ಮುಖ್ಯ ಸುದ್ದಿ
ತೀವ್ರ ಸ್ವರೂಪಕ್ಕೆ ಬಯಲುಸೀಮೆ ‘ಭದ್ರಾ’ ಹೋರಾಟ | ಸರತಿಯಲ್ಲಿ ಬಂದ್ | ಜನರಿಂದ ಸ್ವಯಂ ಪ್ರೇರಿತ ಬೆಂಬಲ
CHITRADURGA NEWS | 08 FEBRUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನ ಮತ್ತು ಅನುದಾನ ಬಿಡುಗಡೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ದಿನದಿನದಿಂದ ದಿನಕ್ಕೆ ಹೋರಾಟಗಳು ತೀವ್ರ ಸ್ವರೂಪ ಪಡೆಯುತ್ತಿವೆ. ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಗತಿಪರ, ಕನ್ನಡ ಪರ, ದಲಿತಪರ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ದಾಖಲಿಸುತ್ತಿವೆ.
ಜಿಲ್ಲೆಯ ಪ್ರತಿ ಗ್ರಾಮಕ್ಕೂ ಹೋರಾಟ ವ್ಯಾಪಿಸಿದ್ದು ಜನರು ಸ್ವಯಂ ಪ್ರೇರಿತವಾಗಿ ಬೆಂಬಲ ಸೂಚಿಸಿ ಪ್ರತಿಭಟನೆಗೆ ಕೈ ಜೋಡಿಸುತ್ತಿದ್ದಾರೆ. ಜನವರಿಯಲ್ಲಿ ಚಿತ್ರದುರ್ಗ ಜಿಲ್ಲಾ ಕೇಂದ್ರ ಬಂದ್ ಯಶಸ್ವಿಗೊಂಡ ಬೆನ್ನಲ್ಲೇ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಫೆ. 9ರಂದು ಚಳ್ಳಕೆರೆ ಹಾಗೂ ಫೆ. 13 ರಂದು ನಾಯಕನಹಟ್ಟಿ ಬಂದ್‌ಗೆ ನಿರ್ಧರಿಸಿದೆ.
ಚಳ್ಳಕೆರೆ-ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹ 5,300 ಕೋಟಿ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒನಕೆ ಓಬವ್ವ ವೃತ್ತಕ್ಕೆ ತರಕಾರಿ ತಂದ ಚಿಣ್ಣರು | ವಾರದ ಸಂತೆ ನಮ್ಮ ಜೊತೆ ಎಂದ ಎಸ್‌ಆರ್‌ಎಸ್ ಪುಟಾಣಿಗಳು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 20 ವರ್ಷಗಳಿಂದ ಜಿಲ್ಲೆಯ ಜನರನ್ನು ವಂಚಿಸುತ್ತಲೇ ಬಂದಿವೆ. ಭದ್ರಾದಿಂದ ಕೆರೆಗಳಿಗೆ ನೀರು ಹರಿಯದಿರುವ ಕಾರಣ ಜಿಲ್ಲೆಯ ಜನರು ಬರಗಾಲ ಅನುಭವಿಸುವಂತಾಗಿದೆ ಎಂದು ರೈತ ಸಂಘದ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲ್ಲೂಕು ಶಾಖೆ ಮಾಜಿ ಅಧ್ಯಕ್ಷ ಓ.ಟಿ.ತಿಪ್ಪೇಸ್ವಾಮಿ, ಹಮಾಲರ ಸಂಘಟನೆ ಮುಖಂಡ ಟಿ.ತಿಪ್ಪೇಸ್ವಾಮಿ, ಟಿ.ನಿಂಗಣ್ಣ ಮಾತನಾಡಿದರು. ಕನ್ನಡ ರಕ್ಷಣಾ ವೇದಿಕೆಯ ಚೇತನ್‍ಕುಮಾರ್, ದೊಡ್ಡುಳ್ಳಾರ್ತಿ ಕರಿಯಣ್ಣ, ದಲ್ಲಾಲರ ಸಂಘದ ಅಧ್ಯಕ್ಷ ಅರವಿಂದ್, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಘುನಾಥ ಬಾಬು, ಕೆಆರ್‌ಎಸ್ ಪಕ್ಷದ ಮಹೇಶ್, ಸಾಮಾಜಿಕ ಹೋರಾಟಗಾರ ಎಚ್.ಎಸ್.ಸೈಯದ್, ಬಂಡೆ ತಿಪ್ಪೇಸ್ವಾಮಿ ಹಾಜರಿದ್ದರು.
13 ರಂದು ನಾಯಕನಹಟ್ಟಿ ಬಂದ್: ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ನೀರಾವರಿ ಆನುಷ್ಠಾನ ಹೋರಾಟ ಸಮಿತಿಯು ಫೆಬ್ರವಹಿ 13ರ ಮಂಗಳವಾರ ನಾಯಕಹನಟ್ಟಿ ಬಂದ್ ಗೆ ಕರೆ ನೀಡಿದೆ.
ಹಟ್ಟಿ ಮಲ್ಲಪ್ಪನಾಯಕ ಸಂಘದ ಆಡಳಿತ ಕಚೇರಿಯಲ್ಲಿ ನಡೆದ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಹೋಬಳಿ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸ್ವಯಂ ಪ್ರೇರಿತ ಬಂದ್ ಆಚರಿಸುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.
ಇದನ್ನೂ ಓದಿ: ಕೋಟೆನಾಡಿಗೆ ಬರುತ್ತಿದ್ದಾರೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ
ಸಮಿತಿಯ ಹೋಬಳಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ ಮಾತನಾಡಿ, ದೇಶಕ್ಕಾಗಿ ನಾಯಕನಹಟ್ಟಿ ಹೋಬಳಿ ಜನ ಅಪಾರ ಪ್ರಮಾಣದಲ್ಲಿ ತ್ಯಾಗ ಮಾಡಿದ್ದಾರೆ. ಡಿಆರ್ ಡಿಓ ಸೇರಿದಂತೆ ಹಲವು ವೈಜ್ಞಾನಿಕ ಸಂಸ್ಥೆಗಳಿಗೆ 13 ಸಾವಿರ ಎಕರೆ ಭೂಮಿ ಬಿಟ್ಟುಕೊಟ್ಟು ಕೊಟ್ಟಿದ್ದಾರೆ. ಇಂತಹ ತ್ಯಾಗಿಗಳ ಬದುಕು ಹಸನಾಗಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲೂಕಿನ ಎಲ್ಲ ಕೆರೆಗಳ ಶೀಘ್ರ ತುಂಬಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಚಿಂತಕ ಜಗಳೂರು ಯಾದವರೆಡ್ಡಿ ಮಾತನಾಡಿ, ಭದ್ರಾ ಮೇಲ್ದೆಂಡೆ ಕಾಮಗಾರಿ ಶೀಘ್ರ ಮುಗಿಸುವ ಇರಾದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ. ಜನರ ಭಾವನೆಗಳ ಜೊತೆ ಯಾವುದೇ ಸರ್ಕಾರಗಳು ಚೆಲ್ಲಾಟವಾಡಬಾರದು.ಭದ್ರಾದ ನಂತರ ಕೈಗೆತ್ತಿಕೊಳ್ಳಲಾದ ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ ರುಪಾಯಿ ವ್ಯಯ ಮಾಡಿರುವ ರಾಜ್ಯ ಸರ್ಕಾರ ಭದ್ರಾ ಮೇಲ್ಡಂಡೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರವ ಎಚ್ಚರಿಸಲು ಹೋರಾಟವೊಂದೇ ಅನಿವಾರ್ಯ. ನಿರ್ಣಾಯಕ ಹೋರಾಟದ ಮೂಲಕ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳಲು ಎಲ್ಲರೂ ಮುಂದಾಗಬೇಕೆಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಇದು ಪಕ್ಷಾತೀತ ಹೋರಾಟವಾಗಿದ್ದು ಜನರ ಬದುಕು ಪ್ರಧಾನವಾಗಿರಿಸಿಕೊಂಡು ಮುನ್ನಡೆಯಲಾಗುತ್ತಿದೆ. ಯಾವುದೇ ಪಕ್ಷದ ವಿರುದ್ದ ನಮ್ಮ ಹೋರಾಟವಲ್ಲ. ಭದ್ರಾ ಮೇಲ್ಡಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎನ್ನುವುದು ನಮ್ಮ ಹಕ್ಕೊತ್ತಾಯ. ಕೇಂದ್ರ ಸರ್ಕಾರದ ಅನುದಾನ ಕೊಡುತ್ತದೆ ಎಂದು ರಾಜ್ಯ ಸರ್ಕಾರ ಕಾಯವುದು, ರಾಜ್ಯ ಮೊದಲು ಖರ್ಚು ಮಾಡಲಿ ಎಂದು ಕೇಂದ್ರ ಉದಾಸೀನ ತೋರುವುದು ತರವಲ್ಲದ ನಡವಳಿಕೆಯಾಗಿದೆ. ಅನುದಾನ ಎಲ್ಲಿಂದ ತರುತ್ತಾರೋ ನಮಗದು ಬೇಕಾಗಿಲ್ಲ. ಆಧ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಿ ಎಂಬುದು ನಮ್ಮ ಬೇಡಿಕೆ ಎಂದರು.
ಭದ್ರಾ ಕಾಮಗಾರಿಗೆ ಹಣ ಒದಗಿಸುವಂತೆ ಆಗ್ರಹಿಸಿ ಈಗಾಗಲೇ ಚಿತ್ರದುರ್ಗ ಬಂದ್ ನಡೆದಿದೆ. ಫೆಬ್ರವರಿ 9 ರಂದು ಚಳ್ಳಕೆರೆ ಬಂದ್ ಕರೆಯಲಾಗಿದೆ. ಜಿಲ್ಲಾ ಪಂಚಾಯಿತಿ ಮುಂಭಾಗ ರೈತ ಸಂಘ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ. ಚಿತ್ರದುರ್ಗದ ನೆಲದಲ್ಲಿ ಹೆಚ್ಚು ಹೋರಾಟಗಳು ದಾಖಲಾಗುವುದರ ಮೂಲಕ ಬಹುದಿನಗಳ ನೀರಾವರಿ ಕನಸು ಸಾಕಾರಗೊಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಂಘಟಿತ ಪ್ರಯತ್ನ ಅಗತ್ಯವೆಂದರು. ಫೆಬ್ರವರಿ 13 ರಂದು ಸ್ವಯಂ ಪ್ರೇರಿತ ನಾಯಕನಹಟ್ಟಿ ಬಂದ್ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು.
ಬಂದ್‌ಗೆ ಹಟ್ಟಿಮಲ್ಲಪ್ಪ ಸಂಘದ ಬೆಂಬಲ
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಫೆ.13ರಂದು ಕರೆ ನೀಡಿರುವ ನಾಯಕನಹಟ್ಟಿ ಬಂದ್‌ಗೆ ಹಟ್ಟಿಮಲ್ಲಪ್ಪನಾಯಕ ಸಂಘ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಹೇಳಿದರು.
ಸಂಘದ ಪದಾಧಿಕಾರಿಗಳಾದ ಚಿನ್ನಯ್ಯ, ಹನುಮಣ್ಣ, ಎಸ್.ಓಬಣ್ಣ, ರುದ್ರಯ್ಯ, ಪಾಲಯ್ಯ, ಜಿ.ವೈ. ತಿಪ್ಪೇಸ್ವಾಮಿ, ಟಿ.ಬಸಣ್ಣ, ಮುದಿಯಪ್ಪ, ಎಸ್.ಟಿ. ಬೋರಸ್ವಾಮಿ, ಎಚ್.ಬಿ. ತಿಪ್ಪೇಸ್ವಾಮಿ ಇದ್ದರು.