ಮುಖ್ಯ ಸುದ್ದಿ
ಮನಸ್ಸಿನ ಹತೋಟಿಗೆ ಯೋಗ ಸಹಕಾರಿ | ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
CHITRADURGA NEWS | 21 JUNE 2024
ಚಿತ್ರದುರ್ಗ: ಯೋಗ ಬಾಹ್ಯ ಪ್ರದರ್ಶನವಲ್ಲ, ಅಂತರ್ ದರ್ಶನದ ಸ್ಫೂರ್ತಿ. ದೇಶ,ಭಾಷೆ,ಲಿಂಗ,ಜಾತಿ,ಧರ್ಮ ಹಾಗೂ ರಾಜಕೀಯವನ್ನು ಮೀರಿ ಯೋಗವನ್ನು ಮಾಡಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠದ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದರು. ‘ಆನಂದ, ಆರೋಗ್ಯ, ಶಾಂತಿ ಬಯಸುವವರೆಲ್ಲರೂ ಯೋಗವನ್ನು ರೂಢಿಸಿಕೊಳ್ಳಬೇಕು. ನೈಜ ಯೋಗ ಬುದ್ಧಿ, ಮನಸ್ಸು, ಭಾವನೆಗಳ ಮೇಲೆ ಹತೋಟಿ ಸಾಧಿಸುವಲ್ಲಿ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ’ ಎಂದರು.
‘ಯೋಗದಿಂದ ವ್ಯಕ್ತಿಗತ ಶುದ್ಧಿಯ ಜೊತೆಗೆ ವಿಶ್ವಶಾಂತಿಯೂ ಸ್ಥಾಪಿತವಾಗುತ್ತದೆ. ಬಸವಾದಿ ಶಿವಶರಣರು ಭಕ್ತಿಯೋಗ, ಶಿವಯೋಗ, ಜ್ಞಾನಯೋಗ, ಕರ್ಮಯೋಗಗಳ ಮೂಲಕ ಲಿಂಗಾಂಗ ಸಾಮರಸ್ಯದಲ್ಲೇ ಯೋಗವನ್ನು ಕಂಡುಕೊಂಡಿದ್ದರು’ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಸಾಹಿತಿಗಳು ರಾಜಕಾರಣಿಗಳೇ ಎಂದಿದ್ದು ತಪ್ಪು | ಸಾಣೇಹಳ್ಳಿ ಶ್ರೀ
‘ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶಿಷ್ಟ ಸ್ಥಾನವಿದೆ. ಚಿತ್ತವೃತ್ತಿಗಳನ್ನು ನಿರೋಧಗೊಳಿಸಿ ನಮ್ಮ ಮನಸ್ಸನ್ನು ಏಕಾಗ್ರತೆಗೊಳಿಸುತ್ತದೆ. ಮನಸ್ಸು ಎಷ್ಟು ಚಂಚಲವಾದದ್ದೋ ಅಷ್ಟೇ ಏಕಾಗ್ರತೆ ಪಡೆಯುವ ಶಕ್ತಿ ಹೊಂದಿದೆ. ಮನಸ್ಸು ಹೇಳಿದ ಹಾಗೆ ನಾವು ಕೇಳದೇ ನಾವು ಹೇಳಿದ ಹಾಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು’ ಎಂದರು.
‘ಮನಸ್ಸಿನಿಂದಲೇ ಮನುಷ್ಯನ ವ್ಯಕ್ತಿತ್ವ ಬೆಳವಣಿಗೆಯಾಗುವಂಥದ್ದು, ಮನಸ್ಸಿನಿಂದಲೇ ವ್ಯಕ್ತಿತ್ವ ನಾಶವಾಗುವಂಥದ್ದು. ಹಾಗಾಗಿ ಮನಸ್ಸಿನಲ್ಲಿ ಮೇಲೆ ಹತೋಟಿಯನ್ನು ಯಾರು ಸಾಧಿಸುತ್ತಾರೋ ಅವರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡ್ತಾ ಹೋಗುವರು. ಯಾರು ಮನಸ್ಸಿನ ಮೇಲೆ ಹತೋಟಿಯನ್ನು ಕಳೆದುಕೊಳ್ತಾರೋ ಅವರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಿದರೂ ಸೋಲುವರು. ಹಾಗಾಗಿ ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಯೋಗ ಸಹಾಯವಾಗುವುದು’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಯೋಗ ಬಾಹ್ಯ ಪ್ರದರ್ಶನವಲ್ಲ | ಅಂತರಂಗದ ದರ್ಶನ
‘ನಮ್ಮ ನಾಡಿಯಲ್ಲಿ ಆಸನಗಳಿಗೆ ಒತ್ತುಕೊಟ್ಟು ಯೋಗವನ್ನು ಮರೆಯುವರು. ಯೋಗ ಮತ್ತು ಆಸನ ಎರಡು ಸೇರಿದಾಗಲೇ ವ್ಯಕ್ತಿಯ ವ್ಯಕ್ತಿತ್ವದ ವಿಕಾಸ ಆಗುವಂಥದ್ದು. ಆಸನ, ಧ್ಯಾನ, ಪ್ರಾಣಾಯಮದ ಜೊತೆಗೆ ವಚನಗಳನ್ನು ಹೇಳುವ ಮೂಲಕ ಯೋಗದ ಕಡೆ ಸಾಗಬೇಕು. ಇವೆರೆಡು ಏಕಕಾಲಕ್ಕೆ ನಡೆಯುವಂಥ ಕ್ರಿಯೆಗಳು. ಇವುಗಳ ಮೂಲಕ ನಮ್ಮ ಮನಸ್ಸಿನ ದುರ್ಭಾನೆಗಳನ್ನು ದೂರ ಮಾಡಿಕೊಂಡು ಸದ್ಭಾವನೆಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುವುದು’ ಎಂದರು.
‘ಮನುಷ್ಯನಿಗೆ ದೃಢವಾದ ಸಂಕಲ್ಪ, ಇಚ್ಛಾಶಕ್ತಿ ಮತ್ತು ಒಳ್ಳೆಯ ಕೆಲಸ ಮಾಡುವ ಮನಸ್ಸಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು. ಆಸಕ್ತಿ ಬಾಹ್ಯವಾಗಿ ತುಂಬುವಂಥದ್ದಲ್ಲ. ಆಂತರಿಕವಾಗಿ ಬೆಳೆಸಿಕೊಳ್ಳುವಂಥದ್ದು’ ಎಂದು ತಿಳಿಸಿದರು.
‘ಮನುಷ್ಯನಿಗೆ ಅಂತಃಸಾಕ್ಷಿ ಎನ್ನುವಂತದ್ದು ಇದೆ. ಯಾರು ಅಂತಃಸಾಕ್ಷಿಯನ್ನು ಸಾಯಿಸಿಕೊಳ್ತಾರೋ ಆ ವ್ಯಕ್ತಿ ಸತ್ತ ಹಾಗೆ. ಹಾಗಾಗಿ ಇಲ್ಲಿನ ಅಧ್ಯಾಪಕರಿಗೆ ಹಾಗೂ ಮಕ್ಕಳು ಅಂತಃಸಾಕ್ಷಿಯನ್ನು ಎಂದೂ ಸಾಯಿಸಿಕೊಳ್ಳದೇ ಸದಾ ಕ್ರಿಯಾಶೀಲವಾಗಿ ಇಟ್ಟುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.
‘ಯೋಗಕ್ಕೆ ಪೂರಕವಾಗಿರುವಂಥದ್ದು ಇಷ್ಟಲಿಂಗದೀಕ್ಷೆ. ಉತ್ತಮ ಅಂಕ ಹಾಗೂ ಒಳ್ಳೆಯ ಸಂಸ್ಕಾರದಿಂದರಬೇಕೆಂದರೆ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಳ್ಳಬೇಕು. ಪ್ರತಿತಿಂಗಳು ಒಂದನೇ ತಾರೀಖು ಸಾಣೇಹಳ್ಳಿ ಶ್ರೀಮಠದ ಬಸವ ಮಹಾಮನೆಯಲ್ಲಿ ಇಷ್ಟಲಿಂಗದೀಕ್ಷೆ ನೆರವೇರಲಿದೆ. ಇಷ್ಟಲಿಂಗ ದೀಕ್ಷೆ ಪಡೆದುಕೊಂಡ ಮಕ್ಕಳು ತರಗತಿಯಲ್ಲಿ ಓದಿದ್ದು, ಬರೆದದ್ದು, ಕೇಳಿದ್ದು ಮರೆಯೋದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಇಲ್ಲಿಯ ವಿದ್ಯಾರ್ಥಿಗಳು ಆಸಕ್ತಿ ಇರೋರು ಇಷ್ಟಲಿಂಗದೀಕ್ಷಾ ಸಂಸ್ಕಾರ ಪಡೆದುಕೊಳ್ಳಬಹುದು’ ಎಂದರು.
ಕ್ಲಿಕ್ ಮಾಡಿ ಓದಿ: ಉದ್ಯೋಗಾಸಕ್ತರಿಗೆ ಸುವರ್ಣಾವಕಾಶ | ವರ್ಷಾ ಅಸೋಸಿಯೇಟ್ಸ್ ಉಚಿತ ತರಬೇತಿ
‘ಸಂಸ್ಕಾರಗಳು ಹೊರಗಿನಿಂದ ಬರುವಂಥದ್ದಲ್ಲ. ನಮ್ಮೊಳಗಿನಿಂದ ಬೆಳೆಸಿಕೊಳ್ಳುವಂಥದ್ದು. ಆಗ ಬೆಳೆಸಿಕೊಂಡಾಗ ನಮ್ಮ ಬದುಕಿನ ದಿಕ್ಕು ಸರಿಯಾದ ದಾರಿಯ ಕಡೆ ಹೋಗಲಿಕ್ಕೆ ಸಾಧ್ಯ’ ಎಂದು ತಿಳಿಸಿದರು.
ಯೋಗ ಗುರು ದೇವೇಂದ್ರಪ್ಪ ನೇತೃತ್ವದಲ್ಲಿ ಮುಂಜಾನೆ 5.30 ರಿಂದ ಸುಮಾರು 600ಕ್ಕೂ ಹೆಚ್ಚು ಶಾಲಾ ಮಕ್ಕಳು, ಅಧ್ಯಾಪಕರು ಯೋಗಾಭ್ಯಾಸ ನಡೆಸಿದರು. ಅಧ್ಯಾಪಕಿ ಶೋಭ ಕಾರ್ಯಕ್ರಮ ನಡೆಸಿಕೊಟ್ಟರು. ಯೋಗ ಶಿಕ್ಷಕ ದೇವೇಂದ್ರಪ್ಪ ಹಾಗೂ ಅಣ್ಣಿಗೆರೆ ವಿರೂಪಾಕ್ಷ ಅವರನ್ನು ಅಭಿನಂದಿಸಲಾಯಿತು.