ತಾಲೂಕು
ಎನ್‍ಇಪಿ ರದ್ಧತಿ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು

ಚಿತ್ರದುರ್ಗ ನ್ಯೂಸ್:
ಎನ್‍ಇಪಿ ರದ್ದು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಹಿರಿಯೂರಿನಲ್ಲಿಂದು ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು.
ಜಿಡ್ಡು ಹಿಡಿದಿದ್ದ ಬ್ರಿಟೀಷ್ ಮೂಲದ ಶಿಕ್ಷಣ ವ್ಯವಸ್ಥೆಗೆ ಹಿಂದಿನ ಸರ್ಕಾರ ಸಾಣೆ ಹಿಡಿದು ಹೊಸ ಶಿಕ್ಷಣ ನೀತಿ ರೂಪಿಸಿದ್ದು ಪ್ರಶಂಸಾರ್ಹ ವಿಚಾರವಾಗಿತ್ತು. ಇದರೊಟ್ಟಿಗೆ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವೇ 2020-21ನೇ ಸಾಲಿನಿಂದ ಇದನ್ನು ಮೊದಲ ಬಾರಿಗೆ ಅನುಷ್ಠಾನ ಕೂಡಾ ಮಾಡಿತ್ತು. ಆದರೆ, ಮೊದಲು ಜಾರಿ ಮಾಡಿದ ರಾಜ್ಯದಲ್ಲೇ ಹೊಸ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಮುಂದಾಗಿರುವುದು ಸರ್ಕಾರದ ಶಿಕ್ಷಣ ವಿರೋಧ ನೀತಿಯಾಗಿದೆ. ವಿದ್ಯಾರ್ಥಿಗಳ ಹಿತ ಬಲಿಕೊಟ್ಟು, ಪೂರ್ವಾಗ್ರಹ ಪೀಡಿತ ರಾಜಕಾರಣ ಮಾಡಲಾಗುತ್ತಿದೆ ಎಂದು ದೂರಿದರು.
ಎನ್‍ಇಪಿ ಅನ್ನು ಕೇಂದ್ರ ಸರ್ಕಾರ ತನ್ನ ಸ್ವಾರ್ಥ ಅಥವಾ ಮರ್ಜಿಗಾಗಿ ರೂಪಿಸಿಲ್ಲ. ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ಶಿಕ್ಷಣ ರಂಗದ ಎಲ್ಲ ತಜ್ಞರೊಂದಿಗೆ ಚರ್ಚೆ ನಡೆಸಿದೆ. ಈ ಕರಡಿನ ಆಧಾರದಲ್ಲೇ ಹೊಸ ನೀತಿ ರೂಪುಗೊಂಡಿದೆ. ಈಗ ಈ ಶಿಕ್ಷಣ ನೀತಿಯನ್ನು ವಿರೋಧಿಸುವವರು ಕರಡು ತಯಾರಾಗುವಾಗ, ಚಿಂತನ-ಮಂಥನ ನಡೆಯುವಾಗ ಯಾಕೆ ವಿರೋಧಿಸಲಿಲ್ಲ. ಎನ್‍ಇಪಿ ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರಿತವಾಗಿ ರೂಪುಗೊಂಡಿದೆ. ಹೀಗಿದ್ದು, ಎನ್‍ಇಪಿ ವಿರೋಧ ಯಾತಕ್ಕಾಗಿ, ಯಾವ ಶೈಕ್ಷಣಿಕ ಹಾಗೂ ತರ್ಕಬದ್ಧ ಕಾರಣಗಳು ನಿಮ್ಮ ಬಳಿಯಿವೆ ಎಂದು ಎಬಿವಿಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಎನ್‍ಇಪಿ ಸಾಧಕ-ಬಾಧಕಗಳ ಕುರಿತು ಬಹಿರಂಗವಾಗಿ ಚರ್ಚೆ ನಡೆಸಿ, ಸಂವಾದ ಮಾಡದೇ ರದ್ಧತಿ ಘೋಷಣೆ ಮಾಡಿ. ಇದನ್ನು ಮಾಡದೇ ಎನ್‍ಇಪಿ ಕೇವಲ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಅಸ್ತ್ರವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿಯೇ ಎನ್‍ಇಪಿ ರದ್ದು ಮಾಡುವ ಕುರಿತು ಘೋಷಣೆ ಮಾಡಿದ್ದೇವೆ ಎನ್ನುವವರು ಯಾವ ಶಿಕ್ಷಣ ತಜ್ಞರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದರಿ ಎನ್ನುವುದನ್ನು ಬಹಿರಂಗಪಡಿಸಿ ಎಂದು ಎಬಿವಿಪಿ ಸವಾಲು ಹಾಕಿದೆ.
ಕರ್ನಾಟಕ ಸರ್ಕಾರದ ಎನ್‍ಇಪಿ ರದ್ಧತಿಯ ನಿಲುವು ವಿದ್ಯಾರ್ಥಿಗಳನ್ನು ಕತ್ತಲೆಗೆ ದೂಡುವುದಿಲ್ಲವೇ ಎಂದು ನೂರಾರು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುದರ್ಶನ್ ನಾಯ್ಕ್, ಜಿಲ್ಲಾ ಸಹಸಂಚಾಲಕ ನಾಗೇಶ್, ತಾಲೂಕು ಸಂಚಾಲಕ ಮಂಜೇಶ್, ಚಿತ್ರದುರ್ಗ ತಾಲೂಕು ಸಂಚಾಲಕ ಕನಕರಾಜ್, ಸಹ ಸಂಚಾಲಕ ಧನುಷ್, ಕಾರ್ಯದರ್ಶಿ ಸುದೀಪ್, ರಾಮು, ವಿದ್ಯಾರ್ಥಿ ಪ್ರಮುಖ್ ರಮೇಶ್, ವಿವೇಕ್, ಬಾಲಾಜಿ, ವಿಕ್ರಮ್, ತಿಪ್ಪೇಶ್, ಅಜಯ್, ಮಧು, ಶ್ರೀನಿವಾಸ್, ಕಿರಣ್, ಹರ್ಷವರ್ಧನ್, ಮಾರುತಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
–
