ಸಂಡೆ ಸ್ಪಷಲ್
Kannada Novel: 6. ಎಲ್ಲೆಲ್ಲಿಂದಲೋ ಬಂದರು | ಹಬ್ಬಿದಾ ಮಲೆಮಧ್ಯದೊಳಗೆ
CHITRADURGA NEWS | 06 OCTOBER 2023
ಗೌನಳ್ಳಿ ನಿವಾಸಿಗಳಿಗೆ ಕೂಗಳತೆಯಲ್ಲಿರುವ ಮೂಡಲ ಗುಡ್ಡ ತುಸು ದೂರ ಇರುವ ಪಡುವಲ ಗುಡ್ಡಗಳಲ್ಲೆ ಬೆಳೆದಿರುತ್ತಿದ್ದ ಕಳ್ಳ (ಕರಡ) ಹುಲ್ಲು ದನಕರುಗಳಿಗೆ ಮೇವಾಗಿದ್ದರೆ, ಊರಿನ ಬಳಿಯಿಂದ ಗುಡ್ಡಗಳವರೆಗೂ ಮತ್ತು ಗುಡ್ಡಗಳ ಮೇಲೆ ಯಥೇಚ್ಚವಾಗಿ ಬೆಳೆದಿದ್ದ ಉದೇದ್ದ ಗಿಡ, ಮರಗಳು, ಉಳಿಬೇಲದ ಗಿಡ, ಮರಗಳು, ಮುಳ್ಳುಜಾತಿಯ ತರೇದ ಗಿಡ ಮರಗಳು, ಕವಳಿ, ಕಾರೆಹಣ್ಣಿನ ಗಿಡಗಳು ನೀರು ಹರಿದು ಸರು ಮತ್ತು ಕೊರಕಲುಗಳಲ್ಲಿ ಬೆಳೆದಿದ್ದ ಈಚಲಗಿಡ ಮರಗಳು ಅಪರೂಪಕ್ಕೆಂಬಂತೆ ಅಲ್ಲಲ್ಲಿ ಬೆಳೆದಿದ್ದ ಜಾಲಿ ಮತ್ತು ಬೇವಿನ ಮರಗಳು ಮತ್ತು ಕಮರದ ಮರಗಳ ಆಸುಪಾಸಿನಲ್ಲಿ ಬೆಳೆದಿರುತ್ತಿದ್ದ ಸಣ್ಣ ಹುಲ್ಲು ಗಿಡಗಳ ಸೊಪ್ಪು ಕುರಿ ಮತ್ತು ಆಡು ಮೇಯಿಸಲು ಸಹಕಾರಿಯಾಗಿತ್ತು.
ಊರು ಕೂಡಾ ಚಿಕ್ಕದಿದ್ದು ಕೃಷಿಯ ಜತೆ ಜತೆಗೆ ಪಶು ಸಂಗೋಪನೆಯನ್ನು ಕೆಲವರು ಕೈಗೊಂಡಿ- ದ್ದರು. ಆಗಿನ ಕಾಲದಲ್ಲಿ ಪಡುವಲ ಗುಡ್ಡದಾಚೆಗಿನ ವಿಶಾಲ ಅಡವಿಯಲ್ಲಿ ಮಾತ್ರ ಕಾಡು ಮಿಕಗಳು ಗೋಚರಿಸುತ್ತಿದ್ದವು. ಅವುಗಳ ಉಪಟಳ ಕಡಿಮೆ ಇತ್ತು.
* ಇಂಥಾ ಕಾಲದಲ್ಲಿ ತಿಂಗಳಿಗೆ ಎರಡು ತಿಂಗಳಿಗೊಂದೊ ಎರಡೋ ಕುಟುಂಬಗಳು ಭದ್ರ ನೆಲೆಯನ್ನರಸಿ ಗೌನಳ್ಳಿಗೆ ಬಂದು ನೆಲಸುತ್ತಿದ್ದರು. ಬೇಲೂರು ಚನ್ನಕೇಶವನ ಭಕ್ತರಾಗಿದ್ದ ಎರಡು ಕುಟುಂಬಗಳು, ಚಿತ್ರದುರ್ಗ ಸಮೀಪದ ಹಿರೇಗುಂಟನೂರು ದ್ಯಾಮವ್ವಳ ಭಕ್ತರ ಎರಡು ಕುಟುಂಬಗಳು ಗಂಟುಮೂಟೆ ಸಮೇತ ಆಗಮಿಸಿ ಗುಡಿಸಲು ಕಟ್ಟುಕೊಂಡು ಗೌನಳ್ಳಿ ನಿವಾಸಿಗಳಾಗಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಗೆಯ್ಮೆ ಮಾಡಿ ಉಳಿದಿರುವ ನೆಲವನ್ನು ಹಸನುಗೊಳಿಸಿಕೊಂಡು ಕೃಷಿ ಕಾವ್ಯದಲ್ಲಿ ನಿರತರಾಗುತ್ತಿದ್ದರು. ಇಲ್ಲಿ ಭದ್ರ ನೆಲೆ ಸಿಕ್ಕ ಐದಾರು ತಿಂಗಳಲ್ಲಿ ಅವರ ಸಂಬಂಧಿಗಳು ಆಗಮಿಸಿ ಜಾಗ ಇದ್ದಕಡೆ ಗುಡಿಸಲು ನಿಲ್ದಾಣ ಮತ್ತು ಭೂಮಿ ಇದ್ದಕಡೆ ಹಸನುಗೊಳಿಸಿಕೊಂಡು ಕೃಷಿ ಕಾರಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಹೀಗೆ ಬಂದವರೆಲ್ಲಾ ಕುಂಚಿಟಿಗರು ಆಗಿರುತ್ತಿದ್ದುದೊಂದು ವಿಶೇಷ.
ಒಂದು ದಿನ ಹೊತ್ತು ಮುಳುಗಲು ಮಾರುದ್ದ ಇರುವಾಗ ಮೂರು ಕತ್ತೆಗಳ ಮೇಲೆ ಸಾಮಾನು ಹೇರಿಕೊಂಡು ಹಿಂದುಗಡೆ ನಡೆದು ಬಂದಿದ್ದ ನಾಕೈದು ಜನ ಗಂಡಸರು ಮತ್ತು ಹೆಂಗಸರು ಗೌನಳ್ಳಿ ತಲುಪಿದ್ದರು. ಗಂಡಸರೂ ಮತ್ತು ಹೆಂಗಸರು ಕಪ್ಪು ಬಣ್ಣದವರಾಗಿದ್ದು ಗಂಡಸರು ಬಣ್ಣದ ಚಲ್ಲಣ ಕಟ್ಟಿಕೊಂಡಿದ್ದರೆ, ಹೆಂಗಸರು ತಮ್ಮ ಸೀರೆಗಳನ್ನು ಮೊಳಕಾಲ ಮೇಲಕ್ಕೆ ಕಾಶಿಕಟ್ಟಿಕೊಂಡಿದ್ದರು. ಕಂಕುಳಲ್ಲಿ ಇಬ್ಬರು ಕೂಸುಗಳನ್ನು ಹೊತ್ತುಕೊಂಡಿದ್ದರು. ಅವರೆಲ್ಲಾ ಮರಾಠಿ ಮಾತಾಡುತ್ತಿದ್ದರು.
ಊರು ತಲುಪಿದ ಕೂಡಲೇ ಹತ್ತಿರದ ಮನೆಯಿಂದ ಕುಡಿಯಲು ನೀರು ಕೇಳಿ ಪಡೆದು ದಣಿವಾರಿಸಿಕೊಳ್ಳುತ್ತಾ ತಾವು ಕಮ್ಮಾರಿಕೆ ಕಸುಬಿನವರೆಂದು ಪರಿಚಯಿಸಿಕೊಂಡಿದ್ದರು. ಇದನ್ನು ಕೇಳಿಸಿಕೊಂಡ ನಾಕೈದು ಜನ ಊರ ನಿವಾಸಿಗಳಿಗೆ ಖುಷಿಯಾಗಿತ್ತು. ಅವರು ಪ್ರತಿದಿನವೂ ನೇಗಿಲ ಗೆಯ್ಕೆ ಮಾಡಿ ಸಂಜೆ ಹೊತ್ತಿಗೆ ಮೊಂಡಾಗುತ್ತಿದ್ದ ಕಬ್ಬಿಣದ ಕುಳಗಳನ್ನು ಬೆಂಕಿಯಲ್ಲಿ ಕಾಯಿಸಿ ತಮಗೆ ತೋಚಿದಂತೆ ಮೊನೆಗುಳಗಳನ್ನು ಮಾಡಿಕೊಳ್ಳುತ್ತಿದ್ದರು.
ಕಾದ ಕುಳವನ್ನು ಕರೀ ಕಲ್ಲಮೇಲಿಟ್ಟು ಸುತ್ತಿಗೆಯಿಂದ ತಟ್ಟಿಕೊಂಡು ಒಂದು ರೀತಿಯ ‘ಮೊನೆಗುಳ’ ಮಾಡಿಕೊಳ್ಳುತ್ತಿದ್ದವರಿಗೆ ಕಮ್ಮಾರಿಕೆ ಕುಟುಂಬ ಊರಿನಲ್ಲಿ ನೆಲಸಿದರೆ ಅನುಕೂಲವಾಗುವುದೆಂದು ಭಾವಿಸಿದ್ದರು. ಆಗಂತುಕರು ಅನುಕೂಲವಾದರೆ ಈ ಊರಿನಲ್ಲೇ ವಾಸಿಸುವುದಾಗಿ ತಿಳಿಸಿದ್ದರು. ಹಳ್ಳಿ ನಿವಾಸಿಗಳು ಕಮ್ಮಾರರಿಗೆ ಸರಿಕಂಡಕಡೆ ಗುಡಿಸಲು ನಿರಿಸಲು ನೆರವಾಗಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
ಊರಿಗೆ ಹತ್ತಿರದಲ್ಲಿ ದೃಢವಾಗಿ ಬೆಳೆಯುತ್ತಿದ್ದ ಒಂದು ಹುಣಿಸೆ ಗಿಡದ ಹತ್ತಿರ ಕುಲುಮೆ ನಿರಿಸಿಕೊಳ್ಳಲೂ ನೆರವಾಗಿದ್ದರು. ಮಾರನೇ ದಿನ ಸಂಜೆ ನಲುಮೆಯ ಉದ್ಘಾಟನೆ ಯಾಗಿ ಹತ್ತಾರು ಮೊಂಡಕುಳಗಳು ಚೂಪಾದ ಮೊನೆಗುಳಗಳಾಗಿದ್ದವು.
ತಾವು ಜೋಳದ ಭಾಕ್ರಿ ಮತ್ತು ಸಜ್ಜೆಯ ಭಾಕ್ರಿ ತಿನ್ನುವವರಾಗಿದ್ದು ಮೊನೆಗುಳ ಮಾಡಿದ ಮಜೂರಿಯನ್ನು ಸಜ್ಜೆ ಅಥವಾ ಜೋಳದ ರೂಪದಲ್ಲಿ ನೀಡಬೇಕೆಂದು ಕೇಳಿ ಪಡೆದುಕೊಂಡಿದ್ದರು. ಕುಲುಮೆಗೆ ಬೇಕಾಗುವ ಇದ್ದಿಲನ್ನು ಪ್ರತಿದಿನ ಬೆಳಗಿನಲ್ಲಿ ಒಲೆ ಬೂದಿ ತೆಗೆಯುವಾಗ ಅಲಾದಿ ಕೂಡಿಡಲು ಹೆಂಗಸರಿಗೆ ಊರವರು ಸೂಚಿಸಿದ್ದರು. ಕಮ್ಮಾರಿಕೆ ಕುಟುಂಬ ಊರಿಗೆ ಬಂದು ನೆಲಸಿದ್ದುದು ಹಳ್ಳಿಗರಿಗೆ ಸಮಾಧಾನ ತಂದಿತ್ತು.
ಕಮ್ಮಾರರು ಗೌನಳ್ಳಿಯಲ್ಲಿ ನೆಲೆಗೊಂಡಾದ ಆರೇಳು ತಿಂಗಳಲ್ಲಿ ಎರಡು ಮಾದಿಗರ ಕುಟುಂಬಗಳು ಗೌನಹಳ್ಳಿಯಲ್ಲಿ ಬಂದಿಳಿದಿದ್ದವು. ಅವರು ಬಂದಾಗ ಮಟಮಟ ಮದ್ಯಾಹ್ನ. ಇಡೀ ಊರು ಎರಡು ಗುಡ್ಡಗಳ ಕಾವಿನಲ್ಲಿ ಬೆಂದು ಬಸವಳಿದಿತ್ತು. ಇಂಥಾ ಸಮಯದಲ್ಲಿ ಗೌನಳ್ಳಿ ತಲುಪಿದ್ದ ಈ ಕುಟುಂಬಗಳವರು ಊರ ಬಡಗಲಿಗಿದ್ದ ಕಮರದ ಮರಗಳ ಆಸರೆಯಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದರು. ಅವರಾಗಲಿ ಊರವರಾಗಲಿ ಹೊತ್ತು ಇಳಿಯುವ ತನಕ ಯಾರನ್ನೂ ಕಂಡು ಮಾತಾಡಿಸಿರಲಿಲ್ಲ.
ಊರಿನ ಯಾರೋ ಒಂದಿಬ್ಬರು ಬಿಂದಿಗೆ ಪಾತ್ರೆ ಹಿಡಿದು ಮಾರಿಗುಡಿ ಹಳ್ಳದ ಕಡೆಗೆ ನಡೆದಾಗ ಬಹುಶಃ ಇವರು ನೀರು ತರಲು ಹೋಗುತ್ತಿದ್ದಾರೆಂದು ಭಾವಿಸಿ ಇವರಲೊಬ್ಬರು ಕೈಯ್ಯಲ್ಲೊಂದು ಪಾತ್ರೆ ಹಿಡಿದು ಅವರನ್ನು ಹಿಂಬಾಲಿಸಿದ್ದರು. ಹತ್ತಿರದಲ್ಲಿ ಸಣ್ಣಗೆ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಮುಖ, ಕೈಕಾಲು ತೊಳೆದುಕೊಂಡು ಸಾಕಾಗುವಷ್ಟು ನೀರು ಕುಡಿದು ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು ಬಂದು ತಮ್ಮವರನ್ನು ಕೂಡಿಕೊಂಡಿದ್ದರು.
ಬಿಸಿಲು ಕಡಿಮೆಯಾದಂತೆ ದನಕರುಗಳಿಗೆ ಹಳ್ಳದ ನೀರು ಕುಡಿಸಲು ಬಂದ ಕೆಲವರು ಈ ಆಗಂತಕರನ್ನು ಯಾವೂರವರೆಂದು ಮಾತಾಡಿಸಿದ್ದರು. ಇವರಲ್ಲೊಬ್ಬಾತ “ಸೋಮಿ ಒಂದೂರೇ ಎಲ್ಲೂರೇ ದೇಶ ಸುತ್ತಿಗೆಂಡ್ ಬಂದಿದ್ದೀವಿ. ಬೆಳಗೀಲೇ ಎದ್ದು ಅದ್ಯಾವುದೋ ಗೊಲ್ಲ ಊರಿಂದ ಹೊಳ್ಟ್ ಬಂದ್ವಿ, ಆ ಊರಾಗೆ ಬರೇ ಕುರಿಯಟ್ಟಿ ಇದ್ದು, ನಾವು ಎಕ್ಕಡ, ಕೆರ ಪಟಗಳ ಹೊಟ್ಟುಕೊಡೋರು. ಆ ಊರಾಗೆ ನಮಗೆ ಕೆಲ್ಲಾ ಸಿಗಲಾರು ಅಂತ್ಕಂಡು ಹಿಂದೆ ಕಾಲಾದೇಗೆ ನಡಕಂಡ್ ಬಂದೇ ಬಂದ್ವಿ, ಇಲ್ಲಿ ಊರಕಂಡ್ ನಿಂತ್” ಎಂದುತ್ತರಿಸಿದ್ದ.
ಹಿಂದಿನ ಸಂಚಿಕೆ ಇಲ್ಲಿದೆ: 3. ಎಲ್ಲರೂ ಲಿಂಗವಂತರಾದರು
‘ಇವರು ಮೆಟ್ಟು, ಕೆರ ಹೊಲಿದುಕೊಡೋ ಮಣೆಗಾರು’ ಅಂದ್ಯಂಡ ಹಳ್ಳಿಯಾತ, “ಈ ಊರಾಗೆ ನಿಮಗೆ ಕೆಲ್ಸ ಸಿಗಬೌದು, ಊರಾಗೆ ಎಜಮಾನನ್ನ ಕೇಳಿ, ಆ ಮನೆಹತ್ರ ಹೋಗಿ” ಎಂದು ಮನೆಯೊಂದನ್ನು ತೋರಿಸಿ ಮುಂದೆ ನಡೆದಿದ್ದರು. ಇವರಲ್ಲಿಬ್ಬರು ಆ ಮಾಳಿಗೆ ಮನೆಯ ಬಳಿ ತೆರಳಿ ‘ಸೋಮಿ ಸೋಮೇರೇ’ ಎಂದು ಕೂಗಿದ್ದರು.
ಅದೇ ಸಮಯಕ್ಕೆ ಬೇಸಾಯದಿಂದ ಹಿಂದಿರುಗುತ್ತಿದ್ದ ಹಿರಿಯರೊಬ್ಬರು ‘ಏನಪ್ಪಾ ಯಾವೂರೋರು ಏನು ಬೇಕಿತ್ತು’ ಎಂದು ಇವರನ್ನು ವಿಚಾರಿಸಿದ್ದರು. ಇವರಲ್ಲೊಬ್ಬಾತ “ಸೋಮಿ ನಾವು ಮಣೆಗಾರು, ಕೊಲ್ಲಾಪುರದಮ್ಮನ ಒಕ್ಕಲು. ಎಲ್ಲೂ ನೆಲೆ ಸಿಗದೆ ಇಂಗೇ ಹುಡಿಕ್ಕೆಂಡ್ ಬಂದೈದೀವಿ. ನಿಮ್ಮೂರಾಗೆ ನಮಿಗೊಂದೀಟು ಜಾಗ ಕೊಟ್ರೆ ಜೋಪಡಿ ಕಟ್ಟಿಗೆಂಡ್ ನಿಮ್ಮ ಸೇವೆ ಮಾಡಿಕೆಂಡ್ ಇದ್ದೀವಿ ಸೋಮೆ’.
ಈ ವಿನೀತ ಬೇಡಿಕೆಯನ್ನು ಆಲಿಸಿದ ಅವರು ಮುಗುಲ್ನಗುತ್ತಾ “ನಿಮ್ಮಂಗೆ ನಾವೂನು ಊರೂರ್ ತಿರಿಗ್‍ಕ್ಕೆಂಡು ಇಲ್ಲಿಗೆ ಬಂದು ಹುಗ್ಗಿ ಒಯ್ದು ಕರುವುಗಲ್ ನೆಟ್ಟಿದೀವಿ. ಇಲ್ಲೀಗ್ ಬಂದ್ ಮ್ಯಾಲೆ ಮಕ್ಕುಮರಿ ಎಲ್ಲಾ ಸುಖವಾಗಿದ್ದೀವಿ. ಒಂದೂರು ಅಂದ್ ಮ್ಯಾಲೆ ಕುಲ ಅದಿನೆಂಟ್ ಜಾತಿಜನ ಇದ್ದಾರೆ. ನಿಮಗೆ ಸರೀಗ್ ಕಂಡ್ರೆ ಇಲ್ಲಿ ಉಳಕಾಬೌದು”. ಆಶ್ವಾಸನೆಯ ಮಾತಾಡಿದ್ದರು. ಕೂಡಲೇ ಆಗಂತುಕರಿಗೆ ಸಂತೋಷವಾಗಿ ಊರಿನ ಹಿರಿಯರಿಗೆ ಅಡ್ಡಬಿದ್ದು ನಮಸ್ಕರಿಸಿದ್ದರು.
ತಮ್ಮ ಬಿಡಾರಕ್ಕೆ ಹಿಂದಿರಾಗಿ ಊರಿನ ಹಿರಿಯರು ನೀಡಿದ್ದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಉಳಿದವರಿಗೆ ತಿಳಿಸಿ, ಈ ಊರಲ್ಲೇ ವಾಸಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ರಾತ್ರಿ ಕಮರದ ಮರಗಳ ಬಳಿಯಲ್ಲಿ ತಂಗಿದ್ದು ಬೆಳಿಗ್ಗೆ ಮತ್ತೆ ಹಳ್ಳಕ್ಕೆ ಹೋಗಿ ನೀರು ತಂದು ಅಡಿಗೆ ವ್ಯವಸ್ಥೆಗೆ ಹೆಂಗಸರು ತೊಡಗಿಕೊಂಡರೆ, ಗಂಡಸರು ಊರೊಳಗೆ ನಡೆದು ಎಲ್ಲಿ ಜೋಪಡಿ ಕಟ್ಟಬಹುದು. ತಮ್ಮ ಉದ್ಯೋಗಕ್ಕೆ ಅಗತ್ಯವಾಗಿದ್ದ ‘ಗಲ್ಲೇಗುಂಡಿ’ ಎಲ್ಲಿ ನಿನ್ನಿಸಬಹುದೆಂದು ಸ್ಥಳ ಪರಿಶೀಲನೆ ಮಾಡಿದ್ದರು.
ಊರಿನ ಆನ್ನೇಯ ದಿಕ್ಕಿನಲ್ಲಿ ಮತ್ತು ಕರುವುಗಲ್ಲಿಗೆ ತೆಂಕಲಿಗೆ ಹತ್ತಿರದಲ್ಲಿ ಜೋಪಡಿ ಮತ್ತು ಗಲ್ಲೇಗುಂಡಿ ನಿರಿಸಬಹುದೆಂದು ತಮ್ಮ ತಮ್ಮಲ್ಲೇ ಚರ್ಚಿಸಿ ತೀರ್ಮಾನಿಸಿಕೊಂಡರು. ಊರಜನ ತಮ್ಮ ದನಕರುಗಳ ಸಗಣಿ ತೆಗೆದು ಮೂಡಲ ಹಳ್ಳದಿಂದ ನೀರು ತಂದುಕೊಂಡು ಕೃಷಿ ಕಾಯಕಕ್ಕೆ ಹೊರಡುವ ತಯಾರಿಯಲ್ಲಿದ್ದರು.
ಇವರು ನಿನ್ನೆ ಸಂಜೆ ಮಾತಾಡಿಸಿದ್ದ ಮುಖ್ಯಸ್ಥರ ಬಳಿಗೆ ಹೋಗಿ ಊರ ತೆಂಕಲ ಮೂಲೆಯಲ್ಲಿ ಜೋಪಡಿ ನಿಮ್ಮಿಸುವ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಬೇಸಾಯಕ್ಕೆ ಹೊರಡುವ ತಯಾರಿಯಲ್ಲಿದ್ದ ಮುಖ್ಯಸ್ಥರು “ಸರಿ ನಿಮಗೆ ಎಲ್ಲಿ ಕಟ್ಟಿಗಂಡ್ರೆ ಅನುಕೂಲವೋ ಅಲ್ಲಿ ಕಟ್ಟಿಗಳಿರಿ” ಎಂದು ತಿಳಿಸಿ ತಮ್ಮ ಕೆಲಸಕ್ಕೆ ಅವರು ತೆರಳಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ತಮ್ಮ ಬಿಡಾರಕ್ಕೆ ಹಿಂದಿರುಗಿ ಊಟ ಮಾಡಿಕೊಂಡು ತಮ್ಮ ಸಾಮಾನುಗಳನ್ನು ಹೊತ್ತು ತಾವು ನೆಲಸಲು ತೀರಾನಿಸಿದ್ದ ಜಾಗ ತಲುಪಿದ್ದರು. ಗಂಡಸರು ಹೆಂಗಸರು ಎಲ್ಲಾ ಸೇರಿ ಜಾಗವನ್ನು ಸ್ವಚ್ಚ ಮಾಡಿ ನೆಲವನ್ನು ಸಮತಟ್ಟು ಮಾಡಿ ಊರ ಮುಂದಲ ಹಳ್ಳದಿಂದ ನೀರು ತಂದು ಸುರುವಿ ಗಟ್ಟಿಗಳಿಸಿಕೊಂಡರು.
ರಾತ್ರಿ ಅಲ್ಲಿಯೇ ತಂಗಿದ್ದು ಮಾರನೆ ದಿನ ಗಳ, ಗೂಟ ಜೋಡಿಸಿಕೊಳ್ಳಲು ಹಳ್ಳದ ದಂಡೆಗುಂಟ ತಿರುಗಾಡಿದ್ದರು. ಎರಡು ಮೂರು ದಿನಗಳಲ್ಲಿ ಒಂದಕ್ಕೊಂದು ಎದುರಾಗಿ ಎರಡು ಜೋಪಡಿಗಳನ್ನು ನಿರಿಸಿಕೊಂಡಿದ್ದರು. ಅನಂತರ ತಿಂಗಳೊಪ್ಪತ್ತಿನಲ್ಲಿ ಮೂಡಲ ಗುಡ್ಡದ ಗೋಡೆಗಲ್ಲು ಸಮೀಪ ನಾಲ್ಕು ಉದ್ದನೆಯ ಬಂಡೆಗಳನ್ನು ಗುರುತಿಸಿ ಊರವರ ಸಹಾಯದಿಂದ ಅವನ್ನು ತಂದು ಗಲ್ಲೆಗುಂಡಿ ನಿರಿಸಿಕೊಂಡಿದ್ದರು.
ಗಲ್ಲೆ ಗುಂಡಿ ಸಮೀಪದಲ್ಲಿ ತಮ್ಮ ಕುಲ ದೈವವಾದ ಕೊಲ್ಲಾಪುರದ ಮಹಾಲಕ್ಷ್ಮಿಗೊಂದು ಸಣ್ಣ ಗುಡಿ ನಿರಿಸಿಕೊಂಡಿದ್ದರು. ಅದೇನು ಧರಕರ ಸಂಯೋಗವೋ ಗಲ್ಲೇಗುಂಡಿ ನಿರಿಸಿದ ತಿಂಗಳಿಗೆ ಗೊಂಚಿಕಾರರ ಬಡ ಎತ್ತೊಂದು ಗುಂಡಿಗೆ ಬಿದ್ದು ಪ್ರಾಣ ಬಿಟ್ಟಿತ್ತು. ಮಾದಿಗರು ಗೊಂಚಿಕಾರರನ ಮನವೊಲಿಸಿ ಸತ್ತ ಎತ್ತನ್ನು ತಂದು ಚರ ಸುಲಿದು ಅದನ್ನು ಗಲ್ಲೇ ಗುಂಡಿಯಲ್ಲಿ ಸಂಸ್ಕರಿಸಿ ನಾಲ್ಕು ಜೊತೆ ವೈನಾದ ಕೊಲ್ಲಾಪುರದ ಮೆಟ್ಟುಗಳನ್ನು ಮಾಡಿಕೊಟ್ಟಿದ್ದರು.
ಗೊಂಚಿಕಾರರು ಸುಂದರವಾದ ಮೆಟ್ಟುಗಳನ್ನು ನೋಡಿ ಮೆಚ್ಚಿಕೊಂಡು ಮಾದಿಗರಿಗೆ ಎಂಟು ಸೇರು ಸಜ್ಜೆ, ಮೂರು ಸೇರು ಜೋಳವನ್ನು ಮಜೂರಿಯಾಗಿ ಮಾದಿಗರಿಗೆ ನೀಡಿದ್ದರು. ಮಾದಿಗರು ಪಟಗಣ್ಣಿ ಮುಂತಾದುವನ್ನು ಕೂಡಾ ಹೊಲಿದು ಕೊಟ್ಟಿದ್ದರು.
ಇದಾದ ಐದಾರು ತಿಂಗಳಿಗೆ ಹಾರೆ, ಗುದ್ದಲಿ, ಸಲಿಕೆ ಇತ್ಯಾದಿ ಪರಿಕರಗಳನ್ನು ಹೆಗಲ ಮೇಲೆ ಹೊತ್ತ ಗಂಡಸರು, ಬಟ್ಟೆಯಲ್ಲಿ ಕಟ್ಟಿಕೊಂಡಿದ್ದ ಮಣ ಭಾರದ ಗಂಟುಗಳನ್ನು ತಲುಪಿತ್ತು. ಅವರ ಗಟ್ಟಿಮುಟ್ಟಾದ ಶರೀರ ಮತ್ತು ಆಕಾರಗಳಿಂದಲೇ ಅವರು ಮಣ್ಣು ವಡ್ಡರಿರಬೇಕೆಂದು ಗೌನಳ್ಳಿಗರು ಊಹಿಸಿದ್ದರು. ಇವರ ಊಜಿ ಸರಿಯಾಗಿತ್ತು. ಅವರು ಕೂಡಾ ಶಾಶ್ವತ ನೆಲೆಕಂಡುಕೊಳ್ಳಲು ಬಂದಿದ್ದರು.
ಊರಿನ ಜನ ಹಳ್ಳದಿಂದ ನೀರು ತರುವುದನ್ನು ಕಂಡ ಅವರು ಹಳ್ಳಕ್ಕೆ ಹೋಗಿ ನಿಶ್ಚಲ ಜಲವನ್ನು ಕುಡಿದು ಸಂತೃಪ್ತರಾಗಿ ಇಲ್ಲಿ ಠಿಕಾಣಿ ಹೂಡಬಹುದೆಂದು ತೀರಾನಿಸಿದ್ದರು. ಹೊಸಬರು ಬಂದರೆ ಸಾಮಾನ್ಯವಾಗಿ ಊರ ನಿವಾಸಿಗಳು ಸಹನೆ ಸಹಾನುಭೂತಿಯಿಂದಲೇ ಕಾಣುತ್ತಿದ್ದರು. ಹೀಗಾಗಿ ಊರ ನಿವಾಸಿಗಳನ್ನು ಮಾತಾಡಿಸಿ ತಾವು ಬೋವಿ ಜನಾಂಗವೆಂದೂ ಈ ಊರಿನಲ್ಲಿ ನೆಲಸಲು ಇಚ್ಚಿಸಿರುವುದಾಗಿ ತಿಳಿಸಿದ್ದರು.
“ನಿಮಗೆ ಎಲ್ಲಿ ಪಸಂದಾಗುತ್ತೋ ಅಲ್ಲಿ ಗುಡಿಸಲು ಕಟ್ಟಿಗಳಿ” ಎಂಬ ಆಶ್ವಾಸನೆ ಸಿಕ್ಕಬಳಿಕ ಊರ ಕುಂಚಿಟಿಗರ ಮನೆಗಳಿಗೆ ಸ್ವಲ್ಪ ದೂರದಲ್ಲಿ ಗುಡಿಸಲು ಕಟ್ಟಿಗೊಂಡರು. ಇವರು ಕಷ್ಟಸಹಿಷ್ಣುಗಳೆಂದರೆ ಗುಡಿಸಲು ನಿರಿಸಿಕೊಂಡ ಮಾರನೇ ದಿನವೇ ಗೊಲಗುಡ್ಡದ ಸಮೀಪದಲ್ಲಿ ಗಿಡಗಳನ್ನು ಸವರಿ ಕಡಿದು ನೆಲ ಹಸನು ಮಾಡಿಕೊಳ್ಳಲು ತೊಡಗಿದ್ದರು. ತಿಂಗಳೊಪ್ಪತ್ತಿನಲ್ಲಿ ತಮ್ಮ ಹೊಲಗಳ ಸುತ್ತಾ ಬೇಲಿ ನಿರಿಸಿಕೊಂಡು ಹೊಲದ ಬಳಿ ಸಣ್ಣ ಗುಡಿಸಲು ನಿರಿಸಿಕೊಂಡು ಹೊಲದಲ್ಲಿ ಬದು ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು.
ಇವರು ಗೌನಳ್ಳಿಗೆ ಆಗಮಿಸಿದ್ದುದು ಅನುಕೂಲವೇ ಆಗಿತ್ತು. ಊರಿನ ರೈತರು ತಮ್ಮ ಜಮೀನುಗಳಲ್ಲಿ ಇಳುಕಲಿಗೆ ಅಡ್ಡಲಾಗಿ ಏರಿ ಹಾಕಿಸುವುದು. ಬದು ನಿರಿಸುವ ಕಾವ್ಯಗಳನ್ನು ಬೋವಿಗಳಿಗೆ ವಹಿಸಿದ್ದರಿಂದ ಅವರಿಗೆ ವರ್ಷಾನುಗಟ್ಟಲೆ ಕೈತುಂಬ ಉದ್ಯೋಗ ಸಿಕ್ಕಿತ್ತು. ಊರಲ್ಲಿ ಒಂದು ಬಗೆಯ ಹೊಸ ಗಾಳಿ ಬೀಸತೊಡಗಿತ್ತು.
ಎಲ್ಲೆಲ್ಲಿಂದಲೋ ಗೌನಹಳ್ಳಿಗೆ ಆಗಮಿಸಿ, ಇಲ್ಲಿ ಗುಡಿಸಲು ಕಟ್ಟಿಕೊಂಡು ಊರವರ ಜತೆ ಸಮರಸವಾಗಿ ಬೆರೆಯುತ್ತಿದ್ದ ಕಮ್ಮಾರರು, ಮಣೆಗಾರರು ಮತ್ತು ಬೋವಿ ಜನಾಂಗ ರೈತರ ಕೃಷಿ ಬದುಕಿಗೆ ಪೂರಕವಾಗಿ ಉದ್ಯೋಗಶೀಲರಾಗಿದ್ದರು. ಬಂದು ನೆಲಸಿದ ಮೂರೂ ವಿವಿಧ ಕಾಯಕದ ಜನ ತಮ್ಮ ವೃತ್ತಿ ಬದುಕಿನ ಜತೆಗೆ ಎಲ್ಲೆಲ್ಲಿ ಬೀಳು ಭೂಮಿ ದೊರೆಯುತ್ತಿತ್ತೋ ಅಲ್ಲಿ ಗಿಡಕಡಿದು ಭೂಮಿ ಹಸನು ಮಾಡಿಕೊಂಡು ತಮಗೊಂದು ಹೊಲ, ಊರಲ್ಲಿ ಮನೆ ನಿರ್ಮಾಣದತ್ತ ಕಾರೋನ್ಮುಖರಾಗಿದ್ದರು,
ಜತೆಗೆ ಬೋವಿಗಳು ಮೂಡ್ಲಗಿರಿ ತಿಮ್ಮಪ್ಪನ ಗೂಡಿನಂಥ ಗುಡಿ, ಮಣೆಗಾರರು ಕೊಲ್ಲಾಪುರದ ಮಾಲಕ್ಷ್ಮಿ ಗುಡಿಗಳನ್ನು ನಿರ್ಮಿಸಿಕೊಂಡು ಭಕ್ತಿಯಿಂದ ಆರಾಧಿಸುತ್ತಿದ್ದರು.
ಜನ ಎಲ್ಲೆಲ್ಲಿ ಬದುಕಿನ ನೆಲೆಗಳನ್ನು ಗುರುತಿಸಿಕೊಂಡು ತಮಗೊಂದು ಶಾಶ್ವತ ನೆಲೆಯನ್ನು ಕಂಡುಕೊಳ್ಳುತ್ತಿದ್ದರೋ ಅಲ್ಲೆಲ್ಲಾ ತಮ್ಮ ಕುಲದೈವಗಳನ್ನು ಸ್ಥಾಪಿಸಿಕೊಳ್ಳುವುದು ಪರಂಪರಾಗತ ಪದ್ಧತಿಯಾಗಿತ್ತೇನೋ ಅನ್ನುವುದು ಇದರಿಂದ ತಿಳಿಯುತ್ತಿತ್ತು. ಆದರೆ ಕಮ್ಮಾರರು ಮಾತ್ರ ತಮ್ಮ ಕುಲದೈವ ಕುಲುಮೆಯೇ ಎಂದು ಭಾವಿಸಿದಂತಿತ್ತು. ಅವರು ಮಾತ್ರ ತಮ್ಮ ಮನೆ ದೈವಕ್ಕೊಂದು ಗುಡಿ ನಿರ್ಮಾಣ ಮಾಡಿಕೊಂಡಿರಲಿಲ್ಲ.
ಇಡೀ ಊರಿನ ಐವತ್ತು, ಅರುವತ್ತು ಮನೆಗಳವರು ಪಲ್ಸರಿಯುತ್ತಲೇ ಎದ್ದು ಕೆಲವರು ಹಳ್ಳಕ್ಕೆ ಹೋಗಿ ನೀರು ತರುವುದು, ಉಳಿದವರು ದನಕರುಗಳ ಸಗಣಿ ಕಸ ಬಳಿದು ಕೈತೊಳೆದುಕೊಂಡು ಚಿಕ್ಕುಂಬತ್ತಿಗೆ ಬಿಸಿ ಅಡಿಗೆ ಉಂಡು ಬೇಸಾಯಕ್ಕೆ ಹೊರಡುತ್ತಿದ್ದರು. ಹೆಂಗಸರು ಕರುಮರಿಗಳಿಗೆ ಹಸಿ ಹುಲ್ಲು ಜೋಡಿಸಿ ಅವುಗಳನ್ನು ಹಕ್ಕೆಗಳಲ್ಲಿ ಕಣ್ಣಿ ಹಾಕಿ, ಒಟ್ಟು ನುಚ್ಚು, ಅಕ್ಕಿ ಮುಂತಾದುವನ್ನು ಸಿದ್ಧಪಡಿಸಿಕೊಂಡು, ಹೊಲದಲ್ಲಿರುವವರಿಗೆ ಹಗಲೂಟದ ಬುತ್ತಿಯನ್ನು ಒಯ್ಯುತ್ತಿದ್ದರು. ದನಕರು, ಕುರಿ, ಆಡು ಮುಂತಾದುವನ್ನು ಅಡವಿಗೆ ಒಯ್ದು ಮೇಯಿಸುವವರು ಅಡವಿಗೆ ಹೋದರೆ, ಊರಲ್ಲಿ ಕೆಲವು ಹೆಂಗಸರನ್ನುಳಿದು ನರಪಿಳ್ಳೆಯೂ ಇರುತ್ತಿರಲಿಲ್ಲ.
ಇಂಥ ಪರಿಸ್ಥಿತಿಯಲ್ಲಿ ಮಣೆಗಾರರ ಹೆಂಗಸರು ಕುಟ್ಟುವುದು ಬೀಸುವುದನ್ನು ಕಲಿತು ಒಬ್ಬಂಟಿಗರಾಗಿದ್ದ ಮನೆಗಳವರಿಗೆ ನೆರವಾಗುತ್ತಿದ್ದರು. ಕಮ್ಮಾರರು ಸಂಜೆಯಾಗುವುದನ್ನೇ ನಿರೀಕ್ಷಿಸುತ್ತ ಕುಲುಮೆಗೆ ಬೆಂಕಿಹಾಕಿ ಜಮೀನು ಕೆಲಸಗಳಿಂದ ಹಿಂತಿರುಗುತ್ತಿದ್ದ ರೈತರು ಕೈಲಿಡಿದು ತರುತ್ತಿದ್ದ ಮೊಂಡಕುಳಗಳನ್ನು ಮೊನೆಗುಳ ಮಾಡಿಕೊಡುತ್ತಿದ್ದರು.
ಕೆಲವು ತಿಂಗಳ ಬಳಿಕ ಇನ್ನೆರಡು ಬೋವಿ ಕುಟುಂಬಗಳು ಗೌನಹಳ್ಳಿಯಲ್ಲಿ ಬಂದಿಳಿದು, ಮೊದಲು ಬಂದು ತಳವೂರಿದ್ದವರನ್ನು ಕೂಡಿಕೊಂಡಿದ್ದರು. ಹೊಸದಾಗಿ ಬಂದವರಿಗೂ ಹೊಲಗಳಲ್ಲಿ ಏರಿಗೆ ಮಣ್ಣು ಹಾಕುವುದು ಬದು ನಿರಿಸುವುದು ಮುಂತಾದ ಕೆಲಸಗಳು ಸಿಕ್ಕಿ ಅವರೂ ದಿನವಿಡೀ ದುಡಿಯುತ್ತಿದ್ದರು. ಉಂಬೊತ್ತಿಗೆ ಮುದ್ದೆ ಆಮ್ರ (ಸಾರು) ಉಂಡು ಹಗಲೂಟ ಕಟ್ಟಿಕೊಂಡು ಮಣ್ಣು ಕೆಲಸಕ್ಕೆ ಹೊರಟರೆ ಸಂಜೆಗೆ ಮರಳುತ್ತಿದ್ದರು. ಊರಿನ ಎಲ್ಲರೂ ದುಡಿಯುವವರೇ ಆಗಿದ್ದರು.
ಪ್ರತಿ ಸೋಮವಾರ ಬೇಸಾಯಕ್ಕೆ ಮಾತ್ರ ರಜೆ. ರೈತರು ಎತ್ತುಗಳ ಮೈತೊಳೆಯುವುದು. ಬೇಸಾಯಕ್ಕೆ ಬೇಕಾಗುವ ಮರ ಮುಟ್ಟು ಮಾಡಿಕೊಳ್ಳುವುದು ಮುಂತಾದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು.
ಇನ್ನೊಂದು ಸಂಜೆ ಐದಾರು ಕತ್ತೆಗಳು, ಎರಡು ಮರಿಗಳ ಮೇಲೆ ಸಾಮಾನು ಹೇರಿಕೊಂಡು ಸಂತೆಕಣಿವೆ ಮಾರ್ಗವಾಗಿ ಬಂದಿದ್ದ ಎರಡು ಮಡಿವಾಳರ ಕುಟುಂಬಗಳು ಗೌನಹಳ್ಳಿ ತಲುಪಿದ್ದವು. ಊರವರಿಗೆ ಅಡ್ಡಷ್ಟವಾಗಿತ್ತು, ‘ಕನಕಳಿಸಿದರೇನೋ ಅನ್ನುವಂತೆ ಈ ಕಸುಬುದಾರರು ನೆನಹಳ್ಳಿಗೆ ಬಂದು ಸೇರಿದ್ದರು.
ಮಡಿವಾಳರಿಗೆ ಕಮ್ಮಾರರ ಗುಡಿಸಲು ಸಮೀಪ ತಮ್ಮ ಗುಡಿಸಲು ಕಟ್ಟಿಕೊಳ್ಳಲು ಊರ ನಿವಾಸಿಗಳು ಸೂಚಿಸಿದ್ದರು. ಮಡಿವಾಳದ ಹೆಂಗಸರು ಮನೆಮನೆಗೆ ಹೋಗಿ ‘ಪಟ್ಟಬಟ್ಟೆ ಒಗೆದುಕೊಡುತ್ತೇವೆ’ ಎಂದು ತಿಳಿಸಿ, ರೈತರ ಮನೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ಗೇರು ಬೀಜದ ಎಣ್ಣೆಯನ್ನು ಬಿಸಿಮಾಡಿ ಅದರಿಂದ ವಿವಿಧ ಮನೆಯ ಬಟ್ಟೆಗಳಿಗೆ ವಿವಿಧ ಒಗೆಯಲು ಕಲ್ಲು ಬಂಡೆಗಳನ್ನು ಜೋಡಿಸಿ ತಮ್ಮ ಕಾವ್ಯ ಆರಂಭಿಸಿದ್ದರು.. ಊರಲ್ಲಿದ್ದ ಒಂದೇ ಮಡಿವಾಳರ ಕುಟುಂಬ ಕೇವಲ ಕೆಲವು ಮನೆಗಳ ಬಟ್ಟೆಗಳನ್ನು ಮಾತ್ರ ಒಗೆದು ಕೊಡುತ್ತಿದ್ದರು.
ಕುಂಚಿಟಿಗರ ಹೆಂಗಸರು ಪ್ರತಿ ತಿಂಗಳು ಮುಟ್ಟಾದಾಗ ಮುಟ್ಟಿನ ಸೀರೆಯನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಈಗ ಮಡಿವಾಳರು ಬಿಟ್ಟಬಟ್ಟೆ ಬಗೆದು ಕೊಡಲು ಸುರು ಮಾಡಿದ ಬಳಿಕ ಅವರು ನಿರಾಳವಾಗಿದ್ದರು.
ಇದರಿಂದ ಊರಿನ ಜನಸಂಖ್ಯೆ ನಿಧಾನವಾಗಿ ಹೆಚ್ಚಾಗತೊಡಗಿತ್ತು. ರೈತರ ಅಗತ್ಯಗಳನ್ನು ಪೂರೈಸುವ ಕಮ್ಮಾರರು, ಮಣೆಗಾರರು, ಬೋವಿಗಳು ಮತ್ತು ಮಡಿವಾಳರು ಗೌನಳ್ಳಿಯಲ್ಲಿ ಸುಭದ್ರ ನೆಲೆಯನ್ನು ಕಂಡುಕೊಂಡಿದ್ದರು. ಕೆಲವು ತಿಂಗಳಾದ ಮೇಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆಯಿಂದ ಒಂದು ಎತ್ತಿನಗಾಡಿ ತುಂಬಾ ಮಡಕೆ, ಕುಡಿಕೆ ಮುಂತಾದುವನ್ನು ಹೇರಿಕೊಂಡು ಒಂದು ಕುಂಬಾರರ ಕುಟುಂಬ ಬಂದಿಳಿದಿತ್ತು.
ಇದು ಊರಿನ ಹೆಂಗಸರಿಗೆ ಹಬ್ಬವಾದಂತಿತ್ತು. ಅಡಿಗೆ ಮಾಡಲು ತಮಗೆ ಬೇಕಾಗುವ ಮಡಿಕೆ, ಕುಡಿಕೆಗಳನ್ನು ತಾಮುಂದು ನಾಮುಂದು ಎಂದು ಪರದಾಡಿ ಹೆಂಗಸರು ಅರಿಸಿಕೊಂಡಿದ್ದರು. ಕುಂಬಾರರವರಿಗೆ ಇದರಿಂದ ಖುಷಿಯಾಗಿ ಎರಡು ಪಲ್ಲದಷ್ಟು ರಾಗಿ, ಜೋಳ, ನವಣೆ, ಸಜ್ಜೆ ಇತ್ಯಾದಿ ಧಾನ್ಯಗಳನ್ನು ಮಡಕೆ, ಕುಡಿಕೆಗಳ ಬೆಲೆಯಾಗಿ ಪಡೆದುಕೊಂಡು ಮಧ್ಯಾಹ್ನಕ್ಕೇ ಹೊರಟು ಹೋಗಿದ್ದರು.
ಇದಕ್ಕೆ ಮುಂಚೆ ಎರಡು ಬಾರಿ ಹುಲಿತೊಟ್ಟಿನ ಕುಂಬಾರರು ಬಿದಿರಿನ ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಮಡಕೆ, ಕುಡಿಕೆಗಳನ್ನು ಹೊತ್ತು ತಂದು ಗೌನಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದರು. ಶೀರನಕಟ್ಟೆಯ ಮಡಕೆ, ಕುಡಿಕೆಗಳು ಗುಣ ಮತ್ತು ಆಕಾರಗಳಲ್ಲಿ ಮೇಲ್ಮಟ್ಟದವಿದ್ದವು. ಹುಲಿತೊಟ್ಲು ಕುಂಬಾರರು ಎತ್ತಿಗಾಡಿಗಳಲ್ಲಿ ಮಡಕೆ, ಕುಡಿಕೆ ತರುವುದು ಕಷ್ಟಕರವಾಗಿತ್ತು. ಯಾವ ಕಣಿವೆಯಲ್ಲೂ ಬಂಡಿ ಜಾಡು ಇರಲಿಲ್ಲ. ಇದು ಅವರಿಗೆ ಇನ್ನಷ್ಟು ಅಡ್ಡಿಯಾಗಿತ್ತು. ಕಾರಲಕಣಿವೆ ಮಾರ್ಗವಾಗಿ ಮಡಕೆ, ಕುಡಿಕೆಗಳನ್ನು ‘ದಣಿ’ ಹೊತ್ತು ತರಬೇಕಾಗಿತ್ತು. ಅವರು ಹೀಗೆ ಹೊತ್ತು ತರುವುದನ್ನು ಕ್ರಮೇಣ ನಿಲ್ಲಿಸಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 5 ಕೆನ್ನಳ್ಳಿಯ ದುರಂತ
ಒಂದು ಮಧ್ಯಾಹ್ನ ಗಂಡ, ಹೆಂಡತಿ ಮಗುದೊಬ್ಬ ಹುಡುಗನ ಜತೆ ಒಂದು ಕ್ಷೌರದವರ ಕುಟುಂಬ ಗೌನಹಳ್ಳಿಗೆ ಆಗಮಿಸಿತ್ತು. ‘ಇವರಿಗ್ಯಾರು ಹೇಳಿದ್ರು. ಎಲ್ಲಿಂದ ಇವರು ಬಂದ್ರು’ ಎಂದು ಹಳ್ಳಿಯ ಜನ ಯೋಚಿಸುತ್ತಿರಬೇಕಾದರೆ “ನಾವು ದೂರದ ಊರಿನೋರು. ಇಂಥಕಡಿಗೆ ಹೋದ್ರೆ ನಿಮಗೆ ಒಳ್ಳೇದಾಗುತ್ತೆ ಅಂತ ನಮ್ಮ ಮನೆದೇವ್ರು ಅಪ್ಪಣೆ ಕೊಡಿಸಿತ್ತು. ಅದರಂಗೆ ನಾವು ಬಂದಿದೀವಿ” ಎಂದು ಕ್ಷೌರಿಕರ ಗಂಡಾಳು ತಿಳಿಸಿದ್ದ. “ಆಯ್ತು ನಾವು ಹೇಳಿ ಕಳಿಸಿದಂಗೇ ಬಂದೈದೀರ. ಅದೇನು ಧರಕರು ಸಂಯೋಗವೋ ಗೊತ್ತಿಲ್ಲ ನಿಮಗೆ ಎಲ್ಲಿ ಸರಿಕಾಣುತ್ತೋ ಅಲ್ಲಿ ಗುಡ್ಲು ಹಾಕ್ಯಳಿ”. ಊರವರು ತಿಳಿಸಿದ್ದರು.
ಅಲ್ಲಿವರೆಗೆ ಗಡ್ಡ ಮೀಸೆಧಾರಿಗಳಾಗಿದ್ದ ಊರಿನ ಮುಕ್ಕಾಲು ಪಾಲು ಗಂಡಸರು ತಮ್ಮ ಕೆನ್ನೆ ಸವರಿಕೊಂಡಿದ್ದರು. ಈ ಬದಲಾವಣೆಗಳು ಗೌನಹಳ್ಳಿಯಲ್ಲಿ ಆಗುತ್ತಿರುವುದನ್ನು ಗುಡಿಹಳ್ಳಿಯಲ್ಲಿ ವಾಸಕ್ಕಿದ್ದ ಮೈಲಾರಲಿಂಗ ದೈವದ ಭಕ್ತರು ಮತ್ತು ಗೊರವರಾಗಿದ್ದವರು ಅದೇನು ಕಾರಣವೋ ತಮ್ಮ ನೆಲೆ ತೊರೆದು ಒಂದೊಂದೇ ಕುಟುಂಬಗಳು ಗೌನಹಳ್ಳಿಗೆ ವಲಸೆ ಬರಲಾರಂಭಿಸಿದ್ದವು. ಹೀಗೆ ವಲಸೆ ಬಂದವರು ಗುಡಿಹಳ್ಳಿ ಬಳಿ ಇದ್ದ ತಮ್ಮ ಜಮೀನುಗಳನ್ನು ಇಲ್ಲಿಂದಲೇ ಹೋಗಿ ಬಂದು ಉತ್ತು ಬಿತ್ತಿ ಬೆಳೆ ಬೆಳೆದುಕೊಳ್ಳಲಾರಂಭಿಸಿದ್ದರು.
ಈ ಬದಲಾವಣೆಗಳಿಂದ ಗೌನಹಳ್ಳಿ ಊರು ಕಟ್ಟಿದ ಕುಂಚಿಟಿಗರ ಜತೆ ಕಮ್ಮಾರರು, ಮಣೆಗಾರರು, ಬೋವಿಗಳು, ಮಡಿವಾಳರು, ಕ್ಷೌರಿಕರ ಜತೆಗೆ ನಾಯ್ಕರೂ ಬಂದು ಸೇರಿಕೊಂಡಿದ್ದರು.
ಇಡೀ ಊರಿನ ಜನ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುತ್ತಿದ್ದರು. ಕೇವಲ ಕೆಲವೇ ಜನ ಮಾತ್ರ ಪಶು ಸಂಗೋಪನೆಯನ್ನು ಉಪಕಸುಬಾಗಿ ಮಾಡಿಕೊಂಡಿದ್ದರು. ಗೊಲ್ಲರು ತಮ್ಮ ಕುರಿ ಸಾಕಣೆಯ ಜತೆಗೆ ಜಮೀನು ಹಸನುಮಾಡಿಕೊಂಡು ಕೃಷಿಯಲ್ಲಿಯೂ ನಿರತರಾದರು. ಇದರಿಂದ ಪ್ರಚೋದನೆಗೊಂಡ ಕಮ್ಮಾರರು ಮತ್ತು ಮಣೆಗಾರರು ತಾವ್ಯಾಕೆ ಹಿಂದೆ ಬೀಳಬೇಕೆಂದುಕೊಂಡು ಉಳಿದಿದ್ದ ಭೂಮಿಯ ಗಿಡ ಕಡಿದು ಹಸನುಗೊಳಿಸಿಕೊಂಡು ‘ತಮಗೊಂದು ಜಮೀನು ಇದೆ’ ಎಂಬಂತೆ ಮಾಡಿಕೊಂಡರು.
ಕಮ್ಮಾರರು ಊರಿನ ಜನರ ಸಹಾಯ ಸಹಕಾರಗಳಿಂದ ಉತ್ತು ಬಿತ್ತಿ ಫಸಲು ಬೆಳೆದುಕೊಳ್ಳಲು ಪ್ರಯತ್ನಿಸಿದರೆ, ಮಣೆಗಾರರು ಮಾತ್ರ ಹಸನು ಮಾಡಿಕೊಂಡಿದ್ದ ಜಮೀನುಗಳನ್ನು ಬೀಳುಬಿಟ್ಟಿದ್ದರು. ಇವರ ಅದೃಷ್ಟಕ್ಕೆಂಬಂತೆ ತಿಂಗಳಿಗೋ ಎರಡು ತಿಂಗಳಿಗೋ ಒಂದು ಎಮ್ಮೆ ಅಥವಾ ದನ ನಾನಾ ಕಾರಣಗಳಿಂದ ಸಾಯುತ್ತಿದ್ದವು. ಅವುಗಳನ್ನು ತಂದು ಚರ ಸುಲಿದು ಗಲ್ಲೆ ಗುಂಡಿಯಲ್ಲಿ ನೆನೆಸಿ ಹದ ಮಾಡಿಕೊಂಡು ರೈತರಿಗೆ ಅಗತ್ಯವಾಗಿರುವ ಮೆಟ್ಟು, ವ್ಯವಸಾಯದ ಪರಿಕರಗಳನ್ನು ಹೊಲಿದುಕೊಡುತ್ತಿದ್ದರು. ಹೀಗಾಗಿ ಅವರ ಜೀವನವೂ ಸಾಗುತ್ತಿತ್ತು.