Connect with us

13ನೇ ಶರಣ ಸಾಹಿತ್ಯ ಸಮ್ಮೇಳನ | ಕೋಟೆ ನಾಡಲ್ಲಿ ವಿದ್ಯುಕ್ತ ಚಾಲನೆ | ಯಾರು ಏನು ಹೇಳಿದ್ರು ?

harans sahithya sammelana

ಮುಖ್ಯ ಸುದ್ದಿ

13ನೇ ಶರಣ ಸಾಹಿತ್ಯ ಸಮ್ಮೇಳನ | ಕೋಟೆ ನಾಡಲ್ಲಿ ವಿದ್ಯುಕ್ತ ಚಾಲನೆ | ಯಾರು ಏನು ಹೇಳಿದ್ರು ?

CHITRADURGA NEWS | 18 JANUARY 2025

ಚಿತ್ರದುರ್ಗ: ಐತಿಹಾಸಿಕ ಜಿಲ್ಲೆ, ಕೋಟೆನಾಡು, ಮಠಗಳ ಬೀಡು ಎಂಬ ಖ್ಯಾತಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಶರಣ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಜರುಗಿತು.

ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುವ ಶರಣ ಸಾಹಿತ್ಯ ಸಮ್ಮೇಳನಕ್ಕೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಚಾಲನೆ ನೀಡಿದರು.

ಬಸವಣ್ಣನವರ ಆಚಾರ ವಿಚಾರಗಳನ್ನು ನಾವು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಜೀವನ ಮಾಡುವುದು ನಮ್ಮ ನಿಮ್ಮ ಕರ್ತವ್ಯವಾಗಿದೆ. ಬಸವಣ್ಣನವರು ವಿಚಾರಗಳು ಎಲ್ಲ ಕಡೆಗಳಲ್ಲಿ ವಿಸ್ತಾರವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.

| ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ.

13ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಬೀದರ್‍ನ ಡಾ.ಸಿದ್ಧರಾಮ ಬೆಲ್ದಾಳ ಶರಣರು ಅಧ್ಯಕ್ಷೀಯ ನುಡಿಯಲ್ಲಿ, ಶರಣ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಬಸವಾದಿ ಶರಣರು ರಚಿಸಿರುವ ಶರಣ ಸಾಹಿತ್ಯ ಸ್ವತಂತ್ರ ಸಾಹಿತ್ಯ. ಮನುಷ್ಯನ ಒಳಗಿನ ಆತ್ಮವನ್ನು ಎಚ್ಚರಿಸುವ ಶಕ್ತಿ ಶರಣ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯವು ಮುಂದಿನ ದಿನಗಳಲ್ಲಿ ಸಮ್ಮೇಳನಗಳ ಮೂಲಕ ಹೆಚ್ಚು ಪ್ರಚಾರವಾಗಲಿ ಎಂದರು.

ಸಮ್ಮೇಳನ ಉದ್ಘಾಟಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸುತ್ತೂರು ಮಠದ ಹಿರಿಯ ಗುರುಗಳು ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿ ಈ ನಾಡಿನ ಮೂಲೆ ಮೂಲೆಗಳಿಗೆ ಬಸವಾದಿ ಶರಣರ ತತ್ತ್ವಗಳನ್ನು ಮುಟ್ಟಿಸಿದ್ದಾರೆ ಎಂದರು.

ಶರಣ ಸಾಹಿತ್ಯ ಸಮ್ಮೇಳನಕ್ಕೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಚಾಲನೆ ನೀಡಿದರು.

ಇಂದು ಅನೇಕ ಕಡೆ ಬಸವಾದಿ ಶರಣರ ಗದ್ದುಗೆಗಳು ಸುಸ್ಥಿಯಲ್ಲಿಲ್ಲ. ಗದ್ದುಗೆಗಳ ಅಭಿವೃದ್ಧಿಗಾಗಿ ಮುಂಬರುವ ರಾಜ್ಯ ಬಜಟ್‍ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು. ಬಸವಾದಿ ಶರಣ ಸ್ಮಾರಕಗಳನ್ನು ಉಳಿಸಿ ಅಭಿವೃದ್ಧಿ ಪಡಿಸಲು ಸಮಗ್ರ ಯೋಜನೆಯನ್ನು ರೂಪಿಸಲು ನಾಡಿನ ಸ್ವಾಮೀಜಿಗಳು, ಮಠಾದೀಶರೊಂದಿಗೆ ಚರ್ಚಿಸಲಾಗುವುದು. ಮಾನ್ಯ ಮುಖ್ಯಮಂತ್ರಿಗಳು ಬಸವಣ್ಣನವರ ಹಾಗೂ ಬಸವಾದಿ ಶರಣರ ಚಿಂತನೆಗಳ ಬಗ್ಗೆ ನಮಗಿಂತ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ನುಡಿದರು.

ಬಸವಣ್ಣ ಸಾಂಸ್ಕøತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ. ಬಸವಣ್ಣ ಎಂದೂ ಸ್ಥಾವರಕ್ಕೆ ಮಹತ್ವ ಕೊಟ್ಟಿರಲಿಲ್ಲ, ಚೈತನ್ಯಕ್ಕೆ ಮಹತ್ವ ಕೊಟ್ಟಿದ್ದರು. ಯಡಿಯೂರಪ್ಪ ಅವರು ಬಸವ ಕಲ್ಯಾಣದ ಅಭಿವೃದ್ಧಿಗೆ 600 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಟ್ಟಡದ ಕೆಲಸ ನಡೆಯುತ್ತಿದೆ. ಅದಕ್ಕೆ ಜೀವಂತಿಕೆ ತುಂಬುವ ನಿಟ್ಟಿನಲ್ಲಿ ವಚನ ವಿಶ್ವವಿದ್ಯಾಲಯ ಮಾಡಬೇಕು.

| ಡಾ.ಬಸವಲಿಂಗ ಪಟ್ಟದ್ದೇವರು, ಬಾಲ್ಕಿ ಹಿರೇಮಠ.

ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಡಂಬಳದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ನಾಡಿನ ಅದ್ಬುತ ಸಂಸ್ಥೆಯಾಗಿ ಬೆಳೆಯುತ್ತಿದೆ. ಇದೊಂದು ಅಮೂಲ್ಯ ಸಾಹಿತ್ಯ, ಕನ್ನಡ ಸಾಹಿತ್ಯದ ಆತ್ಮವಾಗಿ ಶರಣ ಸಾಹಿತ್ಯವಿದೆ ಎಂದು ವಿಶ್ಲೇಷಣೆ ಮಾಡಿದರು.

ಬಸವಾದಿ ಶಿವ ಶರಣರು ಇಂತಹ ಅಮೂಲ್ಯ ಕೊಡುಗೆಯನ್ನು ಕೊಡುವ ಮೂಲಕ ಸಮಾಜದಲ್ಲಿನ ಅಜ್ಞಾನ, ಅಂಧಶ್ರದ್ಧೆ ನಿರ್ಮೂಲನೆಗೆ ಶ್ರಮಿಸಿದ್ದಾರೆ. ವರ್ಣ, ಲಿಂಗ, ತಾರತಮ್ಯ ಮುಕ್ತ ಸರ್ವ ಸಮಾನತೆಯ ಸಮಾಜ ನಿರ್ಮಾಣ ಶರಣ ಸಾಹಿತ್ಯದ ಆಶಯವಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಅಂಶ ಇದರಲ್ಲಿದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ, ಯೋಗ ಗುರು ಚನ್ನಬಸವಣ್ಣ, ಸಿದ್ದಯ್ಯನಕೋಟೆಯ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ನಾಡೋಜ ಗೊ.ರು.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಆಡಳಿತ ಮಂಡಳಿ ಸದಸ್ಯ ಎಸ್.ಎನ್.ಚಂದ್ರಶೇಖರ್ ಇತರರಿದ್ದರು. ಡಾ.ರೂಪ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಸ್ವಾಗತಿಸಿದರು.

ಸಾಂಸ್ಕøತಿಕ ನಾಯಕ ಬಸವಣ್ಣ:

ಶರಣ ಸಾಹಿತ್ಯ ಸಮ್ಮೇಳನದ ಮೊದಲ ಚಿಂತನ ಗೋಷ್ಠಿಯಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣ ಕುರಿತು ವಿಚಾರ ಸಂಕಿರಣ ನಡೆಯಿತು.
ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪಕ್ಕೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನ ಬಂದು ಸೇರಿದರು. ಬಸವಣ್ಣ ಒಬ್ಬರು ಮಾಡಿದ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಲು ಸಾಧ್ಯವಿಲ್ಲ. ಬಸವಣ್ಣನವರು ನಡೆ-ನುಡಿ ಒಂದೇ ಆಗಿತ್ತು. ಬಸವಣ್ಣನವರ ಹೆಜ್ಜೆಯ ಜೊತೆಗೆ ನಾವೆಲ್ಲರೂ ಸಾಗುತ್ತೇವೆ ಎಂಬುದು ಗೋಷ್ಠಿಯ ಮೂಲ ಉದ್ದೇಶವಾಗಬೇಕು ಎಂದು ನುಡಿದರು.

ಶರಣರ ವಚನಗಳನ್ನು ಪಾಲಿಸಿ ಒಳ್ಳೆಯ ಜೀವನ ನಡೆಸುವಂತೆ ಶರಣರು ಸಂದೇಶ ನೀಡುರುತ್ತಾರೆ. ಶರಣ ತತ್ತ್ವಗಳು, ಸಂದೇಶಗಳು ಸಮಾಜಕ್ಕೆ ಈ ಸಮ್ಮೇಳನದ ಮೂಲಕ ತಲುಪುವಂತಾಗಲಿ.

| ಡಾ.ಎಸ್.ಆರ್.ಗುಂಜಾಳ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರು.

ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಎನಗಿಂತ ಕಿರಿಯರಿಲ್ಲ ಶರಣರಿಗಿಂತ ಹಿರಿಯರಿಲ್ಲ ಎಂದು ಹೇಳಿದ ಮಹಾನ್ ವ್ಯಕ್ತಿ ಬಸವಣ್ಣನವರು. ನುಡಿದಂತೆ ನಡೆ, ಈ ರೀತಿಯಾಗಿ ನುಡಿದು ನಡೆದ ಏಕೈಕ ವ್ಯಕ್ತಿಯೆಂದರೆ ಬಸವಣ್ಣನವರು. ಈ ಕಾರಣಕ್ಕಾಗಿ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎನ್ನುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಬಸವಣ್ಣನವರು ಬರಿ ಕರ್ನಾಟಕಕ್ಕೆ ಸಾಂಸ್ಕøತಿಕ ನಾಯಕರಲ್ಲ. ಅವರು ಇಡೀ ವಿಶ್ವಕ್ಕೆ ಸಾಂಸ್ಕøತಿಕ ನಾಯಕ. ಬಸವಣ್ಣನವರ ಪ್ರತಿಮೆಗಳನ್ನು ವಿಶ್ವದ ಹಲವು ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಸಮ್ಮೇಳನಕ್ಕೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಚಾಲನೆ ನೀಡಿದರು

ಸಾಂಸ್ಕøತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನು ಮಾಡಿದವರು ಬಸವಣ್ಣ. ಕಾಯಕದಿಂದ ಬಂದ ಹಣದಿಂದ ದಾಸೋಹ ಮಾಡುವ ಪರಿಕಲ್ಪನೆ ಬಂದಿದ್ದು ಬಸವಣ್ಣನವರಿಂದ. ಬಸವಣ್ಣನವರು ಹಾಕಿಕೊಟ್ಟ ಭದ್ರಬುನಾದಿಯನ್ನು ಮಠಮಾನ್ಯಗಳು ಶಿಕ್ಷಣದ ಮೂಲಕ ಮುಂದುವರೆಸಿಕೊಂಡು ಹೋಗುತ್ತಿವೆ. ಜೀವನಕ್ಕೆ ಕಾಯಕವೇ ಆಧಾರ. ನಮ್ಮ ಕಾಯಕದ ಹಣದಿಂದ ಸಮಾಜಕ್ಕೆ ಕೊಡುಗೆಂiÀiನ್ನು ನಾವು ಸಹ ನೀಡಬೇಕು. 12ನೇ ಯ ಶತಮಾನದ ಬಸವಾದಿ ಶರಣರು ನಮ್ಮ ಜೀವನಕ್ಕೆ ಮಾದರಿಯಾಗಿದ್ದಾರೆ. ಅವರ ಕಾಯಕ ನಿಷ್ಠೆಯನ್ನು ನಾವು ಸಹ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ನುಡಿದರು.

ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ಮಾತನಾಡಿ, ಬಸವಣ್ಣನವರು ಕಟ್ಟಿದ ಮಹಾಮನೆಗೆ ಬಾಗಿಲುಗಳಿರಲಿಲ್ಲ. ಸರ್ವರಿಗೂ ಪ್ರವೇಶವಿತ್ತು. ಪ್ರಜಾಪ್ರಭುತ್ವದ ನಿಲುವು ಹೊಂದಿದ್ದ ಬಸವಣ್ಣನವರು ಕ್ರಿಯಾಶೀಲತೆ, ಪ್ರಾಮಾಣಿಕತೆ, ವೈಚಾರಿಕತೆಗಳನ್ನು ಹೊಂದಿದ್ದವರು. ಲೋಕದ ಡೊಂಕು ತಿದ್ದುವ ಮೊದಲು ನಿಮ್ಮೊಳಗಿನ ಡೊಂಕನ್ನು ತಿದ್ದುಕೊಳ್ಳಿ ಎಂದು ಹೇಳಿ ಸ್ತ್ರೀ ಸಮಾನತೆ, ನಿಷ್ಕಲ್ಮಷ ದುಡಿಮೆಯನ್ನು ತಿಳಿಸಿದವರು ಬಸವಣ್ಣ ಎಂದು ಬಣ್ಣಿಸಿದರು.

ಟಿ.ಪಿ.ಗಣೇಶ್, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ, ಪ್ರೊ.ಡಿ.ಎಂ.ಹಿರೇಮಠ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಉಪಸ್ಥಿತರಿದ್ದರು.

ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ:

ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ವಿಚಾರ ಕುರಿತ ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ವಿಜಯಶ್ರೀ ಸಬರದ ಮಾತನಾಡಿ, ಸರ್ಕಾರ ವಚನ ಸಾಹಿತ್ಯ ಪ್ರಾಧಿಕಾರ ರಚಿಸಬೇಕು. ವಚನ ಸಾಹಿತ್ಯದಲ್ಲಿ 39 ವಚನಕಾರ್ತಿಯರಿದ್ದಾರೆ ಎಂದರು.

ಶರಣೆಯರ ವಿಚಾರಧಾರೆಗಳು ನಮಗೆ ಇಂದು ಬದುಕಿಗೆ ಮಾರ್ಗದರ್ಶನವಾಗಿವೆ. ಭಕ್ತಿಗೆ ಹೊಸ ಆಯಾಮವನ್ನು ನೀಡಿ ಅಂಧ ಭಕ್ತಿಯನ್ನು ತಿರಸ್ಕರಿಸಿದವರು. ಭಕ್ತಿಯೆಂದರೆ ಅಂತರಿಕ ಶುದ್ಧತೆ ಎಂದು ಶರಣೆಯರು ಹೇಳಿದ್ದಾರೆ. ಲೋಕವೇ ತಾನಾಗುವ ಮೂಲಕ ಸಂಸಾರದಲ್ಲಿದ್ದು ಶಾಂತಿ ಪಡೆದಾಗ ಏಕಾಂತದ ಹಂಗು ಇರುವುದಿಲ್ಲ ಎಂದು ಅಕ್ಕಮಹಾದೇವಿ ಹೇಳಿದ್ದಾರೆ ಎಂದು ವಿವರಿಸಿದರು.

ಭದ್ರಾವತಿಯ ಡಾ| ವಿಜಯದೇವಿ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ನೀಡಿದವರು ಬಸವಣ್ಣ. ಆಧುನಿಕ ಸಂವಿಧಾನ ಇದನ್ನು ಮೀರುವುದಕ್ಕೆ ಸಾಧ್ಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.

ವಚನ ಸಾಹಿತ್ಯದ ಗೋಷ್ಠಿಗಳು ಈ ರೀತಿ ಪ್ರತಿವರ್ಷ ಆಗಬೇಕು. ಸ್ವಾತಂತ್ರ್ಯ, ಸಮಾನತೆ, ಮಾನವತೆ, ಸೌಭಾಗ್ಯ ಈ ಸ್ವತಂತ್ರವನ್ನು 12ನೇ ಶತಮಾನದ ವಚನಕಾರ್ತಿಯರು ಬಸವಣ್ಣನವರಿಂದ ಪಡೆದುಕೊಂಡಿದ್ದರು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ದಾಪುಗಾಲು ಹಾಕುತ್ತಿದ್ದಾರೆ. ಆದರೂ ಸವಾಲು ಸಮಸ್ಯೆಗಳು ಸಾಕಷ್ಟಿವೆ. ಈ ಸಮಸ್ಯೆಗಳಿಗೆ ಉತ್ತರಗಳ ದೊರೆತಿದ್ದು 12ನೇ ಶತಮಾನದ ಅನುಭವಮಂಟಪದ ಗೋಷ್ಠಿಯಲ್ಲಿ ಎಂದರು.

ಈ ಬಜೆಟ್‍ನಲ್ಲಿ ಶರಣ ಸಾಹಿತ್ಯ ಪ್ರಸಾರ, ಬಸವ ಭವನಗಳಿಗೆ 500 ಕೋಟಿ ಮೀಸಲಿಡಬೇಕು. ಸಾಂಸ್ಕøತಿಕ ನಾಯಕ ಬಸವಣ್ಣ ಪರಿಕಲ್ಪನೆ ಸಾಕಾರಗೊಳಿಸಲು ಸಮಿತಿ ರಚಿಸಬೇಕು. 1 ರಿಂದ 12ನೇ ತರಗತಿ ಪಠ್ಯದಲ್ಲಿ ಶರಣ ಸಾಹಿತ್ಯ ಅಳವಡಿಸಬೇಕು. ದಾವಣಗೆರೆ ವಿವಿಗೆ ಎಸ್.ನಿಜಲಿಂಗಪ್ಪ ಹೆಸರು ನಾಮಕರಣ ಆಗಬೇಕು.

| ಡಾ.ಸಿ.ಸೋಮಶೇಖರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು.

ಬೆಲ್ದಾಳ ಶರಣರಿಗೆ ಕೋಟೆನಾಡಿನ ಸ್ವಾಗತ:

ಕೋಟೆನಾಡು ಚಿತ್ರದುರ್ಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಶರಣ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಸಮ್ಮೇಳನದ ಸರ್ವಾಧ್ಯಕ್ಷರಾದ ಬೀದರ್‍ನ ಡಾ. ಸಿದ್ಧರಾಮ ಬೆಲ್ದಾಳ ಶರಣರನ್ನು ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸ್ವಾಗತಿಸಿ ಮೆರವಣಿಗೆ ಮೂಲಕ ಮುರುಘಾ ಮಠಕ್ಕೆ ಕರೆತರಲಾಯಿತು.

ಶನಿವಾರ ಬೆಳಗ್ಗೆ 8 ಗಂಟೆಗೆ ಮಠದ ಮುಂಭಾಗದಲ್ಲಿ ಪರಿಷತ್ ಹಾಗೂ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಚಾಲನೆ ದೊರೆಯಿತು.

ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಹೆಬ್ಬಾಳು ರುದ್ರೇಶ್ವರ ವಿರಕ್ತಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ, ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಬ್ಯಾಡಗಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್.ಪಾಟೀಲ್. ಕದಳೀ ವೇದಿಕೆ ಪದಾಧಿಕಾರಿಗಳು, ಎಸ್.ಜೆ.ಎಂ.ವಿದ್ಯಾಪೀಠದ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version