ಮುಖ್ಯ ಸುದ್ದಿ
ಹೆರಿಗೆ ವಿಚಾರದಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ | ಗರ್ಭಿಣಿಯರಿಗೆ ಕಾಡುತ್ತಿದೆ ಅನಿಮಿಯಾ ಸಮಸ್ಯೆ
CHITRADURGA NEWS | 07 MARCH 2024
ಚಿತ್ರದುರ್ಗ: ಹೆರಿಗೆ ವಿಚಾರದಲ್ಲಿ ಆತಂಕಕಾರಿ ವಿಚಾರವೊಂದು ಹೊರ ಬಿದ್ದಿದ್ದು, ಜಿಲ್ಲೆಯ ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ ಆಗುವುದಿಲ್ಲವೇ? ಎಂಬ ಪ್ರಶ್ನೆಯನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳಿಗೆ ಇನ್ನಿಲ್ಲದಂತೆ ಕಾಡುತ್ತಿದೆ.
ಅತಿ ಹೆಚ್ಚಿನ ಸಿಜೇರಿಯನ್ ಹೆರಿಗೆ ಪ್ರಮಾಣ ಜರುಗುವ ಜಿಲ್ಲೆಗಳ ಪೈಕಿ, ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಸಿಜೇರಿಯನ್ ಹೆರಿಗೆ ಪ್ರಮಾಣದ ರಾಷ್ಟ್ರೀಯ ಸರಾಸರಿ ಶೇ.20 ರಷ್ಟು ಮಾತ್ರ ಇದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಜರುಗುವ ಸಿಜೇರಿಯನ್ ಹೆರಿಗೆ ಪ್ರಮಾಣ ಶೇ.65ಕ್ಕಿಂತಲೂ ಹೆಚ್ಚಿದೆ ಎಂಬ ಬಗ್ಗೆ, ದಿಶಾ ಸಭೆಯಲ್ಲಿ ಕಳವಳ ವ್ಯಕ್ತ ಪಡಿಸಿದರು.
ಕ್ಲಿಕ್ ಮಾಡಿ ಓದಿ: https://chitradurganews.com/collection-of-%e2%82%b9-38-lakh-in-four-months/
ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಚಿತ್ರದುರ್ಗ ಜಿಲ್ಲೆಯ ಹೆಣ್ಣು ಮಕ್ಕಳಿಗೆ ಸಾಮಾನ್ಯ ಹೆರಿಗೆ ಆಗುವುದಿಲ್ಲವೇ? ಎಲ್ಲರೂ ಸಿಜೇರಿಯನ್‍ಗೆ ಒಳಗಾಗಬೇಕೆ? ಎಂದು ಖಾರವಾಗಿ ಪ್ರಶ್ನಿಸಿ, ಕೂಡಲೇ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಿಜೇರಿಯನ್ ಪ್ರಕರಣಗಳ ಕಾರಣ ಪತ್ತೆ ಹಚ್ಚುವಂತೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ಉತ್ತರಿಸಿ, ಜಿಲ್ಲೆಯ ಗರ್ಭಿಣಿ ಹೆಣ್ಣು ಮಕ್ಕಳಲ್ಲಿ ಅನಿಮಿಯಾ ಹಾಗೂ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬರುವುದರಿಂದ ಹೆರಿಗೆ ಸಂದರ್ಭದಲ್ಲಿ ಹೆಚ್ಚಿನ ಸಿಜೇರಿಯನ್ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ವೈದ್ಯರು ಸಿಜೇರಿಯನ್ ಪ್ರಮಾಣ ತಗ್ಗಿಸಿ, ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಪ್ರಮಾಣ ಇಳಿಕೆ ಮಾಡಬೇಕು ಎಂದು ಸಚಿವ ಎ.ನಾರಾಯಣ ಸ್ವಾಮಿ ಸೂಚಿಸಿದರು.