ಮುಖ್ಯ ಸುದ್ದಿ
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ | ಮುರುಳಿ ಪುನರಾಯ್ಕೆ | ಹನುಮಂತೇಗೌಡ ಮಧುಗಿರಿ ಸಾರಥ್ಯ | ಆಯ್ಕೆಯ ಹಿಂದಿವೆ ನಾನಾ ಲೆಕ್ಕಾಚಾರ
CHITRADURG NEWS | 15 JANUARY 2024
ಚಿತ್ರದುರ್ಗ: ಬಿಜೆಪಿಯಲ್ಲಿ ಈ ವರ್ಷ ಕೋಟೆನಾಡು ಚಿತ್ರದುರ್ಗಕ್ಕೆ ಬಂಪರ್ ಕೊಡುಗೆ ಸಿಕ್ಕಿದೆ ಎನ್ನಬಹುದು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಎ.ಮುರುಳಿ, ಮಧುಗಿರಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ಸಿ.ಹನುಮಂತೇಗೌಡ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಮೂಲದ ಇಬ್ಬರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿದಿರುವುದು ವಿಶೇಷವಾಗಿದೆ. ಇನ್ನೂ ವಿಶೇಷ ಅಂದ್ರೆ, ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ರಾಜ್ಯ ನಾಯಕರು ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎ.ಮುರುಳಿ ಪುನರಾಯ್ಕೆ
ಇದರೊಟ್ಟಿಗೆ ಬಿಜೆಪಿ ರಾಜ್ಯ ವಕ್ತಾರರಾಗಿ ಕೆ.ಎಸ್.ನವೀನ್ ಕೂಡಾ ಇರುವುದು ಜಿಲ್ಲೆಯ ಬಲವನ್ನು ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಹೆಚ್ಚಿಸಿದಂತಾಗಿದೆ.
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯದಲ್ಲಿ ಹೊಸ ತಂಡ ಕಟ್ಟಿಕೊಂಡು ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಜಿಲ್ಲಾ ಅಧ್ಯಕ್ಷರ ಬಗ್ಗೆ ಸಹಜವಾಗಿ ಎಲ್ಲರಿಗೂ ತೀವ್ರ ಕುತೂಹಲವಿತ್ತು.
ಅದರಂತೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬರೋಬ್ಬರಿ 16 ಜನ ಆಕಾಂಕ್ಷಿಗಳಿದ್ದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಚಿತ್ರದುರ್ಗ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬೆಂಬಲಿಗರು, ಅವರು ನಮ್ಮ ಪರ ಇದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಇದನ್ನೂ ಓದಿ: ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಹನುಮಂತೇಗೌಡ ಆಯ್ಕೆ
ಆದರೆ, ಎಲ್ಲ ಆಕಾಂಕ್ಷಿಗಳು ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರಿಗೆ ರಾಜ್ಯ ನಾಯಕರು ಶಾಕ್ ಆಗುವಂತೆ ಹಾಲಿ ಅಧ್ಯಕ್ಷ ಎ.ಮುರುಳಿ ಅವರನ್ನೇ ಮತ್ತೊಂದು ಅವಧಿಗೆ ಪುನರಾಯ್ಕೆ ಮಾಡಿರುವುದು ಅನಿರೀಕ್ಷಿತ ಬೆಳವಣಿಗೆ ಆಗಿದೆ.
ಮುರುಳಿ ಅವರ ಪುನರಾಯ್ಕೆಯ ಹಿಂದೆ ನಾನಾ ಲೆಕ್ಕಾಚಾರಗಳು ಇರಬಹುದು. ಸಾಲು ಸಾಲು ಆಕಾಂಕ್ಷಿಗಳಲ್ಲಿ ಒಬ್ಬರನ್ನು ಅಂತಿಮಗೊಳಿಸುವ ಉಸಾಬರಿಯೂ ಇರಬಹುದು.
ಗೊಲ್ಲ ಸಮುದಾಯದ ಮತಬುಟ್ಟಿ ಮೇಲೆ ಕಣ್ಣು:
ಒಂದು ಲೆಕ್ಕಾಚಾರದ ಪ್ರಕಾರ, ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿರುವ ಗೊಲ್ಲ ಸಮುದಾಯದ ಮತಬುಟ್ಟಿ ಮೇಲೆ ಬಿಜೆಪಿ ಕಣ್ಣಿಟ್ಟಿರುವ ಸಾಧ್ಯತೆ ಇದೆ.
ಮುಂದಿನ ಲೋಕಸಭೆಗೆ ಈ ಸಮುದಾಯದ ಮತಗಳು ಚಿತ್ರದುರ್ಗ, ತುಮಕೂರು ಭಾಗದಲ್ಲಿ ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಗೊಲ್ಲ ಸಮುದಾಯಕ್ಕೆ ಸೇರಿದ ಎ.ಮುರುಳಿ ಅವರನ್ನೇ ಮತ್ತೊಂದು ಅವಧಿಗೆ ಮುಂದುವರೆಸಿದರೆ ಸಮುದಾಯದ ಗಮನ ಸೆಳೆಯಬಹುದು. ಸಮುದಾಯದ ವಿಶ್ವಾಸ ಗಳಿಸಬಹುದು ಎನ್ನುವ ಲೆಕ್ಕಾಚಾರಗಳಿವೆ.
ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಡಿ.ಟಿ.ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಆ ಸಮುದಾಯವನ್ನು ಬಿಜೆಪಿಯಲ್ಲಿ ಹಿಡಿದಿಟ್ಟುಕೊಳ್ಳುವ ಸವಾಲು ಬಿಜೆಪಿ ಮುಂದಿತ್ತು.
ಈ ಕಾರಣಕ್ಕೆ ಪೂರ್ಣಿಮಾ ಅವರಿಗೆ ಟಕ್ಕರ್ ಕೊಡಲು ಬಿಜೆಪಿ ಈ ಗೇಮ್ ಪ್ಲಾನ್ ಮಾಡಿರುವ ಸಾಧ್ಯತೆಯೂ ಇದೆ ಎಂಬ ಕೂಡು ಕಳೆಯುವ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಗರಿಗೆದರಿವೆ.
ಹನುಮಂತೇಗೌಡಗೆ ಮಧುಗಿರಿ ಉಸ್ತುವಾರಿ:
ಇನ್ನೂ ಚಿತ್ರದುರ್ಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಬಿ.ಸಿ.ಹನುಮಂತೇಗೌಡ ಅವರನ್ನು ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕೂಡಾ ಅಚ್ಚರಿಯ ನಡೆಯಾಗಿದೆ.
ಹನುಮಂತೇಗೌಡ ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಮಧುಗಿರಿ ಉಸ್ತುವಾರಿ ನೀಡುವ ಮೂಲಕ ಅಲ್ಲಿ ರಾಜಕೀಯ ಭವಿಷ್ಯ ಗಟ್ಟಿ ಮಾಡಿಕೊಳ್ಳಲು ಸೂಚನೆ ಕೊಟ್ಟಂತಿದೆ.
ಈ ಹಿಂದೆ ಹನುಮಂತೇಗೌಡ ಹಿರಿಯೂರು ಕ್ಷೇತ್ರದಲ್ಲಿ ಹೆಚ್ಚು ಸಕ್ರೀಯರಾಗಿ ಓಡಾಟ ಮಾಡಿಕೊಂಡಿದ್ದರು. ಹಿರಿಯೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಕುಂಚಿಟಿಗ ಮತಗಳಿದ್ದ ಕಾರಣಕ್ಕೆ ಅಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು.
ಆದರೆ, ರಾಜ್ಯದ ಬಿಜೆಪಿ ನಾಯಕರು ಮಧುಗಿರಿಯಲ್ಲಿ ಓಡಾಡಲು ನೀಡಿದ್ದ ಸೂಚನೆಯಂತೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಹನುಮಂತೇಗೌಡ ಮಧುಗಿರಿ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು.
ಮೂಲತಃ ಇದೇ ಜಿಲ್ಲೆಯವರಾಗಿರುವ ಹನುಮಂತೇಗೌಡ, ಚಿತ್ರದುರ್ಗದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ, ಇಲ್ಲಿಯೇ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿಯೇ ಮದುವೆಯೂ ಆಗಿದ್ದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಎನ್ನುವ ಸಾಧ್ಯತೆಗಳನ್ನು ಲೆಕ್ಕ ಹಾಕಲಾಗುತ್ತಿತ್ತು.
ಆದರೆ, ಕಳೆದ ವಿಧಾನಸಭೆ ಚುನಾವಣೆ ವೇಳೆ ಮಧುಗಿರಿ ಕ್ಷೇತ್ರದಲ್ಲಿ ಓಡಾಡಿದ್ದ ಗೌಡರಿಗೆ ಈಗ ಅದೇ ಕ್ಷೇತ್ರದ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿರುವುದು ಭವಿಷ್ಯದಲ್ಲಿ ಇಲ್ಲಿ ನೆಲೆ ಕಂಡುಕೊಳ್ಳಲು ಅನುಕೂಲ ಆಗಲಿ ಎನ್ನುವ ಉದ್ದೇಶ ಇರಬಹುದು. ಜೊತೆಗೆ ಈ ಭಾಗದ ಒಕ್ಕಲಿಗ ಮತ ಸೆಳೆಯುವ ಉದ್ದೇಶವೂ ಇರಬಹುದು ಎನ್ನುವ ಲೆಕ್ಕಾಚಾರ ಇದೆ.