ಹೊಸದುರ್ಗ
Muruga Math: ನಡೆದಂತೆ ನುಡಿ ನುಡಿದಂತೆ ನಡೆಯುವ ಮಾರ್ಗ ತೋರಿದ ಶರಣರು | ಅನುಭಾವ ಶ್ರಾವಣ ಚಿಂತನ ಸರಣಿ ಮಾಲೆ
CHITRADURGA NEWS | 29 AUGUST 2024
ಚಿತ್ರದುರ್ಗ: 12ನೇ ಶತಮಾನದ ಶರಣರು ಸಮಾಜಕ್ಕೆ ವಚನಗಳ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದಾರೆ. ಆಸ್ತಿ ಒಡವೆ ಕೊಡುವ ಬದಲು ಜ್ಞಾನ ನೀಡಿದರೆ ಅದು ಶಾಶ್ವತವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ತಿಳಿಸಿದರು.
ಹೊಸದುರ್ಗ ಜಯದೇವ ಸಮುದಾಯ ಭವನದಲ್ಲಿ ಮುರುಘ ರಾಜೇಂದ್ರ ಬೃಹನ್ಮಠದಿಂದ ಆಯೋಜಿಸಿದ್ದ ಅನುಭಾವ ಶ್ರಾವಣ ಕಾರ್ಯಕ್ರಮದ ಚಿಂತನ ಸರಣಿ ಮಾಲೆಯಲ್ಲಿ ‘ಬದುಕಿಗೆ ವಚನ ಸಾಹಿತ್ಯದ ಕೊಡುಗೆ’ ವಿಚಾರ ಕುರಿತು ಉಪನ್ಯಾಸ ನೀಡಿದರು.
ಶರಣರು ನಡೆದಂತೆ ನುಡಿ – ನುಡಿದಂತೆ ನಡೆಯುವ, ಮಾರ್ಗವನ್ನು ತಿಳಿಸಿದ್ದಾರೆ. ಅದು ವಚನಗಳ ಮೂಲಕ. ಈ ವಚನಗಳು ಕಾಲ್ಪನಿಕವಲ್ಲ. ತಮ್ಮ ಬದುಕಿನ ವಿಚಾರ ಅನುಭವಗಳನ್ನು ವಚನದ ಮೂಲಕ ಪ್ರಸ್ತುತಪಡಿಸಿದ್ದಾರೆ. ಭೂಮಿ, ಬಂಗಾರ, ಹೆಂಡತಿ, ಮಕ್ಕಳು ಇವೆಲ್ಲ ಬಂದು ಹೋಗುವ ಭೌತಿಕ ಸಂಪತ್ತುಗಳು. ಆದರೆ ಜ್ಞಾನ ಎಂದೂ ಮುಗಿಯದ ಸಂಪತ್ತು ಎಂದರು.
ಕ್ಲಿಕ್ ಮಾಡಿ ಓದಿ: : ವಿವಿ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ
ನಡೆ ನುಡಿ ಉಣ್ಣುವ ಉಡುವುದನ್ನು ಶರಣರು ಕಲಿಸಿದರು. ನಾವು ಊಟ ಎನ್ನುತ್ತಿದ್ದೇವು ಅವರು ಪ್ರಸಾದ ಎಂದು ಭಕ್ತಿ ಸ್ವರೂಪ ನೀಡಿದರು. ಸತಿಪತಿಗಳು ಒಂದಾದ ಭಕ್ತಿ ಹಿತವಾಗಿತ್ತು ಶಿವಂಗೆ ಅಂದರು. ಮಾನವ ದೇವರನ್ನು ಎಲ್ಲ ಕಡೆ ಹುಡುಕಬೇಡ, ಸತ್ಯ ಶುದ್ಧ ಕಾಯಕವಿದ್ದರೆ ದೇವರೇ ನಿನ್ನನ್ನು ಹುಡುಕುತ್ತಾನೆ ಎಂದರು ಬಸವಣ್ಣನವರು. ಪರಮಾತ್ಮನು ಈ ಜಗತ್ತಿನ ಜಾಣ ವ್ಯಾಪಾರಿ. ಅವನು ತೂಕದಲ್ಲಿ, ಹಣದಲ್ಲಿ ಎಂದು ಮೋಸ ಮಾಡುವುದಿಲ್ಲ. ಸಂಪತ್ತನ್ನ ಕೊಟ್ಟರೆ ಕೆರೆ ತುಂಬಿದಂತೆ ಕೊಡುತ್ತಾನೆ. ಅದು ಬಂದಾಗ ಮೈಮರೆತರೆ ಒಣಗಿದ ಕೆರೆಯಾಗುತ್ತದೆ ಎಂದು ತಿಳಿಸಿದರು.
ವೈಯಕ್ತಿಕ ಲೇಸ ಬಯಸಿಕೊಳ್ಳಲಿಲ್ಲ, ಸಕಲ ಜೀವರಾಶಿಗಳಿಗೂ ಲೇಸ ಬಯಸಿದರು ಶರಣರು. ಇವೆಲ್ಲ ನಮಗೆ ಅವರು ಕೊಟ್ಟ ದೊಡ್ಡ ಕೊಡುಗೆಗಳು. ಅವನ್ನು ಸದ್ವಿನಿಯೋಗ ಮಾಡಿಕೊಳ್ಳೋಣ ಎಂದ ಅವರು ವಚನ ಬದುಕಿನ ಮರ್ಮವನ್ನು ತಿಳಿಸಿ ಹೇಳಿದರು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಆಗಸ್ಟ್ 29 | ಗುರುರಾಯರ ಕೃಪೆಯೊಂದಿಗೆ ಬಗೆಯರಿಯಲಿವೆ ದೀರ್ಘಾವಧಿಯ ಸಮಸ್ಯೆ
ಒಂಟಿಕಂಬ ಮುರುಘಾಮಠದ ತಿಪ್ಪೇರುದ್ರಸ್ವಾಮೀಜಿ ಮಾತನಾಡಿ, 25 ಸಾವಿರಕ್ಕಿಂತಲೂ ಹೆಚ್ಚು ವಚನ ದೊರೆತಿವೆ. ಅದನ್ನು ಓದಿ ಪಾಲಿಸುವ ಮನಸ್ಸು ಮಾಡಬೇಕು. ನಾನು ಗುರುವಿನ ಕರುಣೆಯಿಂದ ಗುರು ಲಿಂಗ ಜಂಗಮವ ತಿಳಿದೆ ಎಂದ ಅಕ್ಕನ ವಚನದಲ್ಲಿ ತಿಳಿಸಿರುವಂತೆ ನಾವು ಕೂಡ ಗುರುಗಳ ಕಾರುಣ್ಯಕ್ಕೆ ಒಳಗಾಗಬೇಕು. ಬಸವಣ್ಣನವರು ಮೊದಲು ಇಷ್ಟಲಿಂಗ ಪರಿಶೋಧನೆ ಮಾಡಿದರು. ಸ್ವತಂತ್ರ ವಿಚಾರವಾದವನ್ನು ಬಸವಣ್ಣ ಹೇಳಿದರೆಂದು ನುಡಿದರು.
ಮುಖಂಡರಾದ ಎಚ್.ಸಿ.ಮಲ್ಲಿಕಾರ್ಜುನಪ್ಪ, ಆರ್.ತಮ್ಮಣ್ಣ, ಹೊಸದುರ್ಗದ ನಿವೃತ್ತ ಪ್ರಾಚಾರ್ಯ ಎನ್.ಬಿ.ತಿಪ್ಪೇಸ್ವಾಮಿ, ಮುರುಘಾಮಠದ ಮುರುಘೇಂದ್ರ ಸ್ವಾಮೀಜಿ, ಒಪ್ಪತ್ತಿನಸ್ವಾಮಿ ಮಠದ ಉಪಾಧ್ಯಕ್ಷ ಶಿವಲಿಂಗಪ್ಪ, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಒಪ್ಪತ್ತಿನಸ್ವಾಮಿ ಮಠದ ಕಾರ್ಯದರ್ಶಿ ಕೆ.ಎಸ್.ಕಲ್ಮಠ್, ನಿರ್ದೇಶಕ ಧನುಶಂಕರ್ ಇದ್ದರು.