ತಾಲೂಕು
ಅಕ್ಟೋಬರ್ 24 ರಿಂದ 27ರವರೆಗೆ ಹಾರನಕಣಿವೆ ರಂಗಪ್ಪನ ಜಾತ್ರೆ

ಚಿತ್ರದುರ್ಗ ನ್ಯೂಸ್.ಕಾಂ: ವಾಣಿವಿಲಾಸ ಜಲಾಶಯದ ಹಿನ್ನೀರು ಭಾಗದಲ್ಲಿ ನೆಲೆ ನಿಂತಿರುವ ಶ್ರೀ ಹಾರನಕಣಿವೆ ರಂಗನಾಥ ಸ್ವಾಮಿ ದೇವರ ಅಂಬಿನೋತ್ಸವ ಹಾಗೂ ಜಾತ್ರಾ ಮಹೋತ್ಸವ ಅ.24 ರಿಂದ 27 ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಹಿರಿಯೂರು ಹಾಗೂ ಹೊಸದುರ್ಗ ಗಡಿಭಾಗದಲ್ಲಿ ವಾಣಿವಿಲಾಸ ಜಲಾಶಯಕ್ಕೆ ಹೊಂದಿಕೊಂಡಿರುವ ಶ್ರೀ ರಂಗನಾಥ ಸ್ವಾಮಿ ಈ ಭಾಗದ ಜನರ ಆರಾಧ್ಯ ದೇವ. ಕಾಡುಗೊಲ್ಲ ಸಮುದಾಯ ವಿಶೇಷವಾಗಿ ಆರಾಧಿಸುವ ದೈವವಾಗಿದೆ.
ಇಲ್ಲಿ ಪ್ರತಿ ವರ್ಷ ನಡೆಯುವ ಅಂಬಿನೋತ್ಸವಕ್ಕೆ ಲಕ್ಷಾಂತರ ಭಕ್ತರು ಬಂದು ಭಾಗವಹಿಸುತ್ತಾರೆ. ಅಕ್ಟೋಬರ್ 24ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:30ರ ವರೆಗೆ ಗಂಗಾ ಪೂಜೆ, ಕುದುರೆ ಪೂಜೆ ನಡೆಯಲಿದೆ.
ಇದನ್ನೂ ಓದಿ: ಅಖಾಡಕ್ಕಿಳಿದ ಆರ್.ಬಿ.ತಿಮ್ಮಾಪುರ ಅಂಅಡ್ ಸನ್
ಅ.25 ರಂದು ಬೆಳಿಗ್ಗೆ 8 ಗಂಟೆಗೆ ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿಯಿಂದ ಶ್ರೀ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಹಾರನಕಣಿವೆ ದೇವಸ್ಥಾನದ ಬಳಿಗೆ ಮೆರವಣಿಗೆಯಲ್ಲಿ ಕರೆತರಲಾಗುವುದು.
ಅಂದು ಬೆಳಿಗ್ಗೆ 10 ಗಂಟೆಗೆ ಜಾತ್ರೆ ಮತ್ತು ಅಂಬಿನೋತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ನಂತರ ಸಂಜೆ 6 ಗಂಟೆಗೆ ಉತ್ಸವ ಮೂರ್ತಿ ಗ್ರಾಮಕ್ಕೆ ಹಿಂತಿರುಗಲಿದೆ. ಅ.26ರಂದು ರಾತ್ರಿ 9ಗಂಟೆಗೆ ಅಂಚಿಬಾರಿಹಟ್ಟಿಯಲ್ಲಿ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ.
ಅ.27ರಂದು ಭಕ್ತಾದಿಗಳಿಂದ ದಾಸೋಹ, ಹೂವಿನ ಪಲ್ಲಕ್ಕಿ ಹಾಗೂ ಮದಲ್ಸೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
