ಲೋಕಸಮರ 2024
ಹೊಳಲ್ಕೆರೆ ಪ್ರವಾಸ ರದ್ದುಗೊಳಿಸಿದ ಕಾರಜೋಳ | ಮಾರ್ಗ ಬದಲಾಯಿಸಿ ಸಂಚಾರ
CHITRADURGA NEWS | 31 MARCH 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರಿಗೆ ಎಲ್ಲೆಡೆ ಗೋ ಬ್ಯಾಕ್…ಸ್ವಾಗತ ಎದುರಾಗುತ್ತಿದೆ. ಈ ಕಾರಣಕ್ಕೆ ನಿಗಧಿತ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಪೂರ್ವ ನಿಗಧಿಯಂತೆ ಶನಿವಾರ ಬೆಳಿಗ್ಗೆ ಶಾಸಕ ಎಂ.ಚಂದ್ರಪ್ಪ ಅವರ ಮನೆಗೆ ಭೇಟಿ ನೀಡಬೇಕಿತ್ತು. ಆದರೆ ಈ ಕಾರ್ಯಕ್ರಮ ರದ್ದು ಮಾಡಿದರು. ಬಳಿಕ ಹೊಳಲ್ಕೆರೆ ಪಟ್ಟಣದ ಪ್ರಸನ್ನ ಗಣಪತಿ ದೇವಾಲಯಕ್ಕೆ ಭೇಟಿ ನೀಡಬೇಕಿದ್ದ ಅವರು ಮಾರ್ಗ ಬದಲಿಸಿ, ಸಿರಿಗೆರೆಯಿಂದ ಹೊಸದುರ್ಗಕ್ಕೆ ತೆರಳಿದರು.
ಗೋವಿಂದ ಕಾರಜೋಳ ಪಟ್ಟಣಕ್ಕೆ ಬರುವ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು, ಶಾಸಕ ಎಂ.ಚಂದ್ರಪ್ಪ ಹಾಗೂ ಎಂ.ಸಿ.ರಘುಚಂದನ್ ಅಭಿಮಾನಿಗಳು ಮುಖ್ಯವೃತ್ತದಲ್ಲಿ ಜಮಾಯಿಸಿದರು. ಇದರಿಂದ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣ ಆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು. ಗೋವಿಂದ ಕಾರಜೋಳ ಕಾರ್ಯಕ್ರಮ ರದ್ದಾಗಿದ್ದರಿಂದ ಬಿಜೆಪಿ ಕಾರ್ಯಕರ್ತರು ಮುಖ್ಯವೃತ್ತದಲ್ಲೇ ಪ್ರತಿಭಟನೆ ನಡೆಸಿ ‘ಗೋ ಬ್ಯಾಕ್ ಕಾರಜೋಳ’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಲಿಕ್ ಮಾಡಿ ಓದಿ: ನಾಲ್ವರು ಶಿಕ್ಷಕರು ಅಮಾನತು | ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಕರ್ತವ್ಯ ಲೋಪ
ನಾವು ಅಪ್ಪಟ ಬಿಜೆಪಿ ಕಾರ್ಯಕರ್ತರು. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಆದರೆ ಎಲ್ಲಿಂದಲೋ ಬಂದಿರುವ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಲು ನಾವು ತಯಾರಿಲ್ಲ. ಈಗಲೂ ಕಾಲ ಮಿಂಚಿಲ್ಲ. ವರಿಷ್ಠರು ಇಲ್ಲಿನ ಪರಿಸ್ಥಿತಿ ಅರಿತು ಎಂ.ಸಿ.ರಘುಚಂದನ್ ಅವರಿಗೆ ಟಿಕೆಟ್ ಕೊಡಬೇಕು’ ಎಂದು ಪುರಸಭೆ ಸದಸ್ಯ ಆರ್.ಎ.ಅಶೋಕ್ ಆಗ್ರಹಿಸಿದರು.
ಪುರಸಭೆ ಸದಸ್ಯ ಆರ್.ಎ.ಅಶೋಕ್, ಬಸವರಾಜ ಯಾದವ್, ಗಿರೀಶ್, ಶಶಿಧರ್, ನಾಗರಾಜ್, ಪರಮೇಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.