ಮುಖ್ಯ ಸುದ್ದಿ
PDO transfer: ಪಿಡಿಒ, ಕಾರ್ಯದರ್ಶಿಗಳಿಗೆ ‘7’ ರ ಆತಂಕ | ಎತ್ತಂಗಡಿಗೆ ಹೊಸ ರೂಲ್ | ಠಿಕಾಣಿ ಹೂಡಿದ್ದವರಿಗೆ ಶಾಕ್


CHITRADURGA NEWS | 16 SEPTEMBER 2024
ಚಿತ್ರದುರ್ಗ: ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಪಿಡಿಒ, ಕಾರ್ಯದರ್ಶಿಗಳ ಎತ್ತಂಗಡಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಈ ಕಾರ್ಯಕ್ಕೆ ಕರ್ನಾಟಕ ರಾಜ್ಯ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಒಂದೇ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕಿನಲ್ಲಿ ಸಚಿವರು, ಶಾಸಕರ ಶಿಫಾರಸು ಬಳಸಿಕೊಂಡು ಹಲವು ವರ್ಷಗಳಿಂದ ಪಿಡಿಒ, ಕಾರ್ಯದರ್ಶಿ ಠಿಕಾಣಿ ಹೂಡಿರುವುದು ರಾಜ್ಯದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದ್ದರಿಂದ ಗ್ರಾಮೀಣ ಆಡಳಿತದಲ್ಲಿ ತ್ವರಿತ ಸೇವೆ ಒದಗಿಸುವುದು, ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1, ಕಾರ್ಯದರ್ಶಿ ಗ್ರೇಡ್–2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಇದೇ ಮೊದಲ ಬಾರಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ | ಮೂರು ದಿನ ದಂಡವಿಲ್ಲ

ಈ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಜೂನ್ 25ರಂದು ಆದೇಶ ಹೊರಡಿಸಿತ್ತು. ಆಯಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಧಿಕಾರಿ, ಸಿಬ್ಬಂದಿಯ ದಾಖಲಾತಿ ಪರಿಶೀಲನಾ ಕಾರ್ಯವನ್ನೂ ಈಗಾಗಲೇ ಪೂರ್ಣಗೊಳಿಸಲಾಗಿತ್ತು. ಸರ್ಕಾರದ ಹೇಳಿಕೆಯಂತೆ ಆಗಸ್ಟ್ 10 ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣ ಗೊಳಿಸಬೇಕಿತ್ತು. ಈಗ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಿರುವ ಮಧ್ಯದಲ್ಲೇ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ವರ್ಗಾವಣೆ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ತರಲು ಕರಡು ಪ್ರಕಟಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ರೈತರಿಂದ ಲಕ್ಷಾಂತರ ಮೌಲ್ಯದ ಅಡಿಕೆ ಖರೀದಿ | ತಲೆಮರೆಸಿಕೊಂಡ ವ್ಯಾಪಾರಿ
ಒಂದೇ ತಾಲ್ಲೂಕಿನಲ್ಲಿ ಗರಿಷ್ಠ ಏಳು ವರ್ಷ ಕೆಲಸ ಮಾಡಿರುವ ಎಲ್ಲ ಪಿಡಿಒ, ಕಾರ್ಯದರ್ಶಿಗಳನ್ನು ಅದೇ ತಾಲ್ಲೂಕು ವ್ಯಾಪ್ತಿಯ ಯಾವುದೇ ಪಂಚಾಯಿತಿಗಳ ಖಾಲಿ ಹುದ್ದೆಗಳಿಗೆ ಪರಿಗಣಿಸದಂತೆ ನಿರ್ಬಂಧಿಸುವ ಅಂಶವನ್ನು ಸೇರಿಸಲಾಗಿದೆ. ಈ ಅಂಶದ ಸೇರ್ಪಡೆಗೆ ಪಿಡಿಒ, ಕಾರ್ಯದರ್ಶಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
