ಮುಖ್ಯ ಸುದ್ದಿ
Upper Bhadra Project: ಭದ್ರಾ ಮೇಲ್ದಂಡೆ ಯೋಜನೆ ಅನುದಾನ | ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ
CHITRADURGA NEWS | 10 SEPTEMBER 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೂಡಲೇ ₹ 5,300 ಕೋಟಿ ರೂ. ಘೋಷಿತ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಕೇಂದ್ರ ಸರ್ಕಾರದ ಕ್ರಮ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
2023-24ನೇ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವಂತೆ ಬರ ಸಂಭವನೀಯ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಜಯದೇವ ಕ್ರೀಡಾ ಜಾತ್ರೆ | ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಅನುಮೋದನೆಗೊಂಡಿರುವ ರಾಷ್ಟ್ರೀಯ ಯೋಜನೆಗೆ ರಾಜಕೀಯ ಉದ್ದೇಶದಿಂದ 2023ರ ಸಾರ್ವತ್ರಿಕ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಮುಂಗಡ ಪತ್ರದ ಭಾಷಣದಲ್ಲಿ ತಾವೇ ಘೋಷಿಸಿದ ಘೋಷಣೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹಿಂದೆಟು ಹಾಕುತ್ತಿದೆ ಎಂದು ದೂರಿದರು.
ಅನುದಾನದ ವಿಚಾರದಲ್ಲಿ ನ್ಯಾಯ ಪಡೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಚರ್ಚಿಸುತ್ತೇವೆ ಎಂದರು.
ಕೇಂದ್ರ ಸರ್ಕಾರವು 2023ರ ಮಾರ್ಚ್ 20 ರಂದು ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟ ಎಲ್ಲ ಹಂತದ ಮಂಜೂರಾತಿಗಳು ದೊರೆತಿದ್ದು, ಇದು ರಾಷ್ಟ್ರೀಯ ಯೋಜನೆಗಾಗಿ ಘೋಷಣೆ ಮಾಡಲು ಎಲ್ಲ ಅರ್ಹತೆ ಪಡೆದಿದೆ ಎಂದು ತಿಳಿಸಿರುತ್ತಾರೆ ಎಂದರು.
ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು 2024ರ ಜೂನ್ 9, ಆಗಸ್ಟ್ 3 ಹಾಗೂ 16 ರಂದು ಬರೆದ ಪತ್ರಕ್ಕೆ ಉತ್ತರ ಬರೆದ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಅನುದಾನ ನೀಡಲು ನಿರಾಕರಿಸಿದೆ. ಷರತ್ತುಗಳಂತೆ ಎಲ್ಲ ಹಂತಗಳಲ್ಲೂ ಅನುಮೋದನೆಗೊಂಡು ಮುಂಗಡ ಪತ್ರದಲ್ಲಿ ಘೋಷಣೆಯಾಗಿರುವ ಯೋಜನೆಗೆ ಈಗ ನಿರಾಕರಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಉನ್ನತ ಸಂಪ್ರದಾಯಗಳಿಗೆ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಹೊಸಪೇಟೆಯಲ್ಲಿ ಚಿತ್ರದುರ್ಗದ ಸ್ವಾಮೀಜಿ ಬಂಧನ | ಬರೋಬ್ಬರಿ ₹35 ಲಕ್ಷ ವಶ
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾವ ಪಕ್ಷದ್ದೇ ಆಗಿರಲಿ ಪಕ್ಷಪಾತ ರಹಿತವಾಗಿ ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ತಿಲಾಂಜಲಿ ಇಡುತ್ತಿದೆ ಎಂದು ಟೀಕಿಸಿದರು.