ಮುಖ್ಯ ಸುದ್ದಿ
Constitution: ಸಂವಿಧಾನ ಸನ್ಮಾನ | ಕಾನೂನು ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜಿನಾಮೆ ಕೊಟ್ಟಿದ್ದೇಕೆ ?
CHITRADURGA NEWS | 28 NOVEMBER 2024
ಚಿತ್ರದುರ್ಗ: ಸಂವಿಧಾನ (Constitution) ರಚನೆ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರರು ಕಾನೂನು ಸಚಿವ ಸ್ಥಾನಕ್ಕೆ ಯಾಕೆ ರಾಜಿನಾಮೆ ಕೊಟ್ಟರು ಎನ್ನುವ ವಿಚಾರದ ಬೆನ್ನತ್ತಿದರೆ ಕಾಂಗ್ರೆಸ್ ಪಕ್ಷದ ಅನೇಕ ವಿಚಾರಗಳು ಬೆಳಕಿಗೆ ಬರುತ್ತವೆ ಎಂದು ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್ ಹೇಳಿದರು.
ಚಿತ್ರದುರ್ಗದ ಕ್ರೀಡಾಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಭಾರತದ ಸಂವಿಧಾನಕ್ಕೆ 75 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಸಂವಿಧಾನ ಸನ್ಮಾನ ಕಾರ್ಯಕ್ರಮದ ಮೂಲಕ ಜನವರಿ 26 ರವರೆಗೆ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಇದನ್ನೂ ಓದಿ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ದೇಶದ ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿದಷ್ಟು ಅಪಚಾರವನ್ನು ಬೇರಾರು ಮಾಡಿಲ್ಲ. ಹೀಗಿದ್ದೂ, ನಾವೇ ಸಂವಿಧಾನದ ರಕ್ಷಕರು ಎಂಬಂತೆ ಬಿಂಬಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಕಳೆದಿದೆ. ಈ ಅವಧಿಯಲ್ಲಿ ಸಂವಿಧಾನಕ್ಕೆ 106 ತಿದ್ದುಪಡಿ ಮಾಡಲಾಗಿದೆ. ಕಾಲ ಕಾಲಕ್ಕೆ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಿ ಎಂದು ಡಾ.ಬಿ.ಆರ್.ಅಂಬೇಡ್ಕರರೇ ಹೇಳಿದ್ದಾರೆ. ಆದರೆ, ಯಾರ ಅವಧಿಯಲ್ಲಿ ಯಾವ ಉದ್ದೇಶಕ್ಕೆ ತಿದ್ದುಪಡಿಗಳಾಗಿದೆ ಎನ್ನುವುದನ್ನು ನೋಡಿದಾಗ ಕಾಂಗ್ರೆಸ್ ಬಂಡವಾಳ ಬಯಲಿಗೆ ಬರುತ್ತದೆ ಎಂದರು.
ಕಾಂಗ್ರೆಸ್ ಆಡಳಿತವಿದ್ದಾಗ ಸಂವಿಧಾನಕ್ಕೆ 75 ತಿದ್ದುಪಡಿಯಾದರೆ, ಕಾಂಗ್ರೆಸ್ಸೇತರ ಸರ್ಕಾರಗಳ ಅವಧಿಯಲ್ಲಿ 31 ತಿದ್ದುಪಡಿ ಮಾಡಲಾಗಿದೆ.
ಇದನ್ನೂ ಓದಿ: ವಿವಿ ಸಾಗರದ ಒಳಹರಿವು ಮತ್ತಷ್ಟು ಹೆಚ್ಚಳ | ಭರ್ತಿಗೆ 1.40 ಅಡಿ ಬಾಕಿ
ರಾಯ್‍ಬರೇಲಿಯಿಂದ ಆಯ್ಕೆಯಾದ ಇಂದಿರಾಗಾಂಧಿ ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ಅಲಹಬಾದ್ ಹೈಕೋರ್ಟ್ 1975 ಜೂನ್ 12 ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಹೋಗಲಾಗುತ್ತದೆ. ಸುಪ್ರೀಂ ಕೋರ್ಟ್ ಏಕಸದಸ್ಯ ಪೀಠ ಅಲಹಬಾದ್ ಹೈಕೋರ್ಟ್ ತೀರ್ಪನ್ನು ಭಾಗಶಃ ಸತ್ಯವಾಗಿದೆ ಎನ್ನುತ್ತದೆ. ಆದರೆ, ಪ್ರಧಾನಮಂತ್ರಿಗ ಪ್ರಕರಣವಾದ್ದರಿಂದ ಇದನ್ನು ಹೆಚ್ಚು ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸುತ್ತಾರೆ.
ಅಷ್ಟರಲ್ಲಿ ಇಂದಿರಾಗಾಂಧಿ ತಮ್ಮ ಕುರ್ಚಿ ಅಲ್ಲಾಡುತ್ತಿದೆ ಎನ್ನುವುದನ್ನು ಅರಿತು ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುತ್ತಾರೆ. ಈ ಅವಧಿಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುತ್ತಾರೆ ಎಂದು ವಿವರಿಸಿದರು.
ಬಿಜೆಪಿ, ಸಂಘ ಪರಿವಾದವರು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಯೇ ಇಲ್ಲ ಎಂದು ಹೇಳುವ ಸಿದ್ದರಾಮಯ್ಯನವರು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಏಕೆ ಮಾತನಾಡಲಿಲ್ಲ. ಅವರಿಗಿಂತ ಕಿರಿಯರೆಲ್ಲಾ ಹೋರಾಡಿ ಜೈಲು ಸೇರಿದ್ದರು, ಕಾನೂನು ಪದವೀಧರರಾಗಿದ್ದರೂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ
ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಸಂವಿಧಾನ ನಡೆಯಲ್ಲ ಎಂದು ಹೋರಾಟ ಮಾಡಿದವರು. ಆದರೆ, ಕಾಂಗ್ರೆಸ್ ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಎಂದು ಪ್ರಚಾರ ಮಾಡುತ್ತಾರೆ. ನಿಜವಾಗಿ ಸಂವಿಧಾನದ ಉಳವಿಗೆ ಕೆಲಸ ಮಾಡಿರುವುದು ಬಿಜೆಪಿ ಎಂದರು.
ಈ ದೇಶದಲ್ಲಿ ಒಂದೇ ಕುಟುಂಬದವರು ಸಂವಿಧಾನವನ್ನು ಗುತ್ತಿಗೆ ಪಡೆದವರಂತೆ 43 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಕಾಶ್ಮೀರದಲ್ಲಿ ಕೂಡಾ ಇದೇ ಆಗಿದೆ. ಆದರೆ, ವಾಜಪೇಯಿ ಅವರ ಸರ್ಕಾರದಲ್ಲಿ ಬ್ಯಾಕ್‍ಲಾಗ್ ಹುದ್ದೆಗಳು ಪರಿಶಿಷ್ಟರಿಗೆ ಸೇರಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಹಿಂದುಳಿದ, ಎಸ್ಸಿ, ಎಸ್ಟಿ ಆಯೋಗ ರಚನೆಗೆ ತಿದ್ದುಪಡಿಗಳಾಗಿವೆ. ಮೀಸಲಾತಿ ವಿಸ್ತರಣೆಗೆ ತಿದ್ದುಪಡಿಗಳಾಗಿವೆ. ಎಂದೂ ಕೂಡಾ ಸ್ವಾರ್ಥದ ಉದ್ದೇಶಕ್ಕೆ ಮಾಡಿಲ್ಲ ಎನ್ನುವುದನ್ನು ದಾಖಲೆಗಳ ಮೂಲಕ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಾಬಾ ಸಾಹೇಬರು ಮುಂಬೈನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಸೋಲಿಸಿದ್ದು ಕಾಂಗ್ರೆಸ್. ಈ ವೇಳೆ ಜೋಗೇಂದ್ರನಾಥ್ ಮಂಡಲ್ ಅವರು ಪೂರ್ವ ಪಾಕಿಸ್ಥಾನ ಭಾಗದಲ್ಲಿ ಅಂಬೇಡ್ಕರರನ್ನು ಆಹ್ವಾನಿಸಿ ಗೆಲ್ಲಿಸುತ್ತಾರೆ. ಆದರೆ, ಕಾಂಗ್ರೆಸ್ ಆ ಭಾಗವನ್ನು ಬಾಂಗ್ಲಾ ದೇಶಕ್ಕೆ ಸೇರಿಸಿ ಭಾರತದ ಸಂಸತ್ತಿಗೆ ಬರದಂತೆ ಮಾಡುತ್ತಾರೆ. ಆನಂತರ ಕಾನೂನು ಸಚಿವರಾಗಿ ಬಂದಾಗ ಹಿಂದು ಕೋಡ್ ಬಿಲ್ ಗೆ ಮಾನ್ಯತೆ ಸಿಗದಿರುವುದು, ಒಬಿಸಿ ಮೀಸಲಾತಿಗೆ ತಕರಾರು, ಕಾನೂನು ಖಾತೆ ಬದಲು ಯೋಜನಾ ಖಾತೆ ಕೊಡಲು ನೆಹರು ಒಪ್ಪದಿರುವುದು, ದಲಿತರ ಕಡೆಗಣನೆ, 800 ವರ್ಷಗಳ ಕಾಲ ಆಡಳಿತ ನಡೆಸಿದ ಮುಸ್ಲೀಮರಿಗೆ ಆದ್ಯತೆ ನೀಡಿದ್ದು ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರೆ ಎಂದರು.
ಇದನ್ನೂ ಓದಿ: ವಿವಿ ಸಾಗರ ಕೋಡಿ ಬೀಳೋದು ಪಕ್ಕಾ | ಭದ್ರಾದಿಂದ ಜನವರಿವರೆಗೆ ನೀರು ಹರಿಸಲು ಆದೇಶ
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಅಂಬೇಡ್ಕರರ ವ್ಯಕ್ತಿತ್ವದಷ್ಟೇ ದೊಡ್ಡದು ಭಾರತದ ಸಂವಿಧಾನ. ದಿನೇ ದಿನೇ ಅಂಬೇಡ್ಕರ್ ಕುರಿತಂತೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಜಗತ್ತಿನಲ್ಲಿ ಹೆಚ್ಚಾಗುತ್ತಲೇ ಇದೆ ಎಂದು ಹೇಳಿದರು.
ಭಾರತದ ಸಂವಿಧಾನಕ್ಕೆ 75 ವರ್ಷ. ಅದನ್ನು ದೇಶದ ಎಲ್ಲ ಹಂತಗಳಲ್ಲೂ ಇನ್ನೂ ಚೆನ್ನಾಗಿ ಅಳವಡಿಸಿದರೆ ದೇಶವನ್ನು ಇನ್ನೂ ಉತ್ತಮವಾಗಿ ಮುನ್ನಡೆಸಬಹುದು. ಸಂವಿಧಾನವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂದಿನಿಂದ ಎರಡು ತಿಂಗಳ ಕಾಲ ಸಂವಿಧಾನ ಸನ್ಮಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತದ ಸಂವಿಧಾನ ಸರಳವಾಗಿದೆ. ಎಲ್ಲ ಸಂದರ್ಭಗಳಿಗೂ ಅದರಲ್ಲಿ ಪರಿಹಾರ ಇದೆ. ಸಂವಿಧಾನವನ್ನು ಹೆಚ್ಚು ಅಧ್ಯಯನ ಮಾಡಬೇಕು. ದಲಿತ ವರ್ಗಗಳನ್ನು ಹಿಂದೆ ಮನೆಯ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಈ ಎಲ್ಲಾ ಸಮಸ್ಯೆಗೆ ಸಂವಿಧಾನದಲ್ಲಿ ಪರಿಹಾರ ಒದಗಿಸಿ, ಅಸ್ಪೃಶ್ಯತೆ ಆಚರಣೆ ನಿμÉೀಧಿಸಿದೆ. ಬಸವಣ್ಣನವರು ಇದನ್ನು ವಿರೋಧಿಸಿದ್ದರು ಕಠಿಣ ಕಾನೂನು ಜಾರಿಗೆ ತಂದವರು ಅಂಬೇಡ್ಕರ್ ಎಂದರು.
ಇದನ್ನೂ ಓದಿ: 20 ವರ್ಷ ಮೇಲ್ಪಟ್ಟ ವಾಹನಗಳಿಗೆ ಬ್ರೇಕ್ ಹಾಕಿ | ಡಿಸಿ ವೆಂಕಟೇಶ್
ಇಂತಹ ಅಂಬೇಡ್ಕರರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದು ಗಂಭೀರ ವಿಷಯ. ಸಂವಿಧಾನವನ್ನು ಕಾಂಗ್ರೆಸ್ ದೇಶಾದ್ಯಂತ ಒಂದೇ ರೀತಿಯಲ್ಲಿ ಅಳವಡಿಸಲಿಲ್ಲ. ಜಮ್ಮು ಕಾಶ್ಮೀರಕ್ಕೆ ಅನ್ವಯ ಆಗುತ್ತಿರಲಿಲ್ಲ. ಕಾಶ್ಮೀರಕ್ಕೆ ನೆಹರು ಅವರು ವಿಶೇಷ ಸ್ಥಾನಮಾನ ಕೊಟ್ಟಿದ್ದರು. ಇದನ್ನು ಹೋಗಲಾಡಿಸಿದ್ದು ನರೇಂದ್ರ ಮೋದಿ ಸರ್ಕಾರ ಎಂದು ತಿಳಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದಾಗ ಇಡೀ ಬಿಜೆಪಿ ತಲೆಗೆ ಕಟ್ಟಿ ಕಾಂಗ್ರೆಸ್ ಪ್ರಚಾರ ಮಾಡಿತು. ಸಂಘ ಪರಿವಾರ ಸಂವಿಧಾನ ಬದಲಾಯಿಸುತ್ತದೆ ಎಂದು ಹೇಳಿದರು. ಆದರೆ, ಸಂಘ ಪರಿವಾರ ಅನಂತಕುಮಾರ ಹೆಗಡೆಯನ್ನೇ ಬದಲಾಯಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಅಭಿಯಾನ ಸಮಿತಿ ಅಧ್ಯಕ್ಷ ಜಿ.ಎಚ್.ಮೋಹನ್, ವಿಭಾಗ ಸಂಚಾಲಕ ಭೈರಪ್ಪ, ಸಹ ಸಂಚಾಲಕ ರಾಜಣ್ಣ, ಭಾರ್ಗವಿ ದ್ರಾವಿಡ್, ಸುರೇಶ್ ನಾಯ್ಕ್ ಇತರರಿದ್ದರು.