ತಾಲೂಕು
ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ
ಚಿತ್ರದುರ್ಗ ನ್ಯೂಸ್.ಕಾಂ: ನಿವೃತ್ತ ನ್ಯಾಯಮೂರ್ತಿ, ಚಿತ್ರದುರ್ಗ ಲೋಕಸಭೆ ಮಾಜಿ ಸದಸ್ಯರಾದ ಎನ್.ವೈ.ಹನುಮಂತಪ್ಪ ಅವರನ್ನು 2023ನೇ ಸಾಲಿನ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1939 ಸೆಪ್ಟಂಬರ್ 25 ರಂದು ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಜನಿಸಿದ ಎನ್.ವೈ.ಹನುಮಂತಪ್ಪ ಅವರು, ಮೈಸೂರಿನ ಮಾನಸ ಗಂಗೋತ್ರಿ, ಬಳ್ಳಾರಿ ವೀರಶೈವ ಕಾಲೇಜು, ಬೆಂಗಳೂರಿನ ಬಿ.ಎಲ್.ರೇಣುಕಾಚೌದರಿ ಕಾಲೇಜು ಚಿತ್ರದುರ್ಗ ಹಾಗೂ ಹೊಳಲ್ಕೆರೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಕಾನೂನು ಪದವಿ ನಂತರ 1967 ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು.
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧ ವ್ಯವಸ್ಥಿತ ಪಿತೂರಿ | ಹೈಕೋರ್ಟ್‍ನಲ್ಲಿ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ವಾದ
ಆನಂತರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, 1990 ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದರು. 1994 ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾಗಿ ವರ್ಗಾವಣೆಯಾಗಿ, 2001ರಲ್ಲಿ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದಿಂದ 2004ರಲ್ಲಿ ಚಿತ್ರದುರ್ಗ ಲೋಕಸಭೆಗೆ ಸ್ಪರ್ಧೆ ಮಾಡಿ ಗೆದ್ದಿದ್ದರು.
ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಎನ್.ವೈ.ಹನುಮಂತಪ್ಪ ಅವರನ್ನು ಆಯ್ಕೆ ಮಾಡಿದೆ. ಇವರೊಟ್ಟಿಗೆ ವಿವಿಧ ಕ್ಷೇತ್ರಗಳ ಇನ್ನೂ 7 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.