ಮುಖ್ಯ ಸುದ್ದಿ
29ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ | 9 ಕೇಂದ್ರಗಳಲ್ಲಿ ಸಜ್ಜು
CHITRADURGA NEWS | 27 APRIL 2024
ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಚಿತ್ರದುರ್ಗ ಜಿಲ್ಲಾಡಳಿತ ಇದೀಗ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸಲು ಸಜ್ಜಾಗಿದೆ. ಏ.29ರಿಂದ ಮೇ 16ರವರೆಗೆ ಜಿಲ್ಲೆಯ 9ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಜಿಲ್ಲಾ ಕೇಂದ್ರದಲ್ಲಿ 3, ಚಳ್ಳಕೆರೆಯ ತಾಲ್ಲೂಕು ಕೇಂದ್ರದಲ್ಲಿ 2 ಹಾಗೂ ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ದತೆವಹಿಸಿದೆ.
ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ, ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಲು ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ನೆರಳು, ಶೌಚಾಲಯ ಸೌಲಭ್ಯಗಳಿರುವಂತೆ ನೋಡಿಕೊಳ್ಳಲಾಗಿದೆ.
ಕ್ಲಿಕ್ ಮಾಡಿ ಓದಿ: ಚುನಾವಣೆ ದಿನ ಅಡಿಕೆ ರೇಟ್ ಎಷ್ಟಿತ್ತು ಗೊತ್ತಾ ?
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಸೇರಿದಂತೆ ಯಾವುದೇ ರೀತಿಯ ವಿದ್ಯುನ್ಮಾನ ಪರಿಕರ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳು ಪರೀಕ್ಷೆ ಆರಂಭಗೊಳ್ಳುವ ಅರ್ಧ ಗಂಟೆಗೂ ಮುನ್ನ ಕೇಂದ್ರದಲ್ಲಿ ಹಾಜರಿರಬೇಕು. ಸುರಕ್ಷತಾ ಕ್ರಮವಾಗಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಪರೀಕ್ಷೆಗಳ ಮೇಲ್ವಿಚಾರಣೆಗಾಗಿ ತ್ರಿಸದಸ್ಯ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಮಾರ್ಗಾಧಿಕಾರಿಗಳ ಜತೆಗೆ ವಿಚಕ್ಷಣಾ ದಳವನ್ನು ರಚಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!
ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಆವರಣದೊಳಗೆ ಸಾರ್ವಜನಿಕರ ಪ್ರವೇಶ, ಕೇಂದ್ರದ ಸುತ್ತಮುತ್ತಲ ಪ್ರದೇಶದೊಳಗೆ ಸಾರ್ವಜನಿಕರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಝೆರಾಕ್ಸ್ ಮತ್ತಿತರ ಅಂಗಡಿಗಳು ತೆರೆಯದಿರುವಂತೆ ಆದೇಶಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.