ಲೋಕಸಮರ 2024
ಬೀದಿಗೆ ಬಿದ್ದ ಹಾಲಿ-ಮಾಜಿ ಶಾಸಕರ ವಾಕ್ಸಮರ | ಶಾಸಕ ಎಂ.ಚಂದ್ರಪ್ಪ ವಿರುದ್ಧ ತಿಪ್ಪಾರೆಡ್ಡಿ ವಾಗ್ದಾಳಿ | ಚಂದ್ರಪ್ಪ ಆರೋಪಗಳಿಗೆ ಠಕ್ಕರ್

CHITRADURGA NEWS | 30 MARCH 2024
ಚಿತ್ರದುರ್ಗ: ದುರ್ಗದ ರಾಜಕಾರಣದಲ್ಲಿ ರಾಜಕಾರಣಿಗಳಿಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದ್ದು ತೀರಾ ಅಪರೂಪ. ವಿರೋಧ ಪಕ್ಷವಾಗಿದ್ದರೂ ಒಂದು ಸಾಮರಸ್ಯ ಇರುತ್ತಿತ್ತು. ಒಂದು ವೇಳೆ ಪರಸ್ಪರ ಅಸಮಧಾನವಿದ್ದರೂ ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ಬಹಿರಂಗವಾಗಿದ್ದಿಲ್ಲ.
ಆದರೆ, ಲೋಕಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪುತ್ರ ಎಂ.ಸಿ.ರಘುಚಂದನ್‍ಗೆ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಧಾನ ತೀವ್ರಗೊಂಡಿದೆ.
ಶಾಸಕ ಎಂ.ಚಂದ್ರಪ್ಪ ಮೂರು ದಿನಗಳ ಹಿಂದೆ ಪರೋಕ್ಷವಾಗಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಸೋತವರನ್ನು ಕರೆತಂದು ಎಂಎಲ್ಸಿ ಮಾಡಿದ್ದು ನಾನು, ದುರ್ಗದ ಲೋಕಲ್ ಲೀಡರ್‍ಗಳು ನನ್ನ ಮಗನಿಗೆ ಟಿಕೇಟ್ ಸಿಗದಂತೆ ನಾಯಕರ ಬಳಿ ಚಾಡಿ ಹೇಳಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು.

ಇದನ್ನೂ ಓದಿ: ನಾನು ನಂಬಿದವರೇ ನನ್ನ ಕತ್ತು ಕೊಯ್ದರು | ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಚಂದ್ರಪ್ಪ ವಾಗ್ದಾಳಿ
ಶುಕ್ರವಾರ ನಡೆದ ಬೆಂಬಲಿಗರ ಸಭೆಯಲ್ಲೂ ಚಂದ್ರಪ್ಪ ತಿಪ್ಪಾರೆಡ್ಡಿ ವಿರುದ್ಧ ಸಿಡಿಮಿಡಿಗೊಂಡಿದ್ದರು. ಹೇ.. ಲೋಕಲ್ ಲೀಡರ್ ಎಂದು ವ್ಯಂಗ್ಯವಾಡಿದ್ದರು.
ಇದರೊಟ್ಟಿಗೆ ಅವರ ಪುತ್ರ ರಘುಚಂದನ್ ಕೂಡಾ ಚಿತ್ರದುರ್ಗದಲ್ಲಿ ಕೆಲವರು ಕಳ್ಳಿ ನರಸಪ್ಪನ ಕೆಲಸ ಮಾಡುವ ಮೂಲಕ ನನಗೆ ಟಿಕೇಟ್ ಸಿಗದಂತೆ ನೋಡಿಕೊಂಡಿದ್ದಾರೆ ಎಂದು ದೂರಿದ್ದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್‍ಐಆರ್ | ಕಪ್ಪು ಭಾವುಟ ಪ್ರದರ್ಶನ, ಮೊಟ್ಟೆ ಎಸೆಯಲು ನಡೆದಿತ್ತಾ ಪ್ಲಾನ್ !
ಈ ಹಿನ್ನೆಲೆಯಲ್ಲಿ ಇಂದು ಮಾ.30 ಶನಿವಾರ ಬೆಳಗ್ಗೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಮ್ಮ ಮನೆಯ ಅಂಗಳದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುಮಾರು 40 ನಿಮಿಷ ಸುಧೀರ್ಘವಾಗಿ ಮಾತನಾಡಿದ ಅವರು, ಇಷ್ಟು ದಿನ ನಾನು ಏಕವಚನ ಬಳಕೆ ಮಾಡಿರಲಿಲ್ಲ. ಇನ್ನು ಮುಂದೆ ಏಕವಚನದಲ್ಲೇ ಮಾತನಾಡುತ್ತೇನೆ ಎಂದು ಮಾತು ಆರಂಭಿಸಿದರು.
ನಾನು 1967ರಲ್ಲೇ ಲೋಕಸಭೆ ಚುನಾವಣೆಯ ಉಸ್ತುವಾರಿ ಹೊತ್ತಿದ್ದೆ. ಆಗ ಈ ಮಹಾನ್ ನಾಯಕ ಇನ್ನೂ ನಿಕ್ಕರ್ ಹಾಕುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಆತ ಯಡಿಯೂರಪ್ಪನಿಗಿಂತ ಮೇಲಿನ ನಾಯಕ. 1971 ರಿಂದ ಈವರೆಗೆ ಎಲ್ಲ ಲೋಕಸಭೆ ಚುನಾವಣೆಗಳಲ್ಲಿ ಈ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಇಡೀ ಕ್ಷೇತ್ರದಲ್ಲಿ ಪಕ್ಷಕ್ಕೆ ಪರ, ವಿರೋಧ, ಜಾತಿ ಲೆಕ್ಕಾಚಾರ, ಹಿನ್ನೆಲೆ ಗೊತ್ತಿರುವ ರಾಜ್ಯದ ಕೆಲವೇ ನಾಯಕರಲ್ಲಿ ನಾನೂ ಒಬ್ಬ ಎಂದರು.
ಇದನ್ನೂ ಓದಿ: ಬೈದವರನ್ನು ಬಂಧು ಎನ್ನಿ…ಯಾರನ್ನೂ ಏನೂ ಅನ್ನಬೇಡಿ | ಗೋವಿಂದ ಎಂ.ಕಾರಜೋಳ
ನಮ್ಮ ಪಕ್ಷದ ವರಿಷ್ಠರು ಮಾಹಿತಿ ಕೇಳಿದಾಗ ಈ ಪೋತಪ್ಪ ನಾಯಕನಿಗೆ ಹೆದರಿಕೊಂಡು ಮಾಹಿತಿ ಕೊಡದೆ ಇರಲು ಆಗಲ್ಲ. ತಳ ಮಟ್ಟದಿಂದ ಕೆಲಸ ಮಾಡಿ ಮೇಲೆ ಬಂದವನು ನಾನು. ಕಳೆದ ಎರಡು ತಿಂಗಳಿಂದ ನಾನು ಯಡಿಯೂರಪ್ಪ ವಿಜಯೇಂದ್ರ ಅವರನ್ನು ಭೇಟಿಯೇ ಆಗಿಲ್ಲ. ಇಲ್ಲಿ ನಾನು ಟಿಕೇಟ್ ತಪ್ಪಿಸುವ ಪ್ರಶ್ನೆಯೇ ಇಲ್ಲ.
ಕೋಲಾರದಲ್ಲಿ ಜೆಡಿಎಸ್ ಜತೆ ನಮ್ಮ ಪಕ್ಷದ ಹೊಂದಾಣಿಕೆ ಆಗಿದೆ. ಅಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಭೋವಿ ಸಮುದಾಯಕ್ಕೆ ಟಿಕೇಟ್ ಕೊಡಲಾಗಿದೆ. ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ವರಿಷ್ಠರು ಗೋವಿಂದ ಕಾರಜೋಳಗೆ ಟಿಕೆಟ್ ನೀಡಿದ್ದಾರೆ. ಪೋತಪ್ಪ ನಾಯಕನ ಮಗನಿಗೆ ಟಿಕೇಟ್ ಸಿಗುವ ಭಾವನೆ ಇರಲಿಲ್ಲ. ಹಿಂದಿನ ಚುನಾವಣೆಯಲ್ಲಿ ನಾರಾಯಣಸ್ವಾಮಿಗೆ ಟಿಕೇಟ್ ಕೊಡಿಸಿದ್ದು ನಾನೇ.
1979ರಲ್ಲಿ ಪುರಸಭೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ವ್ಯಕ್ತಿ ಎಂಎಲ್ಸಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದೆ ಎಂದು ಹೇಳುತ್ತಿದ್ದಾನೆ.
ಅವನು ಸತ್ತರೆ 20ಸಾವಿರ ಜನ ಬರುತ್ತಾರೆ, ನಾನು ಸತ್ತರೆ 4 ಜನ ಸೇರಲ್ಲ ಅಂದಿದ್ದಾನೆ. ಅದನ್ನು ಹೇಗೆ ನಾವು ಟ್ರಯಲ್ ನೋಡುವುದು ಎಂದು ಜಿ.ಎಚ್.ತಿಪ್ಪಾರೆಡ್ಡಿ ವ್ಯಂಗ್ಯವಾಡಿದರು.
ಯಡಿಯೂರಪ್ಪ ವಿರುದ್ಧ ಮಾತನಾಡುವ ಇವರಿಗೆ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಸ್ಥಾನ ಕೊಡಿಸಿ ಮುಂದೆ ಪೊಲೀಸ್ ಜೀಪು ಹಾಕಿಸಿಕೊಂಡು ಸೈರನ್ ಹಾಕಿಕೊಂಡು ಓಡಾಡುವಂತೆ ಮಾಡಿದ್ದು, ಇದೇ ಯಡಿಯೂರಪ್ಪ ಆಶೀರ್ವಾದದಿಂದ ಎನ್ನುವುದು ಮರೆತಂತಿದೆ.
ಇದನ್ನೂ ಓದಿ: ಬಸವೇಶ್ವರ ಚಿತ್ರಮಂದಿರ ಮಾಲೀಕ ಸಿ.ಅಕ್ಕಿರೆಡ್ಡಿ ನಿಧನ
ನಿನ್ನೆ ಅವನು ಕರೆದ ಸಭೆಯಲ್ಲಿ ಕೆಲ ಬಿಜೆಪಿ ಬೆಂಬಲಿಗರು ಇದ್ದರು ಅಂತೆಯೇ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರು ಸಭೆಯಲ್ಲಿದ್ದರು. 1994ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದು ಗೃಹಮಂಡಳಿ ಅಧ್ಯಕ್ಷ ಆಗಿದ್ದೆನು. ಎರಡನೇ ಸಲವು ಪಕ್ಷೇತರ ಶಾಸಕನಾಗಿ ಗೆದ್ದಿದ್ದೆ.
ಹೊಳಲ್ಕೆರೆ ಬಿಜೆಪಿ ಪ್ರಭಾವವಿರುವ ಕ್ಷೇತ್ರ ಅಲ್ಲಿ ಯಾರು ಸ್ಪರ್ಧಿಸಿದರೂ ಬಿಜೆಪಿ ಗೆಲ್ಲುತ್ತದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್‍ಐಆರ್ | ಕಪ್ಪು ಭಾವುಟ ಪ್ರದರ್ಶನ, ಮೊಟ್ಟೆ ಎಸೆಯಲು ನಡೆದಿತ್ತಾ ಪ್ಲಾನ್ !
ಸುದ್ದಿಗೋಷ್ಟಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ, ಮಾಳಪ್ಪನ ಹಟ್ಟಿ ಈಶ್ವರಪ್ಪ, ಕವನ, ಅರುಣ್, ಮೈಲಾರಪ್ಪ, ಲೋಕೇಶ್, ಸುರೇಶ್, ರಾಮಣ್ಣ, ರವಿ ಮತ್ತಿತರರಿದ್ದರು.
