ಮುಖ್ಯ ಸುದ್ದಿ
ಮಳೆ ಆಗಮನಕ್ಕೆ ವಾತಾವರಣ ಸಜ್ಜು | ಕೊನೆಗೂ ಮುನಿಸು ತೊರೆದ ಮಳೆರಾಯ

CHITRADURGA NEWS | 4 APRIL 2024
ಚಿತ್ರದುರ್ಗ: ವಾತಾವರಣದಲ್ಲಿ ಪುನಃ ಬದಲಾವಣೆ ಕಾಣುತ್ತಿದ್ದು, ವರುಣದೇವ ಮುನಿಸು ತೊರೆದಿರುವ ಮುನ್ಸೂಚನೆ ಸಿಗುತ್ತಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ಪ್ರದೇಶದಲ್ಲಿ ಮಳೆಯ ಸಿಂಚನವಾಗಿದ್ದು ಇದಕ್ಕೆ ಸಾಕ್ಷಿಯಾಗಿದೆ.
ಬಿಸಿಲಿನ ತಾಪಕ್ಕೆ ಜೋಗಿಮಟ್ಟಿ ರಸ್ತೆಯ ಕೆಎಸ್‌ಆರ್‌ಟಿಸಿ ಬಡಾವಣೆ, ಮಾಸ್ತಮ್ಮ ಬಡಾವಣೆ ಪ್ರದೇಶದಲ್ಲಿ ಜನರು ವಾಯುವಿಹಾರ ಮಾಡುವಾಗ ಮಳೆ ಸಿಂಚನ ಅನುಭವವಾಗಿದೆ. ಅಬ್ಬಾ ಮಳೆ ಶುರುವಾಯಿತು ಎಂಬ ಸಂಭ್ರಮ ಮಿಂಚಿನಂತೆ ಮಾಯವಾಗಿದೆ. ಯುಗಾದಿ ಪೂರ್ವ ಮಳೆ ಶುಭಸೂಚಕ. ಈ ಬಾರಿ ಮಳೆಗಾಲ ಸಮೃದ್ಧಿಯಾಗಬಹುದು ಎಂಬ ಸ್ಥಳೀಯರ ನಿರೀಕ್ಷೆ ಹುಸಿಯಾಗಲಿಲ್ಲ.
ಕ್ಲಿಕ್ ಮಾಡಿ ಓದಿ: ಎಚ್ಚರ…ಮನೆಯಿಂದ ಹೊರ ಬರಬೇಡಿ | ಹೆಚ್ಚಿದೆ ಸೂರ್ಯನ ಆರ್ಭಟ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಗುರುವಾರದಿಂದ ನಾಲ್ಕು ದಿನ ಸಾಧಾರಣ ಮಳೆ ಆಗುವ ಸಾಧ್ಯತೆ ಹೆಚ್ಚಿವೆ.
ಗುರುವಾರ ಹಾಗೂ ಶುಕ್ರವಾರವೂ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಬಹುದು ಎಂದು ಇಲಾಖೆ ತಿಳಿಸಿದೆ.
6 ರಿಂದ ನಾಲ್ಕು ದಿನ ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಕೊಡಗು, ಮಂಡ್ಯ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಬಹದು ಎಂದು ಮುನ್ಸೂಚನೆ ನೀಡಿದೆ.
ಕ್ಲಿಕ್ ಮಾಡಿ ಓದಿ: ಶಾಸಕ ಚಂದ್ರಪ್ಪ ಮನೆಗೆ ಕಾರಜೋಳ ಭೇಟಿ | ಮಾತಿಗೆ ತಪ್ಪಲ್ಲ ಎಂದ ರಘುಚಂದನ್
ದಾವಣಗೆರೆ ತಾಲ್ಲೂಕಿನ ಆನಗೋಡು, ಮಾಯಕೊಂಡ ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಬಿರುಗಾಳಿಗೆ ಕೊಡಗನೂರು ಕ್ರಾಸ್ ಬಳಿ ಮರವೊಂದು ಬಿದ್ದಿದ್ದು, ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಹೆಬ್ಬಾಳು ಬಳಿಯೂ ಮಳೆ ಸುರಿದಿದೆ.
ಭದ್ರಾವತಿಯಲ್ಲಿ ಬುಧವಾರ 20 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ತಣ್ಣನೆಯ ಗಾಳಿ ಬೀಸಿ ಮೈ–ಮನಗಳನ್ನು ಮುದಗೊಳಿಸಿತು. ಗಾಳಿ–ಧೂಳು, ಗುಡುಗಿನೊಂದಿಗೆ ಪ್ರತ್ಯಕ್ಷನಾದ ಮಳೆರಾಯ ಬಂದಷ್ಟೇ ವೇಗವಾಗಿ ಮರೆಯಾದ.
