ಮುಖ್ಯ ಸುದ್ದಿ
ಸಿರಿಧಾನ್ಯ ಪಾಕ ಸ್ಪರ್ಧೆ: ರಾಜ್ಯಮಟ್ಟಕ್ಕೆ ಸಜ್ಜೆ ಲಾಡು, ಚುರುಮುರಿ ಪ್ರವೇಶ
ಚಿತ್ರದುರ್ಗ ನ್ಯೂಸ್.ಕಾಂ
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ಬುಧವಾರ ನಡೆದ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಸಿರಿಧಾನ್ಯಗಳ ಪೌಷ್ಠಿಕಾಂಶದ ಮಹತ್ವದ ಸಾರಿತು.
ಸಿರಿಧಾನ್ಯ ಸಿಹಿ ಖಾದ್ಯದಲ್ಲಿ ಸಜ್ಜೆ ಲಾಡು ತಯಾರಿಸಿದ ಹಿರಿಯೂರು ತಾಲ್ಲೂಕು ವಿವಿ.ಸಾಗರದ ಎಸ್. ಸೂರ್ಯ ಪ್ರಥಮ ಬಹುಮಾನ ಪಡೆದರು. ರಾಗಿ ಹಲ್ವ ಖಾದ್ಯ ತಯಾರಿಸಿದ ಚಿತ್ರದುರ್ಗ ತಾಲ್ಲೂಕು ದೊಡ್ಡಸಿದ್ದವ್ವನಹಳ್ಳಿಯ ಜೆ.ವಿ.ವೀಣಾ ದ್ವಿತೀಯ ಬಹುಮಾನ ಪಡೆದರು. ನವಣಕ್ಕಿ ಕಲ್ಲುಂಡೆ ಖಾದ್ಯ ತಯಾರಿಸಿದ ಹೊಸದುರ್ಗ ತಾಲ್ಲೂಕು ಕೆರೆಹೊಸಹಳ್ಳಿಯ ಎ.ವೈ.ಓಂಕಾರಮ್ಮ ತೃತೀಯ ಬಹುಮಾನ ಪಡೆದರು.
ಸಿರಿಧಾನ್ಯ ಖಾರ ಖಾದ್ಯದಲ್ಲಿ ಸಿರಿಧಾನ್ಯ ಚುರುಮುರಿ ತಯಾರಿಸಿದ ಹೊಸದುರ್ಗ ತಾಲ್ಲೂಕು ಆನಿವಾಳದ ಪಿ.ಎಂ.ಸುಮಾ ಪ್ರಥಮ, ಹಾರಕ ಪಲಾವ್ ತಯಾರಿಸಿದ ಚಿತ್ರದುರ್ಗ ತಾಲ್ಲೂಕು ಚಿಕ್ಕಬೆನ್ನೂರಿನ ಬಿ.ಎಸ್.ಶಾಂತಕುಮಾರಿ ದ್ವೀತಿಯ ಹಾಗೂ ಸಜ್ಜೆ ಮಸಾಲೆ ರೊಟ್ಟಿ ತಯಾರಿಸಿದ ಚಿತ್ರದುರ್ಗ ನಗರದ ಕೆಳಗೋಟೆಯ ರಾಜೇಶ್ವರಿ ಬಡಿಗೇರ ತೃತೀಯ ಬಹುಮಾನ ಪಡೆದರು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಡಿ.23ರಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಒಟ್ಟು 26 ಜನರು ಭಾಗವಹಿಸಿದ್ದರು.
ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ವಿವಿಧ ಪದಾರ್ಥಗಳಾದ ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ನವಣಕ್ಕಿ ಕಲ್ಲುಂಡೆ, ನವಣಕ್ಕಿ ಬೇಸನ್ ಉಂಡೆ, ರಾಗಿ ಬೆಲ್ಲದ ಬರ್ಫಿ, ಸಿರಿಧಾನ್ಯ ಬಿಸ್ಕತ್ತು, ಸಿರಿಧಾನ್ಯ ಚುರುಮುರಿ, ಸಜ್ಜೆ ಕಡಬು, ನವಣೆ ಪೇಡಾ, ಸಾವೆ ಕಿಚಡಿ, ರಾಗಿ ಹಲ್ವ, ಬರಗು ಉಂಡೆ, ಊದಲು ಪಾಯಸ, ಸಜ್ಜೆ ಲಾಡು, ಸಾಮೆ ಬಿಸಿಬೆಳೆಬಾತ್, ಸಜ್ಜೆ ರೊಟ್ಟಿ, ನವಣಕ್ಕಿ ಬಿಸಿಬೇಳೆ ಬಾತ್, ನವಣಕ್ಕಿ ಚಿತ್ರಾನ್ನ, ನವಣಕ್ಕಿ ಚಕ್ಕುಲಿ, ಸಾವೆಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿಸಿದರು.
ಸಿರಿಧಾನ್ಯ ಖಾದ್ಯ ತಯಾರಿಕೆಗೆ ಬಳಸಿದ ಸಾಮಗ್ರಿಗಳು, ರುಚಿ, ಪ್ರದರ್ಶನ, ತೋರಿಕೆ, ಸುವಾಸನೆ, ರಚನಾ ವಿನ್ಯಾಸ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ತೀರ್ಪುಗಾರರು ಪರಿಶೀಲಿಸಿ, ಅತ್ಯುತ್ತಮ ಸಿರಿಧಾನ್ಯಗಳ ಸಿಹಿ ತಿನಿಸಿಗೆ ಹಾಗೂ ಖಾರ ತಿನಿಸಿಗೆ ಪ್ರಥಮ-5000 ರೂ., ದ್ವಿತೀಯ-3000 ರೂ. ಹಾಗೂ ತೃತೀಯ- 2000 ರೂ. ನಗದು ಬಹುಮಾನ ನೀಡಲಾಯಿತು.
ತೀರ್ಪುಗಾರರಾಗಿ ಡಾ.ಸರಸ್ವತಿ, ಎನ್.ಸುಧಾ, ಶೋಭಾ, ಡಾ.ಬಿ.ವಿ.ಸುಧಾ ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ಸಹಾಯಕ ನಿರ್ದೇಶಕರಾದ ಚಂದ್ರಕುಮಾರ್, ಪ್ರವೀಣ್ ಚೌಧರಿ ಇದ್ದರು.