ತಾಲೂಕು
ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಎಬಿವಿಪಿ | ವಿದ್ಯಾರ್ಥಿ ವೇತನಕ್ಕಾಗಿ ಪ್ರತಿಭಟನೆ
ಚಿತ್ರದುರ್ಗ ನ್ಯೂಸ್.ಕಾಂ: ವಿದ್ಯಾರ್ಥಿ ವೇತನ ನೀಡುವಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರ ಜಾರಿ ಮಾಡಿದ್ದ ರೈತ ವಿದ್ಯಾನಿಧಿ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ನೀಡದೇ ತಡೆ ಹಿಡಿದಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟಿಸಿದ್ದಾರೆ.
ಚಿತ್ರದುರ್ಗ, ಹಿರಿಯೂರಿನಲ್ಲೂ ಎಬಿವಿಪಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಕರ್ನಾಟಕ ದೇಶದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದೆ. ಉತ್ಕøಷ್ಟ ಮಟ್ಟದ ವಿಶ್ವವಿದ್ಯಾಲಯಗಳಿಂದ ಹೆಸರುವಾಸಿಯಾಗಿ, ಸಾವಿರಾರು ಹೊರರಾಜ್ಯದ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಶಿಕ್ಷಣಕ್ಕಾಗಿ ಬರುತ್ತಾರೆ. ಆದರೆ, ಉನ್ನತ ಶಿಕ್ಷಣದ ಆಸೆ ಇಟ್ಟುಕೊಂಡ ರಾಜ್ಯದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರ ನಮ್ಮ ನೆರವಿಗೆ ಕಾಯುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಶಿಕ್ಷಣಕ್ಕೆ ನೀಡಬೇಕಾದ ಪ್ರಾಮುಖ್ಯತೆ ನೀಡದೇ, ವಿದ್ಯಾರ್ಥಿ ವೇತನದಲ್ಲೂ ರಾಜಕೀಯ ಮಾಡುತ್ತಿದೆ ಎಂದು ದೂರಿದರು. ಎಸ್‍ಎಸ್‍ಪಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಆಯುμï ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಹಾಗೂ ಇತರ ಇಲಾಖೆಗಳ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪದವಿ ಮತ್ತು ಸ್ನಾತ್ತಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ರಾಜ್ಯ ಸರ್ಕಾರ ಸಕಾಲಕ್ಕೆ ವಿದ್ಯಾರ್ಥಿ ವೇತನ ನೀಡದೆ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣವನ್ನು ಅತಂತ್ರ ಸ್ಥಿತಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉಡುವಳ್ಳಿ ಜವಹಾರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಜ್ಯದ ರೈತರ ಮಕ್ಕಳ ಶಿಕ್ಷಣಕ್ಕಾಗಿ ಹಿಂದಿನ ಸರ್ಕಾರ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಪ್ರಾರಂಭಿಸಿತ್ತು, ಈ ವಿದ್ಯಾರ್ಥಿ ವೇತನವನ್ನು ಈಗಿನ ರಾಜ್ಯ ಸರ್ಕಾರ ತಡೆ ಹಿಡಿಯುವ ಕೆಲಸ ಮಾಡಿ ರೈತರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲು ಆರ್ಥಿಕ ಸಮಸ್ಯೆಯೇ ಪ್ರಮುಖ ಕಾರಣವಾಗಿದೆ. ಈ ಕಾರಣಕ್ಕೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡುವುದು ಸರ್ಕಾರಗಳ ಕರ್ತವ್ಯ. ಆದರೆ, ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಂಜೂರಾದ ವಿದ್ಯಾರ್ಥಿ ವೇತನ ತಡೆಹಿಡಿದು ಆ ಹಣವನ್ನು ಇನ್ನಿತರ ಕಾರ್ಯಗಳಿಗಾಗಿ ಬಳಸುತ್ತಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 2022-23 ನೇ ಸಾಲಿನ ವಿದ್ಯಾರ್ಥಿ ವೇತನ ತಡೆ ಹಿಡಿದಿದೆ, SSP ತಂತ್ರಾಂಶದಲ್ಲಿ ವಿದ್ಯಾರ್ಥಿವೇತನ ಮಂಜೂರಾಗಿರುವುದಾಗಿ ತೋರಿಸಿದ್ದರು, ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿಲ್ಲ. ಹಣ ಜಮಾ ಆಗುವ ಮೊದಲೇ ಮುಂದಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿರುವುದು ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಸಿದೆ. ಕೂಡಲೇ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ನೀಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಬೇಕಿದೆ ಎಂದು ಎಬಿವಿಪಿ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಗೋಪಿ, ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ದೇಶ್, ತಾಲೂಕು ಸಂಚಾಲಕ ಕನಕರಾಜ್ ಕೋಡಿಹಳ್ಳಿ, ನಗರ ಹಾಸ್ಟೆಲ್ ಪ್ರಮುಖ್ ಮನೋಜ್, ಚಿತ್ರಸ್ವಾಮಿ, ಅಜ್ಜಯ್ಯ, ಕಾಟಲಿಂಗೇಶ್, ಸುಮನ್, ಚೈತ್ರ, ಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.
ಹಿರಿಯೂರಿನಲ್ಲೂ ಎಬಿವಿಪಿ ಪ್ರತಿಭಟನೆ:
ಇದೇ ವಿಚಾರವಾಗಿ ಹಿರಿಯೂರು ತಾಲೂಕು ಎಬಿವಿಪಿ ಘಟಕದಿಂದ ಪ್ರತಿಭಟಿಸಿ, ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಎಬಿವಿಪಿ ಪ್ರಾಂತ ಕಾರ್ಯಕಾರಿಣಿ ಸದಸ್ಯ ಎಸ್.ಸುದರ್ಶನ್ ನಾಯ್ಕ್, ಜಿಲ್ಲಾ ಸಹ ಸಂಚಾಲಕ ಎಂ.ನಾಗೇಶ್, ಧನುಷ್, ಅವಿನಾಶ್, ರಮೇಶ್, ಶಿವ, ರಂಜಿನಿ, ಸಹನಾ ಮತ್ತಿತರರು ಭಾಗವಹಿಸಿದ್ದರು.