ಮುಖ್ಯ ಸುದ್ದಿ
PM SVANIDHI; ಪಿ.ಎಂ. ಸ್ವನಿಧಿ ಯೋಜನೆ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
CHITRADURGA NEWS | 16 JULY 2024
ಚಿತ್ರದುರ್ಗ: ಪಿ.ಎಂ.ಸ್ವನಿಧಿ(PM SVANIDHI) ಯೋಜನೆಯ ಲಾಭಗಳ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: AdikeRate; ಅಡಿಕೆ ಧಾರಣೆ | ಜುಲೈ 15 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಕೌಶಲ್ಯ ಮಿಷನ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರಿಗಾಗಿಯೇ ಪಿ.ಎಂ. ಸ್ವನಿಧಿ ಕಿರು ಸಾಲ ಸೌಲಭ್ಯ ಯೋಜನೆ ಜಾರಿ ಮಾಡಲಾಗಿದೆ. ಯೋಜನೆಯಡಿ ಮೂರು ಹಂತಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ಆದರೆ ಮೊದಲ ಹಂತದಲ್ಲಿ ರೂ.10,000/- ಸಾಲ ಪಡೆದವರು, ಸಾಲ ಮರುಪಾವತಿ ಮಾಡದೇ, ಎರಡು ಹಾಗೂ ಮೂರನೇ ಹಂತದ ಸಾಲ ಪಡೆಯಲು ಅನರ್ಹರಾಗುತ್ತಿದ್ದಾರೆ.
ಹೀಗಾಗಿ ಮೊದಲ ಹಂತದಲ್ಲಿ ಸಾಲ ಪಡೆದವರು, ಕಾಲಕ್ಕೆ ಸರಿಯಾಗಿ ಮರುಪಾವತಿಸಿದಲ್ಲಿ, ಅಂತಹವರಿಗೆ ಎರಡು ಹಾಗೂ ಮೂರನೆ ಹಂತದಲ್ಲಿ ನೀಡಲಾಗುವ ಸಾಲಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಸಮರ್ಪಕವಾಗಿ ಅರಿವು ಮೂಡಿಸಬೇಕು ಎಂದರು.
ಇದನ್ನೂ ಓದಿ: RAIN; ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಯ್ತು? ಈ ವರದಿ ಓದಿ..
ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ಯೋಜನೆಯಡಿ ಪಿ.ಎಂ. ಸ್ವನಿಧಿ ಸಾಲ ಪಡೆದ ಫಲಾನುಭವಿಗಳ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಕುಟುಂಬಗಳಿಗೆ ಸ್ವನಿಧಿ ಸಮೃದ್ಧ್ ಯೋಜನೆಯಡಿ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ, ಜೀವನ್ ಜ್ಯೋತಿ ಬೀಮಾ, ಶ್ರಮಯೋಗಿ ಮನ್ ಧನ್ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಜನಧನ್, ಜನನಿ ಸುರಕ್ಷಾ, ಮಾತೃ ವಂದನಾ ಹಾಗೂ ಲೇಬರ್ ಕಾರ್ಡ್ ಹಣಕಾಸು ಸೌಲಭ್ಯಗಳನ್ನು ನೀಡಲಾಗುವುದು.
ಆದರೆ ಬೀದಿ ವ್ಯಾಪಾರಿಗಳಿಗೆ ಈ ಎಲ್ಲ ಯೋಜನೆಗಳ ಕುರಿತು ಮಾಹಿತಿ ಇಲ್ಲ. ಸಾಲ ಪಡೆದವರು ಸಾಲವನ್ನು ಮರುಪಾತಿ ಮಾಡಿ, ಮುಂದಿನ ಹಂತಗಳ ಸಾಲ ಪಡೆದರೆ ಸರ್ಕಾರದಿಂದ ಇನ್ನೂ ಹೆಚ್ಚಿನ ಲಾಭ ದೊರಕಲಿದೆ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು. ಈ ಕುರಿತು ಜಾಗೃತಿ ಹಾಗೂ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಇದನ್ನೂ ಓದಿ: FARMERS; ಸಾಸಿವೆಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಿಸಿದ ಭೀಮಸಮುದ್ರ ರೈತರು
ಪಿ.ಎಂ.ವಿಶ್ವಕರ್ಮ ಯೋಜನೆ ತರಬೇತಿ ಕುರಿತು ಮಾಹಿತಿ ಸಂಗ್ರಹಿಸಿ:
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ನೊಂದಣಿಯಾದವರ ವೈಯಕ್ತಿಕ ವಿವರ, ಇದುವರೆಗೂ ತರಬೇತಿ ಪಡೆದವರ ಸಂಖ್ಯೆ ಎಷ್ಟು? ಜಿಲ್ಲೆಯ ಯಾವ ಯಾವ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಯಿಂದ ಸಂಗ್ರಹಿಸಬೇಕು.
ಕೇವಲ ದಾಖಲೆಗಳಲ್ಲಿ ತರಬೇತಿ ನೀಡಿದರೆ ಪ್ರಯೋಜನಕ್ಕೆ ಬರುವುದಿಲ್ಲ. ತರಬೇತಿ ನೀಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 26,366 ಜನರು 18 ಬಗೆಯ ವಿವಿಧ ವೃತ್ತಿಗಳ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 11,899 ಜನರಿಗೆ ಈಗಾಗಲೆ ತರಬೇತಿ ನೀಡಲಾಗಿದೆ. 14,467 ಜನರಿಗೆ ತರಬೇತಿ ನೀಡುವುದು ಬಾಕಿಯಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ.ಟಿ ಮಾಹಿತಿ ನೀಡಿದರು.
ಕಲಿಕೆ ಜೊತೆ ಕೌಶಲ್ಯ ಯೋಜನೆಯಡಿ ಜಿಲ್ಲೆಯ 09 ಪ್ರಥಮ ದರ್ಜೆ ಕಾಲೇಜುಗಳಲ್ಲಿ 6 ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿ ತರಬೇತಿಗಳನ್ನು ನೀಡಲಾಗುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ಅನಿಮೇಷನ್, ಕಂಟೆಂಟ್ & ಕಮ್ಯುನಿಕೇಷನ್, ಡಾಟಾ ಸೈನ್ಸ್ & ವಿಷುವಲೈಜೇಷನ್, ಮಿಡಿಯಾ & ಫೀಲಂ ಮೇಕಿಂಗ್, ಸಪ್ಲೈ ಚೈನ್ ಮ್ಯಾನೇಜೆಮೆಂಟ್ ವಿಷಯಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಬಹು ರಾಷ್ಟ್ರೀಯ ಕಂಪನಿಗಳೊಂದಿಗೆ ಸಂಯೋಜನೆ ಹೊಂದಿದ ಕ್ಲೌಡ್ ದಟ್, ಇನೋವೆಟೀವ್ ಫಿಲಂ ಅಕಾಡೆಮಿ, ಅನಿಮೇಷನ್ ಸಂಸ್ಥೆಗಳು ತರಬೇತಿ ನೀಡುತ್ತಿವೆ ಎಂದು ವೇಮಣ್ಣ.ಟಿ ತಿಳಿಸಿದರು.
ಇದನ್ನೂ ಓದಿ: LAWYER; ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ತರಬೇತಿ ನೀಡುತ್ತಿರುವ ಸಂಸ್ಥೆಗಳ ಪ್ರೊಫೈಲ್ ವಿವರಗಳನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯ ಕೈಗಾರಿಕಾ ಬೇಡಿಕೆ ಸಮೀಕ್ಷೆ ಮಾಹಿತಿ ಆಧರಿಸಿ, ಸರ್ಕಾರಿ ಹಾಗೂ ಖಾಸಗಿ ಐಟಿಐ ಮತ್ತು ಜಿ.ಟಿ.ಟಿ.ಸಿ ಗಳಲ್ಲಿ ನೂತನವಾದ ಕೋರ್ಸುಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಡೇ ನಲ್ಮ್ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪೌರಾಯುಕ್ತರಿಗೆ ಸೂಚಿಸಿದರು.
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಎಲ್ಲಾ ಸಮಿತಿಗಳ ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಿ ಜುಲೈ.20ರ ಒಳಗಾಗಿ ಸಮಿತಿ ಸಭೆಗಳನ್ನು ಜರುಗಿಸಿ, ಅನುಪಾಲನಾ ವರದಿಯನ್ನು ನೀಡುವಂತೆ ಕೌಶಲ್ಯ ಮಿಷನ್ ಅಭಿಯಾನ ವ್ಯವಸ್ಥಾಪಕ ಅತಿಕ್ ರೆಹಮಾನ್ ಅವರಿಗೆ ಜಿಲ್ಲಾಧಿಕಾರಿ.ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಇದನ್ನೂ ಓದಿ: Rain Alert; ಚಿತ್ರದುರ್ಗ ಜಿಲ್ಲೆಗೆ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ. ಆನಂದ್, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ವಿವಿಧ ನಗರಸಭೆಗಳ ಪೌರಾಯುಕ್ತರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.