ಮುಖ್ಯ ಸುದ್ದಿ
ನನಸಾಯ್ತು ಬಹು ವರ್ಷದ ಕನಸು | ಲೋಕಾರ್ಪಣೆಯಾಯ್ತು ತಾಯಿ ಮಕ್ಕಳ ಆಸ್ಪತ್ರೆ
CHITRADURGA NEWS | 07 MARCH 2024
ಚಿತ್ರದುರ್ಗ: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ ಚಿತ್ರದುರ್ಗದ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣ ಸ್ವಾಮಿ ಆಸ್ಪತ್ರೆಯನ್ನು ಚಿತ್ರದುರ್ಗದ ತಾಯಿ ಮಕ್ಕಳ ಸೇವೆ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ₹ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರ ಸದುಪಯೋಗ ಆಗಬೇಕು. ಆಸ್ಪತ್ರೆ ತಾಯಿ ಮಕ್ಕಳಿಗೆ ಆಸರೆಯಾಗಬೇಕು’ ಎಂದರು.
ಕ್ಲಿಕ್ ಮಾಡಿ ಓದಿ: https://chitradurganews.com/anemia-is-a-problem-for-pregnant-women/
‘ನಾಯಕನಹಟ್ಟಿಯಲ್ಲಿ ₹ 8 ಕೋಟಿ, ಚಳ್ಳಕೆರೆಯಲ್ಲಿ ₹ 13 ಕೋಟಿ ಹಾಗೂ ಹಿರಿಯೂರು ನಗರದಲ್ಲಿ ₹ 6 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಎನ್‌ಎಚ್‌ಎಂ ಅಡಿ ₹ 260 ಕೋಟಿ ವ್ಯಯಿಸಲಾಗಿದೆ’ ಎಂದು ತಿಳಿಸಿದರು.
‘ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ನುರಿತ ವೈದ್ಯರಿಂದ ಸೇವೆ ದೊರೆಯದಿದ್ದರೆ, ಜನರು ರಾಜಕಾರಣಗಳಿಗೆ ಶಾಪ ಹಾಕುತ್ತಾರೆ. ಇತ್ತೀಚಿಗೆ ಪಾವಗಡದಲ್ಲಿ ಕುಟುಂಬ ಯೋಜನೆ ಹಾಗೂ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಮೃತರಾಗಿದ್ದಾರೆ. ಇದಕ್ಕೆ ಕಾರಣ ವೈದ್ಯರು ಹಣಕ್ಕಾಗಿ ಸ್ಪರ್ಧೆ ಮಾಡಿ, ಯಾವುದೇ ಮುಂಜಾಗೃತ ಕ್ರಮ ಇಲ್ಲದೆ ಆಪರೇಷನ್ ಮಾಡಿದ್ದಾಗಿದೆ ಎನ್ನಲಾಗುತ್ತಿದೆ ಹೀಗಾದರೇ ಜನರು ವೈದ್ಯರನ್ನು ನಂಬುವುದು ಹೇಗೆ ? ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಪ್ರಮಾಣ ಇಳಿಕೆ ಮಾಡಬೇಕು. ಅನಾರೋಗ್ಯಕ್ಕೆ ಒಳಪಟ್ಟು ಆಗಮಿಸುವ ರೋಗಿಗಳಿಗೆ ಆರೋಗ್ಯ ಸುಧಾರಣೆ ಆಗಿ ಸುರಕ್ಷಿತವಾಗಿ ಮನೆಗೆ ತೆರಳುವಂತಾಗಬೇಕು’ ಎಂದರು.
ರೋಗಿಗಳನ್ನು ಬೇರೆ ಕಡೆಗೆ ಶಿಫಾರಸ್ಸು ಮಾಡುವುದು ನಿಲ್ಲಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿವೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ಸೇವೆ ನೀಡಬೇಕು. ಹಳೆಯ ಕಟ್ಟಡದಲ್ಲಿ ಇರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಭಾಷಾ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ.ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಚಿತ್ರದುರ್ಗ ವೈದ್ಯಕೀಯ ಕಾಲೇಜು ವಿಶೇಷಾಧಿಕಾರಿ ಡಾ.ಡಿ.ವೈ.ಯುವರಾಜ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್, ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಸುಮಯ ಪ್ರಾರ್ಥನೆ ನೆರವೇರಿಸಿದರು. ಮಕ್ಕಳ ತಜ್ಞ ಡಾ.ದೇವರಾಜ ಸ್ವಾಗತ ಕೋರಿದರು. ಜನಪದ ಕಲಾವಿದ ಮಂಜು ಮಾತೃವಂದನೆ ಗೀತೆ ಹಾಡಿದರು.