Connect with us

ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ | ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ

ಮುಖ್ಯ ಸುದ್ದಿ

ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ | ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

CHITRADURGA NEWS | 06 FEBRUARY 2024

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‍ನಲ್ಲಿ ಅನುದಾನ ಘೋಷಣೆ ಮಾಡಿ, ಈವರೆಗೆ ಬಿಡುಗಡೆ ಮಾಡದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಸಂಸದ ಎ.ನಾರಾಯಣಸ್ವಾಮಿ ಅವರ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.

ಸೋಮವಾರ ನಗರದ ಕನಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ರೈತರು, ಯೋಜನೆಗೆ ಅನುದಾನ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಇದನ್ನೂ ಓದಿ: ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‍ನಲ್ಲಿಯೇ 5300 ಕೋಟಿ ರೂ.ಗಳನ್ನು ಘೋಷಣೆ ಮಾಡಿದೆ. ಆದರೆ, ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದವರು, ಈಗ ಅದನ್ನೂ ಮಾಡಿಲ್ಲ ಎಂದು ದೂರಿದರು.

ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಈಗ ಕೇಂದ್ರ ಸರ್ಕಾರ ಯೋಜನೆಗೆ ಕನಿಷ್ಟ ಒಂದು ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡುವವರೆಗೆ ಧರಣಿ ಮುಗಿಸುವುದಿಲ್ಲ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಿಂದ ಒಂದೊಂದು ದಿನ ರೈತರು ಬರುವಂತೆ ಮಾಡಲಾಗುತ್ತಿದೆ ಎಂದು ರೈತ ಸಂಘದವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ

ಅನುದಾನ ಬಿಡುಗಡೆ ಆಗುವವರೆಗೆ ಜಾಗ ಬಿಡಲ್ಲ:

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಭದ್ರಾಮೇಲ್ದಂಡೆ ಯೋಜನೆಗಾಗಿ ಕಳೆದ 30-40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಐದು ವರ್ಷಗಳಾದರೂ ಏಕೆ ನಯಾ ಪೈಸೆಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿಲ್ಲ. ಮೊದಲನೆ ಕಂತಿನ ಹಣ ಬಿಡುಗಡೆಯಾಗುವತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಒಂದೊಂದು ಚುನಾವಣೆಯಲ್ಲೂ ವಿವಿಧ ಪಕ್ಷಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ರೈತರನ್ನು ವಂಚಿಸುತ್ತ ಬರುತ್ತಿವೆ. ಕಳೆದ ಬಜೆಟ್‍ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ತೆಗೆದಿಟ್ಟಿರುವುದಾಗಿ ಭಾಷಣ ಮಾಡಿದರು. ಹಣ ಮಾತ್ರ ಏಕೆ ನೀಡುತ್ತಿಲ್ಲ ಎಂದು ಜಿಲ್ಲೆಯ ಶಾಸಕರು, ಕೇಂದ್ರ ಮಂತ್ರಿ ಹಾಗೂ ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದರು.?

ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ ಸಾರ್ವಜನಿಕರಿಂದ ಅಲಹೆಗಳ ಆಹ್ವಾನ

ರಾಜ್ಯಾದ್ಯಂತ ಭೀಕರ ಬರಗಾಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಟಕವಾಡುತ್ತಿವೆ. ಎಲ್ಲಾ ತಕರಾರಿದೆಯೋ ಅಲ್ಲಿ ತ್ವರಿತವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿದರೆ ಬೋರ್‍ವೆಲ್‍ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ರೈತ ಕುಲ ಬೇಡಿದ ಕುಲವಲ್ಲ. ಕೊಟ್ಟ ಕುಲ. 64 ಲಕ್ಷ ಜೀವರಾಶಿಗಳನ್ನು ಸಾಕಿ ಸಲಹಿದ್ದೇವೆ. ರೈತರು ಮತ್ತು ಯೋಧರನ್ನು ನೆನಸಿಕೊಂಡು ದೇಶದ ಜನ ಊಟ ಮಾಡಬೇಕು. ಸಾವಯವ ಕೃಷಿ ಕಡೆ ರೈತರು ಗಮನ ಹರಿಸಬೇಕು. ಸಾಲಕ್ಕೆ ನಾವು ಹೊಣೆಗಾರರಲ್ಲ. ಸರ್ಕಾರ ಜವಾಬ್ದಾರಿ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಾಲ ವಸೂಲಿಗೆ ಹಳ್ಳಿಗೆ ಬಂದರೆ ದೇವರ ಕಂಬಕ್ಕೆ ಕಟ್ಟಿ ಎಂದು ರೈತರಿಗೆ ಹೆಚ್.ಆರ್.ಬಸವರಾಜಪ್ಪ ಕರೆ ನೀಡಿದರು.

ಇದು ನಮ್ಮ ಜೀವನ್ಮರಣದ ಹೋರಾಟ:

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಎಲ್ಲಾ ರಾಜಕಾರಣಿಗಳು ಅಧಿಕಾರ ನಡೆಸಿ ಕೈಚೆಲ್ಲಿದ್ದಾಯಿತು. ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ. ಭದ್ರಾಮೇಲ್ದಂಡೆ ಯೋಜನೆ ಇಂದಲ್ಲ ನಾಳೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯುತ್ತದೆಂದು ದೇವೇಂದ್ರನ ಆನೆ ರೀತಿ ನೋಡುತ್ತಿದ್ದೇವೆ. ಹಾಗಾಗಿ ಕೇಂದ್ರ ಮಂತ್ರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿಗೆ ಮುಂದಾಗಿದ್ದೇವೆ. ಅಬ್ಬಿನಹೊಳಲು ಬಳಿ 1.6 ಆರು ಕಿ.ಮೀ. ನಷ್ಟು ಸಮಸ್ಯೆಯಿರುವುದನ್ನು ಸರಿಪಡಿಸಿ ಶೀಘ್ರವೇ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ

ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ಕೊಡಬೇಕು. ತುಂಗಾದಿಂದ ಭದ್ರೆಗೆ ಎರಡು ಕಡೆ ಲಿಫ್ಟ್ ಕೆಲಸ ಪೂರ್ಣವಾಗಬೇಕು. ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು. ಒಂದು ತಿಂಗಳ ಹಿಂದೆ ಎಂ.ಪಿ.ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದೆವು. ಇದುವರೆವಿಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ದೇವಮೂಲೆಯಿಂದ ಪ್ರಚಾರ ಆರಂಭಿಸಿದ ಎಂ.ಸಿ.ರಘುಚಂದನ್

ಜಿಲ್ಲೆಯ ಅಭಿವೃದ್ದಿ ಮುಖ್ಯವೆ ವಿನಃ ರಾಜಕಾರಣ ಪ್ರಮುಖವಾಗಬಾರದು. ಇದು ನಮ್ಮ ಜೀವನ್ಮರಣದ ಹೋರಾಟ. ಹಣ ಬಿಡುಗಡೆಯಾಗುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಲಿಂಗಪ್ಪ, ಅಪ್ಪರಸನಹಳ್ಳಿ ಬಸವರಾಜ್, ಸುಲ್ತಾನಿಪುರ ರಾಮರೆಡ್ಡಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಹೆಚ್.ಸಿದ್ದಪ್ಪ, ಕುರುಬರಹಳ್ಳಿ ಶಿವಣ್ಣ, ಚಿಕ್ಕಬ್ಬಿಗೆರೆ ನಾಗರಾಜ್, ವನಜಮ್ಮ, ನಾಗರತ್ನ, ಕಮಲಮ್ಮ, ಮಂಜುಳ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಎಲ್ಲಾ ತಾಲ್ಲೂಕು ಅಧ್ಯಕ್ಷರು, ವಿವಿಧ ಜನಪರ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡಿದ್ದವು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version