Connect with us

ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ; ಚಿಕಿತ್ಸೆಗೆ ಸ್ಪಂದಿಸಿದ ಮಕ್ಕಳು

ಮುಖ್ಯ ಸುದ್ದಿ

ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ; ಚಿಕಿತ್ಸೆಗೆ ಸ್ಪಂದಿಸಿದ ಮಕ್ಕಳು

ಚಿತ್ರದುರ್ಗ ನ್ಯೂಸ್‌.ಕಾಂ

ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ತಾಲ್ಲೂಕಿನ ಬೀರಾವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಮಧ್ಯಾಹ್ನ ಶಾಲೆಯಲ್ಲಿ ಊಟ ಮಾಡಿದ 45 ವಿದ್ಯಾರ್ಥಿಗಳಲ್ಲಿ ನಾಲ್ಕಾರು ಮಕ್ಕಳಿಗೆ ವಾಂತಿ–ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಬಳಿಕ ಇನ್ನಿತರ ಕೆಲ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಕೂಡಲೇ ಮೂರು ಆಂಬ್ಯುಲೆನ್ಸ್‌ಗಳಲ್ಲಿ 39 ಶಾಲಾ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು.

62 ಮಕ್ಕಳ ದಾಖಲಾತಿ ಇರುವ ಶಾಲೆಗೆ ಬುಧವಾರ 45 ವಿದ್ಯಾರ್ಥಿಗಳು ಹಾಜರಾಗಿದ್ದರು. ಎಂದಿನಂತೆ ಮಧ್ಯಾಹ್ನ 12.45ಕ್ಕೆ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ. ಊಟ ಸೇವಿಸಿದ ಒಂದೂವರೆ ಗಂಟೆ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಕ್ಕಳನ್ನು ಪರೀಕ್ಷಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ‘ಆಸ್ಪತ್ರೆಗೆ ದಾಖಲಾದ ಎಲ್ಲ 39 ಮಕ್ಕಳು ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ. ಕಲುಷಿತ ಆಹಾರ ಸೇವನೆಯಿಂದ ತೊಂದರೆ ಉಂಟಾಗಿರುವ ಸಾಧ್ಯತೆ ಇದೆ. ಪಾಲಕರು ಭಯಪಡುವ ಅಗತ್ಯವಿಲ್ಲ. ಪ್ರತ್ಯೇಕ ವಾರ್ಡ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದರು.

ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಕ್ಕಳ ಆರೋಗ್ಯ ವಿಚಾರಿಸಿ ಪೋಷಕರಿಗೆ ಧೈರ್ಯ ತುಂಬಿದರು. ‘ಕೆಲ ಮಕ್ಕಳು ಜ್ವರದಿಂದ ಬಳಲುತ್ತಿದ್ದರು. ಇವರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದೆ. ಬಳಿಕ ಎಲ್ಲ ಮಕ್ಕಳು ಅಸ್ವಸ್ಥರಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version