Connect with us

ಲೋಕಸಭೆ ಚುನಾವಣೆ | 600 ಜನರ ಮೇಲೆ ದೂರು ದಾಖಲಿಸಿದ ಪೊಲೀಸ್ ಇಲಾಖೆ

ಮುಖ್ಯ ಸುದ್ದಿ

ಲೋಕಸಭೆ ಚುನಾವಣೆ | 600 ಜನರ ಮೇಲೆ ದೂರು ದಾಖಲಿಸಿದ ಪೊಲೀಸ್ ಇಲಾಖೆ

CHITRADURGA NEWS | 24 FEBRUARY 2024

ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಅಧಿಕಾರಿಗಳು ಸರ್ವ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 600 ಜನರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ-2024 ಅಂಗವಾಗಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಈ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಬರ ತಂದ ಕಾಂಗ್ರೆಸ್ | ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ

ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಇಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದು, ಈ ಬಗ್ಗೆ ಉಪವಿಭಾಗಾಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ದೂರು ದಾಖಾಲಾಗಿರುವ ವ್ಯಕ್ತಿಗಳಿಂದ ಸೂಕ್ತ ರೀತಿಯ ಬಾಂಡ್‍ಗಳನ್ನು ತೆಗೆದುಕೊಳ್ಳುವುದು ಅಥವಾ ಗಡಿಪಾರು ಮಾಡುವ ಆದೇಶ ಹೊರಡಿಸಬೇಕಿದೆ ಎಂದು ಹೇಳಿದ್ದಾರೆ.

ಚುನಾವಣೆ ಕಾರ್ಯದಲ್ಲಿ ಪೊಲೀಸ್ ಇಲಾಖೆ ಹಿಂಬದಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕ ಆಡಳಿತದ ಅಧಿಕಾರಿಗಳೆ ಮುಂದೆ ನಿಂತು ಚುನಾವಣೆ ಕಾರ್ಯ ಜರುಗಿಸುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶುಕ್ರವಾರ ಮಾರುಕಟ್ಟೆಯಲ್ಲಿ ಯಾವ ಅಡಿಕೆ ರೇಟ್ ಎಷ್ಟಿತ್ತು

ಚುನಾವಣಾ ಅಕ್ರಮ ಕುರಿತಂತೆ ನೇರವಾಗಿ ಪೊಲೀಸರು ಪ್ರಕರಣ ದಾಖಲಿಸಲು ಬರುವುದಿಲ್ಲ. ಸಂಬಂಧಪಟ್ಟ ಚುನಾವಣೆ ಮ್ಯಾಜಿಸ್ಟ್ರೇಟ್‍ಗಳು ಪ್ರಕರಣದ ಕುರಿತು ದೂರು ದಾಖಲಿಸಬೇಕು. ಇದರ ಆಧಾರದಲ್ಲಿ ಪೊಲೀಸರು ಗುರುತಿಸಲಾಗದ ಅಪರಾಧ [Non cognizable] ಪ್ರಕರಣ ಎಂದು ವರದಿ ಮಾಡಿಕೊಂಡು, ನ್ಯಾಯಾಲಯದ ಅನುಮತಿ ಪಡೆದು ಎಫ್.ಐ.ಆರ್ ದಾಖಲಿಸುತ್ತಾರೆ ಎಂದು ತಿಳಿಸಿದರು.

ಇನ್ನೂ ಮತದಾನ ಮಾಡುವ ಇವಿಎಂ ಯಂತ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳಲ್ಲಿ ಸಾಗಿಸಬಾರದು. ಪ್ರತಿ ಬಾರಿಯೂ ಇವಿಎಂಗಳನ್ನು ಕೊಂಡಯ್ಯುವಾಗ ತಪ್ಪದೇ ಪೊಲೀಸ್ ರಕ್ಷಣೆ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಗ್ರಾನೈಟ್ ತುಂಬಿದ್ದ ಲಾರಿಗೆ ಈಚರ್ ಡಿಕ್ಕಿ, ಚಾಲಕ ಸಾವು

ಈಗಾಗಲೇ ಅಂತರಾಜ್ಯ ಗಡಿಗಳಲ್ಲಿ ಪೊಲೀಸ್ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಅಂತರ್ ಇಲಾಖೆ ಚೆಕ್ ಪೊಸ್ಟ್‍ಗಳನ್ನು ಸ್ಥಾಪಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಎಲ್ಲ ತಾಲೂಕುಗಳ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ವಸ್ತುಸ್ಥಿತಿ ಕುರಿತು ವರದಿ ಸಲ್ಲಿಸಿ. ಚುನಾವಣಾ ಆಯೋಗದ ನಿರ್ದೇಶನದಂತೆ ಮೂಲ ಸೌಕರ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಪಕ್ಷದ ತೀರ್ಮಾನಕ್ಕೆ ನಾನು ಬದ್ಧ | ಎ.ಮುರುಳಿ

ಮತಗಟ್ಟೆಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ, ವಿಕಲಚೇತರನರಿಗೆ ರ್ಯಾಂಪ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಮತಗಟ್ಟೆ ಕೇಂದ್ರಗಳಲ್ಲಿ ಇರಬೇಕು ಎಂದು ವಿವರಿಸಿದರು.

ಚುನಾವಣೆ ಆಯೋಗದ ನಿರ್ದೇಶನದಂತೆ ಅಗತ್ಯ ತುರ್ತು ಸೇವಾ ಕಾರ್ಯಗಳಲ್ಲಿ ತೊಡಗಿರುವ ಸಿಬ್ಬಂದಿ ಹೊರತು ಪಡಿಸಿ, ಉಳಿದ ಸಿಬ್ಬಂದಿ ಪಟ್ಟಿ ಸಿದ್ಧಪಡಿಸಿ ಚುನಾವಣೆ ಕಾರ್ಯಕ್ಕೆ ನಿಯೋಜಿಸಬೇಕು. ಚುನಾವಣೆ ಕಾರ್ಯಕ್ಕೆ ಬೇಕಾದ ಒಟ್ಟು ಸಿಬ್ಬಂದಿ ಬಲಕ್ಕೆ ಸರಿಸಮನಾಗಿ ಶೇ.20 ರಷ್ಟು ಸಿಬ್ಬಂದಿ ಬಲವನ್ನು ಹೆಚ್ಚುವರಿಯಾಗಿ ಕಾಯ್ದಿರಿಸಬೇಕು. ಈ ಕುರಿತು ಹೆಚ್.ಆರ್.ಎಂ.ಎಸ್ ತಂತ್ರಾಂಶದಿಂದ ಮಾಹಿತಿ ಪಡೆದುಕೊಳ್ಳಬೇಕು. ಚುನಾವಣೆ ಕಾರ್ಯಕ್ಕೆ ನಿಯುಕ್ತಿಗೊಂಡ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಬೇಕು. ಯಾವುದೇ ಸಿಬ್ಬಂದಿ ಮತದಾನ ಪ್ರಕ್ರಿಯೆಯಿಂದ ಹೊರ ಉಳಿಯಬಾರದು ಎಂದು ನಿರ್ವಹಣಾ ಸಮಿತಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಶುರುವಾಯ್ತು ಟಿಕೇಟ್ ಅಂದರ್-ಬಾಹರ್ ಆಟ

ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಚುನಾವಣೆ ಪ್ರಚಾರ ಕಾರ್ಯಕ್ಕೆ ನಿಗದಿ ಪಡಿಸಿದ ಸ್ಥಳಗಳನ್ನು ಗುರುತಿಸಿ, ಅಧಿಸೂಚನೆ ಹೊರಡಿಸಬೇಕು. ಚುನಾವಣೆ ಪ್ರಚಾರದ ಫ್ಲಕ್ಸ್, ಹೋರ್ಡಿಂಗ್ಸ್, ಬಂಟಿಂಗ್ಸ್‍ಗಳನ್ನು ಎಲ್ಲೆಂದರಲ್ಲಿ ಹಾಕಲು ಅನುಮತಿ ನೀಡದೆ ಇವುಗಳನ್ನು ನಿಗಧಿ ಮಾಡಿದ ಸ್ಥಳಗಳಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು. ಈ ಸ್ಥಳಗಳ ಬಾಡಿಗೆ ನಿಗಧಿಪಡಿಸಿ ಪರವಾನಿಗೆ ನೀಡಬೇಕು. ಯಾವುದೇ ಧಾರ್ಮಿಕ ಕೇಂದ್ರಗಳು, ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಕಟ್ಟಡಗಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಅನುಮತಿ ನೀಡಬಾರದು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಕಳೆದ ಚುನಾವಣೆಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ರಾಜ್ಯದ ಸರಾಸರಿ ಮತದಾನ ಪ್ರಮಾಣಕ್ಕಿಂತಲೂ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಜಿ.ಪಂ ಸಿಇಓ ನೇತೃತ್ವದ ಜಿಲ್ಲಾ ಸ್ವೀಪ್ ಸಮಿತಿ ನಗರ ಪ್ರದೇಶಗಳಲ್ಲಿ ಹೆಚ್ಚು ಮತದಾನದ ಜಾಗೃತಿ ಮೂಡಿಸಬೇಕು. ಈಗಾಗಲೇ ಸ್ವೀಪ್ ಸಮಿತಿ ಚುಟುವಟಿಕೆಗಳಿಗೆ ಬಿಡುಗಡೆಯಾದ ರೂ.11 ಲಕ್ಷ ಹಣವನ್ನು ಸ್ವೀಪ್ ಸಮಿತಿ ಅಧ್ಯಕ್ಷರಿಗೆ ವರ್ಗಾಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಇದನ್ನೂ ಓದಿ: ರಾಜವೀರ ಮದಕರಿ ನಾಯಕ ಸಿನಿಮಾ | ನಟ ದರ್ಶನ್ ಹೇಳಿದ್ದೇನು

ಸಭೆಯಲ್ಲಿ ಜಿ.ಪಂ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version