ಮೊಳಕಾಳ್ಮೂರು
ಕತ್ತಲೆ ಚಿಕಿತ್ಸೆ ಪ್ರಕರಣ | ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎನ್.ವೈ.ಗೋಪಾಲಕೃಷ್ಣ | ವೀಡಿಯೋ ವೈರಲ್ ಮಾಡಿದ್ದಕ್ಕೆ ವೈದ್ಯರಿಗೆ ತರಾಟೆ
CHITRADURGA NEWS | 23 MAY 2024
ಮೊಳಕಾಲ್ಮೂರು: ಕಳೆದೊಂದು ವಾರ ಸುರಿದ ಮಳೆಯಿಂದ ವಿದ್ಯುತ್ ಕೈಕೊಟ್ಟ ಪರಿಣಾಮ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿ ಕತ್ತಲೆಯಲ್ಲಿ ರಾತ್ರಿ ವೇಳೆ ಕತ್ತಲೆಯಲ್ಲಿ, ಕ್ಯಾಂಡಲ್ ಬೆಳಕಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಈ ವಿಚಾರ ರಾಜ್ಯಮಟ್ಟದಲ್ಲಿ ಸದ್ದು ಮಾಡಿ, ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು, ಮೊಳಕಾಲ್ಮೂರು ಕ್ಷೇತ್ರ ಮಾಜಿ ಶಾಸಕ ಬಿ.ಶ್ರೀರಾಮುಲು ಕೂಡಾ ಆಡಳಿತ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದರು.
ಇದನ್ನೂ ಓದಿ: ಮಳೆ ಬಂದಾಗ ಈ ಆಸ್ಪತ್ರೆಯಲ್ಲಿ ಉಂಟು..ಕ್ಯಾಂಡಲ್ ಲೈಟ್ ಟ್ರೀಟ್‌ಮೆಂಟ್…!
ಆಸ್ಪತ್ರೆಗೆ ಸೇರಿದ ಜನರೇಟರ್ ಕೆಟ್ಟು ಹೋಗಿದ್ದು, ಅದನ್ನು ರಿಪೇರಿ ಮಾಡಿಸದೇ ಅಧಿಕಾರಿಗಳು ರೋಗಿಗಳು ಕತ್ತಿನಲ್ಲಿ ಕಳೆಯುವಂತೆ ಮಾಡಿ ಮುಖಭಂಗ ಅನುಭವಿಸಿದ್ದರು.
ಇದರಿಂದ ಅಸಮಧಾನಗೊಂಡಿದ್ದ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಬುಧವಾರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಜನರೇಟರ್ ಕೊಠಡಿಗೂ ಭೇಟಿ ನೀಡಿ ಪರಿಶೀಲಿಸಿ, ಆಡಳಿತ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಈ ವೇಳೆ ಕತ್ತಲಿನಲ್ಲಿ ಚಿಕಿತ್ಸೆ ನೀಡುವ ವೀಡಿಯೋ ವೈರಲ್ ಮಾಡಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ವೈದ್ಯ ಡಾ.ಸುರೇಂದ್ರ ವಿರುದ್ಧ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಡಾ.ಸುರೇಂದ್ರ, ನಾನು ಯಾವುದೇ ವೀಡಿಯೋ ವೈರಲ್ ಮಾಡಿಸಿಲ್ಲ. ಪ್ರಾಮಾಣಿಕವಾಗಿ ಕರ್ತವ್ಯ ಮಾಡಿಕೊಂಡು ಹೋಗುತ್ತಿದ್ದೇನೆ, ಸುಮ್ಮನೆ ಅಪವಾದ ಹೊರಿಸುವುದು ಬೇಡ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಚಳ್ಳಕೆರೆ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ | ₹ 30 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದ ಶಾಸಕ ವೀರೇಂದ್ರ ಪಪ್ಪಿ
ಈ ವೇಳೆ ಶಾಸಕರ ಬೆಂಬಲಿಗರು ಕೂಡಾ ವೈದ್ಯರ ಜೊತೆ ವಾಗ್ವಾದ ನಡೆಸಿದರು. ಒಂದು ಹಂತದಲ್ಲಿ ಮಾತಿಗೆ ಮಾತು ಬೆಳೆಯುತ್ತಾ ಹೋದಂತೆ ಶಾಸಕ ಎನ್.ವೈ.ಜಿ ನಿನ್ನ ಬಗ್ಗೆ ಎಲ್ಲಾ ಗೊತ್ತು, ನಮಸ್ಕಾರ ಎಂದು ಹೇಳಿ ಹೊರಟರು.