ಮುಖ್ಯ ಸುದ್ದಿ
ಎಸ್‍ಎಲ್‍ವಿ ನರ್ಸಿಂಗ್ ಕಾಲೇಜಿಗೆ ಬೆಳ್ಳಿಹಬ್ಬ | ಶಾಸಕರಾದ ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ(ಪಪ್ಪಿ) ಭಾಗೀ
ಚಿತ್ರದುರ್ಗ ನ್ಯೂಸ್.ಕಾಂ: ನಗರದ ಚಳ್ಳಕೆರೆ ರಸ್ತೆಯಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‍ಎಲ್‍ವಿ ನರ್ಸಿಂಗ್ ಕಾಲೇಜಿಗೆ 25 ವಸಂತ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಸಂಸ್ಥೆಯ ಆವರಣದಲ್ಲಿ ಸಂಭ್ರಮದ ಬೆಳ್ಳಿ ಹಬ್ಬ ಆಚರಿಸಲಾಯಿತು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಅನೇಕ ಏಳು ಬೀಳುಗಳ ನಡುವೆ ಯಶಸ್ವಿಯಾಗಿ ಮುನ್ನಡೆದಿದೆ. ಈಗ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಓ) ಆಗಿ ಯುವ ಉತ್ಸಾಹಿ ಎಂ.ಸಿ.ರಘುಚಂದನ್ ಮನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆಗೆ ವೈದ್ಯರಿಗಿಂತಲೂ ಶುಶ್ರೂಚಕರು ಹೆಚ್ಚು ಸಮಯ ಕಳೆಯುತ್ತಾರೆ. ಈ ವೃತ್ತಿ ಅತ್ಯಂತ ಪವಿತ್ರವಾಗಿದೆ. ಸೇವಾ ಮನೋಭಾವನೆಯಿಂದ ರೋಗಿಗಳ ಹಾರೈಕೆ ಮಾಡಿದಾಗ ಮನಸ್ಸಿಗೆ ಸಮಾಧಾನ ಸಿಗುವುದರ ಜೊತೆಗೆ ದೇವರು ಮೆಚ್ಚುತ್ತಾನೆ ಎಂದು ಹೇಳಿದರು.
ಇದನ್ನೂ ಓದಿ: ಗಣೇಶ ಪ್ರತಿಷ್ಠಾಪನೆಗೆ ಮುನ್ನಾ ತಿಳಿದುಕೊಳ್ಳಬೇಕಾದ ಹತ್ತು ನಿಯಮಗಳು
ರೋಗಿಯ ಪ್ರಾಣ ಉಳಿಸುವುದರ ಜೊತೆ ಆತ್ಮವಿಶ್ವಾಸ ತುಂಬುವ ಅಮೂಲ್ಯವಾದ ಸೇವೆ ಇದಾಗಿದೆ. ಇಲ್ಲಿ ನಸಿರ್ಂಗ್ ಶಿಕ್ಷಣ ಪಡೆದವರು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, 25 ವರ್ಷಗಳಿಂದ ಎಸ್‍ಎಲ್‍ವಿ ನಸಿರ್ಂಗ್ ಕಾಲೇಜಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಪಂಚದ ಯಾವುದೇ ಮೂಲೆಗೆ ಹೋದರು ನಮ್ಮ ಸಂಸ್ಥೆಯಲ್ಲಿ ನಸಿರ್ಂಗ್ ಶಿಕ್ಷಣ ಪಡೆದವರು ಸಿಗುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವೈದ್ಯರಿಗಿಂತ ಶುಶ್ರೂಷಕರ ಸೇವೆ ಅಮೂಲ್ಯವಾದುದು. ಅದಕ್ಕಾಗಿ ನಿಮ್ಮ ಮೇಲೆ ತೋರುವ ಪ್ರೀತಿ, ವಿಶ್ವಾಸ ವೈದ್ಯರ ಮೇಲೆ ಇರುವುದಿಲ್ಲ. ಆರೋಗ್ಯ ಪೂರ್ಣ ಸಮಾಜಕ್ಕಾಗಿ ನಿಮ್ಮ ಪಾತ್ರ ದೊಡ್ಡದು. ಬೇರೆ ಯಾರಿಗೂ ಇಂತಹ ಅವಕಾಶ ಸಿಗುವುದಿಲ್ಲ ಎಂದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿ.ಇ.ಓ. ಎಂ.ಸಿ.ರಘುಚಂದನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ನಸಿರ್ಂಗ್ ಶಿಕ್ಷಣ ಪಡೆದವರು ಲಂಡನ್, ಯು.ಎಸ್.ಎ. ಆಸ್ಟ್ರೇಲಿಯಾದಲ್ಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ನರ್ಸಿಂಗ್ ಕೆಲಸ ಎನ್ನುವುದು ಸೇವಾ ಮನೋಭಾವ ಹಾಗೂ ಪುಣ್ಯದಿಂದ ಮಾಡುವ ಕೆಲಸವಾಗಿದೆ. ನೀವು ತೋರುವ ಕಾಳಜಿ ಮತ್ತು ಕರುಣೆಯಿಂದ ರೋಗಿ ಗುಣಮುಖನಾಗುತ್ತಾನೆ. ಸರಿಯಾಗಿ ಆರೈಕೆ ಮಾಡಿದರೆ ಅರ್ಧ ಕಾಯಿಲೆ ವಾಸಿಯಾಗುತ್ತದೆ. 25 ವರ್ಷಗಳಿಂದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಏಳಿಗೆಗೆ ದುಡಿದ ಎಲ್ಲ ಕಾಣದ ಕೈಗಳಿಗೆ ಋಣಿಯಾಗಿರುತ್ತೇನೆ ಎಂದರು.
ಒಂದು ಕಾಲದಲ್ಲಿ ಚಿತ್ರದುರ್ಗದಲ್ಲಿ ಎಸ್‍ಜೆಎಂ ವಿದ್ಯಾಪೀಠ ದೊಡ್ಡ ಸಂಸ್ಥೆಯಾಗಿತ್ತು. ಈಗ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಕೂಡ ಎಸ್.ಜೆ.ಎಂ. ವಿದ್ಯಾಪೀಠದಂತೆ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಇದರ ಹಿಂದೆ ಅನೇಕರ ಪರಿಶ್ರಮವಿದೆ. ನಿದ್ದೆಯಿಲ್ಲದ ಕನಸುಗಳಿವೆ. ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳೆ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಕಾರಣಕರ್ತರು ಎಂದು ಕೃತಜ್ಞತೆ ಸಲ್ಲಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಚಂದ್ರಕಲಾ, ಸಂಸ್ಥೆಯ ಅಧ್ಯಕ್ಷೆ ಯಶಸ್ವಿನಿ ಕಿರಣ್, ಪ್ರಾಚಾರ್ಯರಾದ ಡಾ.ಜಿ.ಇ.ಭೈರಸಿದ್ದಪ್ಪ ವೇದಿಕೆಯಲ್ಲಿದ್ದರು.