ಮುಖ್ಯ ಸುದ್ದಿ
ಭದ್ರೆಗೆ ಹೆಚ್ಚಿದ ಒಳ ಹರಿವು | ಒಂದೇ ದಿನಕ್ಕೆ 1.5 ಅಡಿ ನೀರು ಸಂಗ್ರಹ
CHITRADURGA NEWS | 29 JUNE 2024
ಚಿತ್ರದುರ್ಗ: ಮಲೆನಾಡು ಭಾಗದಲ್ಲಿ ಮಳೆ ಚುರುಕುಗೊಂಡಿದ್ದು, ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. 24 ಗಂಟೆಯಲ್ಲಿ ಜಲಾಶಯದ ನೀರಿನಮಟ್ಟ 1.5 ಅಡಿಯಷ್ಟು ಏರಿಕೆಯಾಗಿದೆ. ಭದ್ರಾ ಜಲಾಶಯಕ್ಕೆ 8,655 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹಾಗೂ ತುಂಗಾ ನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಭದ್ರೆಗೆ ಒಳಹರಿವು ದುಪ್ಪಟ್ಟುಗೊಂಡಿದೆ.
ಜಲಾಶಯದಲ್ಲಿ ಗುರುವಾರ ಒಳಹರಿವು 4,082 ಕ್ಯುಸೆಕ್ ಹಾಗೂ ನೀರಿನ ಮಟ್ಟ 120.8 ಅಡಿ ಇತ್ತು. ಸದ್ಯ ಜಲಾಶಯದ ನೀರಿನ ಮಟ್ಟ 122.3 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 137 ಅಡಿ ನೀರಿನ ಸಂಗ್ರಹ ಇತ್ತು. 186 ಅಡಿ ಸಾಮರ್ಥ್ಯದ ಜಲಾಶಯ ಭರ್ತಿ ಆಗಲು ಇನ್ನೂ 65 ಅಡಿ ನೀರು ಸಂಗ್ರಹವಾಗಬೇಕಿದೆ.
ಕ್ಲಿಕ್ ಮಾಡಿ ಓದಿ: ಭರಮಸಾಗರ ದೊಡ್ಡಕೆರೆಗೆ ಹರಿದ ನೀರು | ಸಂಭ್ರಮಿಸಿದ ರೈತರು
24 ಗಂಟೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್‌ನಲ್ಲಿ 6.05 ಸೆಂ.ಮೀ, ಬೆಟ್ಟಗೆರೆ 3.2, ಕಿರಗುಂದ 2.8, ಬಾಳೂರು 2.7 ಸೆಂ.ಮೀ ಮಳೆಯಾಗಿದೆ. ಬೇಗಾರು 4.65 ಸೆಂ.ಮೀ, ಶಾನುವಳ್ಳಿಯಲ್ಲಿ 4.6 ಸೆಂ.ಮೀ, ಕಮ್ಮರಡಿ 3.7, ನಿಲುವಾಗಿಲು 3.15 ಸೆಂ.ಮೀ ಹಿರೇಕೂಡಿಗೆಯಲ್ಲಿ 2.7 ಸೆಂ.ಮೀ ಮಳೆ ದಾಖಲಾಗಿದೆ.
ಇನ್ನೂ ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಗುರುವಾರದಿಂದ ಎರಡು ಕ್ರೆಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿತ್ತು. ಶುಕ್ರವಾರ ಆರು ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: ನನಸಾಯ್ತು ಶತಮಾನದ ಕನಸು | ಐತಿಹಾಸಿಕ ಧರ್ಮಪುರ ಕೆರೆಗೆ ಹರಿದ ಗಂಗೆ
3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಜಲಾಶಯ ಸಂಪೂರ್ಣ (584.24 ಮೀಟರ್) ಭರ್ತಿಯಾಗಿದೆ. ಜಲಾಶಯಕ್ಕೆ 11,342 ಕ್ಯುಸೆಕ್ ಒಳಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯಕ್ಕೆ 12,249 ಕ್ಯುಸೆಕ್ ಒಳಹರಿವು ದಾಖಲಾಗಿದೆ. 1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 1,748.70 ಅಡಿ ನೀರಿನ ಸಂಗ್ರಹ ಇತ್ತು. ಲಿಂಗನಮಕ್ಕಿಯಿಂದ 2445.14 ಕ್ಯುಸೆಕ್ ಹೊರ ಹರಿವು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,740.05 ಅಡಿ ನೀರಿನ ಸಂಗ್ರಹ ಇತ್ತು.