ಮುಖ್ಯ ಸುದ್ದಿ
ಶ್ರೀರಾಮಲಲ್ಲಾ ದರ್ಶನವಾಗುತ್ತಲೇ ನೂರಾರು ಸಂತರ ಆನಂದಭಾಷ್ಪ | ಅಯೋಧ್ಯೆಯ ಅನುಭವವನ್ನು ಚಿತ್ರದುರ್ಗ ನ್ಯೂಸ್ ಜೊತೆ ಹಂಚಿಕೊಂಡ ಮಠಾಧೀಶರು
CHITRADURGA NEWS | 22 JANUARY 2024
ಚಿತ್ರದುರ್ಗ: ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಮಂದಿರದ ಎದುರಿನಲ್ಲಿ ಕುಳಿತಿದ್ದವರಿಗೆ ಎಲ್‍ಇಡಿ ಪರದೆ ಮೂಲಕ ಶ್ರೀಬಾಲರಾಮನನ್ನು ದರ್ಶನ ಮಾಡಿಸಲಾಯಿತು. ಈ ವೇಳೆ ನೆರೆದಿದ್ದ ನೂರಾರು ಸಂತರ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯುವುದನ್ನು ಕಣ್ಣಾರೆ ಕಂಡೆ. ನಮ್ಮ ಜೀವನ ಸಾರ್ಥಕವಾಯಿತು ಎನ್ನುವ ಉದ್ಘಾರಗಳು ಮೊಳಗಿದವು.
ಶ್ರೀರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಗಾಗಿ ಅಯೋಧ್ಯೆಗೆ ತೆರಳಿದ್ದ ಕೋಟೆನಾಡಿನ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಕಣ್ಣಾರೆ ಕಂಡ ದೃಶ್ಯವಿದು.
ಇದನ್ನೂ ಓದಿ: ಅಯೋಧ್ಯೆ ಭವ್ಯ ಮಂದಿರದಲ್ಲಿ ಬಾಲರಾಮ ವಿರಾಜಮಾನ
500 ವರ್ಷಗಳ ಕಾಲ ಹೋರಾಟ ನಡೆದು, ಇಂದು ಒಂದು ಅಂತ್ಯ ಕಾಣಲು ಇದರ ಹಿಂದಿದ್ದ ಶಕ್ತಿಯೆ ಶ್ರೀರಾಮ ಎಂದು ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕ ಸಂತರು ಮಾತನಾಡಿಕೊಳ್ಳುತ್ತಿದ್ದರು ಎಂದು ಶ್ರೀಗಳು ತಿಳಿಸಿದ್ದಾರೆ.
ಅಂಥದ್ದೊಂದು ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮಗೆ ಅವಕಾಶ ಸಿಕ್ಕಿದ್ದು ಪುಣ್ಯ. ಇದು ಈ ಕಾಲಘಟ್ಟದ ಅವಿಸ್ಮರಣೀಯ ಸಂದರ್ಭ. ಮೂರು ವರ್ಷದ ಹಿಂದೆ ಇದೇ ಮಂದಿರದ ಭೂಮಿ ಪೂಜೆಗೆ ತೆರಳಿದ್ದೆ. ಆಗ ಇದ್ದ ಅಯೋಧ್ಯೆಗೂ, ಈಗ ನೋಡುತ್ತಿರುವ ಅಯೋಧ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ.
ಇಲ್ಲಿನ ಪ್ರತಿ ಮನೆ, ಗಲ್ಲಿಗಳಲ್ಲೂ ರಾಮ ಎದ್ದು ಕುಳಿತಿದ್ದಾನೆ. ಸೌಹಾರ್ಧತೆ ಮನೆ ಮಾಡಿದೆ ಎಂದು ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದ್ದಾರೆ.
ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಯ ನಂತರ ಆಡಿದ ಮಾತುಗಳು ದೇಶದ ದಿಕ್ಕನ್ನು ಬದಲಿಸುವಂತಿವೆ.
ಇದನ್ನೂ ಓದಿ: ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಎದುರಿನಲ್ಲಿ ಕರುನಾಡಿನ ಶ್ರೀಗಳು
ಯಾವ ವಿರೋಧವೂ ಇಲ್ಲದೆ ವಿಕಾಸದ ಬಗ್ಗೆ ಮಾತನಾಡಿದ್ದಾರೆ. ರಾಮನೆಂದರೆ ಶಾಂತಿ, ಸೌಹಾರ್ಧತೆ, ಸಂಸ್ಕøತಿ, ಸುಂದರತೆ, ಸಂಸ್ಕಾರ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ ಎಂದರು.
ಸುಂದರ, ಸ್ವಚ್ಛ ಅಯೋಧ್ಯೆಯನ್ನು ನೋಡಿದೆವು. ಇಡೀ ಕಾರ್ಯಕ್ರಮದ ಆಯೋಜನೆ ಬಹಳ ಅಚ್ಚುಕಟ್ಟಾಗಿತ್ತು. ಇಲ್ಲಿ ಭಾಗವಹಿಸಿದ್ದ ಭಕ್ತಾದಿಗಳು, ಸ್ವಯಂಸೇವಕರು ಸೇವೆ, ಸಹಭಾಳ್ವೆಯನ್ನು ಸಾರಿ ಹೇಳುತ್ತಿದ್ದರು. ಅಯೋಧ್ಯೆಯಲ್ಲಿನ ಗಲ್ಲಿ ಗಲ್ಲಿಯ ಮನೆ ಮನೆಗಳಲ್ಲೂ ರಾಮ ರಾಮ ಎನ್ನುವ ಮಾತುಗಳೇ ಕೇಳಿ ಬರುತ್ತಿವೆ ಎಂದು ಶ್ರೀಗಳು ಅನುಭವ ಹಂಚಿಕೊಂಡಿದ್ದಾರೆ.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಅಯೋಧ್ಯೆಯಂತೆ ಇಡೀ ದೇಶ ಸ್ವಚ್ಛ, ಸುಂದರ ನಗರವಾಗಬೇಕು. ದೇಶದ ಎಲ್ಲ ಧಾರ್ಮಿಕ ಕ್ಷೇತ್ರಗಳು ಮೌಢ್ಯ, ಅಂಧಕಾರ ತೊಡೆದು ಸ್ವಚ್ಛವಾಗಬೇಕು. ಈಗ ಅಯೋಧ್ಯೆ ಸದ್ಗುಣ, ಸಂಪನ್ನ, ಸದ್ಬಾವನೆಗಳ ನಗರವಾಗಿ ಪರಿವರ್ತನೆಯಾಗಲು ಭದ್ರವಾದ ಬುನಾದಿ ಹಾಕಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ನೀಡಿದ ಸಂದೇಶ ಸಹಭಾಳ್ವೆ, ಸದ್ಭಾವನೆಗಳಿಗೆ ಸಂಬಂಧಿಸಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಯುವಕರಲ್ಲಿ ಶ್ರೀರಾಮ ಟ್ಯಾಟೂ ಟ್ರೆಂಡ್
ಹೊಸದುರ್ಗದ ಮಧುರೆ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭವ ಸಂಬಂಧ ಇದೆ. ಈಗ ಪ್ರಾಣಪ್ರತಿಷ್ಠಾಪನೆ ಆಗಿರುವ ರಾಮನ ಮೂರ್ತಿಯ ಶಿಲೆ ಕನ್ನಡ ನೆಲದ್ದು ಎನ್ನುವುದೇ ನಮ್ಮ ಹೆಮ್ಮೆ. ಇನ್ನೂ ಮುಂದುವರೆದು ಇದನ್ನು ಕೆತ್ತನೆ ಮಾಡಿದ ಶಿಲ್ಪಿ ಕರ್ನಾಟಕದವರು. ಮಂದಿರದ ನೆಲಹಾಸು ಕರ್ನಾಟಕದಿಂದ ತರಲಾಗಿದೆ ಎನ್ನುವ ಮಾತು ಕೇಳಿದ್ದೇವೆ.
ಇದಿಷ್ಟು ಈಗಿನ ವಿಷಯವಾದರೆ, ಶ್ರೀರಾಮ ಕರುನಾಡಿನುದ್ದಕ್ಕೂ ಸಂಚರಿಸಿದ್ದಾನೆ. ನಾವು ಹನುಮನ ನಾಡಿನಿಂದ ರಾಮನ ನಾಡಿಗೆ ಹೋಗಿ ಬಂದಿದ್ದೇವೆ ಎನ್ನುವ ಸಾರ್ಥಕ ಭಾವನೆ ಬಂದಿದೆ. ನಮ್ಮ ಪೂರ್ವಜನ್ಮದ ಪುಣ್ಯ, ಅವಿಸ್ಮರಣೀಯ ಕ್ಷಣ. ನಮ್ಮ ಕಾಲದಲ್ಲಿ ಮಂದಿರ ಲೋಕಾರ್ಪಣೆ ಆಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಸಂತರಿಗೆ ವೈಕುಂಠವೋ, ಕೈಲಾಸದಲ್ಲೋ ಇದ್ದೇವೆ ಎನ್ನುವ ಭಾವನೆ ಬಂದಿತ್ತು ಎಂದು ಕಾರ್ಯಕ್ರಮದ ವೈಶಿಷ್ಠ್ಯವನ್ನು ವರ್ಣಿಸಿದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, 500 ವರ್ಷಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ದೊರೆತಿದೆ. ಇಂದು ಭಾರತೀಯರಲ್ಲಿ ಧನ್ಯತಾ ಭಾವ ಮೂಡಿದೆ. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಿಂದ ಭಾರತೀಯರಿಗೆ ಆತ್ಮ ಚೈತನ್ಯ ಉಂಟಾಗಿದೆ.