ಮುಖ್ಯ ಸುದ್ದಿ
ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ | ಏಪ್ರಿಲ್ 1 ರಂದು ಮರಿಪರಿಷೆ
CHITRADURGA NEWS | 29 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ವಸಂತೋತ್ಸವದ ಮೂಲಕ ವಿಧ್ಯುಕ್ತ ತೆರೆ ಎಳೆಯಲಾಯಿತು.
ಸಂಪ್ರದಾಯದಂತೆ ದೇವಾಲಯದ ಅರ್ಚಕ ಮನೆತನದ ಮಹಿಳೆಯರು ಗುರುವಾರ ದೇವರಿಗೆ ವಿಶೇಷ ಆರತಿ ದೀಪಗಳನ್ನು ಬೆಳಗಿ ಗುರುತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಗುಡಿದುಂಬಿಸಿದರು. ಇದೇ ವೇಳೆ ಪಟ್ಟದ ಬಸವಣ್ಣನ (ಗೂಳಿ) ಪೂಜೆ ನೆರವೇರಿಸಿ ಮಂಗಳಾರತಿ ಮಾಡಿ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿದ ನೂರಾರು ಊಳಿಗದ ಯುವಕರಿಗೆ ಬಾಳೆಹಣ್ಣು ಪ್ರಸಾದ ವಿನಿಯೋಗಿಸಲಾಯಿತು.
ಕ್ಲಿಕ್ ಮಾಡಿ ಓದಿ: ನೀರಿಗಾಗಿ ಜಲಾಶಯದ ನಾಲೆ ಒಡೆದ ರೈತರು | ಇಂದು ಹುಳಿಯಾರು – ಹಿರಿಯೂರು ರೈತರ ಸಭೆ
ಪಟ್ಟಣದ ಹೊರಮಠದಿಂದ ಒಳಮಠದವರೆಗೂ ವಸಂತೋತ್ಸವ ಕಾರ್ಯಕ್ರಮ ನಿಮಿತ್ತ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು. 1 ಕಿ.ಮೀ ದೂರದವರೆಗೂ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು.
ಏಪ್ರಿಲ್ 1ರ ಸೋಮವಾರ ಮರಿಪರಿಷೆ ಮಾಡಲಾಗುತ್ತದೆ. ವಾರ್ಷಿಕ ಜಾತ್ರೆಗೆ ಬರದೇ ಇರುವ ಭಕ್ತರು ಮರಿಪರಿಷೆಗೆ ಬಂದು ದೇವರಿಗೆ ಹರಕೆ ಸಲ್ಲಿಸುವುದು ವಾಡಿಕೆ. ಮುಂದಿನ ವರ್ಷದ ವಾರ್ಷಿಕ ಜಾತ್ರೆಗೆ ಮುನ್ನುಡಿಯಾಗಿ ಇದನ್ನು ಆಚರಿಸುತ್ತಾರೆ ಎಂಬ ಪ್ರತೀತಿ ಇದೆ. ಮಹಿಳೆಯರು ಮಕ್ಕಳು, ವೃದ್ದರು ಜನಸಂದಣಿಯ ಹಿನ್ನೆಲೆಯಲ್ಲಿ ಮಹಾರಥೋತ್ಸವಕ್ಕೆ ಬಾರದೇ ಇರುವವರು ಮರಿಪರಿಷೆಗೆ ಬರುವುದು ವಿಶೇಷ.