Connect with us

    ಒಂದೇ ವರ್ಷಕ್ಕೆ ಸರ್ಕಾರಿ ಖಜಾನೆ ಲೂಟಿ | ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪ

    govinda karajola

    ಮುಖ್ಯ ಸುದ್ದಿ

    ಒಂದೇ ವರ್ಷಕ್ಕೆ ಸರ್ಕಾರಿ ಖಜಾನೆ ಲೂಟಿ | ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪ

    CHITRADURGA NEWS | 01 JUNE 2024
    ಚಿತ್ರದುರ್ಗ: ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಆಗಿದೆ. ಸರ್ಕಾರಿ ಖಜಾನೆಯ ಹಗಲು ದರೋಡೆ ಆಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.

    ‘ವಾಲ್ಮೀಕಿ ಅಭಿವೃದ್ಧಿ‌ ನಿಗಮದ 187 ಕೋಟಿ ರೂ.ಗಳನ್ನು ನೇರವಾಗಿ ಖಜಾನೆಯಿಂದ ನೆರೆ ರಾಜ್ಯಗಳ ಲೋಕಸಭಾ ಚುನಾವಣೆಗೆ ಹೋಗಿರುವ ಗುಮಾನಿ ಇದೆ. ಆಂಧ್ರದ ಒಂಬತ್ತು ಕಂಪನಿಗಳಿಗೆ ಹಣ ಹೋಗಿದೆ’ ಎಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

    ‘ಚಂದ್ರಶೇಖರ್‌ ಅವರ ಡೆತ್‌ನೋಟ್‌ನಲ್ಲಿ ಉಪಖಾತೆ ತೆರೆಯಲು‌‌ ಸಚಿವರೇ ಮೌಖಿಕ ಆದೇಶ ನೀಡಿದ್ದರು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಉಪಖಾತೆ ತೆರೆದ ನಂತರ ಚೆಕ್‌ಬುಕ್‌, ಪಾಸ್‌ಬುಕ್ ತೆಗೆದುಕೊಂಡಿರಲಿಲ್ಲ. ಇದಕ್ಕೆ ಎಂಡಿ ಆದೇಶ ಇತ್ತು. ಪ್ರಕರಣ ಬಯಲಿಗೆ ಬಂದು ಇಷ್ಟು ದಿನ ಆದರೂ‌ ಸಿಎಂ,‌ಡಿಸಿಎಂ ಸೇರಿದಂತೆ‌ ಸಚಿವರು ಬಾಯಿ ಬಿಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ‘ಸಿದ್ದರಾಮಯ್ಯ ಜನತಾ ಪರಿವಾರದಲ್ಲಿ ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಲಾಲ್‌ ಬಹದ್ದೂರ್ ಶಾಸ್ತ್ರೀ ಅವರು ಸಣ್ಣ ರೈಲು ಅಪಘಾತಕ್ಕೆ ರಾಜೀನಾಮೆ ನೀಡಿದ್ದರು. ರಾಮಕೃಷ್ಣ ಹೆಗಡೆ ಅವರು ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗಲೂ ರಾಜೀನಾಮೆ ಕೊಟ್ಟಿದ್ದರು’ ಎಂದರು.

    ಕ್ಲಿಕ್ ಮಾಡಿ ಓದಿ: ಮತ ಎಣಿಕೆ ಕಾರ್ಯಕ್ಕೆ ದಿನಗಣನೆ | ಮಧ್ಯಾಹ್ನದೊಳಗೆ ಫಲಿತಾಂಶ ಘೋಷಣೆ ಸಾಧ್ಯತೆ

    ‘ಎಸ್‌ಐಟಿ, ಸಿಓಡಿ ತನಿಖೆಯಿಂದ ನಿಸ್ಪಕ್ಷಪಾತ ತನಿಖೆ ಸಾಧ್ಯ ಇಲ್ಲ. ಶೆಡ್ಯೂಲ್ಡ್‌ ಬ್ಯಾಂಕ್ ಆಗಿರುವುದರಿಂದ ಈ ಸಂಸ್ಥೆಗಳಿಂದ ತನಿಖೆ ಸರಿಯಲ್ಲ. ಕೇಂದ್ರದ ತನಿಖಾ ಸಂಸ್ಥೆಗಳಿಂದ ತನಿಖೆ ಆಗಬೇಕು. ಆರ್ಥಿಕ ವರ್ಷಾಂತ್ಯಕ್ಕೆ ಎಲ್ಲ ಇಲಾಖೆ,‌ ನಿಗಮಗಳಿಂದ ಆಡಿಟ್‌ ಆಗುತ್ತದೆ. ಆಗ ಈ ಹಣ ವರ್ಗಾವಣೆ ವಿಚಾರ ಬಯಲಿಗೆ ಬರಬೇಕಿತ್ತು.‌ ಆದರೂ ಬಂದಿಲ್ಲ ಎಂದರೆ ಇದರಲ್ಲಿ ಸರ್ಕಾರದ ಪಾತ್ರ ಇದೆ. ಹಾಗಾಗಿ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

    ‘ಇಡೀ ಸಂಪುಟ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ರಾಜ್ಯದ ಆರ್ಥಿಕ ಇಲಾಖೆಯ ನೇರ ಹೊಣೆ ಇರುವ ಹುಜುರ್‌ ಖಾತೆಯಿಂದಲೂ 44 ಕೋಟಿ ರೂ.ಹೋಗಿದೆ. ಇದನ್ನೆಲ್ಲಾ ಗಮನಿಸಿದಾಗ ಸರ್ಕಾರ ಹಗಲು ದರೋಡೆ ಮಾಡಿದೆ’ ಎಂದು ತಿಳಿಸಿದರು.

    ‘ದಾವಣಗೆರೆಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 80 ಲಕ್ಷ ರೂ.ಬಿಲ್‌ ಕೊಡಲು‌ ಕಮಿಷನ್‌ಗೆ ಸತಾಯಿಸಿದ್ದಾರೆ. ಈ ಕಾರಣಕ್ಕೆ ಆತ್ಮಹತ್ಯೆ ಆಗಿದೆ. ಈಶ್ವರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ಮರಣದಂಡನೆಗೆ ಗುರಿಪಡಿಸಬೇಕು ಎಂದಿದ್ದರು. ಈಗ ಯಾಕೆ ಸುಮ್ಮನಿದ್ದಾರೆ’ ಎಂದು ಪ್ರಶ್ನಿಸಿದರು.

    ‘ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯ ಆರು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೋಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕ್ಲಿಕ್ ಮಾಡಿ ಓದಿ: ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಖಂಡನೆ | ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು ಅಸಮಧಾನ

    ವಿಧಾನ ಪರಿಷತ್‌ ಸದಸ್ಯ ಕೆ.ಎಸ್.ನವೀನ್‌ ಮಾತನಾಡಿ, ‘ಸಿದ್ದರಾಮಯ್ಯ‌ ನೇತೃತ್ವದ ಸರ್ಕಾರ ಸದಾ ಶೋಷಿತರ ಪರ ಎಂದು ಹೇಳುತ್ತಾ ಅವರ ಹಣವನ್ನೇ ಯಾಕೆ ಬೇನಾಮಿ ಕಂಪನಿಗಳಿಗೆ ವರ್ಗಾವಣೆ ಮಾಡಿಸಿ ದರೋಡೆ ಮಾಡಿಸಿದ್ದೀರಿ. ಚಿತ್ರದುರ್ಗ ಭಾಗದಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾಗಿತ್ತು. ಇಲ್ಲಿ ನಿಗಮದಲ್ಲಿ ಕೇಳಿದರೆ ಯಾವ ಸೌಲಭ್ಯವನ್ನೂ ಕೊಡುವುದಿಲ್ಲ. ಅದೇ ಹಣ ಬೇನಾಮಿ ಕಂಪನಿಗಳಿಗೆ ವರ್ಗಾವಣೆ ಮಾಡಿದ್ದಾರೆ’ ಎಂದರು.

    ‘ಯಾವುದೇ ಬ್ಯಾಂಕ್ ಅಧಿಕಾರಿ ಹೀಗೆ ಮನಸೋ ಇಚ್ಚೆ ವರ್ಗಾವಣೆ ಮಾಡುವುದಿಲ್ಲ. ಸರ್ಕಾರ ಶಾಮಿಲಾಗಿಯೇ ಈ ಕೆಲಸ ಮಾಡಿದೆ. ಯೂನಿಯನ್‌ ಬ್ಯಾಂಕಿನವರೇ ಕೇಂದ್ರದ ಆರ್ಥಿಕ ಇಲಾಖೆಗೆ ತನಿಖೆಗೆ ಪತ್ರ ಬರೆದ ನಂತರ ತಮ್ಮ ಬುಡಕ್ಕೆ ಬರುತ್ತೆ ಎನ್ನುವ ಕಾರಣಕ್ಕೆ ತನಿಖೆಗೆ ಸಮಿತಿ ರಚಿಸಿದ್ದಾರೆ. ಕೇವಲ ಸಚಿವರ ರಾಜೀನಾಮೆ ಅಲ್ಲ, ಮುಖ್ಯಮಂತ್ರಿಯೇ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

    ‘ಇದು ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾದ ಹಣ. ಈ ನಿಟ್ಟಿನಲ್ಲಿ ಬಿಜೆಪಿ ಪ್ರತಿ ಹಳ್ಳಿಯಲ್ಲೂ ಜಾಗೃತಿ‌‌ ಮೂಡಿಸಿ ಹೋರಾಟ ಮಾಡುತ್ತೇವೆ. ಈಗಾಗಲೇ‌ ಮೊಳಕಾಲ್ಮುರಿನಲ್ಲಿ ದೊಡ್ಡ ಹೋರಾಟ ನಡೆದಿದೆ’ ಎಂದರು.

    ಜಿಲ್ಲಾಧ್ಯಕ್ಷ ಎ. ಮುರುಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್‌ ಸಿದ್ದಾಪುರ, ಖಜಾಂಚಿ ಮಾಧುರಿ ಗಿರೀಶ್‌, ಕಲ್ಲೇಶಯ್ಯ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top