Connect with us

ಹಳ್ಳಿಯಲ್ಲಿ ಹೈಟೆಕ್ ಶಾಲೆ; ಕಲಿಕಾ ಪರಿಸರ ನಿರ್ಮಿಸಿದ ಹೆಡ್ ಮಾಸ್ಟರ್

ಹಳ್ಳಿಯಲ್ಲಿ ಹೈಟೆಕ್ ಶಾಲೆ; ಕಲಿಕಾ ಪರಿಸರ ನಿರ್ಮಿಸಿದ ಹೆಡ್ ಮಾಸ್ಟರ್

ಚಳ್ಳಕೆರೆ

ಹಳ್ಳಿಯಲ್ಲಿ ಹೈಟೆಕ್ ಶಾಲೆ; ಕಲಿಕಾ ಪರಿಸರ ನಿರ್ಮಿಸಿದ ಹೆಡ್ ಮಾಸ್ಟರ್

ಚಿತ್ರದುರ್ಗನ್ಯೂಸ್.ಕಾಂ: ಬಡತನ, ಹಸಿವಿನ ಸಂಕಷ್ಟಕ್ಕೆ ಶಿಕ್ಷಣ ಮಾತ್ರ ಪರಿಹಾರ ಎಂದು ಮನಗಂಡು ಶಾಲೆಗಳಲ್ಲಿ ಅತ್ಯುತ್ತಮ ಕಲಿಕಾ ಪರಿಸರ ಸೃಷ್ಟಿಸಿ ಮಕ್ಕಳ, ಗ್ರಾಮಸ್ಥರ ನೆಚ್ಚಿನ ಹೆಡ್ ಮಾಸ್ಟರ್ ಆಗಿರುವ ರಾಮಚಂದ್ರ ಮರೆಕ್ಕನವರ ಈ ಬಾರಿ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಾಲ್ವೆಯಲ್ಲಾಪುರ ಗ್ರಾಮದ ರಾಮಚಂದ್ರ ಮರೆಕ್ಕನವರ ಬಾಲ್ಯ ಕಡುಬಡತನದಲ್ಲೇ ಸಾಗಿತ್ತು. ಇದರ ನಡುವೆಯೂ ವಿದ್ಯಾಭ್ಯಾಸ ಪೂರ್ಣಗೊಳಿಸಿ 1990 ರಲ್ಲಿ ಸರ್ಕಾರಿ ಶಿಕ್ಷಕರಾಗಿ ನೇಮಕಗೊಂಡರು.

ನಾಯಕನಹಟ್ಟಿ ಸಮೀಪದ ದೊರೆಗಳಹಟ್ಟಿಯಲ್ಲಿ ಸಹ ಶಿಕ್ಷಕನಾಗಿ ವೃತ್ತಿ ಪ್ರಾರಂಭಿಸಿದರು. ಯಾವುದೇ ವರ್ಗಾವಣೆ ಬಯಸದೆ 18 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ 2008 ರಿಂದ ಈವರೆಗೂ ಜಾಗನೂರುಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡ್ತಿಮುಖ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಾಗನೂರುಹಟ್ಟಿ ಶಾಲೆಗೆ ಇವರು ಬಂದಾಗ ಇದ್ದ ಎರಡು ಶಿಥಿಲಾವಸ್ಥೆ ಕೊಠಡಿಗಳನ್ನು ಕಂಡು ಬೇಸರಗೊಂಡ ಇವರು ಶಾಲೆಗೆ ಕಾಯಕಲ್ಪ ನೀಡಲು ಮುಂದಾದರು. ಬಳಿಕ ನಡೆದಿದ್ದು ಅಭಿವೃದ್ಧಿ. 15 ವರ್ಷದಲ್ಲಿ ಹಂತ ಹಂತವಾಗಿ ಶಾಲೆಯ ಚಿತ್ರಣವನ್ನು ಬದಲಾಯಿಸಿ ಗ್ರಾಮೀಣ ಮಕ್ಕಳಿಗೆ ಹೈಟೆಕ್ ಕಲಿಕಾ ವಾತಾವರಣ ಸೃಷ್ಟಿಸಿದ್ದಾರೆ. ಶಾಲೆಗೆ ದಾಖಲಾದ ಒಂದು ಮಗುವು ಸಹ ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಂಡು ಶೇ 100 ರಷ್ಟು ಹಾಜರಾತಿ ಕಾಪಾಡಿಕೊಂಡಿರುವುದು ಶಾಲೆಯ ವಿಶೇಷ.

ಸರ್ಕಾರದ ಸೌಲಭ್ಯಗಳ ಜತೆಗೆ ಎಸ್‍ಡಿಎಂಸಿ ಸಹಕಾರದೊಂದಿಗೆ ದಾನಿಗಳ ನೆರವನ್ನು ಪಡೆದುಕೊಂಡು ಶಾಲೆಗೆ ಬೇಕಾದ ಎಲ್ಲ ಅಗತ್ಯ ಪರಿಕರಗಳನ್ನು ಒದಗಿಸಿದ್ದಾರೆ. ಕೇವಲ ಎರಡು ಶಿಥಿಲಾವಸ್ಥೆಯ ಕೊಠಡಿಗಳ ಶಾಲೆ ಇಂದು 7 ಹೊಸ ಕೊಠಡಿಗಳನ್ನು ಹೊಂದಿದೆ.

ಇದನ್ನೂ ಓದಿ: ಕಾಲ್ನಡಿಗೆಯ ಶಿಕ್ಷಕಿಗೆ ಸಂಧ ಗೌರವ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಸೌಭಾಗ್ಯ ಭಾಜನ

ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧಗೊಳಿಸಬೇಕೆಂದು ಇನ್‍ಫೋಸಿಸ್ ನೆರವು ಪಡೆದು ₹ 2 ಲಕ್ಷದಲ್ಲಿ ನಾಲ್ಕು ಕಂಪ್ಯೂಟರ್ ಖರೀದಿಸಿ ಶಾಲೆಯಲ್ಲಿ ನಿತ್ಯ ಒಂದು ಗಂಟೆ ಮಕ್ಕಳಿಗೆ ಕಂಪ್ಯೂಟರ್ ಕಲಿಸಲಾಗುತ್ತಿದೆ. ಧರ್ಮಸ್ಥಳದ ಸಂಘದ ನೆರವಿನಿಂದ ಶುದ್ಧ ಕುಡಿಯುವ ಘಟಕ, ಸಾಂಸ್ಕøತಿಕ ಚಟುವಟಿಕೆಗೆ ಧ್ವನಿವರ್ಧಕ, ಡೆಸ್ಕ್, ಆಟೋಪಕರಣ ಹೀಗೆ ಶಾಲೆಯಲ್ಲಿ ಯಾವುದಕ್ಕೂ ಕೊರತೆ ಬಾರದಂತೆ ವ್ಯವಸ್ಥೆ ಮಾಡಿದ್ದಾರೆ.

ಮಕ್ಕಳು ಶಾಲೆಗೆ ಗೈರಾಗುವುದನ್ನು ತಪ್ಪಿಸಲು ಸಕಾಲಕ್ಕೆ ಆರೋಗ್ಯ ತಪಾಸಣೆ, ಕಲಿಕಾ ಸಾಮಾಗ್ರಿ ವಿತರಣೆ, ಮನೆ ಮನೆಗೆ ಭೇಟಿ, ಶಿಕ್ಷಣ ಜಾಗೃತಿ ಜಾಥಾ ನಿರಂತರವಾಗಿ ಸಾಗಿವೆ. ಈ ಕಾರಣಕ್ಕೆ 15 ವರ್ಷದಿಂದ ಗ್ರಾಮದಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಿಲ್ಲ.

ಬಡತನದ ಕಾರಣಕ್ಕೆ ಏಳನೇ ತರಗತಿ ಬಳಿಕ ವಿದ್ಯಾಭ್ಯಾಸ ಮುಂದುವರೆಸುವುದಿಲ್ಲ ಎಂಬದನ್ನು ಅರಿತು ಮಗು ನಾಲ್ಕನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದಂತೆ ವಸತಿ ಶಾಲೆಗಳ ಪ್ರವೇಶಕ್ಕೆ ತರಬೇತಿ ಪ್ರಾರಂಭಿಸುತ್ತಿದ್ದಾರೆ. ಸ್ವತಃ ಖರ್ಚಿನಲ್ಲಿ ಅವರಿಗೆ ಮಕ್ಕಳ ಅರ್ಜಿ ಸಲ್ಲಿಸಿ ಅರ್ಹತೆ ಪಡೆದ ಮಕ್ಕಳನ್ನು ತಾವೇ ಪ್ರವೇಶಾತಿ ಮಾಡಿಸಿ ಶಾಲೆಗೆ ಕಳುಹಿಸುತ್ತಿದ್ದಾರೆ. ಪ್ರತಿ ವರ್ಷ ಐದರಿಂದ ಆರು ಮಕ್ಕಳು ವಸತಿ ಶಾಲೆಗೆ ಪ್ರವೇಶ ಪಡೆಯುತ್ತಿದ್ದಾರೆ.

ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಏಳನೇ ತರಗತಿವರೆಗೂ 146 ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಆವರಣದಲ್ಲಿ 25ಕ್ಕೂ ಹೆಚ್ಚು ಮರಗಳನ್ನು ಪೋಷಣೆ ಮಾಡುವ ಮೂಲಕ ಸುಂದರ ಪರಿಸರ ನಿರ್ಮಿಸಿದ್ದಾರೆ. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತವಾಗದೆ ದಾನಿಗಳ ನೆರವು ಪಡೆದು ಶಾಲೆಯನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ 55 ವರ್ಷದ ರಾಮಚಂದ್ರ ಮರೆಕ್ಕನವರ ಸಾಕ್ಷಿಯಾಗಿದ್ದಾರೆ.

ಬಾಲ್ಯದಲ್ಲಿ ನಾನು ಅನುಭವಿಸಿದ ಸಂಕಷ್ಟವೇ ಶಾಲೆ ಅಭಿವೃದ್ಧಿಗೆ ಸ್ಪೂರ್ತಿ. ಮಕ್ಕಳಿಗೆ ಉತ್ತಮ ಕಲಿಕಾ ಪರಿಸರ ಸೃಷ್ಟಿಸಿದರೆ ಅವರ ಕಲಿಕೆ ಸಹ ಪ್ರಗತಿ ಸಾಧಿಸುತ್ತದೆ. ದಾನಿಗಳ ನೆರವು, ಇಲಾಖೆಯ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಯಿತು.
ರಾಮಚಂದ್ರ ಮರೆಕ್ಕನವರ, ಬಡ್ತಿ ಮುಖ್ಯ ಶಿಕ್ಷಕ, ಜಾಗನೂರುಹಟ್ಟಿ

 

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ  https://www.facebook.com/chitradurganews?mibextid=ZbWKwL)

(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.

 https://chat.whatsapp.com/EQUQpKalYFT1fVcJDTDjCk)

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version