ಚಿತ್ರದುರ್ಗ ನ್ಯೂಸ್.ಕಾಂ: ದುರ್ಗದ ಅಧಿಪತಿ ಹಿಂದೂ ಮಹಾಗಣಪನ ಪ್ರತಿಷ್ಠಾಪನೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಅರಮನೆಯ ರಾಜಾಂಗಣ ಅಥವಾ ದರ್ಬಾರ್ ಹಾಲ್ ಮಾದರಿಯಲ್ಲಿ ಈ ಬಾರಿಯ ಗಣಪನ ಮಂಟಪ ಇರಲಿದೆ.
ಒಂದು ವಾರದಿಂದ ಪೆಂಡಾಲ್ ಹಾಕುವ ಕೆಲಸ ನಡೆಯುತ್ತಿದ್ದು, ಪೆಂಡಾಲ್ ಮುಂಭಾಗದ ಸರ್ವೀಸ್ ರಸ್ತೆ ಹಾಗೂ ಮುಖ್ಯ ರಸ್ತೆಯಲ್ಲೂ ವಿದ್ಯುತ್ ದೀಪಗಳ ಅಲಂಕಾರ ಬಹುತೇಕ ಮುಕ್ತಾಯದ ಹಂತದಲ್ಲಿದೆ.
ಪ್ರತಿ ವರ್ಷವೂ ಗಣಪತಿ ಮಂಟಪದ ಅಲಂಕಾರ ಯಾವ ರೀತಿ ಇರುತ್ತದೆ. ಗಣಪತಿ ಯಾವ ಶೈಲಿಯಲ್ಲಿರುತ್ತದೆ ಎನ್ನುವುದೇ ಗಣೇಶೋತ್ಸವದ ಅತೀ ದೊಡ್ಡ ಸೀಕ್ರೀಟ್. ಈ ಎರಡೂ ಗುಟ್ಟುಗಳು ರಟ್ಟಾಗುವುದು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದಾಗಲೇ.
ಹಿಂದೂ ಮಹಾಗಣಪತಿ ಪೆಂಡಾಲ್ ಸಿದ್ಧತಾ ಕೆಲಸಗಳ ದೃಶ್ಯ
ಗಣಪತಿ ಯಾವ ಶೈಲಿಯಲ್ಲಿರುತ್ತದೆ ಎನ್ನುವುದನ್ನು ಸಮಿತಿಯವರು ಈವರೆಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೆ, ಪೆಂಡಾಲ್ ಮಾತ್ರ ದರ್ಬಾರ್ ಮಾದರಿಯಲ್ಲಿರುತ್ತದೆ ಎನ್ನುವ ವಿಚಾರವನ್ನು ಉತ್ಸವ ಸಮಿತಿ ಬಹಿರಂಗಪಡಿಸಿದ್ದು, ಅಲಂಕಾರ, ತಯಾರಿಗಳು ಅದೇ ರೀತಿಯಲ್ಲೇ ನಡೆಯುತ್ತಿವೆ.
ಬಾಹುಬಲಿ ಸಿನಿಮಾದಲ್ಲಿರುವ ಮಾದರಿಯಂತೆಯೇ ಹಿಂದೂ ಮಹಾಗಣಪನ ದರ್ಬಾರ್ ಮಂಟಪ ಸಿದ್ಧವಾಗುತ್ತಿದೆ. ಸಿದ್ಧತೆ ಪೂರ್ಣಗೊಂಡು ಬೆಳಕು, ಬಟ್ಟೆ, ಅಲಂಕಾರ ಎಲ್ಲವೂ ಮುಗಿದ ನಂತರವಷ್ಟೇ ಈ ದೃಶ್ಯ ಕಣ್ತುಂಬಿಕೊಳ್ಳಬಹುದು.
ಇನ್ನೂ ಗುರುವಾರ ಸಂಜೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಪೆಂಡಾಲ್‍ಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಸೆ.16 ಬೆಳಗ್ಗೆ ಅಥವಾ ಸಂಜೆ ಮಾದಾರ ಚನ್ನಯ್ಯ ಗುರುಪೀಠಕ್ಕೆ ಗಣಪತಿ ಮೂರ್ತಿ ಆಗಮಿಸಲಿದ್ದು, ಅಲ್ಲಿ ಸ್ವಾಗತಿಸಿದ ನಂತರ ಪುರಪ್ರವೇಶ ಮಾಡಲಿದೆ. ಸೆ.18 ರಂದು ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಅಕ್ಟೋಬರ್ 8 ರಂದು ಶೋಭಾಯಾತ್ರೆ ನಂತರ ವಿಸರ್ಜನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗಣೇಶೋತ್ಸವದಲ್ಲಿ ಪ್ರತಿ ದಿನ ಸಂಜೆ ರಾಷ್ಟ್ರೀಯ ಭಾವೈಕ್ಯತೆ, ಧಾರ್ಮಿಕತೆ ಹಾಗೂ ಯುವಕನರ ಕುರಿತು ಉಪನ್ಯಾಸಗಳು, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಇಡೀ ಉತ್ಸವದ ಎಲ್ಲ ಸಿದ್ಧತೆಗಳಿಗಾಗಿ ಸಮಿತಿಗಳನ್ನು ರಚನೆ ಮಾಡಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ.
ಪೆಂಡಾಲ್ ಸಿದ್ಧತೆ ವೀಕ್ಷಿಸಿದ ಸ್ವಾಮೀಜಿಗಳು.
ಗಣಪತಿ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಪಾರ್ಕಿಂಗ್ ವ್ಯವಸ್ಥೆ, ಹೆಣ್ಣು ಮಕ್ಕಳು ಮತ್ತು ಮಕ್ಕಳಿಗಾಗಿ ಶೌಚಾಲಯ ವ್ಯವಸ್ಥೆಯೂ ಇರಲಿದೆ. ಪ್ರತಿ ದಿನವೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಸಿದ್ಧತೆಗಳಿಗಾಗಿ ಪ್ರತಿ ದಿನವೂ ಹಲವು ಸಭೆಗಳು ನಡೆಯುತ್ತಿವೆ ಎಂದು ವಿವರಿಸಿದರು.
ಗಣಪತಿ ವಿಗ್ರಹ ಪೀಠ ಸೇರಿದಂತೆ 12 ರಿಂದ 13 ಅಡಿ ಎತ್ತರ ಇರುತ್ತದೆ. ಗಣಪತಿಯ ಹಿಂದೆ ಚಂದ್ರಯಾನ 3 ಮಾದರಿಯ ಅಲಂಕಾರವೂ ಇರುತ್ತದೆ ಎಂದು ಸಮಿತಿಯ ಅಧ್ಯಕ್ಷ ಜಿ.ಎಂ.ಸುರೇಶ್ ಮಾಹಿತಿ ನೀಡಿದರು.
ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಮಾರ್ಗದರ್ಶಕರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಪ್ರಭಂಜನ್, ವಿಎಚ್‍ಪಿ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ವಿಎಚ್‍ಪಿ ಧರ್ಮಾಚಾರ್ಯ ಪ್ರಮುಖ್ ಓಂಕಾರ್, ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್, ವಿಎಚ್‍ಪಿ ಪ್ರಮುಖರಾದ ಅಶೋಕ್, ರಂಗಸ್ವಾಮಿ, ವಿಠಲ್, ಕೇಶವ, ಶಶಿಧರ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.