ಹೊಸದುರ್ಗ
ಜಮೀನು ಕಿತ್ತುಕೊಂಡರೆ ಸಾವೊಂದೇ ದಾರಿ | ಟೋಲ್ ನಿರ್ಮಾಣಕ್ಕೆ ಅನ್ನದಾತರ ವಿರೋಧ
CHITRADURGA NEWS | 19 JANUARY 2024
ಚಿತ್ರದುರ್ಗ (CHITRADURGA) : ‘ರೈತರಿಂದ ಜಮೀನು ಪಡೆದು, ರೈತರಿಂದಲೇ ರಸ್ತೆ ಅಭಿವೃದ್ಧಿ ಸುಂಕ ವಸೂಲಿ ಮಾಡುವ ಇಂತಹ ರಸ್ತೆ ನಮಗೆ ಬೇಡವೇ ಬೇಡ…’ ಹೊಸದುರ್ಗ ತಾಲ್ಲೂಕಿನ ಹೇರೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ನಿರ್ಮಿಸಲು ಮುಂದಾಗಿರುವುದನ್ನು ರೈತರು ವಿರೋಧಿಸಿದ ಪರಿ ಇದು.
ಟೋಲ್ ನಿರ್ಮಾಣಕ್ಕೆ ರೈತರಿಂದ ಸಹಿ ಪಡೆಯಲು ಬಂದಿದ್ದ ಎಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು. ‘ಪ್ರಾಣ ಕೊಟ್ಟೇವು, ಭೂಮಿ ಬಿಡುವುದಿಲ್ಲ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಕಾರು-ಟ್ಯಾಂಕರ್ ನಡುವೆ ಡಿಕ್ಕಿ | ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವು | ಮಗು ಸೇರಿ ಮೂರು ಜನರಿಗೆ ಗಾಯ
ರೈತರಿಂದ ಜಮೀನು ಪಡೆದು, ರೈತರಿಂದಲೇ ರಸ್ತೆ ಅಭಿವೃದ್ಧಿ ಸುಂಕ ವಸೂಲಿ ಮಾಡುವ ಇಂತಹ ರಸ್ತೆ ನಮಗೆ ಬೇಡವೇ ಬೇಡ. ಈ ಹಿಂದೆ ಇದ್ದ ಹಳೆಯ ರಸ್ತೆಯೇ ಉತ್ತಮವಾಗಿದೆ. ನಮ್ಮ ಮನವಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಸ್ಪಂದಿಸಿ ಬಡ ರೈತರ ನೋವನ್ನು ಪರಿಹರಿಸಬೇಕಿದೆ ಎಂದು ಹೇರೂರಿನ ರೈತರು ಆಗ್ರಹಿಸಿದರು.
ಹೇರೂರು ಹಾಗೂ ಬೀಸನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಾಗಿದ್ದು, ಹೆದ್ದಾರಿ ಪ್ರಾಧಿಕಾರ ಅವರ ಜಮೀನಿನ ಮೇಲೂ ಕಣ್ಣಿಟ್ಟಿದೆ. ಇಲ್ಲಿ ಟೋಲ್ ನಿರ್ಮಿಸಲು ಆರಂಭದಿಂದಲೂ ರೈತರು ವಿರೋಧಿಸುತ್ತಿದ್ದಾರೆ. ಆದರೂ ಪ್ರಾಧಿಕಾರದವರು ಈ ಬಗ್ಗೆ ಗಮನಹರಿಸಿಲ್ಲ. ರೈತರ ಮನೆಗೆ ನೋಟಿಸ್ ನೀಡಿದ್ದು, ಯಾವ ರೈತರು ಇದಕ್ಕೆ ಸ್ಪಂದಿಸಿಲ್ಲ. 23 ರೈತ ಕುಟುಂಬಗಳು ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ. ಅವರು ನೀಡುವ ಹಣಕ್ಕಾಗಿ ಇರುವ ತುಂಡು ಭೂಮಿ ಕಳೆದುಕೊಳ್ಳಲು ಇಷ್ಟವಿಲ್ಲ ಎಂದರು.
ಜಮೀನು ನಮಗೆ ಆಧಾರ. ಹಲವಾರು ಕುಟುಂಬಗಳ ಹೊಟ್ಟೆ ತುಂಬಿಸಿದೆ. ಸರ್ಕಾರ ಕೊಡುವ ಹಣ ನಮಗೆ ಹೊಟ್ಟೆ ತುಂಬಿಸಲ್ಲ. ಈಗಿನ ಜಮೀನು ಕಳೆದುಕೊಂಡರೆ ನಾವು ಸತ್ತರೆ ಹೂಳಲೂ ಜಾಗವಿಲ್ಲ. ಏನಾದರೂ ಆಗಲಿ ನಾವು ಮಾತ್ರ ಜಮೀನು ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ರವಾನಿಸದರು.
ಇದನ್ನೂ ಓದಿ: ಕೆಟಿಎಂ ಬೈಕ್ ಕಾರಿನ ನಡುವೆ ಅಪಘಾತ | ಬೈಕ್ ಸವಾರ ಮೃತ
30 ಗುಂಟೆ ಜಮೀನಿನಲ್ಲಿ ಟೋಲ್ ಮಾಡಲು 8 ಗುಂಟೆ ಜಮೀನು ಕೊಟ್ಟರೆ, ಉಳಿದ ಜಮೀನಿನಲ್ಲಿ ಏನು ಬೆಳೆಯಲು ಸಾಧ್ಯ?, ಕುಟುಂಬಸ್ಥರನ್ನು ಸಾಕುವುದಾದರೂ ಹೇಗೆ. ಅದನ್ನೂ ನಮ್ಮಿಂದ ಕಿತ್ತುಕೊಂಡರೆ, ಸಾವೊಂದೇ ನಮಗೆ ದಾರಿ’ ಎಂದು ಹೇರೂರಿನ ಕೆಲ ರೈತ ಅಳಲು ತೋಡಿಕೊಂಡರು.
ರೈತ ಮುಖಂಡರಾದ ದೊಡ್ಡರಂಗಪ್ಪ, ರಾಜಪ್ಪ, ಹನುಮಂತಪ್ಪ, ಕವಿತಾ, ದ್ರಾಕ್ಷಾಯಣಮ್ಮ, ಸುಲೋಚನಮ್ಮ, ಶಿವಪ್ಪ, ತಿಪ್ಪೇಶ್, ಚಿಕ್ಕಪ್ಪ, ಲಕ್ಕಪ್ಪ, ರಾಮಪ್ಪ, ಮಲ್ಲಿಕಾರ್ಜುನ್, ವಿರೂಪಾಕ್ಷಪ್ಪ, ಶಿವಕುಮಾರ್, ಸಿದ್ದಪ್ಪ, ವೀರೇಶ್, ಗೋವಿಂದಪ್ಪ, ಮುಜೀಬ್, ನಿಜಾಮ್ ಪಾಲ್ಗೊಂಡಿದ್ದರು.