ಮುಖ್ಯ ಸುದ್ದಿ
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ | ಅಧಿಕೃತ ಘೋಷಣೆ ಮಾಡಿದ ಬಿಜೆಪಿ | ಕಾಂಗ್ರೆಸ್ಸಿನಿಂದ ಡಿ.ಟಿ.ಶ್ರೀನಿವಾಸ್
CHITRADURGA NEWS | 11 MAY 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಮುಗಿಯುತ್ತಲೇ ಶಿಕ್ಷಕರ ಕ್ಷೇತ್ರದ ರಾಜಕೀಯ ರಂಗೇರುತ್ತಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ವಿಧಾನ ಪರಿಷತ್ ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ಮಾಡಿಕೊಂಡಿವೆ.
ಈಗ ಬಿಜೆಪಿ ವಿಧಾನ ಪರಿಷತ್ತಿಗೆ ತನ್ನ ಅಭ್ಯರ್ಥಿಗಳನ್ನು ಇಂದು ಸಂಜೆ ಘೋಷಣೆ ಮಾಡಿದೆ. ಚಿತ್ರದುರ್ಗವೂ ಸೇರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೈ.ಎ.ನಾರಾಯಣಸ್ವಾಮಿ ಅಧಿಕೃತವಾಗಿ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ: ಭೀಮಸಮುದ್ರದಲ್ಲಿ 53 ಸಾವಿರ ದಾಟಿದ ಅಡಿಕೆ ರೇಟ್ | ಹೊಸನಗರ ಮಾರುಕಟ್ಟೆಯಲ್ಲಿ 54599 ರೂ.
ವೈ.ಎ.ನಾರಾಯಣಸ್ವಾಮಿ ಹಾಲಿ ಸದಸ್ಯರಾಗಿದ್ದು, ಬಿಜೆಪಿ ಮತ್ತೆ ಅವರಿಗೆ ಟಿಕೇಟ್ ಘೋಷಣೆ ಮಾಡಿರುವುದು ಸಹಜ ಸಂಗತಿಯಾಗಿದೆ.
ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು, ಹರಿಹರ ಹಾಗೂ ದಾವಣಗೆರೆ ನಗರ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಸೇರುತ್ತವೆ.
ಕಾಂಗ್ರೆಸ್ ವಲಯದಲ್ಲೂ ಭರ್ಜರಿ ಸಿದ್ಧತೆ:
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಕೂಡಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಭ್ಯರ್ಥಿ ಘೋಷಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೆ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ
ವಿಧಾನ ಪರಿಷತ್ತಿಗೆ ಕಾಂಗ್ರೆಸ್ 2023 ಅಕ್ಟೋಬರ್ ತಿಂಗಳಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಚಿತ್ರದುರ್ಗ ಸೇರಿರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ 7 ತಿಂಗಳ ಹಿಂದೆಯೇ ಘೋಷಣೆ ಆಗಿದ್ದಾರೆ.
ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ ಅಭ್ಯರ್ಥಿಯಾಗಿದ್ದು, ಚುನಾವಣಾ ಕಣ ರಂಗೇರಿದೆ.
ಇದನ್ನೂ ಓದಿ: ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ | ಜಯಬಸವ ದೇವರೆಂದು ನಾಮಕರಣ
ಹಾಲಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಆಗುವ ಮೊದಲೇ ಚಿತ್ರದುರ್ಗ ನಗರದಲ್ಲಿ ಚುನಾವಣಾ ಕಚೇರಿ ತೆರೆದು ಕೆಲಸ ಶುರು ಮಾಡಿದ್ದಾರೆ. ಅವರ ಪರವಾಗಿ ಈಗಾಗಲೇ ಶಿಕ್ಷಕರ ತಂಡಗಳು ಚುನಾವಣಾ ಪ್ರಚಾರ ಪ್ರಾರಂಭಿಸಿವೆ.
ಇನ್ನೂ ಡಿ.ಟಿ.ಶ್ರೀನಿವಾಸ್ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಈ ಹಿಂದೆ ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮದೇ ತಂಡ ಕಟ್ಟಿಕೊಂಡಿದ್ದರು.
ಇದನ್ನೂ ಓದಿ: ಮಾಡದಕೆರೆ, ಶ್ರೀರಾಂಪುರದಲ್ಲಿ ವ್ಯಾಪಕ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಇಲ್ಲಿದೆ ಮಾಹಿತಿ
ಈಗ ಆ ತಂಡ ಸಕ್ರೀಯವಾಗಿದ್ದು, ಶ್ರೀನಿವಾಸ್ ಕೂಡಾ ಒಂದೆರಡು ಸಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಈಗ ಅವರಿಗೆ ಪತ್ನಿ ಪೂರ್ಣಿಮಾ ಕೂಡಾ ಸಾಥ್ ನೀಡಿದ್ದು ಶಕ್ತಿ ಹೆಚ್ಚಾಗಿದೆ.
ಎರಡೂ ಕಡೆಯಿಂದಲೂ ಸಮಬಲದ ಹೋರಾಟವಿದ್ದು, ಜೂ.3 ರಂದು ನಡೆಯುವ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯತ್ತ ಎಲ್ಲರ ಗಮನ ನೆಟ್ಟಿದೆ.