Connect with us

    Har Ghar Tiranga: ಹರ್‌ ಘರ್‌ ತಿರಂಗಾ ಅಭಿಯಾನ | ಗಮನ ಸೆಳೆದ ತಿರಂಗಾ ಯಾತ್ರೆ

    Har Ghar Tiranga

    ಮುಖ್ಯ ಸುದ್ದಿ

    Har Ghar Tiranga: ಹರ್‌ ಘರ್‌ ತಿರಂಗಾ ಅಭಿಯಾನ | ಗಮನ ಸೆಳೆದ ತಿರಂಗಾ ಯಾತ್ರೆ

    CHITRADURGA NEWS | 14 AUGUST 2024
    ಚಿತ್ರದುರ್ಗ: 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹರ್‌ ಘರ್‌ ತಿರಂಗಾ ಅಭಿಯಾನದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು ತ್ರಿವರ್ಣ ಧ್ವಜ ಹಿಡಿದು ನಗರದಲ್ಲಿ ಬುಧವಾರ ತಿರಂಗಾ ಯಾತ್ರೆ ನಡೆಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹರ್‌ ಘರ್‌ ತಿರಂಗಾ ಅಭಿಯಾನದಡಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಗೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಜೆ.ಸೋಮಶೇಖರ್‌ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿದರು.

    ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಜೆ.ಸೋಮಶೇಖರ್, ಭಾರತದಲ್ಲಿ ಯಾವುದಾದರೂ ಒಂದು ದಿನವನ್ನು ಸುವರ್ಣ ಅಕ್ಷರಗಳಿಂದ ದಾಖಲಿಸುವುದಾದರೆ ಅದು 1947 ಆಗಸ್ಟ್‌ 15. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಪ್ರತೀಕವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಹರ್‌ ಘರ್‌ ತಿರಂಗಾ ಅಭಿಯಾನದಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: ಹೊರಕೆರೆ ದೇವರಪುರ ದೇವಸ್ಥಾನ | ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ

    ತಿರಂಗಾ ಯಾತ್ರೆಯು ರಾಷ್ಟ್ರೀಯ ಐಕ್ಯತೆ ಮತ್ತು ಭಾವೈಕ್ಯತೆ ಸಾರುವ ಕೆಲಸ ಮಾಡುತ್ತಿದೆ. ದೇಶದ ತ್ರಿವರ್ಣ ಧ್ವಜವು ಕೇಸರಿ ಬಣ್ಣ ತ್ಯಾಗ ಶೌರ್ಯಗಳ ಸಂಕೇತವಾದರೆ, ಬಿಳಿ ಶಾಂತಿಯ ಸಂಕೇತ ಹಾಗೂ ಹಸಿರು ಸಮೃದ್ಧಿಯ ಸಂಕೇತ ಸೂಚಿಸುತ್ತದೆ ಎಂದು ತಿಳಿಸಿದ ಅವರು, ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.

    ತಿರಂಗಾ ಯಾತ್ರೆ ಜಾಥಾವು ನಗರದ ಒನಕೆ ಓಬವ್ವ ವೃತ್ತದಿಂದ ಪ್ರಾರಂಭವಾಗಿ ಮದಕರಿ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲದವರೆಗೆ ಸಾಗಿ ತದನಂತರ ಪುನಃ ಒನಕೆ ಓಬವ್ವ ವೃತ್ತದಲ್ಲಿ ಅಂತ್ಯಗೊಂಡಿತು. ಜಾಥಾದಲ್ಲಿ ದೇಶ ಭಕ್ತಿಯ ಘೋಷಣೆಗಳು ಹಾಗೂ ಸ್ವಾತಂತ್ರ್ಯ ಸೇನಾನಿಗಳಿಗೆ ಜೈಕಾರ ಕೂಗಿದರು.

    ಕ್ಲಿಕ್ ಮಾಡಿ ಓದಿ: ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗೆ ಸನ್ಮಾನ | ದಿನಾಂಕ ಘೋಷಿಸಿದ ಸಿ.ಎಸ್‌.ಷಡಾಕ್ಷರಿ

    ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್‌.ಬಣಕಾರ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ವಿ.ವೀಣಾ, ಸುಧಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top