ಮುಖ್ಯ ಸುದ್ದಿ
ಅರ್ಚಕ ನಿಧನ | ಜಾಲಿಕಟ್ಟೆ ಚೌಡೇಶ್ವರಿ ದೇವಿ ಜಾತ್ರೆ ರದ್ದು
CHITRADURGA NEWS | 01 FEBRUARY 2024
ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಜಾಲಿಕಟ್ಟೆ ಗ್ರಾಮದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆ ಆರಂಭವಾಗಿದ್ದು, ಜಾತ್ರೆಯ ನಡುವೆಯೇ ದೇವಸ್ಥಾನದ ಅರ್ಚಕರು ನಿಧನರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾತ್ರೆಯನ್ನು ರದ್ದು ಮಾಡಿದ್ದಾರೆ.
ಜಾಲಿಕಟ್ಟೆ ಗ್ರಾಮದೇವತೆ ಶ್ರೋ ಚೌಡೇಶ್ವರಿ ದೇವಸ್ಥಾನದ ಅರ್ಚಕ ರಾಜು ಪೂಜಾರಿ(40) ಗುರುವಾರ ನಿಧನರಾಗಿದ್ದಾರೆ.
ಇದನ್ನೂ ಓದಿ: ಸಾಣೇಹಳ್ಳಿ ಸಾಹಿತ್ಯ ಸಮ್ಮೇಳನಕ್ಕೆ ಒಒಡಿ ಸೌಲಭ್ಯ
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀರ್ಮಾನಿಸಿ ಫೆಬ್ರವರಿ 1 ರಿಂದ 3 ರವರೆಗೆ ನಡೆಯಬೇಕಿದ್ದ ಶ್ರೀ ಚೌಡೇಶ್ವರಿ ಜಾತ್ರೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ.
ಈಗಾಗಲೇ ಚೌಡೇಶ್ವರಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಜನವರಿ 31 ರಂದು ಪೂಜಾರರ ಮನೆಯಿಂದ ಉಡಕ್ಕಿ ಸೇವೆ ನಡೆದಿದ್ದು, ಫೆ.1 ರಂದು ಚಂದ್ರವಳ್ಳಿ ಕೆರೆಯಲ್ಲಿ ಗಂಗಾಪೂಜೆ ನೆರವೇರಬೇಕಿತ್ತು. ಫೆ.2 ಶುಕ್ರವಾರ ಶ್ರೀ ಈಶ್ವರ ದೇವರ ಹಾಗೂ ಶ್ರೀ ಆಂಜನೇಯ ಸ್ವಾಮಿಯ ರುದ್ರಾಭಿಷೇಕ, ನಂತರ ಅಮ್ಮನವರ ರುದ್ರಾಭಿಷೇಕ ನೆರವೇರಬೇಕಿತ್ತು. ಸಂಜೆ ಅನ್ನ ಸಂತರ್ಪಣೆ ಹಾಗೂ ದೇವಿಯ ಮೆರವಣಿಗೆ ನಡೆಯುವುದಿತ್ತು.
ಇದನ್ನೂ ಓದಿ: ಕೇಂದ್ರ ಬಜೆಟ್ ಬಗ್ಗೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಸಮಧಾನ
ಫೆ.3 ರಂದು ಬೆಳಗ್ಗೆ 10ಕ್ಕೆ ಓಕಳಿ ಸೇವೆ, ಗ್ರಾಮಕ್ಕೆ ಸರಗ ಹಾಕುವ ಕಾರ್ಯಕ್ರಮಗಳಿದ್ದವು. ಆದರೆ, ಅರ್ಚಕರ ನಿಧನದಿಂದ ಜಾತ್ರಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಗ್ರಾಮಸ್ಥರಾದ ರುದ್ರಪ್ಪ ಮಾಹಿತಿ ನೀಡಿದ್ದಾರೆ.