ಮುಖ್ಯ ಸುದ್ದಿ
ZP: ಗ್ರಾಮ ಪಂಚಾಯತಿ ನೌಕರರ ಸಮಾವೇಶ | ಜಿಲ್ಲಾ ಪಂಚಾಯಿತಿ ಮುತ್ತಿಗೆಗೆ ನಿರ್ಧಾರ
CHITRADURGA NEWS | 30 NOVEMBER 2024
ಚಿತ್ರದುರ್ಗ: ಗ್ರಾಮ ಪಂಚಾಯಿತಿ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.20 ರಂದು ರಾಜ್ಯಾದ್ಯಂತ ಚಳುವಳಿಗೆ ಕರೆ ನೀಡಿರುವುದರಿಂದ ಜಿಲ್ಲಾ ಪಂಚಾಯಿತಿಗೆ(Zilla Panchayat)ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಮಲಿಯಪ್ಪ ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಮುರುಘಾಮಠ | ಶರಣೆ ಅಕ್ಕನಾಗಮ್ಮ ಲಿಂಗೈಕ್ಯ
ಸಿ.ಐ.ಟಿ.ಯು. ವತಿಯಿಂದ ನಗರದ ತ.ರಾ.ಸು. ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗಾಗಿ ಹತ್ತಾರು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸ್ವಚ್ಚ ವಾಹಿನಿಯರಿಗೆ ಕಿರುಕುಳ ನೀಡುವ ವಾತಾವರಣ ಗ್ರಾಮ ಪಂಚಾಯಿತಿಗಳಲ್ಲಿ ಸೃಷ್ಠಿಯಾಗಿದೆ. ಆಳುವ ಸರ್ಕಾರಗಳಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಕಮ್ಯುನಿಸ್ಟ್ ಪಾರ್ಟಿ ದುಡಿಯುವ ವರ್ಗದ ಪರವಾಗಿದೆ.
ಕಾರ್ಮಿಕರ ಜೀವನ ಹಸನುಗೊಳಿಸಲು ಸಂಘಟನೆ, ಹೋರಾಟದಿಂದ ಮಾತ್ರ ಸಾಧ್ಯ. ಅದಕ್ಕಾಗಿ ಡಿ.20 ರಂದು ಜಿಲ್ಲಾ ಪಂಚಾಯಿತಿ ಮುತ್ತಿಗೆಯಲ್ಲಿ ಗ್ರಾಮ ಪಂಚಾಯಿತಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸುವಂತೆ ಡಿ.ಎಂ.ಮಲಿಯಪ್ಪ ಮನವಿ ಮಾಡಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜು | ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಗ್ರಾಮ ಪಂಚಾಯಿತಿ ನೌಕರರು ಯಾಮಾರಬಾರದು. ನಮ್ಮ ಹೋರಾಟದಿಂದ ಬಿಲ್ ಕಲೆಕ್ಟರ್ಗಳಿಗೆ ಬಡ್ತಿ ಸಿಕ್ಕಿದೆ. ಪ್ರತಿಯೊಬ್ಬರು ಸಂಘಕ್ಕೆ ಸದಸ್ಯರಾಗಿ ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕುವ ಮುನ್ನ ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಸಮಾವೇಶ ನಡೆಸಬೇಕಿದೆ. ಚಳಿಗಾಲದ ಅಧಿವೇಶನದಲ್ಲಿ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳ ಕುರಿತು ಚರ್ಚೆಯಾಗಬೇಕೆಂದು ಡಿ.ಎಂ.ಮಲಿಯಪ್ಪ ಒತ್ತಾಯಿಸಿದರು.
2024-25 ನೇ ಸಾಲಿನ ಅಂತಿಮ ಜೇಷ್ಠತಾ ಪಟ್ಟಿ ಬಿಡುಗಡೆಗೊಳಿಸಿ ಮುಂಬಡ್ತಿ ಪ್ರಕ್ರಿಯೆಯನ್ನು ಶೀಘ್ರವೇ ಜಾರಿಗೊಳಿಸಬೇಕು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ತುಟ್ಟಿ ಭತ್ಯೆ ನೀಡಬೇಕು. 20 ತಿಂಗಳ ನಿವೃತ್ತಿ ವೇತನ ಹಾಗೂ ಮರಣ ಹೊಂದಿರುವ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿರುವ ಸಿಬ್ಬಂದಿಗಳಿಗೆ ಬಾಕಿ ವೇತನ ಶೀಘ್ರವೇ ಬಿಡುಗಡೆಗೊಳಿಸುವಂತೆ ಸಮಾವೇಶದಲ್ಲಿ ಆಗ್ರಹಿಸಲಾಯಿತು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಒಳ ಹರಿವು ಬಂದ್ | ಈವರೆಗೆ ಹರಿದು ಬಂದ ನೀರಿನ ಪ್ರಮಾಣ ಎಷ್ಟು ?
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಡೇಗೌಡ್ರು, ಉಪಾಧ್ಯಕ್ಷ ಬಿ.ವೆಂಕಟೇಶ್, ಖಜಾಂಚಿ ಶಿವಣ್ಣ ಬಿ. ಕಾರ್ಯದರ್ಶಿ ರಂಗನಾಥ, ಜ್ಯೋತಿ, ಜಯಲಕ್ಷ್ಮಿ, ತನುಜ, ಸುನಿತ ಇವರುಗಳು ವೇದಿಕೆಯಲ್ಲಿದ್ದರು.