ಕ್ರೈಂ ಸುದ್ದಿ
ಮನೆಯಲ್ಲಿ ಅಕ್ರಮ ಸೇಂದಿ ಪತ್ತೆ | ಮಹಿಳೆಗೆ 1 ವರ್ಷ ಜೈಲು ಶಿಕ್ಷೆ
CHITRADURGA NEWS | 13 JANUARY 2024
ಚಿತ್ರದುರ್ಗ: ಅಕ್ರಮವಾಗಿ ಸೇಂದಿ ಮಾರಾಟ ಮಾಡಿದ್ದ ಮಹಿಳೆಗೆ ಜಿಲ್ಲಾ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ಅಬಕಾರಿ ಪೊಲೀಸರು ದಾಳಿ ನಡೆಸಿದ ವೇಳೆ ಚಿತ್ರದುರ್ಗ ನಗರದ ಭೋವಿ ಕಾಲೋನಿ ನಿವಾಸಿ ರಂಗಮ್ಮ ಎಂಬ ಮಹಿಳೆಯ ಮನೆಯಲ್ಲಿ 15 ಲೀಟರ್ ಸೇಂದಿ ಪತ್ತೆಯಾಗಿದ್ದು, ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದರು.
ಇದನ್ನೂ ಓದಿ: ಅಪರಾಧ ಕುರಿತ ತೀರ್ಮಾನಕ್ಕೆ ಪರಿಣಾಮಕಾರಿ ತನಿಖೆ ಅತ್ಯಗತ್ಯ
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ, ಆರೋಪ ಸಾಬೀತಾಗಿದ್ದರಿಂದ ಆರೋಪಿತರಿಗೆ 1 ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಂಡ ಕಟ್ಟದಿದ್ದ ಪಕ್ಷದಲ್ಲಿ 15 ದಿನಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಗುರುಮೂರ್ತಿ ವಾದ ಮಂಡಿಸಿದ್ದರು.