆ ತೂಕ ಐತೆ, ಇದರಾಗೆ ಎಲ್ಲು ಜೊತೆ ಓಲೆ ಮಾಡಬೌದು”. ಆಚಾರಿ ತಿಳಸಿದ್ದನ್ನು ಆ ಗೃಹಿಣಿ ತಲೆಯಾಡಿಸಿ “ಅಂಗೆ ಮಾಡಣ್ಣ” ಎಂದು ತಿಳಿಸಿದಳು. ಗುಂಡಾಚಾರಿಗೆ ಕೈ ತುಂಬಾ ಕೆಲಸ ಸಿಗುವ ಭರವಸೆ ಕಂಡಿತು. “ಅಮ್ಮಾ ಎರಡು ದಿನದಾಗೆ ನಿಮ್ಮ ಓಲೆ ಮಾಡಿಕೊಡ್ತೀನಿ. ಅದನ್ನ ನೋಡಿ ಮುಂದೆ ಯಾರಿಗಾದ್ರೂ ಬೇಕಾದ್ರೆ ಮಾಡಿಕೊಡ್ತೀನಿ” ಎಂದು ಭರವಸೆ ಮಾತಾಡಿದ.

    ಪೂಜೆಗೆ ಬಂದಿದ್ದವರು ತಮ್ಮ ಮನೆಗಳ ಕಡೆ ತೆರಳುತ್ತಾ “ಇನ್ ಮ್ಯಾಲೆ ಹೆಂಗಸರ ಕಾಟ ಜಾಸ್ತಿಯಾಗುತ್ತೆ. ಇದ್ದಬದ್ದ ಬಂಗಾರ ಎಲ್ಲಾ ಒಡವೆಗಳಾಗುವು ಅಂದುಕೊಂಡರು.

    ಒಂದು ಹತ್ತು ಹದಿನೈದು ಸೇರು ರಾಗಿ ಬೇಕಾಗಿತ್ತಾ ಯಾರತ್ತನಾ ಆತು, ಕೊಡಿಸ್ತೀರಾ”, ಬೋವಿಗಳನ್ನು ಗುಂಡಾಚಾರಿ ವಿಚಾರಿಜಿ ಅವರಲ್ಲೊಬ್ಬ “ಈ ಮಗ್ಗುಲ ಮನೆಯಾಗೆ ಸಿಗತವೆ ಕೇಳಿ ನೋಡ್ರಿ” ಅಂತ ಉತ್ತರಿಸಿದ. ಅದರಂತೆ ಗುಂಡಾಚಾರಿ ಆ ಮನೆಗೆ ತೆರಳಿ ವಿಚಾರಿಸಿದ್ದ ಮನೆಯೊಡತಿ “ಸಿಗ್ತಾವೆ ಸಂಜೆ ಕಡೆ ಬರ್ರಿ ಯಜಮಾನು ಬಂದಿದ್ದಾರೆ ರಾಗಿ ಕೊಡ್ತಾರೆ” ಎಂದು ತಿಳಿಸಿದ್ದಳು.

    “ಎರಡು ಮುದ್ದೆಗೆ ಆಗುವಷ್ಟು ರಾಗಿ ಹಿಟ್ಟಿತೆ, ಸಂಜೆ ಕಡೆ ಅವು ರಾಗಿ ಕೊಟ್ರೆ ಬೀಸಿಗೋಬೇಕು. ನೋಡಾನ” ಅಂದಿದ್ದಳು ಗುಂಡಾಚಾರಿಯ ಮಡದಿ, ಊಟ ಸಿದ್ಧವಾಗುವ ಹೊತ್ತಿಗೆ ಗುಂಡಾಚಾರಿ ಚಿನ್ನವನ್ನು ಮತ್ತೆ ಮೂಸೆಯೊಳಗೆ ಹಾಕಿ ಕರಗಿಸಿ ತೆಳ್ಳಗೆ ಎಲೆಯಂಗೆ ಮಾಡಿಕೊಂಡ. ಊಟವಾದ ಬಳಿಕ ಆಚಾರಿ ಕುಲುಮೆ ಮುಂದೆ ಕುಳಿತು ಚಿನ್ನವನ್ನು ತನ್ನ ಉದ್ದೇಶಕ್ಕೆ ತಕ್ಕ ಹಾಗೆ ಮಾಡಿಕೊಳ್ಳಲು ಅದ್ಗಲ್ಲಿನ ಮೇಲಿಟ್ಟು ಬಡಿಯ ತೊಡಗಿದ.

    ಗುಂಡಾಚಾರಿ ತಿಳಿಸಿದಂತೆ ಮೂರು ದಿನದೊಳಗೆ ಎರಡು ಜೊತೆ ಓಲೆ ಸಿದ್ಧಪಡಿಸಿದ. ಚಿನ್ನ ಕೊಟ್ಟಿದ್ದ ಗೃಹಿಣಿ ಓಲೆಗಳನ್ನು ನೋಡಿ ಸಂತೋಷಪಟ್ಟಳು. ಓಲೆ ಮಾಡಿದ ಕೂಲಿಯಾಗಿ ರಾಗಿಯನ್ನೇ ಪಡೆದಿದ್ದರು.

    ನಾಲ್ಕನೇ ದಿನ ಮದ್ಯಾಹ್ನ ಇನ್ನೊಬ್ಬರು ವಡವೆ ಮಾಡಿಸಲು ಗುಂಡಾಚಾರಿ ಬಳಿಗೆ ಆಗಮಿಸಿ ಚರ್ಚಿಸಿದ್ದರು. ಅವರೊಂದಿಗೂ ಸ್ನೇಹದ ಮಾತಾಡಿದ ಗುಂಡಾಚಾರಿ ಅವರ ಕೋರಿಕೆಯಂತೆ ಒಡವೆಗಳನ್ನು ತಯಾರಿಸಿಕೊಟ್ಟಿದ್ದ.

    ಗುಂಡಾಚಾರಿ ಗೌನಳ್ಳಿಗೆ ಆಗಮಿಸಿ ಒಂದು ವಾರವಾಗಿತ್ತು. ಒಂದು ಸಂಜೆ ಕಮ್ಮಾರಟ್ಟಿಯ ಬಳಿ ಸೇರಿದ್ದ ಊರ ಜನ “ಈ ಆಚಾರಿ ಹುಡುಗ ಯಾವ ಗಳಿಗೇಲಿ ನಮ್ಮೂರಿಗೆ ಬಂದೊ ಹಗಲೆಲ್ಲಾ ಬಡೀತಿದ್ದಾನೆ. ಅಂದ್ರೆ ನಮ್ಮೂರಿನ ಜನ ಇದ್ದಬದ್ದ ಬಂಗಾರನೆಲ್ಲಾ ಹೊರಗ್ ತಗ್ಗು ಒಡವೆ ಮಾಡಿಸಿಗೊಳ್ತಿದಾರೆ” ಮುಂತಾಗಿ ಮಾತಾಡಿಕೊಂಡು, ಕಮ್ಮಾರಿಕೆ ಮಾಡುತ್ತಿದ್ದಾತ “ನಮ್ಮು ಬರೇ ಮೊಂಡಕುಳ ಕಾಸಿ ಬಡಿಯದಾಗೈತೆ. ಅದೂ ಸಂಜೀಮುಂದ ಮಾತ್ರ. ಆಯಪ್ಪ ಹಗಲೆಲ್ಲಾ ಬಡೀತಿದ್ದಾನೆ. ಅವಂದೇ ಅದೃಷ್ಟ” ಅಂದು ಪ್ರತಿಕ್ರಿಯಿಸಿದ್ದ.  ಅದು ನಿಜವೂ ಆಗಿತ್ತು.

    Click to comment

    Leave a Reply

    Your email address will not be published. Required fields are marked *

    More in ಸಂಡೆ ಸ್ಪಷಲ್

    To Top